ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೂರ್ವದ ಧೃವದಿಂ ಪಶ್ಚಿಮ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ..

By Staff
|
Google Oneindia Kannada News

ಪೂರ್ವದ ಧ್ರುವದಿಂ ಪಶ್ಚಿಮ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ; ಅಕ್ಕನ ಬಿಂಬಕೆ ಭಾವನ ಬಿಂಬವೂ ಚುಂಬಿಸಿ ನಗೆಯಲಿ ಮೀಯುತಿದೆ !

* ಶ್ರೀವತ್ಸ ಜೋಶಿ , ಮೊಕ್ಕಾಂ :ಶಿಕಾಗೊ

Michigan Lake ಅಮೆರಿಕದಲ್ಲಿ ಕನ್ನಡಮ್ಮನ ಜಾತ್ರೆ ಮತ್ತೊಮ್ಮೆ ಅದ್ದೂರಿಯಾಗಿ ಅನಾವರಣಗೊಂಡಿದೆ. ಅಮೆರಿಕ ಕನ್ನಡ ಕೂಟಗಳ ಆಗರ 'ಅಕ್ಕ' ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ ಉತ್ಸವದ ಐದನೆಯ ಆವೃತ್ತಿಯಿದು. ಈಹಿಂದೆ ಹ್ಯೂಸ್ಟನ್, ಡೆಟ್ರಾಯಿಟ್, ಒರ್ಲಾಂಡೊ ಮತ್ತು ಬಾಲ್ಟಿಮೋರ್ ನಗರಗಳು ಈ ನುಡಿಹಬ್ಬದ ವೈಭವಕ್ಕೆ ಸಾಕ್ಷಿಯಾಗಿದ್ದು, ಪ್ರಸ್ತುತ ಕನ್ನಡ ತೇರಿನ ಸಿಂಗಾರವಾಗಿರುವುದು ಶಿಕಾಗೊ ನಗರದಲ್ಲಿ.

ಶಿಕಾಗೊ, ಅಮೆರಿಕದ ಸುಂದರ ನಗರಗಳಲ್ಲೊಂದು. ನ್ಯೂಯಾರ್ಕ್ ಮತ್ತು ಲಾಸ್‌ಏಂಜಲಿಸ್‌ಗಳ ನಂತರ ಅಮೆರಿಕದ ಮೂರನೆಯ ಅತಿದೊಡ್ಡ ನಗರವೂ ಹೌದು. ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಒಂದು ಕಾಲದಲ್ಲಿ ಖ್ಯಾತವಾಗಿದ್ದ ನೂರಿಪ್ಪತ್ತು ಮಹಡಿಗಳ 'ಸಿಯರ್ಸ್ ಟವರ್' ಇರುವುದು ಶಿಕಾಗೊದಲ್ಲಿಯೇ. ವಿಶ್ವಾದ್ಯಂತ ಜನಪ್ರಿಯವಾದ 'ರಿಗ್ಲೇ ಚ್ಯೂಯಿಂಗ್‌ಗಮ್' ಜನ್ಮತಾಳಿದ್ದೂ ಶಿಕಾಗೊದಲ್ಲಿಯೇ! ಅಮೆರಿಕದ ರೈಲ್ವೇಜಾಲದ ಕೇಂದ್ರಬಿಂದು ಈ ನಗರ. ಇನ್ನೂ ಒಂದು ಸ್ವಾರಸ್ಯವನ್ನು ಸೇರಿಸಬೇಕಿದ್ದರೆ, ಜಗತ್ತಿನ ಏಕೈಕ ಉಲ್ಟಾ ನದಿ (Reverse River) ಇರುವುದೂ ಶಿಕಾಗೊದಲ್ಲೇ (ಬೇರೆಲ್ಲ ನದಿಗಳು ಭೂಪ್ರದೇಶದಲ್ಲಿ ಹುಟ್ಟಿ ಸಮುದ್ರವನ್ನು ಸೇರುವುದಾದರೆ ಶಿಕಾಗೊ ಎಂಬ ಹೆಸರಿನ ನದಿ ಮಾತ್ರ ಮಿಶಿಗನ್ ಮಹಾಸರೋವರದಲ್ಲಿ ಹುಟ್ಟಿ ನಗರದ ಮೂಲಕ ಒಳನಾಡಿಗೆ ಹರಿಯುವುದು)! ಆದರೆ ನಮಗೆಲ್ಲರಿಗೂ, ಅಂದರೆ ಪ್ರತಿಯೊಬ್ಬ ಭಾರತೀಯನಿಗೆ ಸಂಬಂಧಿಸಿದಂತೆ ಶಿಕಾಗೊ ನಗರವು ವಿಶೇಷ ಮಹತ್ತ್ವ ಪಡೆಯುವುದು ಮೇಲಿನೆಲ್ಲ ಕಾರಣಗಳಿಗಿಂತಲೂ ಹೆಚ್ಚಾಗಿ ಸ್ವಾಮೀ ವಿವೇಕಾನಂದರ 1893ರ ಜಗದ್ವಿಖ್ಯಾತ ಭಾಷಣದಿಂದಾಗಿಯೇ ಎಂದರೆ ತಪ್ಪಾಗಲಾರದು.

