ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿನ್ನಮತ ಹತ್ತಿಕ್ಕಲು ಶಾಸಕರ ಮೂಗಿಗೆ ಶಿಕಾಗೊ ತುಪ್ಪ

By Staff
|
Google Oneindia Kannada News

BSYs tacticts to pacify Dissident collegues ಶಿಕಾಗೊ, ಸೆ. 1 : ಸಾರ್ವಜನಿಕರ ಆಕ್ರೋಶ, ವಿರೋಧ ಪಕ್ಷಗಳ ಕುಹಕ, ಮಾಧ್ಯಮ ವೇದಿಕೆಗಳ ತಪಾಸಣಾ ವರದಿಗಳು ಓತಪ್ರೋತವಾಗಿ ಹರಿದು ಬರುತ್ತಿದ್ದರೂ ಸಹ ಕರ್ನಾಟಕ ಬಿಜೆಪಿ ಶಾಸಕರು ಅಕ್ಕ ಸಮ್ಮೇಳನದ ನೆಪದಲ್ಲಿ ಅಮೆರಿಕಾಗೆ ಹಾರಿದ ಮರ್ಮವಾದರೂ ಏನ್ ಗುರು?

ಪಾರದರ್ಶಕ ಆಡಳಿತ ಹಾಗೂ ಅಸ್ಖಲಿತ ಜನಸೇವೆಯ ಪ್ರಮಾಣ ಮಾಡಿ ವಿಧಾನಸಭೆಗೆ ಆರಿಸಿಬಂದ ಭಾರತೀಯ ಜನತಾಪಕ್ಷದ ಶಾಸಕರು ಅಷ್ಟು ಬೇಗ ಭಂಡರಾದರಾ? ನಿತ್ಯ ಕೆಲಸ ಕಾರ್ಯಗಳಿಗೆ ಗೋಲಿಹೊಡಿ ಎಂದರಾ ?ಯಾರೇ ಕೂಗಾಡಲಿ, ಊರೇ ಹೋರಾಡಲೀ ನಮ್ಮ ನೆಮ್ಮದಿಗೆ ಭಂಗವಿಲ್ಲ ಎಂದು ಹಾಡು ಗುನುಗಿಕೊಂಡು ವಿಮಾನ ಹತ್ತಿಬಿಟ್ಟರಾ ?

ಶಿಕಾಗೋದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನದ ಮೂರನೆಯ ದಿನವಾದ ಭಾನುವಾರ ಇಲ್ಲಿನ ಪಂಚತಾರಾ ಹೋಟೆಲ್ಲೊಂದರಲ್ಲಿ ಬಯಲಾಗಿರುವ ಗುಟ್ಟಿನ ಪ್ರಕಾರ ಶಾಸಕರು ಅಮೆರಿಕಾಗೆ ಹಾರಿಹೋಗುವುದಕ್ಕೆ ಮೇಲೆ ಹೇಳಿದ ಯಾವ ಕಾರಣಗಳೂ ಕಾರಣಗಳೇ ಅಲ್ಲ!

ಅತ್ಯಂತ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಬಿಜೆಪಿಯ ಒಟ್ಟು 65 ಶಾಸಕರನ್ನು ಅಮೆರಿಕಾಗೆ ಅಪಹರಿಸಿ ಕೊಂಡುಹೋದವರು ಬೇರೆ ಯಾರೂ ಅಲ್ಲ, ಸ್ವತಃ ಮುಖ್ಯಮಂತ್ರಿ ಬೂಕಿನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ.

ಅರುವತ್ತೈದೂ ಶಾಸಕರನ್ನು ಹುರಿದುಂಬಿಸುವುದಲ್ಲದೆ ಅವರ ವಿಮಾನ ಪ್ರಯಾಣ ವೆಚ್ಚವನ್ನು ಸ್ವತಃ ಯಡಿಯೂರಪ್ಪನವರೇ ಭರಿಸಿ ತಮ್ಮ ಜೊತೆಯೇ ಇರುವಂತೆ ಶಿಕಾಗೋಗೆ ಕರೆದುಕೊಂಡು ಬಂದಿದ್ದಾರೆ. ಪ್ರಯಾಣ ವೆಚ್ಚವಷ್ಟೇ ಅಲ್ಲ, ಹೋಗೋಬರೋ ಖರ್ಚುವೆಚ್ಚಗಳಿಗೆಂದು ಪ್ರತಿಯೊಬ್ಬ ಶಾಸಕನ ಕೈಗೆ 2000 ಅಮೆರಿಕನ್ ಡಾಲರುಗಳ ಕವರು ಕೊಟ್ಟಿದ್ದಾರೆ.

