Karnataka Rain: ಈ ಜಿಲ್ಲೆಗಳಲ್ಲಿ ಮೇ 17ರವರೆಗೆ ಬಿರುಗಾಳಿ ಮಳೆ, ಒಳನಾಡಿನಲ್ಲಿ 2-3 ಡಿಸೆ ತಾಪಮಾನ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಗುಡುಗು ಸಹಿತ ಜೋರು ಮಳೆ, ಮತ್ತೊಂದು ಭಾಗದಲ್ಲಿ ಉರಿಬಿಸಿಲಿನ ಪ್ರಮಾಣ ಹೆಚ್ಚಾಗುವ ಮುನ್ನೆಚ್ಚರಿಕೆ ಕೊಡಲಾಗಿದೆ. ಮುಂದಿನ 5 ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. ವಾತಾವರಣದಲ್ಲಿ ತೀವ್ರ ಸ್ವರೂಪದ ಬದಲಾವಣೆಗಳು ಆಗಲಿದ್ದು, ಇದಕ್ಕೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಸೃಷ್ಟಿಯಾದ ಚಂಡಮಾರುತ ಪರಿಚಲನೆ ಮತ್ತು ಇತರ ಕಡೆಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯಗಳು ಕಾರಣವೆಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮೇ 17ರವರೆಗಿನ ಹವಾಮಾನ ವರದಿ ಇಲ್ಲಿದೆ
ಉತ್ತರ ಒಳನಾಡಿನ ಒಂದೆಡೆರು ಕಡೆಗಳಲ್ಲಿ ಆಗಾಗ ಮಳೆ ಬಂದರೂ ಸಹಿತ ಈ ಭಾಗದಲ್ಲಿ ಗರಿಷ್ಠ ತಾಪಮಾನವೇ ಮೇಲುಗೈ ಸಾಧಿಸುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನದಲ್ಲಿ ಅಷ್ಟಾಗೇನು ಬದಲಾವಣೆ ಆಗಿಲ್ಲ. ಈ ಭಾಗದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಸಹಿತ ಆಗಾಗ ಹಗುರದಿಂದ ಸಾಧಾರಣ ಮಳೆ ಆಗುತ್ತಿದ್ದು, ಪೂರ್ವ ಮುಂಗಾರು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತೀವ್ರಗೊಂಡ ಚಂಡಮಾರುತ ಪರಿಚಲನೆ, ಟ್ರಫ್
ಶ್ರೀಲಂಕಾ ಕರಾವಳಿಯ ಉತ್ತರದ ಭಾಗದ ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಒತ್ತಡದ ಪ್ರದೇಶ ಇದೀಗ ಚಂಡಮಾರುತದ ಪರಿಚಲನೆಯಾಗಿ ಬದಲಾಗಿದೆ. ಇದು ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ ವರೆಗೆ ವಿಸ್ತರಿಸಿದೆ. ಮುಂದಿನ 48 ಗಂಟೆಗಳಲ್ಲಿ ಇದರ ತೀವ್ರತೆ ಏರಿಕೆ ಆಗುವ ಸಾಧ್ಯತೆ ಇದೆ.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಟ್ರಫ್ ಉಂಟಾಗಿದ್ದು, ಕಡಿಮೆ ಒತ್ತಡದ ಪ್ರದೇಶದ ಮಧ್ಯಭಾಗದಿಂದ ಉತ್ತರ ಶ್ರೀಲಂಕಾ ಕರಾವಳಿಯಿಂದ ಲಕ್ಷದ್ವೀಪ ಮತ್ತು ತಮಿಳುನಾಡಿನಾದ್ಯಂತ ವಿಸ್ತರಿಸಿದೆ. ಇದು ಸಮುದ್ರ ಮಟ್ಟದಿಂದ 1.5 ಮತ್ತು 4.5 ಕಿ.ಮೀ ಎತ್ತರದಲ್ಲಿ ಚಲಿಸುತ್ತಿದೆ. ಕೇರಳ ಕರಾವಳಿಯಲ್ಲೂ ಸಹ 0.9 ಕಿ.ಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಟ್ರಫ್, ಚಂಡಮಾರುತದ ಪರಿಚಲನೆಯ ಬಿರುಗಾಳಿ ಕರ್ನಾಟಕದ ಕರಾವಳಿ ಭಾಗದತ್ತ ಚಲಿಸಲಿದೆ ಎಂದು ಐಎಂಡಿ ವಿಜ್ಞಾನಿಗಳು ಮುನ್ಸೂಚನಾ ವರದಿಯಲ್ಲಿ ತಿಳಿಸಿದ್ದಾರೆ.
