ಶನಿ ಪೂಜೆ ಸಮಯದಲ್ಲಿ ಬಹುತೇಕರು ಮಾಡುವ ತಪ್ಪಿದು!ನಾಳೆ ಶನಿ ಜಯಂತಿ ಪೂಜೆ ಹೀಗಿದ್ದರೆ ಛಾಯಾಪುತ್ರನ ವಕ್ರ ದೃಷ್ಟಿಯಿಂದ ಪಾರಾಗಬಹುದು!
ಪ್ರತಿಯೊಂದು ದೇವರನ್ನು ಪೂಜಿಸುವ ವಿಧಾನಕ್ಕೆ ಕೆಲವು ನಿಯಮಗಳಿವೆ. ಹಾಗೆಯೇ ಶನಿ ದೇವರನ್ನು ಪೂಜಿಸುವ ವೇಳೆ ಕೂಡಾ ಅನುಸರಿಸಲೇ ಬೇಕಾದ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ತಪ್ಪಿದರೆ ಶನಿದೇವರ ಅಸಮಾಧಾನಕ್ಕೆ ಕಾರಣವಾಗಬಹುದು. ಶನಿದೇವ ಮುನಿಸಿಕೊಂಡರೆ ರಾಜ ಕೂಡಾ ನಿಮಿಷದಲ್ಲಿ ಭಿಕ್ಷುಕನಾಗಬಹುದು. ಅದೇ ಶನಿದೇವರ ಕೃಪೆ ಇದ್ದರೆ ಭಿಕ್ಷುಕ ಕೂಡಾ ರಾಜನಾಗಿ ಬಿಡಬಹುದು ಎಂದು ಹೇಳಲಾಗುತ್ತದೆ.ನಾಳೆ ಅಂದರೆ ಶನಿವಾರ, ಮೇ 16, 2026 ರಂದು ಶನಿ ಜಯಂತಿ. ಈ ದಿನದಂದು ಶನಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರೆ, ನಮ್ಮ ಪಾಪಗಳು ಪರಿಹಾರವಾಗುವುದು. ತಪ್ಪುಗಳಿಗೂ ಕ್ಷಮೆ ಸಿಗುವುದು.
ಶನಿದೇವರ ಪೂಜೆ ವೇಳೆ ಅನೇಕರು ಈ ತಪ್ಪುಗಳನ್ನು ಮಾಡುತ್ತಾರೆ. ಶನೀಶ್ವರ ದೇವರ ಪೂಜೆ ವೇಳೆ ಈ ತಪ್ಪುಗಳನ್ನು ಮಾಡಿದರೆ ಪೂಜೆಯ ಫಲ ಸಿಗುವುದಿಲ್ಲ, ಮಾತ್ರವಲ್ಲ ಶನಿದೇವರ ವಕ್ರ ದೃಷ್ಟಿಗೂ ಕಾರಣವಾದೀತು.

ಶನಿದೇವರ ಪೂಜೆ ವೇಳೆ ಹೆಚ್ಚಿನವರು ಸಾಮಾನ್ಯವಾಗಿ ಮಾಡುವ ತಪ್ಪುಗಳು:
ಶನಿ ದೇವರ ಮೂರ್ತಿಯ ಮುಂದೆ ನಿಲ್ಲುವುದು:
ದೇವರಿಗೆ ಪ್ರಾರ್ಥನೆ ಸಲ್ಲಿಸುವಾಗ ಭಕ್ತರು ಶನೀಶ್ವರನ ವಿಗ್ರಹದ ಮುಂದೆ ನಿಲ್ಲುತ್ತಾರೆ. ಆದರೆ ಶನಿ ದೇವರ ವಿಗ್ರಹದ ಎದುರು ಯಾವತ್ತೂ ನಿಲ್ಲುವಂತಿಲ್ಲ. ನಾವು ಯಾವಾಗಲೂ ಶನಿದೇವರ ದೃಷ್ಟಿಗೆ ನೇರವಾಗಿ ನಿಲ್ಲಬಾರದು. ಬದಲಾಗಿ ವಿಗ್ರಹದ ಬಲ ಅಥವಾ ಎಡ ಬದಿಗೆ ನಿಂತು ಪ್ರಾರ್ಥನೆ ಸಲ್ಲಿಸಬೇಕು.