ಇಂತಿರುವ ಶಿಕಾಗೊ ನಗರಕ್ಕೆ ಅಮೆರಿಕನ್ನರು ಇಟ್ಟಿರುವ ಒಂದು ಉಪನಾಮ (ನಿಕ್‌ನೇಮ್) ಇದೆ, Windi city ಎಂದು. ಯಾರಾದರೂ ಅಂದುಕೊಳ್ಳಬಹುದು ಬಹುಶಃ ಇಲ್ಲಿ ತುಂಬಾ ಗಾಳಿ ಬೀಸುತ್ತಿರುತ್ತದೆ, ಅದರಿಂದ ಆ ಹೆಸರು ಬಂದಿರಬೇಕು ಎಂದು. ಹಾಗೆ ನೋಡಿದರೆ ಶಿಕಾಗೊದಲ್ಲಿ ಯಾವಾಗಲೂ ಗಾಳಿ ಬೀಸುತ್ತಿರುವುದು ಹೌದು, ಅದಕ್ಕೆ ಭೌಗೋಳಿಕ ಕಾರಣವಿರುವುದೂ ಹೌದು. ಪಂಚಮಹಾಸರೋವರಗಳ ಪೈಕಿ ಒಂದಾದ ಮಿಶಿಗನ್ ಸರೋವರದ ತೀರದಲ್ಲಿ ಶಿಕಾಗೊ ಇರುವುದರಿಂದ ಇಲ್ಲಿ ವಿಪರೀತ ಗಾಳಿ. ಚಳಿಗಾಲದಲ್ಲಂತೂ ವಾತಾವರಣದ ಉಷ್ಣತೆ ಸಹ್ಯವಾಗಿರುವಾಗಲೂ ಅತಿ ಶೀತದ ಗಾಳಿ ರಭಸದಿಂದ ಬೀಸುವುದರಿಂದ ಮೈಯೆಲ್ಲ ಮರಗಟ್ಟಿಹೋಗುವ ಪರಿಸ್ಥಿತಿ. ಹವಾಮಾನ ತಜ್ಞರು ಇದನ್ನು Lake Effect ಎಂದು ಬಣ್ಣಿಸುತ್ತಾರೆ.

ಆದರೆ 'ವಿಂಡಿ ಸಿಟಿ ಎಂಬ ಹೆಸರು ಶಿಕಾಗೊ ನಗರಕ್ಕೆ ನಿಜಕ್ಕೂ ಬಂದದ್ದು ಯಾಕಿರಬಹುದೆಂದು ಊಹಿಸಬಲ್ಲಿರಾ? ಉತ್ತರ ಗೊತ್ತಾದರೆ ನಿಮಗೆ ಒಂಥರಾ ಆಶ್ಚರ್ಯವಾಗಬಹುದು, ಭಲೇ ಮಜಾ ಇದೆ ಎನಿಸಲೂಬಹುದು! ಏನ್ ಗೊತ್ತಾ? ಶಿಕಾಗೊದ ಈ ನಿಕ್‌ನೇಮ್‌ನಲ್ಲಿ wind ಎಂದರೆ ಗಾಳಿ ಅಲ್ಲ; ರಾಜಕಾರಣಿಗಳ, ಪುಢಾರಿಗಳ ಮತ್ತು ಜನನಾಯಕರ ಪೊಳ್ಳು ಆ'ಶ್ವಾಸನೆಯ ಗಾಳಿ! ಕ್ರಿ.ಶ ಹದಿನೆಂಟನೆಯ ಶತಮಾನದಿಂದಲೇ ಅಮೆರಿಕದ ಮಿಕ್ಕೆಲ್ಲ ರಾಜಕಾರಣಿಗಳಿಗಿಂತ ಶಿಕಾಗೊದ ರಾಜಕೀಯ ಪುಢಾರಿಗಳು ಗಾಳಿ ಬಿಡುವುದರಲ್ಲಿ (ಅಂದರೆ ಬೊಗಳೆ ಮಾತುಗಳಿಂದ ಜನರನ್ನು ಮರುಳುಮಾಡುವುದರಲ್ಲಿ) ಎತ್ತಿದ ಕೈ ಎಂದೊಂದು ಪ್ರತೀತಿ. ಬೊಗಳೆ ಮಾತುಗಳಿಂದಲೇ ಎದುರಾಳಿಗಿಂತ ತಾನು ಮೇಲು ಎಂದು ತೋರಿಸಿ ಕಾರ್ಯಸಾಧಿಸಿಕೊಳ್ಳುವುದು ಶಿಕಾಗೊ ರಾಜಕಾರಣಿಗಳ ವಿಶಿಷ್ಟ ರೀತಿ. ಅದರಿಂದಾಗಿ ಶಿಕಾಗೊ ಎಂದರೆ ಯಾವಾಗಲೂ ರಾಜಕಾರಣಿಗಳ ಹವಾ ಬೀಸುವ ನಗರಿ ಎಂದೇ ಖ್ಯಾತವಾಗಿ ಅಮೆರಿಕದ ಪ್ರಮುಖ ಪತ್ರಿಕೆಗಳೆಲ್ಲ ಅದಕ್ಕೆ 'ವಿಂಡಿ ಸಿಟಿ" ಎಂಬ ಉಪನಾಮವನ್ನೇ ಇಟ್ಟುಬಿಟ್ಟವು, ಅದೇ ಖಾಯಂ ಆಗಿ ಶಿಕಾಗೊ ನಗರದ್ದೊಂದು ಸ್ಪೆಷಾಲಿಟಿಯೇ ಆಗಿಹೋಯಿತು.

ಹೀಗಿರಲು, ಈ ಸಲದ 'ಅಕ್ಕ ಸಮ್ಮೇಳನ ಶಿಕಾಗೊದಲ್ಲಿ ನಡೆಯುತ್ತಿರುವುದೂ, ಮತ್ತು ಇದೇ ಸಮ್ಮೇಳನಕ್ಕೆ ಕರ್ನಾಟಕದ ರಾಜಕಾರಣಿಗಳ ಪಟ್ಲಾಂ ಹೋಗಬೇಕೋ ಬೇಡವೋ ಎಂಬ ವಿಷಯದಲ್ಲಿ ಕರ್ನಾಟಕದಾದ್ಯಂತ ಬರೀ ಗಾಳಿಯಷ್ಟೇ ಅಲ್ಲ ಬಿರುಗಾಳಿಯೇ ಎದ್ದಿರುವುದೂ ಎಂತಹ ಕಾಕತಾಳೀಯ ನೋಡಿ! 'ವಿಂಡಿ ಸಿಟಿಯಲ್ಲಿ ಕನ್ನಡ ಡಿಂಡಿಮ ಬಾರಿಸುವ ವಿಷಯದಲ್ಲಿ ಕರ್ನಾಟಕದಲ್ಲಿ ಅದೆಷ್ಟು ವಿಂಡ್ ಬೀಸಿತು ಎಂದರೆ ಏನೂ ಪ್ರಚಾರವಿಲ್ಲದೆ ತಣ್ಣಗೆ ಅದರಪಾಡಿಗೆ ಇದ್ದ 'ಅಕ್ಕ ಸಮ್ಮೇಳನ ಇವತ್ತು ಕರ್ನಾಟಕದಲ್ಲೆಲ್ಲ ಮನೆಮಾತಾಗಿ ಬೇರೆಯೇ ರೀತಿಯಲ್ಲಿ ಪ್ರಚಾರ ಪಡೆದಂತಾಯಿತು! ಎಲ್ಲವೂ 'ವಿಂಡಿ ಸಿಟಿಯ ಮಹಿಮೆ ಎನ್ನೋಣವೆ?

