ಬೆಂಗಳೂರು ಔಟರ್ ರಿಂಗ್ ರಸ್ತೆ ಪ್ರಯಾಣಿಕರಿಗೆ ನಿರಾಶೆ, ನೀಲಿ ಮಾರ್ಗಕ್ಕೆ ಮೆಟ್ರೋ ಬಂದರೂ ಡೆಡ್‌ಲೈನ್ ವಿಸ್ತರಣೆ?

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ಟ್ರಾಫಿಕ್ ಜಂಕ್ಷನ್ ಆಗಿರುವ ಸಿಲ್ಕ್‌ಬೋರ್ಡ್‌ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ (Namma Metro Blue Line) ಹೊಸ ಮೆಟ್ರೋ ರೈಲು ಸೆಟ್ ಆಗಮಿಸಿದ್ದು ದೊಡ್ಡ ಸುದ್ದಿ ಆಗಿದೆ. ಆದರೆ ಹೊಸ ಡ್ರೈವರ್‍‌ಲೆಸ್ ಮೆಟ್ರೋ ಪರೀಕ್ಷೆ ಮಾಡಲು ಟ್ರ್ಯಾಕ್ ಇಲ್ಲದಂತಾಗಿದೆ. ಬಾಕಿ ಕಾಮಗಾರಿ ಪೂರ್ಣಗೊಳ್ಳುವವರೆಗೆ ರೈಲು ನಿಂತಲ್ಲೇ ನಿಲ್ಲಲಿದೆ. ಅಲ್ಲದೇ ಉದ್ದೇಶಿತ ನೀಲಿ ಮಾರ್ಗದ ಮೊದಲ ಹಂತ 2A ಲೋಕಾರ್ಪಣೆಯು ಮತ್ತೆ ವಿಳಂಬವಾಗುವ ಲಕ್ಷಣಗಳು ಕಾಣುತ್ತಿವೆ.

ಸಿಲ್ಕ್‌ ಬೋರ್ಡ್‌- ಬೆಂಗಳೂರು ಏರ್‍‌ ಪೋರ್ಟ್ ವರೆಗಿನ ಒಟ್ಟು 58 ಕಿಲೋ ಮೀಟರ್ ಉದ್ದದ ನೀಲಿ ಮಾರ್ಗದ ನಿರ್ಮಾಣವು ವರ್ಷಗಳು ಉರುಳಿದರೂ ಪೂರ್ಣಗೊಳಿಸುವಲ್ಲಿ BMRCL ವಿಫಲವಾಗಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ದಟ್ಟಣೆ ಕಂಡು ಬರುವ ಸಿಲ್ಕ್‌ ಬೊರ್ಡ್, ಔಟರ್ ರಿಂಗ್‌ ರಸ್ತೆ, ಮಾರತ್ತಹಳ್ಳಿ, ಮಹಾದೇವಪುರ, ಕೆ.ಆರ್.ಪುರ ಮಾರ್ಗದಲ್ಲಿ ಮೊದಲ ಹಂತದ (2ಎ) ನೀಲಿ ಮಾರ್ಗದ (ಸಿಲ್ಕ್‌ಬೋರ್ಡ್-ಕೆ.ಆರ್.ಪುರಂ) ಕೆಲಸ ಪೂರ್ಣಗೊಳ್ಳಬೇಕಿದೆ. ಇದೇ ನೀಲಿ ಮಾರ್ಗಕ್ಕೆ ಹೊಸ ರೈಲು ಆಗಮಿಸುತ್ತಿದ್ದಂತೆ ನಿತ್ಯ ಈ ಮಾರ್ಗದಲ್ಲಿ ಓಡಾಡುವ ಸಾರ್ವಜನಿಕರು ತಮ್ಮ ಇಷ್ಟು ದಿನ ಕನಸು ಇನ್ನೇನು ನನಸಾಗಲಿದೆ ಎಂದು ಭಾವಿಸಿದ್ದರು. ಆದರೆ ಅವರ ಕನಸು ಇನ್ನಷ್ಟು ದಿನ ಕನಸಾಗಿಯೇ ಉಳಿದುಕೊಳ್ಳಲಿದೆ.

Bengaluru ORR Metro Blue Line

ಡಿಸೆಂಬರ್ ಡೆಡ್‌ಲೈನ್ ಮತ್ತೆ ಮುಂದಕ್ಕೆ!