ಇಷ್ಟೇ ಅಲ್ಲ, ಶನಿ ದೇವರ ಕಣ್ಣುಗಳನ್ನು ಎಂದಿಗೂ ನೋಡಬಾರದು. ಶನಿಯ ವಕ್ರ ದೃಷ್ಟಿ ನಮ್ಮ ಜೀವನವನ್ನೇ ಹಾಳುಮಾಡಬಹುದು. ಮೊದಲು, ಶನಿ ದೇವರ ಪಾದಗಳನ್ನು ನೋಡಿ ನಮಸ್ಕರಿಸಬೇಕು. ಶನಿ ದೇವರು ವಿಗ್ರಹದ ಬದಲು ಕಲ್ಲಿನ ರೂಪದಲ್ಲಿ ಕುಳಿತಿದ್ದರೆ, ಅವರ ಮುಂದೆ ನಿಂತು ದರ್ಶನ ಪಡೆಯಬಹುದು.
ತಲೆಯ ಮೇಲಲ್ಲ, ಕಾಲ್ಬೆರಳಿಗೆ ಎಣ್ಣೆ ಹಚ್ಚಿ:
ಅದೇ ರೀತಿ, ಇತರ ದೇವತೆಗಳಿಗೆ ಎಣ್ಣೆ ಹಚ್ಚುವಂತೆಯೇ, ಜನರು ಶನಿಯ ತಲೆಯ ಮೇಲೆ ಎಣ್ಣೆ ಸುರಿಯುತ್ತಾರೆ. ಇದು ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು. ಈ ತಪ್ಪು ದುಬಾರಿಯಾಗಿ ಪರಿಣಮಿಸಬಹುದು. ಧಾರ್ಮಿಕ ಗ್ರಂಥಗಳ ಪ್ರಕಾರ, ಶನಿಯ ಕಾಲ್ಬೆರಳುಗಳಿಗೆ ಎಣ್ಣೆ ಸುರಿದರೆ ಸಾಕು. ಶನಿಯು ಕಲ್ಲಿನ ರೂಪದಲ್ಲಿದ್ದರೆ, ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಇಡೀ ಕಲ್ಲಿನ ಮೇಲೆ ಸುರಿಯಬಹುದು.
ಈ ವಿಷಯಗಳನ್ನು ಕೂಡಾ ಮನಸ್ಸಿನಲ್ಲಿಟ್ಟುಕೊಳ್ಳಿ:
ಶನಿ ದೇವರನ್ನು ಪೂಜಿಸುವ ಸಮಯ: ಸೂರ್ಯಾಸ್ತದ ನಂತರ ಶನಿ ದೇವರನ್ನು ಪೂಜಿಸಬೇಕು. ಅಲ್ಲದೆ, ರಾತ್ರಿಯ ವೇಳೆ ಅರಳಿ ಮರದ ಕೆಳಗೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು.
ತಾಮಸ ಆಹಾರ ಸೇವನೆ - ಶನಿ ಜಯಂತಿಯಂದು ಮಾಂಸಾಹಾರ ಅಥವಾ ಮದ್ಯ ಸೇವಿಸುವ ಗಂಭೀರ ತಪ್ಪನ್ನು ಮಾಡಲೇಬಾರದು. ಅಸಹಾಯಕರು, ದೀನ ದಲಿತರನ್ನು ಅವಮಾನಿಸಬೇಡಿ. ಅವರಿಗೆ ನಿಮ್ಮ ಕೈಲಾದಷ್ಟು ದಾನ ಧರ್ಮ ಮಾಡಲು ಪ್ರಯತ್ನಿಸಿ. ಇದು ಶನಿ ದೇವರ ಕೃಪೆಗೆ ಪಾತ್ರರಾಗುವಂತೆ ಮಾಡುತ್ತದೆ.
ಮನೆಯಲ್ಲಿ ಶನಿ ದೇವರನ್ನು ಪೂಜಿಸುವುದು: ನಿಮ್ಮ ಮನೆಯಲ್ಲಿ ಎಂದಿಗೂ ಶನಿ ದೇವರ ವಿಗ್ರಹವನ್ನು ಪ್ರತಿಷ್ಟಾಪಿಸಬಾರದು. ಅಥವಾ ಅವರ ಫೋಟೋವನ್ನು ಕೂಡಾ ಇಡಬಾರದು. ಬದಲಿಗೆ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಅಥವಾ ಅರಳಿ ಮರದ ಕೆಳಗೆ ಶನಿ ದೇವರನ್ನು ಪೂಜಿಸಿ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications