Shreyas Iyer: ಆರ್‌ಸಿಬಿ ವಿರುದ್ಧದ ಪಂದ್ಯಕ್ಕಾಗಿ ಕಾಯುತ್ತಿದ್ದೇವೆ: ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್
Shreyas Iyer: ಧರ್ಮಶಾಲದಲ್ಲಿ ಗುರುವಾರ (ಮೇ 14) ನಡೆದ ಐಪಿಎಲ್‌ನ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಹೀನಾಯ ಸೋಲನುಭವಿಸಿತು. ಪಂದ್ಯದ ಬಳಿಕ ಮಾತನಾಡಿದ ಪಿಬಿಕೆಎಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಈ ಸೋಲನ್ನು "ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟ," ಎಂದು ಹೇಳಿದರು. ಇದೇ ವೇಳೆ ಆರ್‌ಸಿಬಿ ಬಗ್ಗೆಯೂ ಬಿಗ್ ಸ್ಟೇಟ್‌ಮೆಂಟ್ ನೀಡಿ ಗಮನ ಸೆಳೆದಿದ್ದಾರೆ.
ತಿಲಕ್ ವರ್ಮಾ ಅವರು ಸಿಡಿಸಿದ ಅಜೇಯ 75 ರನ್‌ಗಳ ನೆರವಿನಿಂದ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳಿಂದ ಭರ್ಜರಿ ಜಯ ದಾಖಲಿಸಿತು. ಮತ್ತೊಂದೆಡೆ ಈ ಸೋಲು ಪಂಜಾಬ್ ತಂಡದ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಸೋಲಿನ ಬಗ್ಗೆ ಮಾತನಾಡಿದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್" ಖಂಡಿತವಾಗಿಯೂ ಈ ಸೋಲನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ ನಾನು ಯಾವುದೇ ಒಂದು ನಿರ್ದಿಷ್ಟ ಸನ್ನಿವೇಶವನ್ನು ಬೆರಳು ಮಾಡಿ ತೋರಿಸಲು ಬಯಸುವುದಿಲ್ಲ. ಏಕೆಂದರೆ ಇದೊಂದು ಅದ್ಭುತ ಕ್ರಿಕೆಟ್ ಪಂದ್ಯವಾಗಿತ್ತು," ಎಂದು ತಿಳಿಸಿದ್ದಾರೆ.

ತಿಲಕ್ ವರ್ಮಾ ಬ್ಯಾಟಿಂಗ್ ಮೆಚ್ಚಿದ ಅಯ್ಯರ್
ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಅಯ್ಯರ್ ಮೆಚ್ಚುಗೆ ವ್ಯಕ್ತಡಿಸಿದ್ದಾರೆ. ಅಲ್ಲದೆ, ಸೋತರೂ ಸಹ ತಂಡವು ಮೈದಾನದಲ್ಲಿ ಉತ್ತಮ ಹೋರಾಟ ನೀಡಿದೆ ಎಂದು ಹೇಳಿದರು. ಇನ್ನೂ ಸತತ 5ನೇ ಸೋಲಿನಿಂದಾಗಿ ಪಂಜಾಬ್ ಕಿಂಗ್ಸ್ ತಂಡದ ಪ್ಲೇ-ಆಫ್ ಕನಸಿಗೆ ಭಾರಿ ಹೊಡೆತ ಬಿದ್ದಂತಾಗಿದೆ.
"ತಿಲಕ್ ವರ್ಮಾ ಅವರು ಅದ್ಭುತವಾಗಿ ಆಡಿದರು. ಅವರು ಬಿಗ್ ಶಾಟ್‌ಗಳನ್ನು ಹೊಡೆದ ರೀತಿ ತುಂಬಾ ಚೆನ್ನಾಗಿತ್ತು. ಈ ಗೆಲುವಿನ ಶ್ರೇಯಸ್ಸು ಅವರಿಗೆ ಸಲ್ಲಬೇಕು," ಎಂದು ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಆರಂಭಿಕ ಹಿನ್ನಡೆಯ ನಂತರ ಪಂಜಾಬ್ ಇನಿಂಗ್ಸ್‌ಗೆ ಜೀವ ತುಂಬಿದ ಅಜ್ಮತುಲ್ಲಾ ಒಮರ್ಜಾಯ್ (17 ಎಸೆತಗಳಲ್ಲಿ 38 ರನ್) ಅವರ ಆಟವನ್ನೂ ಕೂಡ ಕೊಂಡಾಡಿದರು.
