ಆಭರಣವಾಗಿ ಮುತ್ತು ಧರಿಸುವ ಮುನ್ನ ಎಚ್ಚರ! ಎಲ್ಲರೂ ತೊಡುವಂತಿಲ್ಲ ಈ ರತ್ನ, ನಿಯಮ ತಪ್ಪಿದರೆ ಬೆನ್ನು ಹತ್ತುವುದು ಸೋಲು
Pearl Gemstone: ರತ್ನ ಶಾಸ್ತ್ರ ಎನ್ನುವುದು ವೈದಿಕ ಜ್ಯೋತಿಷ್ಯದ ಒಂದು ಭಾಗ. ನವಗ್ರಹಗಳ ಶಕ್ತಿಯನ್ನು ನಿಯಂತ್ರಿಸುವ ಮೂಲಕ ಜೀವನದ ಕಷ್ಟಗಳನ್ನು ಕಡಿಮೆ ಮಾಡಲು ಮತ್ತು ಅದೃಷ್ಟವನ್ನು ಹೆಚ್ಚಿಸಲು ನಿರ್ದಿಷ್ಟ ರತ್ನಗಳನ್ನು ಧರಿಸಲಾಗುತ್ತದೆ. ಇದು ಖನಿಜ ಮತ್ತು ಜೈವಿಕ ಮೂಲದ ರತ್ನಗಳ ಗುಣಲಕ್ಷಣಗಳು, ಪರಿಣಾಮಗಳು ಮತ್ತು ಧರಿಸುವ ವಿಧಾನವನ್ನು ತಿಳಿಸುತ್ತದೆ.
ನವಗ್ರಹಗಳ ಪೈಕಿ ಮುತ್ತು ಕೂಡಾ ಒಂದು. ರತ್ನಶಾಸ್ತ್ರದ ಪ್ರಕಾರ ಮುತ್ತುಗಳು ಚಂದ್ರನ ರತ್ನವಾಗಿದ್ದು, ಅವುಗಳನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ನೀವು ಕೂಡಾ ಮುತ್ತು ಧರಿಸುವ ಬಗ್ಗೆ ಯೋಚಿಸುತ್ತಿದ್ದರೆ ಅದನ್ನು ತೊಡುವ ನಿಯಮಗಳನ್ನು ಕೂಡಾ ತಿಳಿದಿರಬೇಕು. ಮುತ್ತನ್ನು ಎಲ್ಲಾ ರತ್ನದ ಜೊತೆಗೆ ಹಾಕುವಂತಿಲ್ಲ. ಒಂದೊಮ್ಮೆ ಹೀಗೆ ಬೇರೆ ರತ್ನಗಳ ಜೊತೆಗೆ ಮುತ್ತನ್ನು ಧರಿಸಿದರೆ ಹಲವಾರು ಅನಾನುಕೂಲತೆಗಳಾಗಬಹುದು.

ಮುತ್ತು, ಚಂದ್ರಶಿಲೆ ಧರಿಸುವುದರಿಂದ ಆಗುವ ಪ್ರಯೋಜನಗಳು
ಮುತ್ತನ್ನು ಧರಿಸುವುದರಿಂದ ಮನಸ್ಸು ಶಾಂತವಾಗಿ ಇರುತ್ತದೆ. ಭಾವನಾತ್ಮಕವಾಗಿ ಬಲಪಡಿಸುತ್ತದೆ ಎನ್ನುವುದು ನಂಬಿಕೆ. ಇದು ಅನಾವಶ್ಯಕವಾಗಿ ಹಣ ಖರ್ಚಾಗುವುದನ್ನು ತಡೆಯುತ್ತದೆ. ವಿನಾ ಕಾರಣ ಕೋಪಗೊಳ್ಳುವುದನ್ನು ತಡೆಯುತ್ತದೆ.
ಮುತ್ತು ಧರಿಸುವ ನಿಯಮಗಳು
ಸೋಮವಾರದಂದು ಮುತ್ತು ಧರಿಸುವುದು ಶುಭ. ಅದನ್ನು ಧರಿಸುವ ಮೊದಲು ಅದನ್ನು ಗಂಗಾ ನೀರಿನಿಂದ ಶುದ್ಧೀಕರಿಸಬೇಕು. ಧರಿಸುವಾಗ ಓಂ ಚಂದ್ರಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಇದಾದ ನಂತರ ಮುತ್ತನ್ನು ಕಿರುಬೆರಳಿಗೆ ಧರಿಸಬೇಕು.
ಮುತ್ತಿನ ಜೊತೆ ನೀಲಮಣಿ ಧರಿಸುವುದರಿಂದಾಗುವ ಪರಿಣಾಮಗಳು
* ಮುತ್ತಿನ ಜೊತೆ ನೀಲಮಣಿಯನ್ನು ಎಂದಿಗೂ ಧರಿಸಬಾರದು. ಹಾಗೆ ಮಾಡುವುದರಿಂದ ಗೊಂದಲ ಮತ್ತು ಮಾನಸಿಕ ಒತ್ತಡ ಉಂಟಾಗುತ್ತದೆ. ಹಠಾತ್ ಪ್ರಮುಖ ಸಮಸ್ಯೆಗಳು ಉದ್ಭವಿಸಬಹುದು.
