• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಅಕ್ಕ' ಚಪ್ಪರದಲ್ಲಿ ವಧೂವರ ಸಮಾವೇಶ

By ಶಾಮ್
|

AKKA/Bharat Matrimony Singles Meet-2008ಬೆಂಗಳೂರು, ಆ. 20 : ಇಲಿನಾಯ್ ರಾಜ್ಯದ ಅತ್ಯಂತ ದೊಡ್ಡ ನಗರ ಶಿಕಾಗೋದಲ್ಲಿ ನಡೆಯಲಿರುವ ಐದನೇ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನದ ಕಾರ್ಯಕ್ರಮ ಪಟ್ಟಿ ಹನುಮಂತನ ಬಾಲಕ್ಕಿಂತ ಉದ್ದವಾದದ್ದು. ನೀರಾಜನ ಬೆಳಗಿ ಉದ್ಘಾಟನೆ, ಬೋರು ಹೊಡೆಸುವ ಭಾಷಣಗಳು, ಜಾತ್ರೆ ಸದೃಶ ರಥಯಾತ್ರೆಗಳು, ಸಾಹಿತ್ಯಿಕ ಚರ್ಚೆಗಳು, ಧರ್ಮ ಚಿಂತನೆಗಳು, ಪಾರಮಾರ್ಥಿಕ ಜಿಜ್ಞಾಸೆಗಳು, ಇಂಪಾದ ಸಂಗೀತ, ಭರ್ಜರಿ ನಾಟಕ, ಸೊಂಪಾದ ನೃತ್ಯ, ಮನೋಜ್ಞ ಕವಿಗೋಷ್ಠಿ, ಝಣಝಣ ಉದ್ಯಮಪತಿಗಳ ವಾಣಿಜ್ಯ ಸಮಾವೇಶಗಳು, ಗಮ್ಮತ್ತಿನ ಸಮ್ಮೇಳನದೂಟ.. ಪಟ್ಟಿ ದೊಡ್ಡದು.

ಐದಾರು ಕೋಟಿ ರೂಪಾಯಿಗಳ ಖರ್ಚು ವೆಚ್ಚದಲ್ಲಿ ವ್ಯವಸ್ಥೆಯಾಗುವ ಈ ಬಗೆಯ ಬೃಹತ್ ಸಮ್ಮೇಳನಗಳಲ್ಲಿ ಕಣ್ಣು ಕೋರೈಸುತ್ತ ಚಿತ್ತಾಗಿಸುವ ಕಾರ್ಯಕ್ರಮಗಳ ಕಡೆಗೇ ಎಲ್ಲರ ದೃಷ್ಟಿ ಹಾಯುವುದು ಸಹಜ. ಆದರೆ, ಸಮ್ಮೇಳನದ ಸುದ್ದಿ ಸಮಾಚಾರಗಳನ್ನು ಇಂಟರ್ನೆಟ್ಟಿನಲ್ಲಿ ಗಮನಿಸುವ ಆಸಕ್ತರರಿಗಿರಲಿ, ನೊಂದಾಯಿತ ಪ್ರತಿನಿಧಿಗಳ ಕಣ್ಣಿಗೇ ಬೀಳದ ಹೋಗುವ ಹಲವು ಶಿಬಿರಗಳು ಇರುತ್ತವೆ. ಇಂಥ ಶಿಬಿರಗಳ ಪಟ್ಟಿಯಲ್ಲಿ ನಮಗೆ ಇವತ್ತು ಎದ್ದು ಕಾಣುವ ಗೋಷ್ಠಿಯೆಂದರೆ ಅಕ್ಕ/ಭಾರತ್ ಮೆಟ್ರಿಮೊನಿ ಪ್ರಾಯೋಜಿತ ವಧೂ-ವರ ಸಮಾವೇಶ.