ಏಕೆಂದರೆ ಮೊದಲ ಹಂತದ ನೀಲಿ ಮಾರ್ಗದಲ್ಲಿ ಕೇವಲ ಶೇ. 86ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಟ್ರ್ಯಾಕ್ ಇಲ್ಲದೇ ರೈಲು ಬಂದರೆ ಏನು ಪ್ರಯೋಜನ?. ಅದರ ಪರೀಕ್ಷೆ, ತಪಾಸಣೆಗಳಿಗೆ ಹಳಿ ಸಿದ್ಧವಾಗಬೇಕಿದೆ. ಬಾಕಿ ಕಾಮಗಾರಿ ಮುಗಿಯಲು ತಿಂಗಳುಗಳು ಹಿಡಿಯಬಹುದು. ಹೀಗಾಗಿ ಇದೇ ಡಿಸೆಂಬರ್‍‌ 2026ರಲ್ಲಿ ಲೋಕಾರ್ಪಣೆ ಆಗಬೇಕಿದ್ದ ನೀಲಿ ಮಾರ್ಗ 2ಎ ಮತ್ತೆ ವಿಳಂಬವಾಗಲಿದ್ದು, ಮುಂದಿನ ವರ್ಷ 2027ರ ಮೊದಲಾರ್ಧದಲ್ಲಿ ಪ್ರಯಾಣಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ. ಈ ಮೊದಲು 2026ರ ಮಾರ್ಚ್ ನಲ್ಲಿ ನೀಲಿ ಮಾರ್ಗ ತೆರೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು, ಆದರೆ ಅಗಲಿಲ್ಲ.

ಐಟಿ ಕಾರಿಡಾರ್ ಸಂಪರ್ಕಿಸುವ ನೀಲಿ ಮಾರ್ಗ, ನಿರೀಕ್ಷೆ ಅಪಾರ

ಹೊರ ವರ್ತುಲ ರಸ್ತೆಯು ಐಟಿ ಕಾರಿಡಾರ್ ಗೆ ಸಂಪರ್ಕ ಕಲ್ಪಿಸುತ್ತದೆ. ಮಹಾದೇವಪುರ, ಕೆ.ಆರ್.ಪುರಂ, ಮಾರತ್ತಹಳ್ಳಿ, ಎಚ್‌ಎಸ್‌ ಬಡಾವಣೆಗಳಿಗೆ ಸಂಚರಿಸುವ ಜನರ ಇದೇ ಹೊರ ವರ್ತುಲ ರಸ್ತೆ ಮಾರ್ಗವಾಗಿ ಒಡಾಡುತ್ತಾರೆ. ಅವರೆಲ್ಲ ನೀಲಿ ಮಾರ್ಗ ತ್ವರಿತ ಕಾರ್ಯಾಚರಣೆಯ ನಿರೀಕ್ಷೆಯಲ್ಲಿದ್ದರು, ಇದೀಗ ಅವರಿಗೆಲ್ಲ ನಿರಾಶೆಯಾಗಿದೆ.

ಭವಿಷ್ಯದಲ್ಲಿ ಬೆಂಗಳೂರಿನ ಲಕ್ಷಾಂತರ ಜನರಿಗೆ ಉತ್ತಮ ಸೇವೆ ನೀಡಲಿದೆ. ನಗರದಿಂದ ಏರ್‍‌ ಪೊರ್ಟ್ ಗೆ ತೆರಳಲು ನೆರವಾಗಲಿದೆ. ಟ್ರಾಫಿಕ್ ನಿಯಂತ್ರಿಸಲಿದೆ ಎಂಭ ಕಾರಣಕ್ಕೆ ಈ ಮಾರ್ಗದ ಮೇಲೆ ಅಪಾರ ನಿರೀಕ್ಷೆ ಇದೆ. ಬೆಂಗಳೂರಿನ ಸಾರಿಗೆ ವಿಚಾರದಲ್ಲಿ ನೀಲಿ ಮಾರ್ಗ ನೀರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.

13 ನಿಲ್ದಾಣ, ಗರ್ಡರ್ ನಿರ್ಮಾಣ ಪೂರ್ಣ

ಸಿಲ್ಕ್‌ ಬೊರ್ಡ್‌ನಿಂದ ಕೆ.ಆರ್.ಪುರಂವರೆಗೆ 19.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಒಟ್ಟು 13 ನಿಲ್ದಾಣಗಳು ಸ್ಥಾಪಿಸಲಾಗುತ್ತಿದೆ. ಇತ್ತೀಚೆಗೆ ವಿವಿಧೆಡೆ ಉದ್ದೇಶಿಸಲಾಗಿದ್ದ ಪ್ರಮುಖ ನಾಲ್ಕು ಗರ್ಡರ್ ಗಳ ಸ್ಥಾಪನೆ ಸಹ ಯಶಸ್ವಿಯಾಗಿದೆ. ಅಂತಿಮ ಹಂತದ ಅನೇಕ ಕೆಲಸಗಳು ಬಾಕಿ ಉಳಿದಿವೆ. ಮೊದಲ ರೈಲು ಆಗಮನ ಬೆನ್ನಲ್ಲೆ ಮುಂದಿನ ಕೆಲವೇ ದಿನಗಳಲ್ಲಿ ಎರಡನೇ ರೈಲು ಅಗಮಿಸಲಿದೆ. ಈ ರೈಲುಗಳು ನೀಲಿ ಮಾರ್ಗದಲ್ಲಿ ಸಂಚರಿಸಲು ಆಗದ ಹಿನ್ನೆಲೆ ಅವುಗಳನ್ನು ಬೇರೆ ಮಾರ್ಗದಲ್ಲಿ ಓಡಿಸಲು ಸಹ ಆಗದಂತಹ ಸ್ಥಿತಿ ಇದೆ.