* ಮುತ್ತು ಮತ್ತು ವಜ್ರವನ್ನು ಒಟ್ಟಿಗೆ ಧರಿಸುವುದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಗಂಡ ಮತ್ತು ಹೆಂಡತಿಯ ನಡುವೆ ಸದಾ ಜಗಳಗಳು ಆಗುತ್ತಲೇ ಇರುವುದು. ಆದ್ದರಿಂದ ಈ ಎರಡು ರತ್ನಗಳನ್ನು ಒಟ್ಟಿಗೆ ಧರಿಸಬಾರದು.
* ಮುತ್ತುಗಳಿರುವ ಗೋಮೇಧಿಕ ರತ್ನವನ್ನು ಧರಿಸುವುದು ಕೂಡಾ ಅಶುಭ. ಈ ಎರಡು ರತ್ನಗಳನ್ನು ಒಟ್ಟಿಗೆ ಧರಿಸುವುದರಿಂದ ಭಯ, ಆತಂಕ ಮತ್ತು ಆಲೋಚನೆಯಲ್ಲಿ ನಕಾರಾತ್ಮಕತೆ ಉಂಟಾಗುತ್ತದೆ. ಮನಸ್ಸು ಚಂಚಲವಾಗಿರುತ್ತದೆ.
* ರತ್ನಶಾಸ್ತ್ರದ ಪ್ರಕಾರ ಮುತ್ತು ಇರುವ ಪಚ್ಚೆಯನ್ನು ಒಟ್ಟಿಗೆ ಧರಿಸಬಾರದು. ಅವುಗಳನ್ನು ಒಟ್ಟಿಗೆ ಧರಿಸುವುದರಿಂದ ಮನಸ್ಸಿನಲ್ಲಿ ಗೊಂದಲ ಒತ್ತಡ ಉಂಟಾಗುವುದು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇದು ಅಡೆತಡೆಗಳನ್ನು ಉಂಟು ಮಾಡುವುದು. ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ.
* ಮುತ್ತು ಮತ್ತು ವೈಢೂರ್ಯವನ್ನು ಕೂಡಾ ಒಟ್ಟಿಗೆ ಧರಿಸಬಾರದು. ಇದು ಮಾನಸಿಕ ಶಾಂತಿಯನ್ನು ಭಂಗಗೊಳಿಸುತ್ತದೆ. ಮಾನಸಿಕ ಚಡಪಡಿಕೆಗೆ ಕಾರಣವಾಗಬಹುದು. ಮನಸ್ಸು ಯಾವುದೇ ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.
ಈ ರಾಶಿಯವರು ಮುತ್ತು ಧರಿಸಲೇಬಾರದು
ವೃಷಭ ರಾಶಿ: ಶುಕ್ರ ಗ್ರಹದ ಅಧಿಪತ್ಯವಿರುವ ವೃಷಭ ರಾಶಿಯವರು ಮುತ್ತಿನ ರತ್ನಗಳನ್ನು ಧರಿಸಬಾರದು. ಈ ರಾಶಿಯವರು ಮುತ್ತು ಧರಿಸಿದರೆ, ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದ್ದಕ್ಕಿದ್ದಂತೆ ಅನಗತ್ಯ ವೆಚ್ಚಗಳು ಹೆಚ್ಚಾಗುತ್ತವೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಹದಗೆಡುತ್ತಲೇ ಇರುತ್ತವೆ.
ಮಿಥುನ ರಾಶಿ: ಬುಧ ಗ್ರಹದ ಅಧಿಪತ್ಯದ ಮಿಥುನ ರಾಶಿಯವರು ಕೂಡಾ ಮುತ್ತು ಧರಿಸಬಾರದು. ಇವರು ಮುತ್ತು ಧರಿಸುವುದರಿಂದ ಜೀವನದಲ್ಲಿ ಅನೇಕ ವಿಷಯಗಳಲ್ಲಿ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಮುತ್ತಿನ ಕಾರಣದಿಂದ ವ್ಯಕ್ತಿಯು ಗುರಿಯತ್ತ ಮುನ್ನಡೆಯಲು ಸಾಧ್ಯವಾಗುವುದಿಲ್ಲ. ಮಾನಸಿಕ ಒತ್ತಡದಿಂದಾಗಿ ಶಾಂತಿ ಭಂಗವಾಗುವುದು.
ಸಿಂಹ ರಾಶಿ: ಸೂರ್ಯನ ಅಧಿಪತ್ಯದ ಸಿಂಹ ರಾಶಿಯವರಿಗೂ ಮುತ್ತು ಅಶುಭ. ಇವರು ಮುತ್ತು ಧರಿಸುವುದರಿಂದ ಪತಿ-ಪತ್ನಿಯರ ಸಂಬಂಧದಲ್ಲಿ ಸಮಸ್ಯೆ ಉಂಟಾಗುತ್ತದೆ. ಖರ್ಚು ಅಧಿಕವಾಗುವುದು. ಎಷ್ಟೇ ದುಡಿದರೂ ಹಣ ಉಳಿತಾಯ ಸಾಧ್ಯವಾಗುವುದಿಲ್ಲ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications