ತಮಿಳುನಾಡು ಸಚಿವ ಸಂಪುಟ ಖಾತೆ ಹಂಚಿಕೆ: ಗೃಹ ಇಲಾಖೆ ಉಳಿಸಿಕೊಂಡ ಸಿಎಂ ವಿಜಯ್, ಯಾರಿಗೆ ಯಾವ ಖಾತೆ?
ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸಚಿವ ಸಂಪುಟದ ಪ್ರಮುಖ ಖಾತೆಗಳ ಹಂಚಿಕೆಯನ್ನು ಶನಿವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಸಿಎಂ ವಿಜಯ್ ಅವರು ಗೃಹ ಮತ್ತು ಪೊಲೀಸ್ ಸೇರಿದಂತೆ ರಾಜ್ಯದ ಅತ್ಯಂತ ಪ್ರಮುಖ ಇಲಾಖೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಹಿರಿಯ ನಾಯಕ ಕೆ.ಎ. ಸೆಂಗೋಟ್ಟಯ್ಯನ್ ಅವರಿಗೆ ಹಣಕಾಸು ಇಲಾಖೆಯ ಜವಾಬ್ದಾರಿ ನೀಡಲಾಗಿದ್ದು, ಸಂಪುಟದ ಅತ್ಯಂತ ಕಿರಿಯ ಸಚಿವೆ ಸೆಲ್ವಿ ಎಸ್. ಕೀರ್ತನಾ ಅವರಿಗೆ ಬೃಹತ್ ಕೈಗಾರಿಕಾ ಇಲಾಖೆಯ ಹೊಣೆಗಾರಿಕೆ ಒಪ್ಪಿಸಲಾಗಿದೆ.
ಸಿಎಂ ವಿಜಯ್ ಬಳಿ ಇರುವ ಇಲಾಖೆಗಳು
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ವಿಜಯ್ ಅವರ ಸಚಿವ ಸಂಪುಟದ ಪ್ರಮುಖ ಸಚಿವರು ಮತ್ತು ಅವರಿಗೆ ಹಂಚಿಕೆಯಾಗಿರುವ ಇಲಾಖೆಗಳ ಸಂಪೂರ್ಣ ವಿವರ ಇಲ್ಲಿದೆ. ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕ ಮತ್ತು ಸಾಮಾನ್ಯ ಆಡಳಿತ, ಗೃಹ ಇಲಾಖೆ, ಜಿಲ್ಲಾ ಕಂದಾಯ ಅಧಿಕಾರಿಗಳು, ಪೊಲೀಸ್, ವಿಶೇಷ ಕಾರ್ಯಕ್ರಮ ಅನುಷ್ಠಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನ ಕಲ್ಯಾಣ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣ, ಪೌರಾಡಳಿತ ಹಾಗೂ ನಗರಾಭಿವೃದ್ಧಿ ಮತ್ತು ನೀರು ಸರಬರಾಜು ಇಲಾಖೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಪ್ರಮುಖ ಸಚಿವರು ಮತ್ತು ಖಾತೆಗಳ ವಿವರ
ಕೆ.ಎ. ಸೆಂಗೋಟ್ಟಯ್ಯನ್ (ಹಣಕಾಸು ಸಚಿವ): ನೂತನ ಸರ್ಕಾರದ ಹಣಕಾಸು, ಪಿಂಚಣಿ ಮತ್ತು ಪಿಂಚಣಿ ಭತ್ಯೆಗಳ ಜವಾಬ್ದಾರಿಯನ್ನು ಇವರಿಗೆ ವಹಿಸಲಾಗಿದೆ.
ಸೆಲ್ವಿ ಎಸ್. ಕೀರ್ತನಾ (ಕೈಗಾರಿಕಾ ಸಚಿವೆ): ಸಂಪುಟದ ಅತ್ಯಂತ ಕಿರಿಯ ಸಚಿವೆಯಾಗಿರುವ ಇವರಿಗೆ ಪ್ರಮುಖವಾದ ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಇಲಾಖೆಯನ್ನು ನೀಡಲಾಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಎನ್.ಆನಂದ್ (ಗ್ರಾಮೀಣಾಭಿವೃದ್ಧಿ ಸಚಿವ): ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಪಂಚಾಯತ್ ಯೂನಿಯನ್, ಬಡತನ ನಿರ್ಮೂಲನೆ ಕಾರ್ಯಕ್ರಮ ಹಾಗೂ ಸಣ್ಣ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಹೊಣೆ ಹೊತ್ತಿದ್ದಾರೆ.