ಈ ಶಾಸಕರು ಅಮೆರಿಕಾಗೆ ಬಂದು ಕಸ್ತೂರಿ ಕನ್ನಡ ಕಡಿದು ಕಟ್ಟೆ ಹಾಕುವುದು ಅಷ್ಟರಲ್ಲೇ ಇದೆ ಎನ್ನುವುದನ್ನು ಅರಿಯದಷ್ಟು ದಡ್ಡರೇನಲ್ಲ ಯಡ್ಡಿ. ಆದರೂ ಸಹ ಶಾಸಕರ ಹಿಂಡು ತಮ್ಮ ಜತೆಯಲ್ಲೇ ಇರುವಂತೆ ಎಚ್ಚರ ವಹಿಸುವ ಜಾಣ್ಮೆಯನ್ನು ಅವರು ತೋರಿದ್ದಾರೆ. ಯಾಕೆಂದರೆ:

ಭಾಜಪದ ನಿಷ್ಠಾವಂತ ಶಾಸಕರನ್ನು, ರಾಜಕಾರಣಿಗಳನ್ನು ಕಡೆಗಣಿಸಿ, ಆಪರೇಷನ್ ಕಮಲದ ಹೆಸರಲ್ಲಿ ಪಕ್ಷವನ್ನು ಗಟ್ಟಿಗೊಳಿಸುತ್ತಿರುವ ಯಡ್ಡಿಯವರ ಹುಂಬತನಕ್ಕೆ 24 ಕ್ಯಾರೆಟ್ ಭಾಜಪ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇನ್ನೇನು ತಾವು ಅಮೆರಿಕಾಗೆ ಹೋಗಬೇನ್ನುವಷ್ಟರಲ್ಲಿ ಭಿನ್ನಮತ ಭುಗಿಲೇಳುವ ಎಲ್ಲ ಸೂಚನೆಗಳನ್ನು ಮುನ್ನಾ ಮನಗಂಡ ಬಿಎಸ್ವೈ , ಭಿನ್ನಮತ ವ್ಯಕ್ತಪಡಿಸುವ ಶಾಸಕರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿ ಅಮೆರಿಕಾ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ತೋರಿಸಿದ್ದಾರೆ.

ತಾವಂತೂ ಅಮೆರಿಕಾಗೆ ಹೋಗಲೇಬೇಕಿತ್ತು. ಶಾಸಕರನ್ನು ತವರಿನಲ್ಲೇ ಬಿಟ್ಟು ತಾವೊಬ್ಬರೇ ಹೋದರೆ ಭಿನ್ನಮತೀಯ ಶಾಸಕರು ತಮ್ಮ ಕುರ್ಚಿಯನ್ನು ಅಲ್ಲಾಡಿಸಿ ಸರಕಾರವನ್ನು ಜಗ್ಗಾಡುವುದಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂದು ಅರಿತ ಮುಖ್ಯಮಂತ್ರಿಗಳು ರಾಜ್ಯದಲ್ಲಿ ರೂಢಿಯಾಗಿರುವ ರೆಸಾರ್ಟ್ ರಾಜಕೀಯಕ್ಕೆ ಮೀರಿದ ಕಡಲಾಚೆಯ ರಾಜಕೀಯವನ್ನು ಜಾರಿಗೊಳಿಸಿದರು.

ಆಗಸ್ಟ್ 27ರ ಸಂಜೆ ಮುಖ್ಯ ಮಂತ್ರಿಗಳು ಏರೋಪ್ಲೇನ್ ಹತ್ತುವ ಕೆಲವೇ ಗಂಟೆಗಳ ಮುಂಚೆ ಭಿನ್ನಮತೀಯ ಶಾಸಕರು ಸಾಮೂಹಿಕ ರಾಜೀನಾಮೆ ಕೊಡಲು ನಿರ್ಧರಿಸಿದ್ದಾರೆಂತಲೂ, ಅದಕ್ಕೋಸ್ಕರ ಸಭಾದ್ಯಕ್ಷರನ್ನು ಭೇಟಿ ಮಾಡುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆಂತಲೂ ಬೆಂಗಳೂರಿನಲ್ಲಿ ಗುಲ್ಲಾಗಿತ್ತು.

ಆದರೆ ಎಂಟು ಮಂದಿ ಭಿನ್ನಮತೀಯ ಶಾಸಕರ ಮುಂದಾಳತ್ವ ವಹಿಸಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಸಿಟ್ಟು ಸೆಡವುಗಳನ್ನು ಚೆಕ್ ಇನ್ ಲಗೇಜ್ ಗೆ ಹಾಕಿ, ತಮ್ಮ ನಾಯಕ ಯಡಿಯೂರಪ್ಪನವರು ಹೋದ ವಾಯುಮಾರ್ಗದಲ್ಲೇ ತಾವೂ ಅಮೆರಿಕಾಗೆ ಹೋದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X