Chaithra Achar: ನಟಿ ಚೈತ್ರಾ ಆಚಾರ್‌ಗೆ ಅಶ್ಲೀಲ ಮೆಸೇಜ್: ಖಾಕಿ ಧರಿಸಿದ ಕಾಮುಕನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು
ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ವಿರುದ್ಧ ನೆಟ್ಟಿಗರು ಅತಿರೇಕವಾಗಿ ನಡೆದುಕೊಳ್ಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಆದರೆ ಈ ಬಾರಿ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ (Chaithra Achar) ಅವರಿಗೆ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ಅಸಭ್ಯವಾಗಿ ಮೆಸೇಜ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತನ ವಿಕೃತಿ ಕಂಡು ಕೆರಳಿ ಕೆಂಡವಾಗಿರುವ ನಟಿ, ಸಾರ್ವಜನಿಕವಾಗಿಯೇ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಜೊತೆಗೆ ಈ ಬಗ್ಗೆ ಬೆಂಗಳೂರು ನಗರ ಪೊಲೀಸರಿಗೂ ದೂರು ನೀಡಿದ್ದಾರೆ.
ಘಟನೆಯ ಹಿನ್ನೆಲೆ ಏನು?
'ಮಹೇಶ್ ಹೊಸಮನಿ' (@hosamani53) ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿ ಚೈತ್ರಾ ಆಚಾರ್ ಅವರಿಗೆ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಸಂದೇಶ ಕಳುಹಿಸಲಾಗಿತ್ತು. ಪ್ರೊಫೈಲ್‌ನಲ್ಲಿ ಆತ ಪೊಲೀಸ್ ಸಮವಸ್ತ್ರ ಧರಿಸಿದ್ದ ಫೋಟೋ ಇತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ನಟಿ, ಆತ ಕಳುಹಿಸಿದ ಅಸಭ್ಯ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಖಾತೆಯನ್ನು ಟ್ಯಾಗ್ ಮಾಡಿದ ಚೈತ್ರಾ, "ಗೌರವಾನ್ವಿತ ಬೆಂಗಳೂರು ಸಿಟಿ ಪೊಲೀಸ್ ಅವರೇ, ಈ ಹೊಸಮನಿ ನಿಮ್ಮ ಇಲಾಖೆಗೆ ಸೇರಿದವನೇ ಅನ್ಸುತ್ತೆ. ಇವನು ಕೇಳಿರೋ ಪ್ರಶ್ನೆಗೆ ದಯವಿಟ್ಟು ನೀವೇ ಉತ್ತರಿಸುತ್ತೀರಾ?" ಎಂದು ಖಡಕ್ ಆಗಿ ಪ್ರಶ್ನಿಸಿದ್ದಾರೆ.

ತಪ್ಪೊಪ್ಪಿಕೊಂಡು ಗೋಗರೆದ ಪೋಲಿ 'ಖಾಕಿ'
ನಟಿ ಚೈತ್ರಾ ಆಚಾರ್ ಅವರು ತನ್ನ ಫೋಟೋ ಮತ್ತು ಮೆಸೇಜ್ ಸಮೇತ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಷಯವನ್ನು ಬಹಿರಂಗಪಡಿಸುತ್ತಿದ್ದಂತೆ, ಇತ್ತ ಮಹೇಶ್ ಹೊಸಮನಿ ಎಂಬ ವ್ಯಕ್ತಿ ಬೆದರಿ ಹೋಗಿದ್ದಾನೆ. ತಕ್ಷಣವೇ ನಟಿಗೆ ಸರಣಿ ಸಂದೇಶಗಳನ್ನು ಕಳುಹಿಸಿ ಕ್ಷಮೆಯಾಚಿಸಲು ಆರಂಭಿಸಿದ್ದಾನೆ. "ಸಾರಿ ಮೇಡಂ, ಈ ರೀತಿ ಮೆಸೇಜ್ ಮಾಡಿದ್ದು ತಪ್ಪಾಯ್ತು. ನಾನು ನಿಮ್ಮ ಮೇಲಿನ ಕಾಳಜಿಯಿಂದ ಹಾಗೆ ಮಾಡಿದೆ, ಪದಗಳು ತಪ್ಪಾಗಿರಬಹುದು ಅಷ್ಟೇ. ದಯವಿಟ್ಟು ಇನ್‌ಸ್ಟಾಗ್ರಾಮ್ ಸ್ಟೋರಿ ತೆಗೆದುಬಿಡಿ ಮೇಡಂ, ಇದು ನನ್ನ ಕೆರಿಯರ್‌ಗೆ ತೊಂದರೆ ಮಾಡುತ್ತದೆ. ನಾನು ನಿಮ್ಮ ಸಿನಿಮಾಗಳನ್ನು ನೋಡುವ ದೊಡ್ಡ ಅಭಿಮಾನಿ" ಎಂದು ಗೋಗರೆದಿದ್ದಾನೆ.
ಆತ ಕ್ಷಮೆ ಕೇಳಿದ ಸಂದೇಶವನ್ನೂ ಸಾರ್ವಜನಿಕವಾಗಿ ಹಂಚಿಕೊಂಡ ನಟಿ ಚೈತ್ರಾ, ಆತನ ದ್ವಂದ್ವ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಬೇರೆಯವರ ವೃತ್ತಿ ಬದುಕಿನ ಬಗ್ಗೆ ಮಾತನಾಡುವಾಗ ಇವರಿಗೆ ಯಾವುದೇ ಮುಜುಗರ ಇರುವುದಿಲ್ಲ. ಅದೇ ತೊಂದರೆ ತಮಗೇ ಎದುರಾದಾಗ ನಿಯಮಗಳು ಬದಲಾಗುತ್ತವೆಯೇ?" ಎಂದು ನಟಿ ಚೈತ್ರಾ ಪ್ರಶ್ನಿಸಿದ್ದಾರೆ.

ನಟಿಯ ಈ ದಿಟ್ಟ ಹೆಜ್ಜೆಯಿಂದ ತತ್ತರಿಸಿರುವ ಮಹೇಶ್ ಹೊಸಮನಿ, ಸದ್ಯ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿದ್ದ ಎಲ್ಲ ಫೋಟೋ ಹಾಗೂ ವಿವರಗಳನ್ನು ಹೈಡ್ ಮಾಡಿಕೊಂಡಿದ್ದಾನೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಟಿಯ ಗಟ್ಟಿತನಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಇಲಾಖೆಯ ಹೆಸರಿಗೆ ಮಸಿ ಬಳಿಯುವ ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.
'ಮಹಿರಾ' ಚಿತ್ರದಿಂದ ನಟನೆ ಆರಂಭಿಸಿದ ಇವರು, 'ಸಪ್ತ ಸಾಗರದಾಚೆ ಎಲ್ಲೋ' (ಸೈಡ್ ಬಿ) ಚಿತ್ರದ ಸುರಭಿ ಪಾತ್ರ, 'ಟೋಬಿ' ಚಿತ್ರದ ಜನ್ನಿ ಪಾತ್ರ ಹಾಗೂ 'ಬ್ಲಿಂಕ್' ಚಿತ್ರದ ದೇವಕಿ ಪಾತ್ರದ ಮೂಲಕ ತಮ್ಮ ಅದ್ಭುತ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲೂ ಚೈತ್ರಾ ಹಲವು ಸಿನಿಮಾಗಳಲ್ಲಿ ಮಿಂಚಿದ್ದಾರೆ.













Click it and Unblock the Notifications