ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಸ, ಆಶ್ಚರ್ಯ, ಭಾವ ಪುಳಕಗಳ ಸಮ್ಮಿಳನ

By Staff
|
Google Oneindia Kannada News

Glittering stage showcasing cultural activities"ಅಕ್ಕ" ಆಯೋಜಿಸಿರುವ ಐದನೆಯ ವಿಶ್ವ ಕನ್ನಡ ಸಮ್ಮೇಳನಕ್ಕೆ "ವಿಂಡಿ ಸಿಟಿ" ಶಿಕಾಗೊದಲ್ಲಿ ವೈಭವದ ಚಾಲನೆ ದೊರೆತಿದೆ. ಶಿಕಾಗೊ ಹವಾಮಾನ ಅತ್ಯಂತ ಉಲ್ಲಾಸಕರವಾಗಿದ್ದು ಕನ್ನಡ ಕಲರವವು ಸಮ್ಮೇಳನ ನಗರಿಗೆ ಕಳೆಕಟ್ಟಿದೆ. ಸುಮಾರು ಮೂರು ಸಾವಿರದಷ್ಟು ಸಮ್ಮೇಳನಾರ್ಥಿಗಳು ಕನ್ನಡ ಉಲಿಯುತ್ತ , ಕನ್ನಡ ನಲಿಯುತ್ತ ಮತ್ತು ಕನ್ನಡ ಕಲಿಯುತ್ತ ಸಂತೋಷ ಸಂಭ್ರಮಗಳ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.

ವರದಿ : ಶ್ರೀವತ್ಸ ಜೋಶಿ
ಕ್ಯಾಂಪ್ : ವಿಶ್ವಕನ್ನಡ ಸಮ್ಮೇಳನ ನಗರ ಶಿಕಾಗೊ

* ಕರ್ನಾಟಕದಿಂದ ಕಲಾವಿದರು, ಸಾಹಿತಿಗಳು, ಉದ್ಯಮಪತಿಗಳು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳಲೆಂದು ಆಗಮಿಸಿರುವುದು ಉತ್ಸವದ ಮೆರುಗನ್ನು ಹೆಚ್ಚಿಸಿದೆ. ತಂತಮ್ಮ ನೆಚ್ಚಿನ ಸಾಹಿತಿ/ಕಲಾವಿದ/ ಸಂಗೀತಕಾರರನ್ನು ಕಣ್ಣಾರೆ ನೋಡಿ ಕೈಕುಲುಕಿ ಪುಳಕಿತರಾಗುವ, ಆ ಪುಳಕವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿಡುವ ಸನ್ನಿವೇಶಗಳು ವಿಶೇಷವಾಗಿ ಗಮನ ಸೆಳೆದಿವೆ.

* ಅಮೆರಿಕ ಕನ್ನಡ ಕೂಟಗಳ ಆಗರ "ಅಕ್ಕ" ಮತ್ತು ಸ್ಥಳೀಯ ವಿದ್ಯಾರಣ್ಯ ಕನ್ನಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಯಬೇಕೆಂದು ಪಣತೊಟ್ಟ ಪದಾಧಿಕಾರಿಗಳ, ಸ್ವಯಂಸೇವಕರ ಮತ್ತು ಕನ್ನಡಪ್ರೇಮಿಗಳ ಶ್ರಮ-ಸಾಧನೆಗಳು ಶ್ಲಾಘನೀಯವಾಗಿವೆ. ಈಗ ಅವು ಸುಂದರವಾಗಿ ಸಾಕಾರವಾಗಿವೆ.

* ಸಾಲಂಕೃತ ವಧುವಿನಂತೆ ಕಂಗೊಳಿಸುತ್ತಿರುವ ಸ್ವಾಗತ ಕಕ್ಷೆ, ಅತಿಥಿಗಳನ್ನು ನಗುಮೊಗದಿಂದ ಸ್ವಾಗತಿಸುವ ಸ್ವಯಂಸೇವಕರು, ಸರಿಯಾದ ಮಾಹಿತಿಯನ್ನೊದಗಿಸುವ ಸೂಚನಾಫಲಕಗಳು ಮತ್ತಿತರ ವ್ಯವಸ್ಥೆಗಳು, ಸಮ್ಮೇಳನಾರ್ಥಿಗಳಲ್ಲಿ "ಮೊದಲ ನೋಟದಲ್ಲೇ ಹಿತಾನುಭವ" ನೀಡುವಲ್ಲಿ ಯಶಸ್ವಿಯಾಗಿವೆ.

