ಮುಳುಗುತ್ತಿದ್ದ ಹಡಗನ್ನು ಎತ್ತಿ ನಿಲ್ಲಿಸಿದ ಒರ್ಲ್ಯಾಂಡೋ ಸಮ್ಮೇಳನ
- ಮವಾಸು
[email protected]
ಒಂದೆಡೆ ‘ಅಕ್ಕ’ ಎಂಬ ಹಡಗು ಇನ್ನೇನು ಮುಳುಗುವ ಸ್ಥಿತಿಯಲ್ಲಿದೆ. ಇನ್ನೊಂದೆಡೆ ವಾಯುಪುತ್ರನ ಹಾವಳಿ ಚಂಡಮಾರುತ(Hurricane). ವಿರೋಧಿಗಳ ತಂಡ ಈ ಸಮಯವನ್ನೇ ಉಪಯೋಗಿಸಿಕೊಂಡು ಎಲ್ಲರಿಗೂ ಈ-ಮೈಲ್‌ಗಳ ಸುರಿಮಳೆಗರೆಯಿತು. ವಿಮಾನ ಸಂಚಾರ ಸ್ಥಗಿತ ಸೇರಿದಂತೆ ಹಲವಾರು ಅಡ್ಡಿಆತಂಕ ಒಡ್ಡಿತು. ಇದೆಲ್ಲ ಅಡಚಣೆಗಳನ್ನು ಎದುರಿಸಿ ಸಮ್ಮೇಳನ ಯಶಸ್ವಿ ಮಾಡುವುದು ಒಂದು ಸವಾಲೇ ಆಗಿತ್ತು.
ಸಮ್ಮೇಳನಕ್ಕೆ ಹೊರಟಾಗಲೇ ನಾವೆಲ್ಲಾ ಮಾತನಾಡಿಕೊಂಡಿದ್ದೆವು. ಈ ಸಮ್ಮೇಳನ ಏನಾದರೂ ಡೆಟ್ರಾಯಿಟ್ ತರಹ ಆದರೆ, ಇದೇ ನಾವು ಹೋಗೋ ಕೊನೆಯ ಕನ್ನಡ ಸಮ್ಮೇಳನ ಅಂತ. ಇದು ನನ್ನೊಬ್ಬನದೇ ಅಲ್ಲ , ಸಮ್ಮೇಳನಕ್ಕೋಸ್ಕರ ಹೆಸರು ನೊಂದಾಯಿಸಿದ್ದ ಪ್ರತಿಯಾಬ್ಬ ಕನ್ನಡಿಗನ ನಿರ್ಧಾರವಾಗಿತ್ತು. ವಾರಕ್ಕೆ ಮುಂಚೆಯೇ ಹೋಗಿ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸಿ ಸೆ.2 ರಂದೇ ಸಮ್ಮೇಳನ ನಡೆಯುವ ಹೊಟೇಲ್‌ಗೆ ಹೋಗಿ ನೋಡಿದಾಗಲೇ ಅಂದುಕೊಂಡೆವು Love at first sight ಅಂತ. ಸುಂದರವಾದ ವಿಶಾಲವಾದ ಸಭಾಂಗಣ, ಹೊಟೆಲ್ ರೂಮುಗಳು, ಸಭಾಂಗಣ ಎಲ್ಲಾ ಒಂದೇ ಚಾವಡಿಯಲ್ಲಿದ್ದು - ಮಕ್ಕಳಿಗೆ ಆಟವಾಡಲು ವಿಶಾಲ ಪ್ರದೇಶ, ಈಜುವ ಕೊಳ, ದಿನವಿಡೀ ತೆರೆದ ಕಾಫೀ ಶಾಪ್,‰ ಇವೆಲ್ಲಾ ನಮ್ಮನ್ನು ಆಕರ್ಷಿಸಿತ್ತು.
