ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಕ್ಕ' ವಿಶ್ವ ಕನ್ನಡಸಮ್ಮೇಳನದಲ್ಲಿ ಸಾಹಿತ್ಯ ಸೌರಭ

By Staff
|
Google Oneindia Kannada News

"ಅಕ್ಕ" ವಿಶ್ವ ಕನ್ನಡ ಸಮ್ಮೇಳನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ! ಆ ಕಡೆಯಿಂದ ಸಮ್ಮೇಳನಕ್ಕೆ ಬರಲಿರುವವರು ಸಿದ್ಧತೆ ನಡೆಸುತ್ತಿದ್ದರೆ ಈ ಬದಿಯಿಂದ ಸಮ್ಮೇಳನದ ಕಾರ್ಯಕರ್ತರ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕನ್ನಡ ಸಂಸ್ಕೃತಿಯ ವಿವಿಧ ಆಯಾಮಗಳಾದ ಸಂಗೀತ, ನೃತ್ಯ, ನಾಟಕ ಪಾರಮಾರ್ಥಿಕ ಎಲ್ಲೆಡೆಯಲ್ಲೂ ಎಷ್ಟೆಲ್ಲಾ ಕಾರ್ಯಕ್ರಮಗಳು! ಏನೆಲ್ಲಾ ತರಾತುರಿ! ಜೊತೆಯಲ್ಲೇ ವಧೂವರರ ಅನ್ವೇಷಣೆ, ಫ್ಯಾಷನ್ ಶೋ, "ಅಕ್ಕ" ಐಡಲ್ ಕಾರ್ಯಕ್ರಮ! ಒಂದೇ ಎರಡೇ! ಹೀಗಿರುತ್ತಾ ಸಾಹಿತ್ಯ ಹಿಂದೆ ಬೀಳುವುದುಂಟೆ? ಮೊದಲೇ ಏಳು ಜ್ಞಾನ ಪೀಠ ಪ್ರಶಸ್ತಿಗಳನ್ನು ಸಂಪಾದಿಸಿದ ಧೀಮಂತ ಹಿನ್ನೆಲೆ ಕನ್ನಡ ಸಾಹಿತ್ಯಕ್ಕೆ, ಜೊತೆಗೆ ಅಮೆರಿಕಾದಲ್ಲಿ ವರ್ಷಕ್ಕೆರಡು ಉತ್ತಮ ಕನ್ನಡ ಪತ್ರಿಕೆ "ಸಂಗಮ"ವನ್ನು ಹೊರತರುತ್ತಿರುವ ಸಾಹಿತ್ಯಾಸಕ್ತ ಶಿಕಾಗೊ ಕನ್ನಡ ಸಮುದಾಯ! ಕೇಳಬೇಕೆ?

ಮುಖ್ಯ ವೇದಿಕೆಯ ಮೇಲೆ ನಡೆಯುವ ಸಾಹಿತಿಗಳ ಭಾಷಣ, ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳಲ್ಲದೆ ಸಮಾನಾಂತರ ಚಟುವಟಿಕೆಗಳೂ ಭೇಷಾಗಿವೆ! ಇಲ್ಲಿ ನೋಡಿ.

ಕವಿ ಗೋಷ್ಠಿ- ಆಗಸ್ಟ್ 30, ಶನಿವಾರದಂದು ನಡೆಯುವ ಈ ಕಾರ್ಯಕ್ರಮಕ್ಕೆ ಇಪ್ಪತ್ತಕ್ಕೂ ಹೆಚ್ಚು ಜನ ತಮ್ಮ ಕವನಗಳನ್ನು ಓದಲು ಹೆಸರು ನೋಂದಾಯಿಸಿದ್ದಾರೆ. ಚಂದ್ರಶೇಖರ ಕಂಬಾರರ ಅಧ್ಯಕ್ಷತೆ. ಗುರುಲಿಂಗ ಕಾಪ್ಸೆ ಅವರು ವಿಶೇಷ ಅತಿಥಿ.

