ಜಾತ್ರೆಯಲ್ಲಿನ ಕನ್ನಡಪ್ರೀತಿ, ಗುಡಿಯಲ್ಲಿನ ಭಕ್ತಿ


ಎಸ್‌ ಎಲ್‌ ಭೈರಪ್ಪನವರೂ ಒಮ್ಮೆ ಮುಗುಳ್ನಕ್ಕಿದ್ದಾರೆ, ತಾರಾ ಸಯನೈಡ್‌, ಕಾನೂರ ಹೆಗ್ಗಡಿತಿ ಮತ್ತು ಹಸೀನಾ ಮೂರೂ ಪ್ರದರ್ಶಿತವಾಗಿದ್ದಕ್ಕೆ ಖುಷಿಯಾಗಿದ್ದಾಳೆ, ‘ಮೂಡಲ ಮನೆಯ’ ಹಾಡಿದ್ದಾಳೆ, ಬದರೀಪ್ರಸಾದ ‘ಶಾರದೇ ದಯೆ ತೋರಿದೇ’ ಎಂದು ಶಾರದೆಯ ಜತೆಗೇ ತಮ್ಮಮ್ಮನನ್ನೂ ನೆನೆಸಿಕೊಂಡಾಗ ನೋಡುಗರ ಕಣ್ಣಂಚಿನಲ್ಲೂ ಒಂದಿಷ್ಟು ನೀರು, ಸಂಗೀತಾ ಕಟ್ಟಿಗೂ, ನಾಗವಲ್ಲಿ ನಾಗರಾಜರಿಗೂ ಜುಗಲ್‌ಬಂದಿಯ ಜತೆ ಸೋಲೋ ಬೋನಸ್ಸು, ಪುತ್ತೂರು ನರಸಿಂಹನಾಯಕ್‌, ಡೊಳ್ಳುಕುಣಿತದ ಮಂದಿ, ಸ್ಥಳೀಯರ ನಾಟಕ, ನೃತ್ಯ, ಪುಸ್ತಕ ಬಿಡುಗಡೆ, ಕವಿಗೋಷ್ಠಿ, ಬಾಟಿಕ್‌ ಪೇಂಟಿಂಗ್‌, ಕೇಕ್‌ ಡೆಕೋರೇಷನ್‌, ಅಕ್ಕ ಐಡಲ್‌, ಭರತನಾಟ್ಯ, ಫ್ಯೂಷನ್‌, ಮಿಸ್‌ ಅಮೆರಿಕನ್ನಡಿತಿ, ತತ್ವಪದ... ಅಬ್ಬಬ್ಬಬ್ಬಬ್ಬ...

ಇಲ್ಲಿ ಅಕ್ಕ ಬೆಳೆದಿದ್ದಾಳೆ. ವಿಶ್ವಕನ್ನಡ ಸಮ್ಮೇಳನ ನಿಜವಾಗಲೂ ಜಾಗತಿಕವಾಗಿದೆ. ಸಿಂಗಪೂರ್‌, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌, ಸ್ವಿಜರ್‌ಲ್ಯಾಂಡ್‌ ಎಲ್ಲ ಕಡೆಯಿಂದಲೂ ಕನ್ನಡಿಗರು ಬಂದಿದ್ದಾರೆ.