* ಸಮ್ಮೇಳನ ನಡೆಯುವ ಹಾಲ್‌ನ ಅಲಂಕಾರದಲ್ಲಿ ಎದ್ದು ಕಾಣುತ್ತಿದ್ದ ಅಂಶಗಳೆಂದರೆ ಬೆಂಗಳೂರಿನ ರಂಗರಾಜ ಐಯಂಗಾರ್ ಎಂಬುವವರೊಬ್ಬರು ಇಂಡಿಯಾನಾಪೊಲಿಸ್‌ನಲ್ಲಿರುವ ತನ್ನ ಮಗಳ ಮನೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ರಚಿಸಿದ ಸುಂದರ ಕಲಾಕೃತಿಗಳು. ಹಾಗೆಯೇ, ಬೆಂಗಳೂರಿನಿಂದ ವಿಶೇಷ ಆಹ್ವಾನಿತರಾಗಿ ಬಂದಿರುವ ಅನು ವಿಶ್ವೇಶ್ವರ್ ಅವರ "ಮೈಸೂರು ನಿಲುಗೌರಿ ಗೊಂಬೆ"ಗಳ ಅಲಂಕಾರದ ಮಂಟಪವು ಒಂದು ಪುಟ್ಟ ದೇವಾಲಯವನ್ನೇ ನಿರ್ಮಿಸಿದೆ.

* ಸಭಾಂಗಣದ ಮುಖ್ಯದ್ವಾರದಲ್ಲಿ ಹಾಸಿರುವ ರಂಗೋಲಿ ರತ್ನಗಂಬಳಿಯು (ಕರ್ನಾಟಕದಿಂದ ವಿಶೇಷವಾಗಿ ತರಿಸಿದ್ದು) ಆದರೆ ಅದರ ಮೇಲೆ ನಡೆಯಬಹುದೇ ಬೇಡವೇ ಎಂದು ಅನುಮಾನ ಬರುವಷ್ಟು ಅತಿ ಸುಂದರವಾಗಿದೆ.

* ಸಮ್ಮೆಳನಾರ್ಥಿಗಳಿಗೆ ಚಹ-ಕಾಫಿ ವ್ಯವಸ್ಥೆ ಸ್ವಾಗತಕಕ್ಷೆಯ ಇಕ್ಕೆಲಗಳಲ್ಲಿ ನಿರಂತರವಾಗಿ ಇದೆ, ಸಭಾಂಗಣದ ಕೆಳ ಅಂತಸ್ತಿನ ವಿಶಾಲವಾದ ಹಾಲ್‌ನಲ್ಲಿ ಭೋಜನಾಲಯವು ಅಚ್ಚುಕಟ್ಟಿನಿಂದ ವ್ಯವಸ್ಥೆಗೊಂಡಿದೆ. ಅಪರೂಪಕ್ಕೆ ಭೇಟಿಯಾದ ಸ್ನೇಹಿತರ, ಸಂಬಂಧಿಕರ ಭೇಟಿ, ಪರಸ್ಪರ ಉಭಯಕುಶಲೋಪರಿ ವಿಚಾರಿಸುತ್ತ ಜತೆಯಾಗಿ ಊಟ ಮಾಡುವ, ಕಾಫಿ ಸವಿಯುವ ಅವಕಾಶ ಎಲ್ಲರಿಗೂ ಮುದಕೊಟ್ಟಿದೆ. ಈಸಲ ಊಟ-ಕಾಫಿ-ತಿಂಡಿಗಳಿಗೆ ಬಣ್ಣದ ಟೋಕನ್‌ಗಳ ಕಿರಿಕಿರಿಯಿಲ್ಲ. ಸಮ್ಮೇಳನದ ಬ್ಯಾಡ್ಜ್ ಧರಿಸಿದವರಿಗಷ್ಟೇ ಊಟದಮನೆಯೊಳಗೆ ಪ್ರವೇಶ.