ಸೆ.2ಕ್ಕೆ ಅಲ್ಲಿಯ ಜನತೆಯ ಮುಖದಲ್ಲಿ ಹೆದರಿಕೆಯ ಛಾಯೆ. ಅಂದಿನ ಸಂಜೆ ಗ್ಯಾಸ್ ಸ್ಟೇಷನ್‌ಗಳಲ್ಲಿ ಗ್ಯಾಸ್ ಇಲ್ಲ. ಎಲ್ಲರೂ ಮಾತಿನಲ್ಲಿ ಹೇಳುವುದು ನೋಡಿದರೆ ಚಂಡಮಾರುತ ದಿನದಿನಕ್ಕೆ ತನ್ನ ಪಥವನ್ನೇ ಬದಲಾುಸುತ್ತಿದೆ. ಸೆ.2ರ ಸಂಜೆಯ ಹೊತ್ತಿಗೆ ಎಲ್ಲ ಟೀವಿಗಳಲ್ಲಿ ಸುದ್ದಿ , ಚಂಡಮಾರುತದ ದಾರಿ ಸರಿಯಾಗಿ ಗೇಲಾರ್ಡ್ ಪಾಮ್ಸ್ (ಸಮ್ಮೇಳನದ ಹೊಟೆಲ್) ಹತ್ತಿರವೇ ಬರುತ್ತದೆ ಎಂದು. ಗಾಬರಿಯಿಂದ ಸಮ್ಮೇಳನದ ಕಾರ್ಯಕರ್ತರ ಮೊರೆ. ಏನು ಮಾಡುವುದು? ಸಮ್ಮೇಳನ ನಡೆಯುತ್ತದೋ ಇಲ್ಲವೋ? ಎಷ್ಟೇ ಜನ ಬರಲಿ ಸಮ್ಮೇಳನ ನಡೆಯುತ್ತದೆ ಎಂಬ ಭರವಸೆ ಡಾ।। ರಾಮಪ್ಪ ಮತ್ತು ಕೇಶವ ಬಾಬು ಅವರಿಂದ. ಹಾಗೆಯೇ ಹೊಟೆಲ್‌ನೊಂದಿಗೆ ಮಾತುಕತೆ. ನಾಳೆ Check-In ಮಾಡುವ ಬದಲು ಇಂದೆಯೇ ಮಾಡಬಹುದು ರಾತ್ರಿ ಹನ್ನೆರಡು ಘಂಟೆಯ ಮೇಲೆ ಎಂಬ ಉದಾರತನ ಹೊಟೆಲ್‌ನವರದ್ದು. ಅಲ್ಲಿಯವರವಿಗೆ ಸಮ್ಮೇಳನಕ್ಕೆ ನೊಂದಾಯಿಸಿದ ಕನ್ನಡಿಗರಿಗೆಲ್ಲಾ ಕರೆ. ‘ಒರ್ಲ್ಯಾಂಡೋ ವಿಮಾನ ನಿಲ್ದಾಣ ಶುಕ್ರವಾರ ಮಧ್ಯಾಹ್ನ 12 ಘಂಟೆಗೆ ಮುಚ್ಚಲಾಗುತ್ತದೆ, ಆದಷ್ಟು ಬೇಗ ಬರುವ ವಿಮಾನದಲ್ಲಿ ಬನ್ನಿ’. ಈ ಕರೆಯ ಕಾಲ್ ಸೆಂಟರ್ ಅದೇ ಹೊಟೆಲ್‌ನ ಒಂದು ಕೊಠಡಿಯಲ್ಲಿ ಮಾಡಲಾಗಿತ್ತು. ನಮ್ಮ ತರಹ ಮುಂಚೆ ಬಂದ ಕನ್ನಡಿಗರಿಂದ ಅಳಿಲು ಸೇವೆ. ಈ ಕರೆಯಿಂದಾಗಿ 100 ಕನ್ಫರ್ಮ್ ಆಗಿದ್ದ ಸಂಖ್ಯೆ 800 ರವರೆಗೆ ಏರಿತು. ಇದರಿಂದ ಸಮ್ಮೇಳನದ ಕಾರ್ಯಕರ್ತರ ಮುಖದಲ್ಲಿ ನಗೆ ಹಾಗು ಉತ್ಸಾಹ ಏರಿತು.