ಆದವ್ ಅರ್ಜುನ (ಲೋಕೋಪಯೋಗಿ ಮತ್ತು ಕ್ರೀಡಾ ಸಚಿವ): ಕಟ್ಟಡಗಳು, ಹೆದ್ದಾರಿಗಳು ಮತ್ತು ಸಣ್ಣ ಬಂದರುಗಳು ಸೇರಿದಂತೆ ಲೋಕೋಪಯೋಗಿ ಇಲಾಖೆ (PWD) ಹಾಗೂ ಕ್ರೀಡಾ ಅಭಿವೃದ್ಧಿ ಇಲಾಖೆಯನ್ನು ಮುನ್ನಡೆಸಲಿದ್ದಾರೆ.
ಡಾ.ಕೆ.ಜಿ. ಅರುಣ್‌ರಾಜ್ (ಆರೋಗ್ಯ ಸಚಿವ): ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳನ್ನು ಇವರಿಗೆ ಹಂಚಿಕೆ ಮಾಡಲಾಗಿದೆ.
ಪಿ.ವೆಂಕಟರಮಣನ್ (ಆಹಾರ ಮತ್ತು ನಾಗರಿಕ ಸರಬರಾಜು ಸಚಿವ): ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ರಕ್ಷಣೆ ಹಾಗೂ ಬೆಲೆ ನಿಯಂತ್ರಣ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಆರ್.ನಿರ್ಮಲ್ ಕುಮಾರ್ (ಇಂಧನ ಮತ್ತು ಕಾನೂನು ಸಚಿವ): ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ, ಕಾನೂನು, ನ್ಯಾಯಾಲಯಗಳು, ಕಾರಾಗೃಹಗಳು, ಭ್ರಷ್ಟಾಚಾರ ತಡೆ ಇಲಾಖೆ, ಶಾಸನಸಭೆ ಮತ್ತು ಚುನಾವಣೆಗಳ ಹೊಣೆ ಇವರ ಮೇಲಿದೆ.
ರಾಜ್‌ಮೋಹನ್ (ಶಾಲಾ ಶಿಕ್ಷಣ ಮತ್ತು ಮಾಹಿತಿ ಸಚಿವ): ಶಾಲಾ ಶಿಕ್ಷಣ, ತಮಿಳು ಅಭಿವೃದ್ಧಿ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ (I&PR), ಪುರಾತತ್ವ, ಚಲನಚಿತ್ರ ತಂತ್ರಜ್ಞಾನ ಹಾಗೂ ಮುದ್ರಣಾಲಯ ಇಲಾಖೆಗಳನ್ನು ಮುನ್ನಡೆಸಲಿದ್ದಾರೆ.
ಡಾ. ಟಿ.ಕೆ. ಪ್ರಭು (ನೈಸರ್ಗಿಕ ಸಂಪನ್ಮೂಲ ಸಚಿವ): ನೈಸರ್ಗಿಕ ಸಂಪನ್ಮೂಲಗಳು, ಖನಿಜಗಳು ಮತ್ತು ಗಣಿ ಇಲಾಖೆಯ ಉಸ್ತುವಾರಿಯನ್ನು ಇವರಿಗೆ ನೀಡಲಾಗಿದೆ.
ತಮಿಳುನಾಡು ರಾಜಕೀಯ ವಲಯದಲ್ಲಿ ಈ ಖಾತೆ ಹಂಚಿಕೆ ತೀವ್ರ ಕುತೂಹಲ ಮೂಡಿಸಿದ್ದು, ಅದರಲ್ಲಿಯೂ ಸಂಪುಟದ ಅತ್ಯಂತ ಕಿರಿಯ ಮಹಿಳಾ ಸಚಿವೆ ಸೆಲ್ವಿ ಎಸ್. ಕೀರ್ತನಾ ಅವರಿಗೆ ರಾಜ್ಯದ ಆರ್ಥಿಕತೆಯ ಪ್ರಮುಖ ಹೆಜ್ಜೆಯಾಗಿರುವ 'ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ'ದಂತಹ ಬೃಹತ್ ಇಲಾಖೆಯನ್ನು ನೀಡಿರುವುದು ಎಲ್ಲರ ಗಮನ ಸೆಳೆದಿದೆ. ಮುಖ್ಯಮಂತ್ರಿ ವಿಜಯ್ ಅವರು ಸಾರ್ವಜನಿಕ ಆಡಳಿತದ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ತಾವೇ ಇಟ್ಟುಕೊಳ್ಳುವ ಮೂಲಕ ಸಾಮಾಜಿಕ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ಮುನ್ಸೂಚನೆ ನೀಡಿದ್ದಾರೆ.













Click it and Unblock the Notifications