ರೈಲುಗಳ ತಪಾಸಣೆಗೆ ತಿಂಗಳುಗಳು ಬೇಕು!

ಒಂದು ವೇಳೆ ಕಾಮಗಾರಿ ಪೂರ್ಣ ಮುಗಿದರೆ ನೀಲಿ ರೈಲುಗಳ ಶಾಸನಬದ್ಧ ತಪಾಸಣೆ, ಪ್ರಾಯೋಗಿಕ ಸಂಚಾರ, ಇನ್ನಿತರ ಪರೀಕ್ಷೆಗಳು ನಡೆಸಲು ತಿಂಗಳುಗಳು ಬೇಕಾಗುತ್ತವೆ. ರೈಲುಗಳು ಆಗಮಿಸುವ ಹೊತ್ತಿಗೆ ಮಾರ್ಗ ಸಿದ್ಧವಾಗಿದ್ದರೆ, ನಿಗದಿತ ಸಮಯಕ್ಕೆ ಉದ್ಘಾಟನೆ ನಿರೀಕ್ಷಿಸಬಹುದಿತ್ತು. ಆದರೆ ಈಗ ಡಿಸೆಂಬರ್ ಡೆಡ್‌ಲೈನ್ ಮತ್ತೆ ವಿಸ್ತರಣೆ ಆಗುವ ಸಾಧ್ಯತೆ ಇದೆ.

ಹಳದಿ ಮೆಟ್ರೋ ಮಾರ್ಗದಲ್ಲೂ ಹೀಗೆ ಆಗಿತ್ತು!

ಆರ್‍‌.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ 19.5 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದ ಕಾಮಗಾರಿ ಪೂರ್ಣಗೊಂಡು ವರ್ಷಗಳು ಕಳೆದರೂ ಮೆಟ್ರೋ ರೈಲುಗಳು ಪೂರೈಕೆ ಆಗದ್ದರಿಂದ ಕಾರ್ಯಾಚರಣೆ ವಿಳಂಬವಾಗಿತ್ತು. ಆಗಲೂ ಜನರು BMRCL ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಕೊನೆಗೆ 2025ರ ಆಗಸ್ಟ್ 10ರಂದು ಕೆಲವು ರೈಲುಗಳೊಂದಿಗೆ ಹಳದಿ ಮಾರ್ಗ ಲೋಕಾರ್ಪಣೆ ಆಯಿತು. ನೀಲಿ ಮಾರ್ಗ ಅದಕ್ಕೆ ವಿರುದ್ಧವಾಗಿದ್ದು, ಲಗೇಜ್ ಕ್ಯಾರಿಯರ್ ಇರುವ ರೈಲು ಆಗಮಿಸಿದೆ, ಮಾರ್ಗದ ಕೆಲಸಗಳು ಆಗಬೇಕಿದೆ.

ನೀಲಿ ಮಾರ್ಗದ 2B ಹಂತದ ಕೆಲಸ ಶೇ.18ರಷ್ಟು ಪೂರ್ಣ

ಕೆ.ಆರ್‍‌.ಪುರಂ-ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ವರೆಗಿನ 2B ಹಂತದ 38.45 ಕಿಲೋ ಮೀಟರ್ ಉದ್ದದ ನೀಲಿ ಮಾರ್ಗದ ಕೆಲಸ ಬರದಿಂದ ಸಾಗಿದ್ದು, ಕಳೆದ ಏಪ್ರಿಲ್ ವರೆಗೆ ಶೇ.18ರಷ್ಟು ಮಾತ್ರವೇ ಕಾಮಗಾರಿ ಮುಗಿದಿದೆ. ಇದರ ಲೋಕಾರ್ಪಣೆಗೆ ವರ್ಷಗಳೇ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ, ಪರಿಸರಕ್ಕೆ ಕೊಡುಗೆ ನೀಡುವ ನಮ್ಮ ಮೆಟ್ರೋ ಯೋಜನೆಗಳು ವಿಳಂಬವಾಗದಂತೆ, ನಿಗದಿತ ಕಾಲ ಮಿತಿಯಲ್ಲಿ ಜನರಿಗೆ ಲಭ್ಯವಾಗುವಂತೆ ಸರ್ಕಾರಗಳು, ಅಧಿಕಾರಿಗಳು ನಿರಂತರ ಪ್ರಯತ್ನ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+