* ನೋಂದಣಿ ಕಕ್ಷೆಯಲ್ಲಿ ಶುಕ್ರವಾರ ಸಂಜೆ ವಿಪರೀತ ಚಟುವಟಿಕೆ. ಸಮ್ಮೇಳನಕ್ಕೆ ಆಗಲೇ ನೋಂದಾಯಿಸಿದ್ದು ಈಗ ಹಾಜರಾತಿ ಕೊಟ್ಟು ತಂತಮ್ಮ ಬ್ಯಾಡ್ಜ್,, ಸ್ಮ್ರರಣಸಂಚಿಕೆಯಿರುವ ಚೀಲ ಇವನ್ನೆಲ್ಲ ಪಡೆದುಕೊಳ್ಳಲು ಸಮ್ಮೇಳನಾರ್ಥಿಗಳ ಸಾಲುಗಳು ಉದ್ದವಾಗಿಯೇ ಇದ್ದುವು. ವಿಐಪಿಗಳಿಗೆ, ಗಣ್ಯರಿಗೆ, ವಸ್ತುಪ್ತದರ್ಶನ/ಮಾರಾಟಗಾರರಿಗೆ ಪ್ರತ್ಯೇಕವಾಗಿ ನೋಂದಾವಣೆಯ ವ್ಯವಸ್ಥೆಯಿದೆ. ಕಂಪ್ಯೂಟರ್ ಬಳಸಿ, ಪ್ರಿಂಟ್ ಔಟ್ ತೆಗೆದಿಟ್ಟು ಎಲ್ಲ ಸಮರ್ಪಕವಾಗಿ ಆಗಿದೆಯಾದರೂ ಅಮೆರಿಕದಲ್ಲಿ ಭಾರತೀಯರಿಗೆ ಮಾಮೂಲಿಯಾಗಿ ಎದುರಾಗುವ "ಲಾಸ್ಟ್ ನೇಮ್/ ಫಸ್ಟ್ ನೇಮ್ ಕಫ್ಯೂಷನ್ ಹಾವಳಿ" ಇಲ್ಲೂ ಕಿರುಕುಳ ಕೊಡದೇ ಇಲ್ಲ. ಸಾಹಿತಿ ಭೈರಪ್ಪನವರ ಹೆಸರನ್ನು ಪಟ್ಟಿಯಲ್ಲಿ ಗುರುತಿಸಿ ಅವರಿಗೆ ಬ್ಯಾಡ್ಜ್ ಕೊಡಲು ತಿಣುಕಾಡಬೇಕಾಗಿ ಬಂದದ್ದು ಒಂದು ಉದಾಹರಣೆ.

* ಬೆಂಗಳೂರಿನಿಂದ ಬಂದಿರುವ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ತನ್ನ ಲ್ಯಾಪ್‌ಟಾಪ್ ಕಳೆದುಹೋದ ಚಿಂತೆ. ಆದರೆ ಅದು ಕಳೆದುಹೋದದ್ದು ಸಮ್ಮೇಳನದಲ್ಲಿ ಅಲ್ಲ, ತಾವು ವಿಮಾನನಿಲ್ದಾಣದಿಂದ ಸಮ್ಮೇಳನ ಸ್ಥಳಕ್ಕೆ ಬಂದ ಟ್ಯಾಕ್ಸಿಯಲ್ಲಿ ಎಂದು ಗೊತ್ತಿರುವುದುದರಿಂದ ಅದನ್ನು ಹುಡುಕುವುದು ಈಗ ಹರಸಾಹಸವಾಗಿದೆ.

* ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತುತಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ನೃತ್ಯಗಳು (ಬಹುತೇಕವಾಗಿ ಆತಿಥೇಯ ವಿದ್ಯಾರಣ್ಯ ಕನ್ನಡ ಕೂಟದವರ ಪ್ರಸ್ತುತಿಗಳು) ಸುಂದರವಾಗಿ ಮೂಡಿಬಂದವು. ಈಗ ಗಣಪತಿ ಸ್ತುತಿ ಹಂಸಧ್ವನಿ ರಾಗ ಮಿಶ್ರಚಾಪು ತಾಳದಲ್ಲಿ ಎಂದು ಉದ್ಘೋಷಣೆಯಾದ ಮೇಲೆ ಮೈಕ್‌ನಲ್ಲಿನ್ನೂ ಕನ್ನಡ ಚಿತ್ರಗೀತೆಯೇ ಮೊಳಗುತ್ತಿದ್ದುದು ಆಡಿಯೋ ಕೋ ಆರ್ಡಿನೇಶನ್‌ಗೆ ಈಗಿನ್ನೂ ಹದ ಸಿಗುತ್ತಿದೆಯಷ್ಟೇ ಎಂದು ಸೂಚಿಸುವಂತಿತ್ತು. ಆದರೆ ಸೌಂಡ್ ಸಿಸ್ಟಮ್ ಎಷ್ಟು ಚೆನ್ನಾಗಿದೆಯೆಂದರೆ ಸಭಿಕರಾಗಿ ಕುಳಿತಿದ್ದ ಸಿ.ಅಶ್ವಥ್ ಅವರ ಉವಾಚ- "ಆಹಾ ಬ್ಯೂಟಿಫುಲ್ ಸೌಂಡ್ ಸಿಸ್ಟಮ್! ನನಗೆ ಈಗಲೇ ಸ್ಟೇಜಿಗೆ ಹೋಗಿ ಹಾಡೋಣ ಅನಿಸುತ್ತಿದೆ..."! ಅವರ ಕಾರ್ಯಕ್ರಮ "ಕನ್ನಡವೇ ಸತ್ಯ" ಇರುವುದು ರವಿವಾರ ರಾತ್ರೆ, ಸಮ್ಮೇಳನದ ಸಮಾರೋಪವಾಗಿ. ಹಾಗಾಗಿ ಅಷ್ಟುಹೊತ್ತು ಅಶ್ವಥ್ ತನ್ನ ಉತ್ಸಾಹವನ್ನು ಹಿಡಿದಿಡಬೇಕಾಗಿದೆ.

* ಬರೆದುಕೊಟ್ಟ ಭಾಷಣವನ್ನು ಓದುವವರ ಪರಿಸ್ಥಿತಿ ಎಷ್ಟೋ ಸಲ ಆ ಭಾಷಣಕಾರರಿಗೂ, ಸಭಿಕರಿಗೂ ಇರುಸುಮುರುಸಾಗುವುದಿದೆ. ಯಾರೋ ಒಳ್ಳೆಯ ಸಾಹಿತ್ಯಿಕ ಪದಗಳನ್ನು ಉಪಯೋಗಿಸಿ ಭಾಷಣ ಬರೆದುಕೊಟ್ಟಿದ್ದಿರುತ್ತದೆ, ಇಲ್ಲಿ ಅದನ್ನು ಓದುವಾಗ ಆ ಶಬ್ದಗಳು ಅಕ್ಷರಗಳು ನಾಲಗೆಯಲ್ಲಿ ಸರಿಯಾಗಿ ಹೊರಳದೆ ಹಠಮಾಡುತ್ತವೆ. ಪರಿಣಾಮವಾಗಿ "ಅಕ್ಕ ದತ್ತಿನಿಧಿಯಿಂದ ಕರ್ನಾಟಕದಲ್ಲಿ ಕನ್ನಡದ ಮಕ್ಕಳಿಗೆ ಸಹಾಯಮಾಡುತ್ತಿದ್ದೇವೆ" ಎನ್ನುವುದು "ಕನ್ನಡಕದ ಮಕ್ಕಳಿಗೆ ಸಹಾಯಮಾಡುತ್ತಿದ್ದೇವೆ" ಎಂದಾಗುತ್ತದೆ, "ಸ್ವಾತಂತ್ರ್ಯ ಘೋಷಣೆಯ ವಿರುದ್ಧ ಹೋರಾಟ" ಎಂಬಂಥ ತಪ್ಪುಗಳು ನುಸುಳುತ್ತವೆ.

* ಇಲಿನಾಯ್ ಸಂಸ್ಥಾನದ ರಾಜ್ಯಪಾಲ(ಗವರ್ನರ್)ರಾದ ರಾಡ್ ಬ್ಲಾಗೊಯೆವಿಚ್ ಅವರು ತನ್ನ ಭಾಷಣವನ್ನು ನಮಸ್ತೆ ನಮಸ್ಕಾರ... ದಿಂದ ಆರಂಭಿಸಿದಾಗ ಕಿವಿಗಡಚಿಕ್ಕುವ ಚಪ್ಪಾಳೆ.. ಆದರೆ ಆಮೇಲೆ ಭಾಷಣದಲ್ಲಿ ಅವರು ಯಡ್ಯೂರಪ್ಪನವರ ಹೆಸರನ್ನು ಮಿಸ್ಟರ್ ಎಡ್ಡಿಯುರಪ್ಪ ಎಂದು ಪ್ರೊನೌನ್ಸ್ ಮಾಡುತ್ತಿದ್ದುದು ಮುಖ್ಯಮಂತ್ರಿಯಾಗುವುದಕ್ಕೋಸ್ಕರ ಹೆಸರಿನ ಸ್ಪೆಲಿಂಗ್ ಬದಲಾಯಿಸಿಕೊಂಡ ಯಡಿಯೂರಪ್ಪನವರಿಗೆ ಎಷ್ಟು ಕಿರಿಕಿರಿಯಾಯಿತೊ ಗೊತ್ತಿಲ್ಲ.

