ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳಕ್ಕೆ ನಿರ್ಧಾರ
ಬೆಂಗಳೂರು: ದೇಶದಲ್ಲಿ ಈಗಾಗಲೇ ಇಂಧನ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾಮಾನ್ಯ ಜನರಿಗೆ ಈಗ ಖಾಸಗಿ ಬಸ್ ಮಾಲೀಕರು ಮತ್ತೊಂದು ದೊಡ್ಡ ಶಾಕ್ ನೀಡಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ದಿಢೀರ್ ಏರಿಕೆಯಾದ ಬೆನ್ನಲ್ಲೇ, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಖಾಸಗಿ ಬಸ್‌ಗಳ ಟಿಕೆಟ್ ದರವನ್ನು ಶೇಕಡಾ 20ರಿಂದ 30ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ದೈನಂದಿನ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ಖಚಿತವಾಗಿದೆ.
ಬಸ್ ಮಾಲೀಕರು ಹೇಳಿದ್ದೇನು?
ಇಂಧನ ದರ ಏರಿಕೆಯಿಂದ ತಮಗಾಗುವ ನಷ್ಟವನ್ನು ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಖಾಸಗಿ ಸಾರಿಗೆ ಉದ್ಯಮಿಗಳು ಸಮರ್ಥಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ನಟರಾಜ್ ಶರ್ಮಾ ಅವರು, "ಸಾಮಾನ್ಯವಾಗಿ ಒಂದು ಬಸ್‌ಗೆ ಪ್ರತಿದಿನ ಕನಿಷ್ಠ 150 ಲೀಟರ್‌ನಷ್ಟು ಡೀಸೆಲ್ ಬೇಕಾಗುತ್ತದೆ. ಈಗ ಲೀಟರ್‌ಗೆ 3 ರೂಪಾಯಿಗಿಂತಲೂ ಹೆಚ್ಚು ಇಂಧನ ದರ ಏರಿಕೆಯಾಗಿರುವುದರಿಂದ, ಪ್ರತಿ ಬಸ್‌ಗೆ ದಿನವೊಂದಕ್ಕೆ 450 ರೂಪಾಯಿಗಳಷ್ಟು ಹೆಚ್ಚುವರಿ ಹೊರೆ ಬೀಳಲಿದೆ. ಇಂತಹ ಸಂದರ್ಭದಲ್ಲಿ ನಷ್ಟದ ಸುಳಿಗೆ ಸಿಲುಕದಿರಲು ಟಿಕೆಟ್ ದರ ಏರಿಕೆ ಮಾಡುವುದು ನಮಗೆ ಅನಿವಾರ್ಯ. ಆದರೆ ಇದರ ನೇರ ಪರಿಣಾಮ ಪ್ರಯಾಣಿಕರ ಮೇಲೆ ಉಂಟಾಗುತ್ತಿರುವುದಕ್ಕೆ ನಮಗೂ ಬೇಸರವಿದೆ" ಎಂದು ತಿಳಿಸಿದ್ದಾರೆ.

ಇಂದಿನಿಂದಲೇ ತೈಲ ದರಗಳ ಏರಿಕೆ
ಇಂದು ಮುಂಜಾನೆಯಷ್ಟೇ ದೇಶದ ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದವು. ಅದರಂತೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 3.27 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 3.12 ರೂಪಾಯಿ ಏರಿಕೆಯಾಗಿದೆ. ಕೇವಲ ಪೆಟ್ರೋಲ್-ಡೀಸೆಲ್ ಮಾತ್ರವಲ್ಲದೆ, ಪರಿಸರಸ್ನೇಹಿ ಇಂಧನವಾದ ಸಿಎನ್‌ಜಿ (CNG) ದರವನ್ನು ಕೂಡ ದೇಶಾದ್ಯಂತ ಪ್ರತಿ ಕೆ.ಜಿಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರ ಬೆನ್ನಲ್ಲೇ ಖಾಸಗಿ ಬಸ್ ಮಾಲೀಕರು ಕೂಡ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾರೆ.
ದರ ದಿಢೀರ್ ಹೆಚ್ಚಾಗಲು ಕಾರಣವೇನು?
ಜಾಗತಿಕ ಮಟ್ಟದಲ್ಲಿ ಎದುರಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಹಾರ್ಮುಜ್ ಜಲಸಂಧಿಯ ದಿಗ್ಬಂಧನವೇ (Hormuz Blockade) ಈ ದಿಢೀರ್ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಈ ಜಲಸಂಧಿಯ ಮುಚ್ಚುವಿಕೆಯಿಂದಾಗಿ ಕಚ್ಚಾ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಕೊರತೆ ಸೃಷ್ಟಿಯಾಗಿದೆ. ಇದರ ನೇರ ಪರಿಣಾಮ ಭಾರತೀಯ ಇಂಧನ ಮಾರುಕಟ್ಟೆಯ ಮೇಲಾಗಿದ್ದು, ಸ್ಥಳೀಯವಾಗಿ ಇಂಧನ ದರಗಳು ಗಗನಕ್ಕೇರಿವೆ.
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟಕರವಾಗಿರುವಾಗ, ಮತ್ತೊಂದೆಡೆ ಸಾರಿಗೆ ವೆಚ್ಚವೂ ದುಬಾರಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೀಕೆಂಡ್ ಹಾಗೂ ಹಬ್ಬ ಹರಿದಿನಗಳ ಸಮಯದಲ್ಲಿ ಖಾಸಗಿ ಬಸ್‌ಗಳನ್ನು ಅವಲಂಬಿಸುವ ಮಧ್ಯಮ ವರ್ಗದ ಜನರಿಗೆ ಈ ಶೇ 20-30ರಷ್ಟು ದರ ಏರಿಕೆಯು ನುಂಗಲಾರದ ತುತ್ತಾಗಿ ಪರಿಣಮಿಸಿದೆ.













Click it and Unblock the Notifications