"ಒಮರ್ಜಾಯ್ ಆಟ ಅದ್ಭುತವಾಗಿತ್ತು"
ಅಜ್ಮತುಲ್ಲಾ ಒಮರ್ಜಾಯ್ ಅವರ ಬ್ಯಾಟಿಂಗ್ ಕುರಿತು ಮಾತನಾಡಿದ ಅಯ್ಯರ್, "ನಾವು ಕೇವಲ 170 ರಿಂದ 180 ರನ್ ಗಳಿಸಬಹುದು ಎಂದು ಅಂದುಕೊಂಡಿದ್ದೆವು. ಆದರೆ ಒಮರ್ಜಾಯ್ ಪಂದ್ಯದ ಗತಿಯನ್ನೇ ನಮ್ಮತ್ತ ಬದಲಿಸಿದರು. ಸ್ಕೂಪ್ ಶಾಟ್‌ಗಳ ಮೂಲಕ ಸಿಕ್ಸರ್‌ಗಳನ್ನು ಸಿಡಿಸಿದರು. 16 ಅಥವಾ 17ನೇ ಓವರ್‌ನಿಂದ ನಮಗೆ ವೇಗ ಸಿಕ್ಕಿತು. ಅವರು ತಂಡದ ಮೊತ್ತವನ್ನು 200ರ ಗಡಿ ತಲುಪಿಸುವಂತೆ ಮಾಡಿದ್ದು ನಿಜಕ್ಕೂ ಅದ್ಭುತ ಪ್ರದರ್ಶನ," ಎಂದು ಬಣ್ಣಿಸಿದರು.
"ಆರ್‌ಸಿಬಿ ವಿರುದ್ಧದ ಪಂದ್ಯಕ್ಕಾಗಿ ಕಾಯುತ್ತಿದ್ದೇವೆ"
ಸೋಲಿನ ಹಿನ್ನಡೆಯ ಹೊರತಾಗಿಯೂ ಅಯ್ಯರ್ ಪಂಜಾಬ್ ತಂಡದ ಮುಂದಿನ ಪಂದ್ಯಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. "ಮುಂದಿನ ಆರ್‌ಸಿಬಿ ವಿರುದ್ಧದ ಪಂದ್ಯದ ಬಗ್ಗೆ ಖಂಡಿತವಾಗಿಯೂ ಉತ್ಸುಕನಾಗಿದ್ದೇನೆ. ಅದು ಮಧ್ಯಾಹ್ನದ ಪಂದ್ಯವಾಗಿದೆ ಮತ್ತು ನಾವು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಆ ಎರಡು ಪಂದ್ಯಗಳು ಬಹಳ ಕುತೂಹಲಕಾರಿಯಾಗಿರಲಿವೆ. ಅವುಗಳನ್ನು ಆಡಲು ನಾವು ಕಾತರರಾಗಿದ್ದೇವೆ," ಎಂದು ಹೇಳಿದರು. ಈ ಭಾನುವಾರ ಇದೇ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯಲಿರುವ ಪಂದ್ಯವನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದರು.
ತಿಲಕ್ ವರ್ಮಾ ಹೇಳಿದ್ದೇನು?
ಗುರುವಾರ ಪಂಜಾಬ್ ಕಿಂಗ್ಸ್ ಮಣಿಸಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ವೇಳೆ ಮಾತನಾಡಿದ ತಿಲಕ್, "ಒತ್ತಡದ ಸನ್ನಿವೇಶದಲ್ಲಿ ಪಂದ್ಯವನ್ನು ಗೆಲುವಿನ ದಡ ತಲುಪಿಸುವಲ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಸಹಕಾರಿಯಾಗಿದೆ," ಎಂದು ತಿಳಿಸಿದ್ದಾರೆ.
"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಪಂದ್ಯಗಳನ್ನು ಪಿನೀಶ್ ಮಾಡುವುದೆಂದರೆ ತುಂಬಾ ಇಷ್ಟ. ವಿಶ್ವಕಪ್ ಮತ್ತು ಕೆಲವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ನಂತರ ಪಂದ್ಯವನ್ನು ಹೇಗೆ ಗೆಲುವಿನತ್ತ ಕೊಂಡೊಯ್ಯಬೇಕು ಎಂಬುದು ನನಗೆ ಅರ್ಥವಾಗಿದೆ," ಎಂದು ಹೇಳಿದ್ದಾರೆ.
ಪಿಚ್ ನಿರೀಕ್ಷೆಗಿಂತ ಭಿನ್ನವಾಗಿತ್ತು ಎಂದು ಒಪ್ಪಿಕೊಂಡ ತಿಲಕ್, "ಬೌಲ್ ನಿಧಾನವಾಗಿ ಮತ್ತು ಕೆಳಮಟ್ಟದಲ್ಲಿ ಬರುತ್ತಿತ್ತು. ಹಾಗಾಗಿ ಬಿಗ್ ಶಾಟ್ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಪಂಜಾಬ್ ಕಿಂಗ್ಸ್ ತಂಡವು ಮೊದಲ 15 ಓವರ್‌ಗಳಲ್ಲಿ ಹೇಗೆ ಪರದಾಡಿತು ಎಂಬುದನ್ನು ನಾವು ನೋಡಿದ್ದೇವೆ. ಆನಂತರ ಅಜ್ಮತುಲ್ಲಾ ಮತ್ತು ವಿಷ್ಣು ವಿನೋದ್ ಅವರ ಆಟದಿಂದ ಅವರು ಹೆಚ್ಚು ರನ್ ಗಳಿಸಿದರು," ಎಂದು ಹೇಳಿದ್ದಾರೆ.