ಮಳೆ ಮತ್ತು ತಾಪಮಾನದಲ್ಲಿ ಏರಿಕೆ ಮುನ್ಸೂಚನೆ
ಮೇ 17ರವರೆಗೆ ಮಳೆ ಹಾಗೂ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ 65-115 ಮಿಲಿ ಮೀಟರ್ ವರೆಗೆ ಮಳೆ ಬರುವ ಕಾರಣಕ್ಕೆ ಮೇ 15, 16ರಂದು ಯೆಲ್ಲೋ ಅಟರ್ಲ್ ನೀಡಲಾಗಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ. ಮುಂದಿನ ಐದು ದಿನಗಳಲ್ಲಿ ಪೂರ್ವ ಮುಂಗಾರು ಮಳೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಲಿದೆ ಅಂದರೆ ಹೆಚ್ಚಿನ ಪ್ರದೇಶದಲ್ಲಿ ಮಳೆ ಹಂತ ಹಂತವಾಗಿ ಸುರಿಯುವ ಸಾಧ್ಯತೆ ಇದೆ.
ಕರಾವಳಿಗೆ ಹೆಚ್ಚಿನ ಮಳೆ ನಿರೀಕ್ಷೆ?
ದಾವಣಗೆರೆ, ಬಳ್ಳಾರಿ, ವಿಜಯನಗರ, ತುಮಕೂರು, ಮಂಡ್ಯ, ರಾಮನಗರ, ಚಾಮರಾಜನಗರ ಹೀಗೆ ವಿವಿಧೆಡೆ ಗಂಟೆಗೆ 40 ಕಿಮಿ ವೇಗದ ಗಾಳಿ, ಗುಡುಗು ಸಹಿತ ಮಳೆ ಸಂಭವವಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆ ಆಗಬಹುದು. ಚಂಡಮಾರುತ ಪರಿಚಲನೆ ತೀವ್ರಗೊಂಡಲ್ಲಿ ಇನ್ನೆರಡು ದಿನಗಳಲ್ಲಿ ಕರಾವಳಿ ಭಾಗಕ್ಕೆ ಹೆಚ್ಚಿನ ಮಳೆ ನಿರೀಕ್ಷೆ ಇದೆ.
ಉತ್ತರ ಒಳನಾಡಿನಲ್ಲಿ 2-3ಡಿ.ಸೆ ಗರಿಷ್ಠ ತಾಪಮಾನ ಏರಿಕೆ!
ಒಂದು ತಿಂಗಳಿನಿಂದ ನಿರಂತರವಾಗಿ ಬಿಸಿಲ ಝಳಕ್ಕೆ ತತ್ತರಿಸಿರುವ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಮತ್ತಷ್ಟು ಹೆಚ್ಚಲಿದೆ. ಗದಗ, ವಿಜಯಪುರ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಬೀದರ್, ಕಲಬುರಗಿಯಲ್ಲಿ ಅಧಿಕ ಬಿಸಿಲು ವರದಿ ಆಗಿದೆ. ಇದರ ಬೆನ್ನಲ್ಲೆ ಇಂದಿನಿಂದ ಮುಂದಿನ ಕೆಲವು ದಿನಗಳ ಕಾಲ ಗರಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಈ ಭಾಗದಲ್ಲಿ ಬಿಸಿಲ ಧಗೆ ಹೆಚ್ಚಾಗಲಿದ್ದು, ಪರಿಸ್ಥಿತಿ ಮತ್ತಷ್ಟು ಕಠೋರವಾಗಿರಲಿದೆ. ಜನರ ಮನೆಯಿಂದ ಹೊರ ಬರುವುದು ಅನುಮಾನ ಎನ್ನಲಾಗಿದೆ.
ರಾಜ್ಯದ ಗರಿಷ್ಠ ತಾಪಮಾನ
ಕಲಬುರಗಿ: 41.4 ಡಿಗ್ರಿ ಸೆಲ್ಸಿಯಸ್
ಬೀದರ್: 41 ಡಿಗ್ರಿ ಸೆಲ್ಸಿಯಸ್
ವಿಜಯಪುರ; 40 ಡಿಗ್ರಿ ಸೆಲ್ಸಿಯಸ್
ಕಲಬುರಗಿ (ಕೆವಿಕೆ ರಡ್ಡೆವಾಡಗಿ); 39 ಡಿಗ್ರಿ ಸೆಲ್ಸಿಯಸ್
ಉಳಿದಂತೆ ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಯಾದಗಿರಿ, ರಾಯಚೂರು, ಬಳ್ಳಾರಿ, ದಾವಣಗೆರೆ, ಹೊನ್ನಾವರ, ಉಡುಪಿ ಭಾಗದಲ್ಲೂ ಕೊಂಚ ಅಧಿಕ ಬಿಸಿಲಿದ್ದು, ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ.
#ಮಳೆ #ಮುನ್ನೆಚ್ಚರಿಕೆ : #rainfall #Warning : #hailstorm #thunderstorm #lightning #KSNDMC@KarnatakaVarthe #KarnatakaRains #Premonsoon pic.twitter.com/4ViEaAoQ6x
— Karnataka State Natural Disaster Monitoring Centre (@KarnatakaSNDMC) May 11, 2026














Click it and Unblock the Notifications