ಅಲ್ಲಿ ಅಕ್ಕಳ ಈ ಸಂಭ್ರಮಕ್ಕೆ ಆರುತಿಂಗಳು ಮುಂಚೆ ವಿಧಾನಸೌಧದಲ್ಲಿ ಲಾಬಿ ನಡೆಯುತ್ತದೆ. ಸರ್ಕಾರಿ ಪಟ್ಟಿಯಲ್ಲಿದ್ದವರು ಧನ್ಯರಾಗಿದ್ದಾರೆ. ಪಟ್ಟಿಯಲ್ಲಿಲ್ಲದವರು, ಪಟ್ಟಿಯಲ್ಲಿದ್ದವರಿಗೆ ‘ಅಕ್ಕ’ ಕ್ಕೆ ಹೋಗುವಷ್ಟು ಅಗ್ಗವಾಗಿ ಹೋದರೇ ಇವರುಗಳು ಎಂದು ಕರುಬುತ್ತಾರೆ. ‘ಅಮ್ಮ’ನನ್ನು ಬಿಟ್ಟು ‘ಅಕ್ಕ’ಳನ್ನು ನೋಡಲು ಹೋದವರು ಎಂದು ಒಂದಿಷ್ಟು ಮಾಧ್ಯಮಗಳು ಜರೆಯುತ್ತವೆ. ಕುಮಾರಸ್ವಾಮಿಯವರು ಇಲ್ಲಿಗೆ ಬಂದುಬಿಟ್ಟರೆ ಅಲ್ಲಿ ಜನಾರ್ದನರೆಡ್ಡಿ ಇನ್ನೇನಾದರೂ ರಂಪ ಮಾಡಿಬಿಡಬಹುದು, ಸರ್ಕಾರಕ್ಕೆ ಏನಾದರೂ ಆಗಿಬಿಡಬಹುದು, ಎಂದು ಅಲ್ಲಿಯೇ ಕೂರುತ್ತಾರೆ. ಯಡಿಯೂರಪ್ಪನವರು ಇಲ್ಲಿ ಹಳದೀ ಟೈಯಲ್ಲಿ ಮಿಂಚುತ್ತಾರೆ. ಶಾಸಕರು ಊಟಮಾಡಿ ರೂಮಿನಲ್ಲಿ ಮಲಗುತ್ತಾರೆ.

ಸ್ವಯಂಸೇವಕರು ಅಹರ್ನಿಶಿ ದುಡಿದಿದ್ದಾರೆ. ಯಾವೊಬ್ಬ ಸ್ವಯಂಸೇವಕನೂ ಯಾವೊಂದೂ ಕಾರ್ಯಕ್ರಮವನ್ನೂ ನೋಡಿದಂತಿಲ್ಲ. ಬಸ್ಸಿಗೆ ಹತ್ತಿಸುವುದು, ಊಟದ ಮೇಲ್ವಿಚಾರಣೆ, ಅತಿಥಿಗಳ ಉಪಚಾರ. ಎಲ್ಲರೂ ಖುಷಿಯಾಗಿ ಮನೆಗೆ ಹೋದಾಗ ಸ್ವಯಂಸೇವಕರ ಕಣ್ಣಲ್ಲಿ ತೃಪ್ತಿ.

ಇದು ಕನ್ನಡದ ಹಬ್ಬ. ಇಲ್ಲಿ ನೆರೆದಿರುವ ನಾಲ್ಕೂವರೆಸಾವಿರ ಮಂದಿಯನ್ನು ಭಾವನಾತ್ಮಕವಾಗಿ ಒಟ್ಟಿಗೇ ಬೆಸೆದಿರುವುದು ಕನ್ನಡ. 1950ರ ದಶಕದಲ್ಲಿ ಬಂದವರಿಗೆ ಎಸ್ಪಿ ಯಾರಂತಲೇ ಗೊತ್ತಿಲ್ಲ. ಇನ್ನು ಮುರಳಿ, ತಾರಾ ಅವರಿಗೆ ಅಪ್ರಸ್ತುತ. ತಾರಾ ಕನ್ನಡದ ತಾರೆ. ತಾರಾ ಬದಲಿಗೆ ವಿನಯಾಪ್ರಸಾದ್‌ ಬಂದಿದ್ದರೂ ಅವರಿಗೆ ಅಷ್ಟೇ ಖುಷಿ, ರೇಖಾದಾಸ್‌ ಬಂದಿದ್ದರೂ ಬೇಜಾರಿಲ್ಲ. ಗುರುಕಿರಣನಿಗೂ ಕುಣಿಯುತ್ತಾರೆ, ವಿದ್ಯಾಭೂಷಣರ ಸಂಗೀತಕ್ಕೂ ತಲೆದೂಗುತ್ತಾರೆ.

