• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಡನ್ ಕನ್ನಡ ಹೋಳಿಗೆಗೆ ತೊಟ್ಟು ನಿಂಬೆರಸ!

By Staff
|

Mukhyamantri Chandru dampens London Spiritsಬೆಂಗಳೂರು, ಆ. 28 : ಇತ್ತೀಚೆಗೆ ಸ್ಥಳೀಯ ಕನ್ನಡ ಬಳಗದ ಬೆಳ್ಳಿ ಮಹೋತ್ಸವ ಇಲ್ಲಿ ಯಶಸ್ವಿಯಾಗಿ ಮುಕ್ತಾಯವಾಯಿತು. ತಜ್ಞರಿಂದ ಉಸನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭೂರಿ ಭೋಜನಗಳು ಕನ್ನಡಿಗರ ಮನೆಸೂರೆಗೊಂಡವು. ಸ್ಥಳೀಯ ಪ್ರತಿಭೆಗಳಲ್ಲದೆ, ಕರ್ನಾಟಕದಿಂದ ಔಟ್ ಸೋರ್ಸ್ ಮಾಡಿಕೊಳ್ಳಲಾಗಿದ್ದ ಕವಿಗಳು, ನೃತ್ಯಗಾರರು, ಬರಹಗಾರರು, ಹಾಸ್ಯಪಟುಗಳ ನಗೆ ಚಟಾಕಿಗಳಿಂದ ಸಮ್ಮೇಳನಕ್ಕೆ ಆಗಮಿಸಿದ್ದ ಕನ್ನಡಿಗರು ಪುಳಕಗೊಂಡರು.

ಆದರೆ, ಏನಾದರೊಂದು ಕಹಿ ಘಟನೆ ನಡೆಯದಿದ್ದರೆ ಅದಕ್ಕೆ ಸಮ್ಮೇಳನ ಎಂದು ಯಾರು ಕರೆಯುತ್ತಾರೆ? ಕರ್ನಾಟಕದಲ್ಲಾಗಲೀ, ಅಮೆರಿಕದಲ್ಲಾಗಲೀ, ಏಷಿಯಾ ಪೆಸಿಫಿಕ್ ಪ್ರಾಂತ್ಯಗಳಲ್ಲಿ ನಡೆಯುವ ಮೆಗಾ ಇವೆಂಟುಗಳಾಗಲೀ ಹಣೆ ಮೇಲೆ ಕಪ್ಪುಚುಕ್ಕೆ ಇಟ್ಟುಕೊಳ್ಳದೆ ಮುಂದಿನ ಸಮ್ಮೇಳನದತ್ತ ಮುಖಮಾಡುವುದಿಲ್ಲ. ಮೊನ್ನೆ ಇಲ್ಲೂ ಇಂಥದೊಂದು ಘಟನೆ ಸಂಭವಿಸಿ ಹಬ್ಬದ ಹೂರಣ ಹೋಳಿಗೆಗೆ ನಿಂಬೆ ರಸ ಬೆರೆಸಿದಂತಾಯಿತು.

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಉದ್ಘಾಟನೆಗೆ ಆಹ್ವಾನಿಸಲಾಗಿತ್ತು. ಆದರೆ ಅವರ ಗೈರು ಹಾಜರಿಯಲ್ಲಿ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಉದ್ಘಾಟನಾ ಕಾರ್ಯಕ್ರಮವನ್ನು ಸಾಂಗಗೊಳಿಸಿದರು. ವೇದಿಕೆಯ ಮೆಲೆ ರೆಡ್ಡಿ, ಕವಿ ನಿಸಾರ್ ಅಹಮ್ಮದ್, ಸ್ಥಳೀಯ ರಾಜಕಾರಣಿ ಟಿಮ್ ಸನ್ ಮತ್ತು ಕನ್ನಡ ಬಳಗದ ಅಧ್ಯಕ್ಷೆ ಡಾ. ಭಾನುಮತಿ ಆಸೀನರಾಗಿದ್ದರು. ಆದರೆ, ಕರ್ನಾಟಕದಿಂದ ಆಗಮಿಸಿದ್ದ ಇನ್ನೊಬ್ಬ ರಾಜಕಾರಣಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು ಅವರಿಗೆ ಮುಖ್ಯ ವೇದಿಕೆಯಲ್ಲಿ ಆಸೀನರಾಗಿ ಕಂಗೊಳಿಸುವ ಅವಕಾಶ ಸಿಗಲಿಲ್ಲ.

ಈ ಕಾರಣದಿಂದಲೋ ಏನೋ, ಚಂದ್ರು ಅವರಿಗೆ ಅಪಾರ ಕೋಪ ಬಂದಿತು. ಅಲ್ಲಿಂದ ಇಲ್ಲಿಯವರೆಗೆ ಬಂದಿದ್ದೇನೆ, ಉದ್ಘಾಟನಾ ಕಾರ್ಯಕ್ರಮದಲ್ಲಿ ನನ್ನನ್ನು ತೊಡಗಿಸದೆ ಯುಕೆ ಕನ್ನಡ ಬಳಗದವರು ಅಪಮಾನ ಮಾಡಿದ್ದಾರೆ ಎಂದು ತಾವೇ ಹಿಂಸೆ ಪಟ್ಟುಕೊಂಡರು. ಭರ್ಜರಿ ಭಾಷಣ ಮಾಡುವುದಕ್ಕೆ ಪ್ರಸಿದ್ಧರಾದ ಚಂದ್ರು ಅವರಿಗೆ ನೀಡಿದ ಪ್ರಾಶಸ್ತ್ಯ ಪುಟಗೋಸಿಯಾಗಿತ್ತು ಎಂದು ಚಂದ್ರು ಅವರನ್ನು ಬಲ್ಲವರು ಹೇಳಿದರು.