ತಮ್ಮ ಬಾಳ ಸಂಗಾತಿಯನ್ನು ತಾವೇ ಆರಿಸಿಕೊಳ್ಳುವ ಹಾಗೂ ಸಂಗಾತಿಯಿಂದ ಹಾಗೆ ಸುಮ್ಮನೆ ಕಳಚಿಕೊಳ್ಳುವ ಪಾಶ್ಚಿಮಾತ್ಯ ದೇಶ ಕಾಲ ಪದ್ದತಿ ಜೀವನಶೈಲಿಯ ಅಮೆರಿಕೆಯಲ್ಲಿ ಕನ್ನಡ/ಕರ್ನಾಟಕ ವಧೂವರರ ಸಮಾವೇಶ ಅಣಿಯಾಗಿದೆಯೆಂದರೆ ಅದು ಬ್ರೇಕಿಂಗ್ ನ್ಯೂಸ್ ಅಲ್ಲದೆ ಮತ್ತೇನೂ ಅಲ್ಲ. ತಂದೆ ಅಥವಾ ತಾಯಿ ಅಥವಾ ಪೋಷಕರ ಸಮೇತ ಆಗಮಿಸುವ ಅರ್ಹ ಹೆಣ್ಣು ಗಂಡುಗಲಿಗಳಿಗೆ ಬಾಳ ಸಂಗಾತಿ ಆರಿಸಿಕೊಳ್ಳಲು ವೇದಿಕೆ ಕಲ್ಪಿಸಿದ 'ಅಕ್ಕ' ಬಳಗಕ್ಕೆ ಶುಭ ಕಾಮನೆಗಳು ಸಲ್ಲಬೇಕು.

ಆಗಸ್ಟ್ 29ರಿಂದ 31ರವರೆಗೆ ರೋಸ್ ಮಾಂಟ್ ಕನ್ವೆನ್‌ಷನ್ ಸಭಾಂಗಣದಲ್ಲಿ ಜರುಗುವ ಜನ ಜಾತ್ರೆಯಲ್ಲಿ (ಇವತ್ತಿನ ಅಂಕಿ ಅಂಶದ ಪ್ರಕಾರ 2600) ಒಂಟಿ ಜೀವಿಗಳು ಕಳೆದು ಹೋಗದಿರಲಿ. ವಧೂವರ ಸಮಾವೇಶದಲ್ಲಿ ನಿಮಗೊಪ್ಪುವ ಬಾಳ ಸಂಗಾತಿ ದಕ್ಕಲಿ ಎಂದು ದಟ್ಸ್ ಕನ್ನಡ ಸುದ್ದಿ ವಾಹಿನಿ ಹಾರೈಸುತ್ತದೆ. ನೆನಪಿರಲಿ : ಸಮ್ಮೇಳನಕ್ಕೆ ನೊಂದಾಯಿಸಿಕೊಂಡವರಿಗೆ ಮಾತ್ರ ವಧೂವರ ಮಂಟಪಕ್ಕೆ ಪ್ರವೇಶ. ಪ್ರವೇಶ ಶುಲ್ಕ ಕೇವಲ 50 ಅಮೆರಿಕನ್ ಡಾಲರುಗಳು.