"ನಾನು ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯಲು ನಿರ್ಧರಿಸಿದ್ದೆ. ಕೋಚ್ ಜೊತೆ ಮಾತನಾಡಿದಾಗ ನನಗೆ ಬೇಕಾಗಿದ್ದು ಕೇವಲ ಒಂದು ದೊಡ್ಡ ಓವರ್ ಮಾತ್ರ ಎಂದು ತಿಳಿದಿತ್ತು," ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, ತಮಗೆ ಕೊನೆಯಲ್ಲಿ ಉತ್ತಮ ಸಾಥ್ ನೀಡಿದ ವಿಲ್ ಜಾಕ್ಸ್ (10 ಎಸೆತಗಳಲ್ಲಿ 25 ರನ್) ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ವಿಲ್ ಜಾಕ್ಸ್ ಆಟ ಪಂದ್ಯ ಮುಗಿಸಲು ತುಂಬಾ ಸಹಾಯ ಮಾಡಿತು," ಎಂದು ಹೇಳಿದರು.
ಜಸ್ಪ್ರಿತ್ ಬುಮ್ರಾ ಹೇಳಿದ್ದೇನು?
ಮುಂಬೈ ಇಂಡಿಯನ್ಸ್ ತಂಡದ ಹಂಗಾಮಿ ನಾಯಕ ಜಸ್ಪ್ರಿತ್ ಬುಮ್ರಾ ಈ ಗೆಲುವಿನ ಶ್ರೇಯಸ್ಸನ್ನು ತಿಲಕ್ ವರ್ಮಾ ಮತ್ತು ಶಾರ್ದೂಲ್ ಠಾಕೂರ್‌ಗೆ ನೀಡಿದ್ದಾರೆ. "ಎರಡೂ ತಂಡಗಳು ಚೆನ್ನಾಗಿ ಆಡಿದವು, ಆದರೆ ನಾವು ಉತ್ತಮವಾಗಿ ಆಡಿದೆವು. ನಮ್ಮ ಎಲ್ಲಾ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ದಾಳಿ ಮಾಡಿದರು," ಎಂದು ಹೇಳಿದರು.
"ತಿಲಕ್ ಅವರ ಬ್ಯಾಟಿಂಗ್ ಮತ್ತು ಶಾರ್ದೂಲ್ ಬೌಲಿಂಗ್ ಎರಡಕ್ಕೂ ಸಮನಾದ ಶ್ರೇಯಸ್ಸು ಸಲ್ಲಬೇಕು. ತಿಲಕ್ ಅದ್ಭುತವಾಗಿ ಬ್ಯಾಟ್ ಮಾಡಿದರು, ಜಾಕ್ಸ್ ಕೂಡ ಉತ್ತಮ ಕೊಡುಗೆ ನೀಡಿದರು," ಎಂದು ಹೇಳಿದರು. ಇನ್ನೂ ಮುಂಬೈ ತಂಡವನ್ನು ಮುನ್ನಡೆಸಿದ ಬಗ್ಗೆ ತಮಾಷೆಯಾಗಿ ಮಾತನಾಡಿದ ಬುಮ್ರಾ, "ನಾನು ಟೆಸ್ಟ್ ಮತ್ತು ಟಿ20 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದೇನೆ. ಈಗ ಬಾಕಿ ಇರುವುದು ಏಕದಿನ ಕ್ರಿಕೆಟ್ ಮಾತ್ರ. ಆದರೆ ಅದು ಸದ್ಯಕ್ಕೆ ನಡೆಯುವಂತೆ ಕಾಣುತ್ತಿಲ್ಲ," ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಳಿಕ "ತಮಾಷೆ ಪಕ್ಕಕ್ಕಿರಲಿ, ನಾಯಕತ್ವದ ಜವಾಬ್ದಾರಿ ಖುಷಿ ನೀಡಿದೆ. ಇಲ್ಲಿನ ವಾತಾವರಣ ಮತ್ತು ಮೈದಾನ ಎರಡೂ ಅದ್ಭುತವಾಗಿದ್ದವು," ಎಂದು ಅವರು ಹೇಳಿ ಗಮನ ಸೆಳೆದರು.












Click it and Unblock the Notifications