ಹೀಗಾಗಿ, ಕರ್ನಾಟಕದಿಂದ ಇಲ್ಲೀತನಕ ಬಂದಿದ್ದು ವ್ಯರ್ಥವಾಯಿತು ಎಂದು ಚಂದ್ರು ತುಂಬಾ ಪರಿತಪಿಸಿಕೊಂಡರು. ಅಷ್ಟೇ ಅಲ್ಲ, ಮೂರೂ ದಿವಸಗಳ ಕಾಲ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ ತಮ್ಮ ಹೋಟೆಲ್ ಕೋಣೆಯಲ್ಲೇ ಕಾಲ ನೂಕಿದರು. ಊಟ ತಿಂಡಿ ಸಮಯಕ್ಕೆ ಮಾತ್ರ ಡೈನಿಂಗ್ ಹಾಲ್‌ಗೆ ಬಂದು ಹೋಗುತ್ತಿದ್ದರು! ಆದರೆ, ಅವರ ಪತ್ನಿ ಮಾತ್ರ ಎಲ್ಲಾ ಕಾರ್ಯಕ್ರಮಗಳಿಗೂ ಹಾಜರಾಗಿದ್ದುದು ವಿಶೇಷವಾಗಿತ್ತು ಎಂದು ಒಬ್ಬ ಸಮ್ಮೇಳನಾರ್ಥಿ ತಿಳಿಸಿದರು.

ಚಂದ್ರು ಅವರಿಗೂ ಸ್ಥಾನ ಕಲ್ಪಿಸಲಾಗಿತ್ತು, ನಿಜ. ಅದ್ಯಾವುದೆಂದರೆ ಭಾನುವಾರ ವ್ಯವಸ್ಥೆಯಾಗಿದ್ದ ಸಾಹಿತ್ಯ ಗೋಷ್ಠಿಯಲ್ಲಿ ಒಟ್ಟು ಹತ್ತು ಅಂಕಗಳಿದ್ದವು. ಸರದಿಯಲ್ಲಿ ಏಳನೆಯವರಾಗಿ Talk by Mukhyamantri Chandru ಎಂದು ಕಾರ್ಯಕ್ರಮ ಪಟ್ಟಿಯಲ್ಲಿ ನಮೂದಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ತಾವು ಹತ್ತರಲ್ಲಿ ಹನ್ನೊಂದನೆಯನಾದೆನೆಂಬುದು ಅವರ ಮನ ನೋಯುವುದಕ್ಕೆ ಕಾರಣವಾಯಿತು.

ಕನ್ನಡ ಬಳಗದ ಮೂಲಗಳ ಪ್ರಕಾರ, ಚಂದ್ರು ಅವರನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇರಿಸುವ ಯೋಚನೆ, ಯೋಜನೆ ಇರಲೇಲಿಲ್ಲ. ಅವರಿಗೆ ಆಹ್ವಾನ ನೀಡಲಾಗಿತ್ತು ಮತ್ತು ಅವರ ಪ್ರವಾಸವನ್ನು ಪ್ರಾಯೋಜಿಸಲಾಗಿತ್ತು ನಿಜ. ಅವರಿಗೆ ಎಷ್ಟು ಮರ್ಯಾದೆ ಕೊಡಬೋಕೋ ಅಷ್ಟನ್ನು ಕೊಡಲಾಗಿದೆ. ಆದಾಗ್ಯೂ ಅವರ ಈ ವರ್ತನೆಯಿಂದ ರಜತೋತ್ಸವ ಸಮಾರಂಭಕ್ಕೆ ಅಹರ್ನಿಶಿ ದುಡಿದ ಕಾರ್ಯಕರ್ತರಿಗೆಲ್ಲ ತುಂಬಾ ಬೇಜಾರಾಗಿದೆ ಎಂದು ಲಂಡನ್ ಕನ್ನಡಿಗರೊಬ್ಬರು ದಟ್ಸ್ ಕನ್ನಡಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಅಂತೂ ಈಗ ಲಂಡನ್‌ನಲ್ಲಿ "ಚಂದ್ರು ಮುಖ ಸಿಂಡರಿಸಿಕೊಂಡು ಮೂಲೆಯಲ್ಲಿ ಕುಳಿತ" ಪ್ರಕರಣವೇ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ

ಆಂಗ್ಲರ ನಾಡಿನಲ್ಲಿ ಕನ್ನಡಿಗರ ಬೆಳ್ಳಿಹಬ್ಬದ ಸಂಭ್ರಮ

ಆಗಸ್ಟ್ 29ರಿಂದ 31ರವರೆಗೆ ಅಮೆರಿಕದಲ್ಲಿ ಕನ್ನಡ ಸಮ್ಮೇಳನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X