ಕಳೆದ 'ಅಕ್ಕ' ಸಮ್ಮೇಳನಗಳಲ್ಲಿಯೂ ಸಹ ಇಂಥ ಸಮಾವೇಶಗಳು ಏರ್ಪಾಟಾಗಿದ್ದವು. ಯಾರಿಗೆ ಯಾರು ಒಲಿದು ಜೀವಕ್ಕಿಂತ ಸನಿಹ ಬಂದರೋ ನಮ್ಮ ಪತ್ರಿಕೆಗೆ ಮಾಹಿತಿ ಇಲ್ಲ. ವಿಧವೆಯರು, ವಿಧುರರು, ವಿಚ್ಛೇದಿತರು, ಪರಿತ್ಯಕ್ತರು, ಹಿಂಸೆಗೆ ತುತ್ತಾದ ಜೀವಕ್ಕೆ ಯಾರಾದರೂ ಮತ್ತೆ ಜೊತೆಯಾದರೋ? ಗೊತ್ತಿಲ್ಲ. ಕರಾರುವಾಕ್ಕು ಮಾಹಿತಿಗಳು 'ಅಕ್ಕ' ತಂಡದಿಂದ ಲಭ್ಯವಿಲ್ಲ. ಸಮ್ಮೇಳನಗಳನ್ನು ವ್ಯವಸ್ಥೆ ಮಾಡುವುದು, ಅಚ್ಚುಕಟ್ಟಾಗಿ ನಿಭಾಯಿಸುವುದು ದೊಡ್ಡ ಸವಾಲು ಒಪ್ಪೋಣ. ಆ ಭಾರವನ್ನು ಹೊತ್ತು ಕೊಳ್ಳುವ ಅನೇಕ ಕನ್ನಡ ಸ್ವಯಂಸೇವಕರು, ಕನ್ನಡ ಸೇನಾನಿಗಳು ಅಮೆರಿಕದಲ್ಲಿ ಇದ್ದಾರೆ. ಅವರ ಉತ್ಸಾಹಗಳು ಏನಿದ್ದರೂ ಸಮ್ಮೇಳನ ಅಂಕದ ಪರದೆ ಜಾರುವ ತನಕ. ಸಮ್ಮೇಳನಾನಂತರ ಅದರ ಫಲಶೃತಿಗಳನ್ನು ಪ್ರಚುರ ಪಡಿಸುವ ಉಮೇದು 'ಅಕ್ಕ' ಸಂತಾನಕ್ಕಿಲ್ಲ.

ಈ ಬಾರಿ ಹಾಗಾಗದಿರಲಿ. ವಧೂವರರ ಸಮಾವೇಶದಲ್ಲಿ ಒಂಟಿ ಜೀವಿಗಳಿಗೆ ಸಂಗಾತಿ ಸಿಕ್ಕ ಮಾಹಿತಿ ಮತ್ತು ಸಂತಸವನ್ನು ಕನ್ನಡ ಬಾಂಧವರ ಸಮ್ಮುಖದಲ್ಲಿ ಹಂಚಿಕೊಳ್ಳುವ ಶ್ರದ್ಧೆಯನ್ನು ಆಯೋಜಕರು ಕಾಪಾಡಿಕೊಳ್ಳಲಿ. ಮುಂದಿನ ಸಮ್ಮೇಳನಕ್ಕೆ ಅಡಿಗಲ್ಲುಗಳು ಕಾಣುವುದು ಇಂಥ ಕೆಲಸಗಳಿಂದ ಮಾತ್ರ. ಅಂದಹಾಗೆ, ನೀವು ವಧೂವರರ ಸಮಾವೇಶದಲ್ಲಿ ಭಾಗಿಯಾದರೆ, ಸಮಾವೇಶದ ನಡಾವಳಿಗಳು, ಕನ್ನಡ ಮನಸ್ಸುಗಳ ನಿರೀಕ್ಷೆಗಳ ಬಗೆಗೆ ನಮಗೆ ಬರೆಯಿರಿ. ಇಂಥ ಬರಹ ಕಾಣಿಕೆಗಳಿಗೆ ದಟ್ಸ್ ಕನ್ನಡ ಯಾವತ್ತೂ ಆದ್ಯತೆ ನೀಡುತ್ತದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ Singles Meet Session ಪದಾಧಿಕಾರಿಗಳನ್ನು ಸಂಪರ್ಕಿಸಬಹುದು.

Chair Shubha Seetharam [shubha_seetharam@yahoo.com 847 875-0467]

Co-Chair Swetha Rao [swetha2rao@yahoo.com 847 697-4363]

Member Asha Rao[asha123@yahoo.com 224 578-1213]

Member Bhavana Harish [ 513 226-3920

Member Raksha Sunkum [rsunkum@hotmail.com 408 813-7567]

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more