ಇನ್ನು ಕೊಂಚ ‘ಅಪ್‌ಡೇಟೆಡ್‌’ ಕನ್ನಡಿಗರು ಯಾವ್ಯಾವ ಸಮಯದಲ್ಲಿ ಯಾವ್ಯಾವ ಕಾರ್ಯಕ್ರಮ ನೋಡಬೇಕೆಂದು ಒಂದನ್ನೂ ಬಿಡದೇ ತಮಗೆ ಬೇಕಾದ್ದನ್ನೆಲ್ಲಾ ನೋಡಿದ್ದಾರೆ. ಗುರುಕಿರಣನಿಗೆ ‘ಅಂಕು ಡೊಂಕು... ಬೇಕೇ ಬೇಕು...’ ಎಂದು ಒತ್ತಾಯಿಸುತ್ತಾರೆ, ‘ಹೊಡಿ ಮಗ’ ಹೇಳಂತ ದುಂಬಾಲು ಬೀಳುತ್ತಾರೆ. ಗುರುವಿಗೂ ಇಂಥ ‘ಎಲೀಟ್‌’ ಸಭೆ ಹೊಸದೇನೋ. ಹುಮ್ಮಸ್ಸಿನಿಂದಲೇ ಹೇಳುತ್ತಾನೆ. ಇಡೀ ಸಭಾಂಗಣವನ್ನೇ ಕುಣಿಸುತ್ತಾನೆ. ತಾನೂ ಕೆಳಗೆ ಹಾರಿ ನರ್ತಿಸುತ್ತಾನೆ. ‘2000 ಎಡಿ ಲೇಡಿಯೇ’ ಹಾಡಲ್ಲಿ ಎಷ್ಟು ಕನ್ನಡ ಪದಗಳಿವೆ ಎಂದು ಯಾರೋ ಲೆಕ್ಕ ಹಾಕುತ್ತಾರೆ.

ವಾಪಸ್ಸು ಬರಬೇಕಾದರೆ, ನನ್ನ ಹತ್ತು ವರ್ಷದ ಮಗಳು ಪ್ರಣೀತಾಳನ್ನ್ನು ಕೇಳಿದೆ. ಒಂದು ವಾಕ್ಯದಲ್ಲಿ ಈ ವಿಶ್ವಕನ್ನಡ ಸಮ್ಮೇಳನ ನಿನಗೇನನ್ನಿಸಿತು ಅಂತ ಹೇಳು- ಎಂದು. ಪ್ರಾಮಾಣಿಕವಾಗಿ ಹೇಳಿದಳು- Byrappa is boring, Gurukiran was fun.

ಇದು ಹತ್ತು ವರ್ಷದ ಮಕ್ಕಳಿಗೆ ಕೇಳುವ ಪ್ರಶ್ನೆಯಲ್ಲ. ಭೈರಪ್ಪನವರ ಸಾಹಿತ್ಯಕ ಚರ್ಚೆ, ಜಿಜ್ಞಾಸೆ ಅವಳಿಗೆ ಹೇಗೆ ಅರ್ಥವಾಗಬೇಕು? ಆದರೆ, ನನಗೆ ಕೊಂಚ ಆತಂಕ ತಂದದ್ದು ಗುರುಕಿರಣನ ‘ಓಳು, ಬರೀ ಓಳು’ ಇವಳಿಗೆ fun ಆದದ್ದು. ಒಂದು ಯೋಚನೆ ಬಂತು-ಸಮಕಾಲೀನ ಕನ್ನಡವನ್ನು ನಮ್ಮ ಮಕ್ಕಳಿಗೆ ಹತ್ತಿರ ಮಾಡಿಸುವ ಭರದಲ್ಲಿ ನಾವು ಒಂದು ಹೆಜ್ಜೆ ಮುಂದೆ ಹೋದೆವಾ? ಗುರುಕಿರಣ ಅವಳಿಗೆ ಖುಷಿಕೊಟ್ಟಿದ್ದು ಕನ್ನಡದಿಂದಲೇ? ಅದು ಕನ್ನಡದ ಆನಂದವೇ? ಹತ್ತುವರ್ಷದ ಮಕ್ಕಳು ಕನ್ನಡವನ್ನು ಪ್ರೀತಿಸಬೇಕಾದ್ರೆ, ಗುರುಕಿರಣ ಅಥವಾ ಉಪೇಂದ್ರರ ಕನ್ನಡವೇ ಬೇಕಾ? ಗುರುಕಿರಣನನ್ನು ನೋಡಬೇಕೆಂದು, ಕೇಳಬೇಕೆಂದೇ ಅವರು ಕನ್ನಡ ಸಮ್ಮೇಳನಕ್ಕೆ ಬರಬೇಕು ಅಂದುಕೊಂಡರೆ ಏನು ಮಾಡಬೇಕು.

ಭೈರಪ್ಪನವರು ಎಲ್ಲರಿಗೂ ದಕ್ಕಬೇಕಂದಲ್ಲ. ಆದರೆ, ಗುರುಕಿರಣ್‌ ಇವಳಿಗೆ fun ಆಗುವುದು ಎಷ್ಟು ಉಚಿತ?