* ಇಲಿನಾಯ್ ಗವರ್ನರ್ ಭಾಷಣದ ನಂತರ ಇಲಿನಾಯ್ ಮತ್ತು ಕರ್ನಾಟಕ ರಾಜ್ಯಗಳ ಸ್ನೇಹದ ಸಂಕೇತವೆಂದು ಯಡಿಯೂರಪ್ಪನವರಿಗೆ ಒಂದು ಪುಟ್ಟ ಉಡುಗೊರೆಯನ್ನು ಕೊಟ್ಟರು. ಅದು, ಅಮೆರಿಕದ ಮಾಜಿ ಅಧ್ಯಕ್ಷರ ಪೈಕಿ ಅತಿ ಜನಾನುರಾಗಿಯಾಗಿದ್ದ ಅಬ್ರಹಾಮ್ ಲಿಂಕನ್‌ನ ಪುತ್ಥಳಿ. ಲಿಂಕನ್ ಬಹುಕಾಲ ಜೀವಿಸಿದ, ಲಿಂಕನ್‌ನ ಸಮಾಧಿಯಿರುವ ಇಲಿನಾಯ್ ಸಂಸ್ಥಾನವನ್ನು ಲ್ಯಾಂಡ್ ಆಫ್ ಲಿಂಕನ್ ಎಂದೇ ಕರೆಯುತ್ತಾರೆ. ಇಲಿನಾಯ್ ಸಂಸ್ಥಾನದವರಿಗೆ ಲಿಂಕನ್ ಬಗ್ಗೆ ಅಭಿಮಾನ ಎಲ್ಲರಿಗಿಂತ ಒಂದು ತೂಕ ಹೆಚ್ಚೇ. ಹಾಗಾಗಿ ಉಡುಗೊರೆಯಾಗಿ ಕೊಡಲು ಗವರ್ನರ್ ಸಾಹೇಬ್ರು ಲಿಂಕನ್ ಪ್ರತಿಮೆಯನ್ನು ಆರಿಸಿದ್ದು ಸಮಂಜಸವೇ. ಯಡಿಯೂರಪ್ಪನವರೂ ಒಂದು ಪುಟ್ಟ ಉಡುಗೊರೆ ತಂದಿದ್ದರು, ಅದು ಪೆಟ್ಟಿಗೆಯೊಳಗೆ ಪ್ಯಾಕ್ ಆಗಿದ್ದರಿಂದ ಏನೆಂದು ಗೊತ್ತಾಗಲಿಲ್ಲ. ಬಹುಶಃ ಕರ್ನಾಟಕದ ಹೆಮ್ಮೆಯ ಗಂಧದ ಕೆತ್ತನೆಯ ಕಲಾಕೃತಿ ಏನಾದರೂ ಇರಬಹುದು. ಈ ಉಡುಗೊರೆ ಕೊಟ್ಟು-ಕೊಳ್ಳುವ ಕ್ಷಣಗಳಲ್ಲಿ ಒಂದು "ಯಡಿಯೂರಪ್ಪನವರ ಯಡವಟ್ಟು" ನಡೆದೇಹೋಗುತ್ತಿತ್ತೇನೊ ಆದರೆ ವೇದಿಕೆಯ ಮೇಲಿದ್ದ ಇನ್ನೊಬ್ಬ ಗಣ್ಯರು ಸಮಯಾವಧಾನ ತೋರಿದರು. ಏನಿಲ್ಲ, ಗವರ್ನರ್ ಉಡುಗೊರೆ ಕೊಡುತ್ತಾರೆಂದು ಎನೌನ್ಸ್ ಮಾಡಿದ ತಕ್ಷಣವೇ ಯಡ್ಯೂರಪ್ಪ ತಾನು ಕೊಡಲಿರುವ ಉಡುಗೊರೆಯ ಪೆಟ್ಟಿಗೆಯನ್ನೂ ಸಹಾಯಕರಿಂದ ತರಿಸಿ ತನ್ನೆರಡೂ ಕೈಗಳಲ್ಲಿ ಹಿಡಿದುಕೊಂಡರು. ಪೆಟ್ಟಿಗೆ ಹಿಡಿಯಲು ಅವರು ಎರಡೂ ಕೈಗಳನ್ನು ಉಪಯೋಗಿಸಿದ್ದರೆ ಉಡುಗೊರೆ ಸ್ವೀಕರಿಸುವುದಾದರೂ ಎಂತು? ವೇದಿಕೆಯ ಮೇಲಿದ್ದ ರಾಜೆಂದ್ರ ಬೇಡಿಯವರು ಕೂಡಲೆ ಯಡಿಯೂರಪ್ಪನವರಿಂದ ಪೆಟ್ಟಿಗೆ ಇಸಕೊಂಡು ಮೊದಲು ಗವರ್ನರ್ ಸಾಹೇಬರು ಯಡಿಯೂರಪ್ಪನವರಿಗೆ ಉಡುಗೊರೆ ಕೊಟ್ಟು ಅವರು ಅದನ್ನು ಸ್ವೀಕರಿಸಿ, ಆಮೇಲಷ್ಟೇ ಪ್ರತಿಉಡುಗೊರೆ ಕೊಡುವ ಕ್ರಮಕ್ಕೆ ಅನುವಾದರು.

* ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿಯವರು ತಮ್ಮ ಭಾಷಣವನ್ನು ಆರಂಭಿಸಿದ್ದೇ ವಿಶ್ವವಿನೂತನ ವಿದ್ಯಾಚೇತನ ಸರ್ವಹೃದಯಸಂಸ್ಕಾರಿ... ಹಾಡಿನ ಸಾಲುಗಳೊಂದಿಗೆ. ಆಮೇಲೆ ಭಾಷಣದ ಮಧ್ಯೆಯೂ ಜೋಗದ ಸಿರಿಬೆಳಕಿನಲ್ಲಿ.. ಹಾಡಿನ ಮೂರ್ನಾಲ್ಕು ಸಾಲುಗಳನ್ನು ಅಸ್ಖಲಿತ ಕನ್ನಡದಲ್ಲಿ ಉಚ್ಚರಿಸಿದಾಗ ಸಭೆಯಲ್ಲಿ ಮುಂದಿನ ಸಾಲಲ್ಲೇ ಕುಳಿತಿದ್ದ ಸಿ.ಅಶ್ವಥ್ ಅಚ್ಚರಿಗೊಂಡು "ಪರವಾ ಇಲ್ಲವೇ... ಬಳ್ಳಾರಿಸೀಮೆಯ ಈ ಗಣಿಧಣಿ ಇಷ್ಟು ಚೆನ್ನಾಗಿ ಕನ್ನಡ ಭಾವಗೀತೆಗಳ ಸಾಹಿತ್ಯವನ್ನೂ ತಿಳಿದುಕೊಂಡಿದ್ದಾರೆ!" ಎಂದು ಉದ್ಗರಿಸಿದ್ದು ಕೇಳಿಬಂತು.. ಆದರೆ "ಲೋಹದದಿರ ಉತ್ತುಂಗದ ನಿಲುಕಿನಲಿ..." ಎಂಬ ಸಾಲಿರುವುದರಿಂದಲೇ ಆ ಭಾವಗೀತೆಯನ್ನು ಜನಾರ್ಧನ ರೆಡ್ಡಿ ಆಯ್ದುಕೊಂಡಿರಬಹುದೇ ಎಂದು ಬಹುಶಃ ಅಶ್ವಥ್ ಬಿಡಿ ಯಾರೂ ತಲೆಕೆಡಿಸಿಕೊಳ್ಳಲಿಲ್ಲ.

* ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರನ್ನೂ ವೇದಿಕೆಯ ಮೇಲೆ ಕರೆಸಿ ಕುಳ್ಳಿರಿಸಲಾಗಿತ್ತಾದ್ದರಿಂದ ಅವರಿಗೆ ಲಂಡನ್ ಕನ್ನಡ ಬಳಗದಲ್ಲಾಯ್ತೆಂದು ಹೇಳಲಾದ "ಅವಮಾನ" ಇಲ್ಲಿ ಮರೆತುಹೋಗುವುದಕ್ಕೆ ಅಡ್ಡಿಯಿಲ್ಲ. ಮಾತ್ರವಲ್ಲ, ವಿದ್ಯಾರಣ್ಯ ಕನ್ನಡಕೂಟದ ಅಧ್ಯಕ್ಷ ಜಗನ್ನಾಥ ನಾಯಕ್ (ಮೂಲತಃ ಉಡುಪಿ ಸಮೀಪದ ಕುಂಜಾಲಿನವರು, ಆದರೆ ಶಿಕಾಗೊ ಕನ್ನಡಿಗರ ಪೈಕಿ ಮೂಲನಿವಾಸಿ) ಅವರು ತಮ್ಮ ಹಾಸ್ಯಮಿಶ್ರಿತ ಭಾಷಣದಲ್ಲಿ ಪಕ್ಕಾ ಮಂಗಳೂರುಕನ್ನಡದಲ್ಲಿ "ನಾವು ಈ ಸಲ ಸಮ್ಮೇಳನವನ್ನು ಭಯಂಕರವಾಗಿ ಹಮ್ಮಿಕೊಂಡಿದ್ದೇವೆ. ಇದುವರೆಗಿನ 'ಅಕ್ಕ" ಸಮ್ಮೇಳನಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಂದು ಭಾಗವಹಿಸುವುದು ಸಾದ್ಯವಾಗಿರಲಿಲ್ಲ. ಆದರೆ ಈಸಲ ಒಬ್ಬರಲ್ಲ ಇಬ್ಬರು "ಮುಖ್ಯಮಂತ್ರಿ"ಗಳು ವೇದಿಕೆಯ ಮೇಲೆ ರಾರಾಜಿಸುವಂತಾಗಿದೆ ಎಂದಾಗಲಂತೂ ಮುಖ್ಯಮಂತ್ರಿ ಚಂದ್ರು ಆನಂದತುಂದಿಲರಾಗಿರಬೇಕು.

* ಹಾಗೆ ನೋಡಿದರೆ ಈ ಸಮ್ಮೇಳನದಲ್ಲಿ ಇಬ್ಬರು "ಮುಖ್ಯಮಂತ್ರಿ"ಗಳು ಮಾತ್ರವಲ್ಲ. ಇಬ್ಬರು "ಚಂದ್ರು"ಗಳೂ ಇದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಯಥಾಪ್ರಕಾರ ಅಕ್ಕ ಸಮ್ಮೇಳನಕ್ಕೆ ಅಟೆಂಡೆನ್ಸ್ ಹಾಕಿದ್ದಾರೆ. ಆದರೆ ಈಬಾರಿ ಅವರು ಸಮ್ಮೇಳನದಲ್ಲಿ ಚಲನಚಿತ್ರ ಶೂಟಿಂಗ್ ಪ್ಲಾನ್ ಸಹ ಇಟ್ಟುಕೊಂಡಿದ್ದಾರೋ ತಿಳಿದುಬಂದಿಲ್ಲ.

* ಚಲನಚಿತ್ರ ನಟ ರಮೇಶ್, ಸಂಗೀತ ನಿರ್ದೇಶಕ ಗುರುಕಿರಣ್, ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ - ಹೀಗೆ ತಾರೆಯರ ದಂಡು ಸಮ್ಮೇಳನಾಂಗಣದಲ್ಲಿ ಕಂಗೊಳಿಸಿದೆ. ಶನಿವಾರ-ಭಾನುವಾರದ ಕಾರ್ಯಕ್ರಮಗಳಲ್ಲಿ ಈ ತಾರೆಗಳೆಲ್ಲ ಮಿನುಗಲಿವೆ.

ಪೂರಕ ಓದಿಗೆ:
ಭಾಷಣದ ಭಾಗ-1 :
5 ನೇ'ಅಕ್ಕ' ವಿಶ್ವ ಕನ್ನಡಸಮ್ಮೇಳನದಲ್ಲಿ ಸಿಎಂ ಭಾಷಣ
ಭಾಷಣದ ಭಾಗ-2 : ಅನಿವಾಸಿ ಕನ್ನಡಿಗರೇ, ರಾಜ್ಯದ ಪ್ರಗತಿಗೆ ಕೈಜೋಡಿಸಿ
ಭಾಷಣದ ಭಾಗ-3 : ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು: ಸಿಎಂ
ಗ್ಯಾಲರಿ-1:
5ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟನೆ ಸಂಭ್ರಮ
ಗ್ಯಾಲರಿ-2: ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಅಂಗಳದಲ್ಲಿ ಗಣ್ಯರಕೂಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X