ಎಸ್. ಎಲ್. ಭೈರಪ್ಪನವರೊಡನೆ ಸಂವಾದ : ಕನ್ನಡದ ಅತ್ಯಂತ ಜನಪ್ರಿಯ ಬರಹಗಾರರಾದ ಭೈರಪ್ಪನವರನ್ನು ನೀವು ಯಾವ ಪ್ರಶ್ನೆ ಬೇಕಾದರೂ ಕೇಳಬಹುದು! ಯಾವ ಮಧ್ಯವರ್ತಿಗಳೂ ಇಲ್ಲದೆ ಮುಖತಃ ಕೇಳುವ ಈ ಪ್ರಶ್ನೆಗಳು ಸಾಹಿತ್ಯ, ರಾಜಕೀಯ, ಕನ್ನಡದ ಸ್ಥಿತಿಗತಿ ಮುಂತಾದ ಯಾವ ವಿಷಯವನ್ನು ಕುರಿತಾದರೂ ಇರಬಹುದು!

ಆಗಸ್ಟ್ 31 ಭಾನುವಾರದಂದು ನಡೆಯುವ ಕಾರ್ಯಕ್ರಮಗಳು ಈ ರೀತಿಯಾಗಿವೆ.

ವಿಚಾರ ಸಂಕಿರಣ: ಕಂಬಾರರು ಈ ಕಾರ್ಯಕ್ರಮದ ನಿರ್ವಾಹಕರು. ಭಾಗವಹಿಸುವವರು: ಕುಂ. ವೀರಭದ್ರಪ್ಪ, ಮಹೇಶ್ವರಪ್ಪ, ಆರ್. ಗಣೇಶ್, ಪಿ. ಕೆ.ರಾಜಶೇಖರ, ಗುರುಲಿಂಗ ಕಾಪ್ಸೆ ಮತ್ತು ಪುತ್ತೂರಾಯರು. ವಿಷಯ: ಜಾಗತೀಕರಣದ ಪ್ರವಾಹದಲ್ಲಿ ಕನ್ನಡದ ಉಳಿವು, ಅಳಿವು.

ಪುಸ್ತಕ/ಧ್ವನಿ ಸುರುಳಿ ಪರಿಚಯ: ಜಯಂತ್ ಕಾಯ್ಕಿಣಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪ್ರಕಟವಾದ ಹಲವಾರು ಪುಸ್ತಕ ಹಾಗೂ ಧ್ವನಿಸುರುಳಿಗಳ ಸಂಕ್ಷಿಪ್ತ ಪರಿಚಯವಿದೆ. ಹಾಗೂ ಆ ಪುಸ್ತಕ/ಧ್ವನಿ ಸುರುಳಿಗಳ ಕರ್ತೃಗಳಿಗೂ ಮಾತನಾಡುವ ಅವಕಾಶವಿದೆ. ಕೊನೆಯಲ್ಲಿ ಕಾಯ್ಕಿಣಿಯವರು "ಮಾಹಿತಿ ತಂತ್ರ ಜ್ಞಾನದ ಈ ಯುಗದಲ್ಲಿ ಪುಸ್ತಕಗಳ ಅಗತ್ಯ" ಎಂಬ ಬಗ್ಗೆ ಮಾತನಾಡಲಿದ್ದಾರೆ.

ಭಾಷಣಗಳು : ಡಾ. ಪಿ.ಕೆ.ರಾಜಶೇಖರ : ಜನಪದ ಸಾಹಿತ್ಯ, "ಕನ್ನಡ ನಾಡು ನುಡಿಗೆ ನಮನ" : ಡಾ. ಪುತ್ತೂರಾಯ.
ಇವೆಲ್ಲವೂ ಅಲ್ಲದೆ ಸ್ಮರಣ ಸಂಚಿಕೆಗೆ ಬಂದ ಕಥೆಗಳು, ಪ್ರಬಂಧಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳಿವೆ.ಒಟ್ಟಿನಲ್ಲಿ ಕನ್ನಡ ಸರಸ್ವತಿಯ ವೀಣೆಯ ಝೇಂಕಾರ ದೇಶ ದೇಶಗಳ ಗಡಿಗಳನ್ನು ದಾಟಿ ಇಲ್ಲಿ ಶಿಕಾಗೊದಲ್ಲಿ, ಮಿಶಿಗನ್ ಸರೋವರದ ತೀರದಲ್ಲಿ ಈ ರೋಸ್‌ಮಾಂಟ್ ಕನ್‌ವೆನ್ಷನ್ ಸೆಂಟರಿನಲ್ಲಿ ಮಾರ್ದನಿಸುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.

Chair Nalini Maiya, [email protected] [630 968-0203]
Co-Chair Prakash Hemavathi
Member Ramanujam Prasad
Member Triveni Shreenivasa Rao

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X