ಸೆ.3ರ ಬೆಳಿಗ್ಗೆಯಿಂದಲೇ ಕನ್ನಡಿಗರ ದಂಡು ಹರಿಯುತ್ತಾ ಬಂದಿತು. ಹಳೆಯ ಸ್ನೇಹಿತರನ್ನೆಲ್ಲಾ ನೋಡಿ ಸಂತೋಷ. ಬರೇ ಮುಖ ಪರಿಚಯವಿದ್ದವರಿಗೆ ನಮಸ್ಕಾರದಿಂದ ಸ್ವಾಗತ. ಮಧ್ಯಾಹ್ನದ ಹೊತ್ತಿಗೆ ಹೆಸರು ನೊಂದಾಯಿಸುವ ಕಾರ್ಯ ಪ್ರಾರಂಭ. ಎಲ್ಲರ ಬಾಯಲ್ಲೂ ಚಂಡಮಾರುತದ ಬಗ್ಗೆಯೇ ಮಾತು. ಆದರೂ ಹೊಟೇಲ್‌ನ ಒಳಗೆ ಬಂದ ಮೇಲೆ ಹೊರಗೆ ಏನು ಅಗುತ್ತಿದೆ ಎನ್ನುವ ಅರಿವೆಯಿರಲಿಲ್ಲ ನಮಗೆ. ಸಮ್ಮೇಳನದ ಉತ್ಸಾಹದಲ್ಲೇ ನಮ್ಮ ಪೂರ್ಣ ದೃಷ್ಟಿ. ಸೆ.3ರ (ಶುಕ್ರವಾರ) ಸಂಜೆ ಕಾರ್ಯಕ್ರಮ ಪ್ರಾರಂಭ. ಸಂಗೀತ, ಕರ್ನಾಟಕದಿಂದ ಬಂದ ಕಲಾವಿದರಿಂದ ಕಾರ್ಯಕ್ರಮಗಳು. ಬಲು ಸೊಗಸಾದ ವಿವಿಧ ಕಾರ್ಯಕ್ರಮಗಳು. ಎಲ್ಲರಿಗೂ ನಿಟ್ಟುಸಿರು. ಕಾರ್ಯಕ್ರಮಗಳು ಪ್ರಕಟಿಸಿದ ವೇಳೆಗೆ ಪ್ರಾರಂಭವಾಗಿ, ಪ್ರಕಟಿಸಿದ ವೇಳೆಯ ಆಸುಪಾಸಿನಲ್ಲೇ ಮುಗಿದಿದ್ದು ಆರಂಭ ಶುಭಸೂಚನೆ.
ಸಮ್ಮೇಳನದ ಮೊದಲ ಊಟದ ಬಗ್ಗೆ ಎಲ್ಲರಿಗೂ ಕಾತುರ. ಡೆಟ್ರಾಯಿಟ್ ಸಮ್ಮೇಳನದಲ್ಲಿ ಇದೇ ಕಾರಣಕ್ಕಾಗಿ ಎಲ್ಲರಿಂದ ದೂರು. ಆದ್ದರಿಂದ ಇಲ್ಲಿ ಊಟಕ್ಕೆ ಹೆಚ್ಚು ಪ್ರಾಮುಖ್ಯತೆ. ಆದರೆ ಇಲ್ಲಿ ಮಾಡಿದ್ದ ಏರ್ಪಾಡು, ಊಟದ ರುಚಿ ಎಲ್ಲರನ್ನು ಮುಗ್ಧರನ್ನಾಗಿ ಮಾಡಿಸಿತ್ತು. ಸೊಗಸಾದ ಊಟವಾಗಿತ್ತು. ಕನ್ನಡಿಗರಿಗೆ ಊಟ ಒಂದು ಚೆನ್ನಾಗಿದ್ದರೆ ಸಾಕು, ಮಿಕ್ಕ ಕೆಲಸವೆಲ್ಲಾ ಸುಲಭ, ಶುಭ.
ಸೆ.4ರ ಬೆಳಿಗ್ಗೆ ತಿಂಡಿ- ಇಡ್ಲಿ, ಪೊಂಗಲ್, .. ಆಹಾ‰ ಬಾಯಲ್ಲಿ ಇನ್ನೂ ನೀರು ಬರುತ್ತದೆ. ಬೆಂಗಳೂರಿನ ಒಂದು ಒಳ್ಳೆಯ ಹೊಟೆಲ್‌ನಲ್ಲಿ ತಿಂದಂತೆ ಅನುಭವ. ನಿಗದಿತ ವೇಳೆಯಲ್ಲಿ ಎಲ್ಲರಿಗೂ ಸಂತೃಪ್ತಿಯಾಗುವಷ್ಟು ತಿಂಡಿ. ತಿಂಡಿ ತಿಂದ ಮೇಲೆ ಹಾದುಹೋಗಬೇಕಾಗಿದ್ದು ‘ಗಾಂಧಿ ಬಜಾರ್’ ಕಡೆಗೆ!