ಪ್ರಾಮಾಣಿಕವಾಗಿ ಹೇಳುತ್ತೇನೆ, ಸಭಾಂಗಣದಲ್ಲಿ ಉಳಕೊಂಡ ಬಹಳಷ್ಟು ಜನ ಆ ರಾತ್ರಿಯ ಗುರುವಿನ ಪ್ರಭೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಒಂದಿಷ್ಟು ತುಂಬಾ ‘ಹಾರ್ಡ್‌ಕೋರ್‌’ ಜನ ‘ಕೇಳಲಾರೆ ನಾ ಈ ತಾಳವಿಲ್ಲದ, ಮೇಳವಿಲ್ಲದ ಸಂಗೀತವಾ’ ಅಂದುಕೊಂಡು ಎದ್ದುಹೋದರು. ಆದರೆ, ಈ ಪ್ರಭೆಯಿಂದ ಹೊರಗೆ ಬಂದು ಇದು ಕನ್ನಡಪ್ರೀತಿ ಹೌದೋ ಅಲ್ಲವೋ ಎಂದು ಯೋಚಿಸುವ ವಿಚಕ್ಷಣೆ ಎಲ್ಲರಿಗೂ ಇರುತ್ತದೆಯೇ? ಅಥವಾ ಕನ್ನಡ ಪನ್ನಡ ಏನೂ ಬೇಕಾಗಿಲ್ಲ this is just for fun ಅಂದುಕೊಂಡರೆ ಅದೂ ಪರವಾಗಿಲ್ಲವೇ? ಅಥವಾ ನಮ್ಮ ಕರ್ನಾಟಕದ ಹೈಕಳ ಹಾಗೇ ಇಲ್ಲಿಯವೂ‘ಹೊಡಿಮಗ’ ಹೇಳಿದರೆ ನನ್ನ ಮಗಳು ಕನ್ನಡದ ಹಾಡು ಹೇಳುತ್ತಿದ್ದಾಳೆ ಎಂದು ಖುಷಿ ಪಡೋಣವೇ? ಅಮೆರಿಕಾದಲ್ಲಿ ಇರುವ ಬದಲು ಬೆಂಗಳೂರಿನಲ್ಲಿ ಇದ್ದರೂ ನನ್ನ ಮಗಳು ‘ಜೋಗಯ್ಯೋ’ ಎಂದು ಹಾಡುತ್ತಿದ್ದಳೇ? ( ಇಲ್ಲ... ಪ್ರಾಯಶಃ ಕರಣ್‌ ಜೋಹರ್‌ನ ಹೊಸ ಸಿನಿಮಾ ಹಾಡು ಹೇಳುತ್ತಿದ್ದಳು ಅಥವಾ ಲಿಂಡ್ಸೇ ಲೋಹನ್‌ನ ಹಾಡು ಅರ್ಥವಾಗಿಯೋ ಇಲ್ಲವೋ ಗುನುಗುಟ್ಟುತ್ತಿದ್ದಳು)

ಎಲ್ಲರೂ ಕನ್ನಡದ ಮಕ್ಕಳಲ್ಲವೇ?

ಬದಲಾವಣೆ ನಿರಂತರ ಮತ್ತು ಪ್ರಗತಿಗಾಮಿಯೇ ಅಂತೆ. ಅದು ನಮ್ಮ ಅನುಭವಕ್ಕೆ ಬರುವುದು ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ಸ್ತರದಲ್ಲಿ. ನಾವು ಬೆಳೆಯುತ್ತಿದ್ದಾಗ ‘ಹಂಸಲೇಖ’ನೂ ‘ಗಂಗು’ ‘ರಂಗು’ಗಳಿಂದಲೇ ಜನಪ್ರಿಯರಾಗಿದ್ದು. ಅದನ್ನೇ ಕೇಳಿಕೊಂಡೂ ಕನ್ನಡವನ್ನು ಪ್ರೀತಿಸಿದ ನಮ್ಮ ಪೀಳಿಗೆಯವರಿಗೆ, ಗುರುಕಿರಣನ ಹಾಡಿಗೆ ಹೆಜ್ಜೆಹಾಕುವ ನಮ್ಮ ಮಕ್ಕಳನ್ನು ಟೀಕಿಸುವ ಅಧಿಕಾರ ಇರುತ್ತದೆಯೇ?