ರಾಜಕಾರಣಿಗಳ 'ಗಾಳಿ"ಯ ವಿಚಾರ ಅಲ್ಲಿಗೇ ಮುಗಿಯಲಿಲ್ಲ. ಇನ್ನೂ ಇದೆ, ಸಮ್ಮೇಳನದ ಉದ್ಘಾಟನಾ ಸಮಾರಂಭವು ಶುಕ್ರವಾರ ಆಗಸ್ಟ್ 29ನೆಯ ತಾರೀಕಿಗೆ ಸ್ಥಳೀಯ ಸಮಯ ಸಂಜೆ ಐದು ಗಂಟೆಗೆ ಸಾಂಗವಾಗಿ ನೆರವೇರಿತು. ವೇದಿಕೆಯ ಮೇಲೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಅವರ ಸಂಪುಟದ ಮತ್ತೂ ನಾಲ್ಕಾರು ಮಂತ್ರಿಮಹೋದಯರು ಉಪಸ್ಥಿತರಿದ್ದರು. ಜತೆಯಲ್ಲಿ ಅಮೆರಿಕದ ಇಲಿನಾಯ್ ಸಂಸ್ಥಾನದ ಗವರ್ನರ್ ರಾಡ್ ಬ್ಲಾಗೊಯೆವಿಚ್ ಸಹ ವೇದಿಕೆಯನ್ನಲಂಕರಿಸಿದ್ದರು. ಶಿಕಾಗೊ ನಗರವಿರುವುದು ಅಮೆರಿಕ ದೇಶದ Illinois ಎಂಬ ಸಂಸ್ಥಾನದಲ್ಲಿ; ಅಮೆರಿಕದ ಸಂಸ್ಥಾನಗಳ ಆಡಳಿತಕ್ಕೆ ಮುಖ್ಯಮಂತ್ರಿ ಎಂಬ ಪದವಿ ಇಲ್ಲ, ಎಲ್ಲವೂ ಆಯಾ ಸಂಸ್ಥಾನದ ರಾಜ್ಯಪಾಲನ ಆಡಳಿತ. ಹಾಗಾಗಿ ಸಾರ್ವಜನಿಕ ಸಮಾರಂಭಗಳಿಗೆ ಉನ್ನತ ಮಟ್ಟದ ರಾಜಕಾರಣಿ ಆಹ್ವಾನಿತನಾಗಿದ್ದಾನೆಂದರೆ ಆತ ಆ ರಾಜ್ಯದ ರಾಜ್ಯಪಾಲನಾಗಿರುತ್ತಾನೆ ಎಂದು ತಿಳಿದುಕೊಳ್ಳಬಹುದು.

ಈ ರಾಡ್ ಬ್ಲಾಗೊಯೆವಿಚ್ ಮಹಾಶಯ ಒಬ್ಬ ಸ್ಫುರದ್ರೂಪಿ ತರುಣ. ಸುಮಾರು ಮೂವತ್ತು-ಮೂವತ್ತೈದರ ಯುವಕನಂತೆ ಕಾಣುತ್ತಾನೆ. ಈತ ತನ್ನ ಭಾಷಣದಲ್ಲಿ ಸಂದರ್ಭೋಚಿತವಾಗಿ 'ನಮಸ್ತೆ..., 'ನಮಸ್ಕಾರ... ಇತ್ಯಾದಿ ಪದಗಳನ್ನು ಉಚ್ಚರಿಸಿ ಸಭಿಕರಾದ ಅಮೆರಿಕನ್ನಡಿಗರಿಂದ ಚಪ್ಪಾಳೆ/ಶಿಳ್ಳೆ ಗಿಟ್ಟಿಸಿದ್ದಷ್ಟೇ ಅಲ್ಲದೆ ಟಿಪಿಕಲ್ ರಾಜಕಾರಣಿಯಂತೆ ಕೊಟ್ಟ ಆಶ್ವಾಸನೆ ಏನು ಗೊತ್ತೇ? “ಈಗ ನಮ್ಮ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯವಾಗಿ ನಮ್ಮ ಇಲಿನಾಯ್ ಸಂಸ್ಥಾನದ ಶಾಸಕನಾಗಿರುವ ಬರಾಕ್ ಒಬಾಮ ಅಮೆರಿಕಾಧ್ಯಕ್ಷ ಗಾದಿಗೆ ನಿಂತಿದ್ದಾನಷ್ಟೆ? ಅವನು ಪ್ರಚಂಡ ಜಯಗಳಿಸುವುದರಲ್ಲೇನೂ ಅನುಮಾನವೇ ಇಲ್ಲ, ಆದರೂ ಒಬಾಮನ ಗೆಲುವಿಗೆ ನಿಮ್ಮೆಲ್ಲರ ಸಹಕಾರವೂ ಬೇಕು. ಒಬಾಮ ಗೆದ್ದುಬಂದದ್ದೇ ಆದರೆ ನಿಮಗೆಲ್ಲರಿಗೂ ವ್ಹೈಟ್‌ಹೌಸ್‌ಗೆ ಪ್ರವೇಶಕೊಡಿಸುವ ಜವಾಬ್ದಾರಿ ನನ್ನದು! ಸಭೆಯಿಂದ ಮತ್ತೊಂದಿಷ್ಟು ಕರತಾಡನ, ಶಿಳ್ಳೆ. ರಾಜಕಾರಣಿಗಳೆಂದರೆ ಎಲ್ಲ ದೇಶಗಳವರ ಸಂಗತಿಯೂ ಒಂದೇ ಬಿಡಿ.

ಆಮೇಲೆ ಯಡ್ಯೂರಪ್ಪನವರ ಭಾಷಣ (ಭಾಷಣ ಎನ್ನುವುದಕ್ಕಿಂತ “ಮುದ್ರಿತ ಪ್ರತಿಯ ಓದು, ಅದೂ ಹೇಗೆಂದರೆ ಮುಖ ಮೇಲೆತ್ತಿ ಒಮ್ಮೆಯೂ ಸಭೆಯನ್ನು ನೋಡದೆ ಮಕ್ಕೀಕಾಮಕ್ಕಿ ವರದಿ ಒಪ್ಪಿಸಿದ ಓದು ಎಂದರೆ ಚೆನ್ನ). ಅದರಲ್ಲಿ ಮತ್ತೊಂದಿಷ್ಟು ಗಾಳಿ. “ಮುಂದಿನ ಸರ್ತಿ ನೀವೆಲ್ಲ ಊರಿಗೆ ಭೇಟಿಕೊಡುವಾಗ ವಿಮಾನದಿಂದಿಳಿದು ಬೆಂಗಳೂರಿಗೆ ಬರಬೇಕಾಗಿಲ್ಲ. ಹಾಸನ, ಗುಲ್ಬರ್ಗ, ಶಿವಮೊಗ್ಗ, ಹುಬ್ಬಳ್ಳಿ ಇತ್ಯಾದಿ ಎಲ್ಲ ಊರುಗಳಲ್ಲೂ ಅಂತಾರಾಷ್ಟೀಯ ವಿಮಾನನಿಲ್ದಾಣಗಳಾಗಿ ಅಲ್ಲಿಳಿದರೆ ನಿಮ್ಮ ಊರುಗಳಿಗೆ ಇನ್ನೂ ಹತ್ತಿರವಾಗುತ್ತದೆ... - ಅಲ್ಲಾರಿ, ಇದನ್ನು ಗಾಳಿ ಎನ್ನಬೇಕೆ ಅಥವಾ ಚಂಡಮಾರುತ ಎನ್ನಬೇಕೆ? ಮೊದಲು ಬೆಂಗಳೂರಿನ ಹೊಸದಾದ ಅಂತಾರಾಷ್ಟೀಯ ವಿಮಾನನಿಲ್ದಾಣಕ್ಕೆ ನಗರದ ವಿವಿಧೆಡೆಗಳಿಂದ ಸರಿಯಾದ ರಸ್ತೆಗಳಾಗಲಿ, ಆಮೇಲೆ ಗುಲ್ಬರ್ಗ, ಹಾಸನ, ಶಿವಮೊಗ್ಗ ಅಷ್ಟೇ ಏಕೆ, ಬೇಕಿದ್ದರೆ ಶಿಕಾರಿಪುರದಲ್ಲೂ ಅಂತಾರಾಷ್ಟೀಯ ವಿಮಾನನಿಲ್ದಾಣವಾಗಲಿ ಯಾರು ಬೇಡ ಅಂತಾರೆ?

ತಿರುಪತಿ ಲಾಡು ಪ್ರಸಾದ ವಿತರಣೆ : ಈಮಧ್ಯೆ ವೇದಿಕೆಯ ಮೇಲೆಯೇ ತಿರುಪತಿ ಲಾಡು ವಿತರಣೆ. ಕರ್ನಾಟಕ ಸರಕಾರದ ಮುಜರಾಯಿ ಖಾತೆ ಸಚಿವ ಕೃಷ್ಣಯ್ಯ ಶೆಟ್ಟಿಯವರ ಅತ್ಯಂತ ಭಕ್ತಿಭಾವದ, ಆಸ್ತಿಕತೆಯ ಪರಮಾವಧಿಯ ಯೋಚ(ಜ)ನೆಯೊಂದು ಸಾಕಾರಗೊಂಡ ಪರಿ. ಸಮ್ಮೇಳನಾರ್ಥಿಗಳಿಗಾಗಿ ತಿರುಪತಿ ತಿಮ್ಮಪ್ಪನ ಪ್ರಸಾದವೆಂದು ಐದು ಸಾವಿರ ಲಡ್ಡು ಮತ್ತು ದೇವರ ಫೊಟೊ ತಂದಿದ್ದಾರೆ ಈ ಶ್ರೇಷ್ಠ ಮಂತ್ರಿ. ಸಾಂಕೇತಿಕವಾಗಿ ಒಂದು ಲಡ್ಡು ಮತ್ತು ಒಂದು ಫೊಟೊವನ್ನು ಯಡ್ಯೂರಪ್ಪ ಅವರೇ ಅಕ್ಕ ಪದಾಧಿಕಾರಿಗಳಿಗೆ ವೇದಿಕೆಯ ಮೇಲೆ ಹಸ್ತಾಂತರಿಸಿದರು. ಅಮೆರಿಕಕ್ಕೆ ಇದುವರೆಗೆ ಒಬ್ಬ 'ಲಾಡನ್ ವೈರಿ ಇದ್ದನು, ಈಗ ಇಡೀ ಅಮೆರಿಕ ದೇಶಕ್ಕಲ್ಲದಿದ್ದರೂ ಅಮೆರಿನ್ನಡಿಗರಿಗೆ ಒಬ್ಬ ಲಾಡಿನ್ ಮಂತ್ರಿ ಮಿತ್ರನಿದ್ದಾನೆ ಅಂತಾಯ್ತು. ಅಥವಾ ಇನ್ನೊಂದು ರೀತಿಯಲ್ಲಿ ತಮಾಷೆ ಮಾಡಬಹುದಾದರೆ ಅಲ್ಲಿ ಕರ್ನಾಟಕದಲ್ಲಿ ಭಿನ್ನಮತದಿಂದ ಸರಕಾರವೇ 'ಅಲ್ಲಾಡುತ್ತಿರಲು ಇಲ್ಲಿ ಮುಖ್ಯಮಂತ್ರಿ ಲಾಡು ಹಂಚುತ್ತಾ ಇದ್ದಾರೆ! ಇರಲಿ, ತಿರುಪತಿ ಲಡ್ಡಿನ ವಿಷಯದಲ್ಲಿ ತಮಾಷೆ ಬೇಡ.