ಕರ್ನಾಟಕದಿಂದ ಬಂದಿದ್ದ ಬಟ್ಟೆ, ಒಡವೆ, ಪೀಠೋಪಕರಣಗಳು. . . . ಹೀಗೆ ಹಲವಾರು ಮಳಿಗೆಗಳ ಒಂದು ಬಜಾರ್ ಇದು. ಬೆಳಗಿನ ಕಾರ್ಯಕ್ರಮ ಮೆರವಣಿಗೆಯಿತ್ತು . ‘ಕೇಳಿರಿ... ಕೇಳಿರಿ... ರಾಜಾಧಿರಾಜ ರತ್ನ ಸಿಂಹಸನಾಧೀಶ್ವರ ಶ್ರೀ ಶ್ರೀ ಕೃಷ್ಣದೇವರಾಯರು ಯುದ್ಧದದಲ್ಲಿ ವಿಜಯಿಯಾಗಿ ಬರುತ್ತಿದ್ದಾರೆ. ಪ್ರಜೆಗಳೆಲ್ಲಾ ಅವರ ಸ್ವಾಗತಕ್ಕೆ ಬರಬೇಕು’ ಎಂದು ತಮಟೆ ಬಾರಿಸುತ್ತ ಬಂದ ದೂತನ ಕರೆಗೆ ಓಗೊಟ್ಟು ಬಂದ ಪ್ರತಿನಿಧಿಗಳಿಗೆ ನಿರಾಶೆ ಕಾದಿರಲಿಲ್ಲ. ನಿಜವಾಗಲೂ ಕೃಷ್ಣದೇವರಾಯನ ಕಾಲದಲ್ಲಿ ಇದ್ದೀವೇನೋ ಎಂಬ ಅನುಭವವಾಗುವಷ್ಟು ಚೆನ್ನಾಗಿತ್ತು. ಮೆರವಣಿಗೆಯಲ್ಲಿ ಹೂವು ಮಾರುವ, ಬಳೆ ಮಾರುವ, ಮುತ್ತು ಮಾರುವ ಹೆಂಗಸರ ಗುಂಪೇ ಹೊರಟಿತ್ತು ಮುಂದೆ. ಹುಲಿ ವೇಷ, ಸೈನಿಕರು, ಕವಿಗಳ ದಂಡು ಹೀಗೆ ದಂಡು ದಂಡುಗಳೇ ಹೊರಟಿದ್ದವು. ನಂದಿಕೋಲಿನ ಕುಣಿತ ವರ್ಣರಂಜಿತವಾಗಿತ್ತು. ಅಂದಿನ ಬೆಳಗಿನ ಕಾರ್ಯಕ್ರಮಗಳಲ್ಲಿ ಎಲ್ಲವೂ ಮನೋರಂಜಿತವಾಗಿತ್ತು. ಸಂಜೆಯ ಎಸ್. ಪಿ. ಬಾಲಸುಬ್ರಮಣ್ಯರ ಹಾಡುಗಳಂತೂ ಸುಶ್ರಾವ್ಯವಾಗಿದ್ದು , ಪ್ರೇಕ್ಷಕರ ಗುಂಪುಗಳು ಕುಣಿದು ಕುಪ್ಪಳಿಸುತ್ತಿದ್ದವು. ಆದರೆ ಚಂಡಮಾರುತ ಹೊರಗೆ ಬಂದು ಹೋದ ಸುಳಿವೇ ಇಲ್ಲ. ವಿಮಾನಗಳು ಸೋಮವಾರವೂ ಹೊರಡುವುದು ಅನುಮಾನ ಎಂದಾಗ ಎಲ್ಲರ ಮುಖದಲ್ಲಿ ಮತ್ತೆ ಕಳವಳ. ಆದರೂ ಅದರ ಪ್ರಭಾವ ಯಾವ ಕಾರ್ಯಕ್ರಮದ ಮೇಲೂ ಬೀಳಲಿಲ್ಲ. ಚಂಡಮಾರುತದಂತಿರಬಹುದೆಂದು ಎಣಿಸಿ ವಸುಂಧರಾದಾಸ್ ಅವರ ನವ್ಯ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಸುಮಾರು 2000 ಜನರಿಗೆ ನಿರಾಶೆ ಕಾದಿತ್ತು. ಅವರ Fusion Music ಕಾರ್ಯಕ್ರಮ ಸೋಲನ್ನು ಕಂಡಿತ್ತು. ಎಷ್ಟರಮಟ್ಟಿಗೆ ಸೋಲನ್ನು ಕಂಡಿತ್ತೆಂದರೆ ಬಹುಜನಪ್ರಿಯ ಹಿಂದಿ ಹಾಡನ್ನು ಹೇಳಿ ಜನರಿಗೆ ಸ್ವಲ್ಪ ಮನರಂಜಿಸಬೇಕಾಯಿತು. ಕನ್ನಡ ಸಮ್ಮೇಳನದಲ್ಲಿ ಹಿಂದಿ ಹಾಡು ಹೇಳಿದ್ದು ಅಷ್ಟು ಸಮಂಜಸವೇನಲ್ಲ. ಆದ್ದರಿಂದಲೇನೋ ಕಾರ್ಯಕ್ರಮವನ್ನು ನಿಗದಿತ ವೇಳೆಗೆ ಮುಂಚೆಯೇ ನಿಲ್ಲಿಸಲಾಯಿತು.
ಸೆ.5ರ ಬೆಳಿಗ್ಗೆ ಎಲ್ಲರೂ ಹೊಟೆಲ್ ರೂಮುಗಳನ್ನು ಖಾಲಿ ಮಾಡಿ ಇನ್ನೊಂದು ಹೊಟೆಲ್ ಹುಡುಕುವುದರಲ್ಲೇ ಮಗ್ನ. ತಮ್ಮ ಏರ್‌ಲೈನ್ ಕಂಪನಿಗಳಿಗೆ ಫೋನ್ ಕರೆ. ಸಾವಿರಾರು ಫೋನ್ ಕರೆಗಳು. ಮಧ್ಯಾಹ್ನದ ಹೊತ್ತಿಗೆ ವಿಮಾನ ಸಂಚಾರ ಪ್ರಾರಂಭವಾಗಿದೆ ಎಂಬ ಸುದ್ದಿ ಬಂದಾಗಲಂತೂ ಎಲ್ಲರ ಮುಖದಲ್ಲಿ ಒಂದು ಗೆಲುವಿನ ನಗೆ.
ಹೀಗೆ ಎಲ್ಲ ಅಡೆತಡೆಗಳನ್ನು ಎದುರಿಸಿ ಅಮೇರಿಕನ್ನಡಿಗರ ಮನಸ್ಸಿನಲ್ಲಿದ್ದ ‘ಅಕ್ಕ ಉಳಿಯುವುದೇ?’ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ ಶ್ರೀಗಂಧ ಕನ್ನಡ ಕೂಟದವರು. ಹೀಗೆ ನಮ್ಮ ಕನ್ನಡ ಅಮೇರಿಕೆಯಲ್ಲಿ ಉಳಿಯಲಿ, ಇನ್ನೂ ಹಲವಾರು ಸಮ್ಮೇಳನಗಳಾಗಲಿ, ಎಲ್ಲರಿಗೂ ಹಬ್ಬ ತರಲಿ. ಈ ಸಮ್ಮೇಳನದ ಯಶಸ್ಸಿಗೆ ಕಾರಣರಾದ ಎಲ್ಲ ಪದಾಧಿಕಾರಿಗಳಿಗೂ, ಕಾರ್ಯಕರ್ತರಿಗೂ, ಅಕ್ಕ ಸಂಸ್ಥೆಯ ಪದಾಧಿಕಾರಿಗಳಿಗೂ, ನನ್ನ ಹಾರ್ದಿಕ ಶುಭಾಶಯಗಳು.
/ ಎನ್‌ಆರ್‌ಐ











Click it and Unblock the Notifications