ನಮ್ಮಲ್ಲಿ ಬಹಳಷ್ಟು ಮಕ್ಕಳು ಶಾಸ್ತ್ರೀಯ ಸಂಗೀತ ಕಲಿಯುತ್ತಾರೆ, ಭರತನಾಟ್ಯ ಕಲಿಯುತ್ತಾರೆ. ಅದಕ್ಕೋಸ್ಕರ ನಾವುಗಳು ವಿಶೇಷ ಶ್ರಮವಹಿಸುತ್ತೇವೆ. ಆದರೆ, ಗುರುಕಿರಣ ಯಾಕೆ ಅವರಿಗೆ ಹತ್ತಿರವಾಗುತ್ತಾನೆ. ಬುದ್ಧಿಜೀವಿಗಳು ಹೇಳುವ ಬೌದ್ಧಿಕ ಸೋಮಾರಿತನ, ಇಂದ್ರಿಯಗಳಿಗೆ ತಕ್ಷಣ ಮುಟ್ಟುವುದನ್ನು ಮಾತ್ರ ಪ್ರೀತಿಸುವ ಭೋಳೇತನ ಇದಕ್ಕೆ ಕಾರಣವೇ? ಮನಸ್ಸಿಗೆ ತಕ್ಷಣ ಇಷ್ಟವಾದರೆ ಅದು ಕ್ಲೀಷೆಯಾಗುತ್ತದೆ, ರೊಮ್ಯಾಂಟಿಕ್‌ ಆದ ಪ್ರೀತಿ ಮಾತ್ರ ಇದ್ದು ಆಳವಾದ ಅಭ್ಯಾಸ ಇಲ್ಲದೇ ಇಷ್ಟಪಟ್ಟರೆ ಅದು ‘ಸುಗಮ ಸಂಗೀತ’ವಾಗಿಬಿಡುತ್ತದೆ. ಆಳವಾಗಿ ಅಭ್ಯಸಿಸಲು ಸಮಯ, ತಾಳ್ಮೆಯಿಲ್ಲ.ಹಾಗೆಂದಮಾತ್ರಕ್ಕೆ ಕನ್ನಡದ ಹೆಸರಲ್ಲಿ ನಾಲ್ಕುಸಾವಿರ ಜನ ಖುಷಿಪಟ್ಟು, ಎಂಟುಕೋಟಿ ಹಣ ಖರ್ಚಾಗಿದ್ದು, ಅಕ್ಕ ಬೆಳೆಯುತ್ತಿರುವುದು, ಎಲ್ಲ ಬಹಳ ಮೇಲ್ಮಟ್ಟದ ಇಂದ್ರಿಯಾನುಭವ ಮಾತ್ರವೇ?

ನನ್ನ ಮಗಳಿಗೆ ಮೂವತ್ತಾದಾಗ ಅವಳು ಹತ್ತುವರ್ಷವಾಗಿದ್ದಾಗ ವಿಶ್ವಕನ್ನಡ ಸಮ್ಮೇಳನದಲ್ಲಿ ಕೇಳಿದ ‘ಚುಕುಬುಕು ರೈಲು ನಿಲ್ಲೋದಿಲ್ಲ ಎಲ್ಲೂ’ ಎಂಬ ಹಾಡಿಂದ ಮಾತ್ರ ಕನ್ನಡವನ್ನು ಅಮೆರಿಕಾದಲ್ಲಿ ನೆನೆಸಿಕೊಂಡಾಗ ಅದನ್ನು ಛೇ ಕೀಳಭಿರುಚಿ ಎಂದು ಜರೆಯುವ ಹಕ್ಕು ನನಗಿದೆಯೇ?

ನುಡಿ ಹಬ್ಬದ ಚಿತ್ರಪಟಗಳು :
ಮತ್ತೆ ಸಿಗೋಣ - 3ನೇ ದಿನ
ಮೆರವಣಿಗೆಯ ನೋಟ- 2ನೇ ದಿನ
ಎಲ್ಲೆಲ್ಲೂ ಹಸನ್ಮುಖಿಗಳು - 1ನೇ ದಿನ
ಎಸ್ಪಿ ಬಾಲಸುಬ್ರಮಣ್ಯಂ ಗಾನ ಸುರಭಿ

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ಪೂರ್ವ ಸಿದ್ಧತೆ Be a patronate! Use .in e-mail Post Your Views

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+