ಯಡ್ಯೂರಪ್ಪ ಪಾಠ ಓದಿ ಭಾಷಣ ಒಪ್ಪಿಸಿದರು ಎಂದೆನಲ್ಲ, ಆನಂತರ ಶಕ್ತಿ ಮಂತ್ರಿ ಈಶ್ವರಪ್ಪನವರ ಶಕ್ತಿಯುತ ಭಾಷಣ. ಪಕ್ಕಾ ರಾಜಕಾರಣಿಯಂತೆ ಮೈಕ್ ಇದ್ದರೂ ಏರುದನಿಯಲ್ಲಿ ಮಾತು. “ನಮ್ಮೆಲ್ಲರನ್ನೂ ಈ ಸಮ್ಮೇಳನಕ್ಕೆ ಪ್ರೀತಿಯಿಂದ ಆಹ್ವಾನಿಸಿ ಸ್ವಾಗತಿಸಿದ್ದಕ್ಕಾಗಿ ಶತಶತಪ್ರಣಾಮಗಳು ಎಂದು ಮೊಳಕೈಯಿಂದ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರಮುದ್ರೆ. 'ನಮ್ಮೆಲ್ಲರನ್ನೂ ಎಂದರೆ ತನ್ನ ಹಾಗೆಯೇ ಇಲ್ಲಿಗೆ ಬಂದಿರುವ ಶಾಸಕ/ರಾಜಕಾರಣಿಗಳೆಲ್ಲರನ್ನೂ ಎಂದರ್ಥ. ಅವರನ್ನು ಪ್ರೀತಿಯಿಂದ ಆಹ್ವಾನಿಸಿದ್ದೇ ಆಗಿದ್ದರೆ, ಆಹ್ವಾನದ ಮೇರೆಗೆ ಗೌರವಯುತವಾಗಿಯೇ ಅವರೆಲ್ಲ ಇಲ್ಲಿಗೆ ಬಂದಿರುವುದು ಎಂದೇ ಆಗಿದ್ದರೆ “ಅಕ್ಕ ಸಮ್ಮೇಳನಕ್ಕೆ ಶಾಸಕರ ವಿದೇಶಯಾತ್ರೆ ಎಂಬ ಬಗ್ಗೆ ಕರ್ನಾಟಕವಿಡೀ ಇಷ್ಟು ಬಿರುಗಾಳಿ ಏಕೆ ಬೀಸುತ್ತಿತ್ತು?

ಏಕೆಂದರೆ ಸಮ್ಮೇಳನ ನಡೆಯುತ್ತಿರುವುದು 'ವಿಂಡಿ ಸಿಟಿ"ಯಲ್ಲಿ. ಇಲ್ಲಿ ಈಗ ಏನಿದ್ದರೂ ಬಾರಿಸು ಕನ್ನಡ 'ವಿಂಡಿ"ಮವಾ...!

[ಸ್ನೇಹ ಸೇತು : ವಿಜಯ ಕರ್ನಾಟಕ]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X