ಸಮ್ಮೇಳನ ಮುಗಿಯಿತು ; ಕನ್ನಡಪುಟಗಳಲ್ಲಿ ಒರ್ಲಾಂಡೊ ಸೆರೆಯಾಯಿತು !
- ಎಸ್.ಕೆ. ಶಾಮಸುಂದರ, ಶ್ರೀವತ್ಸ ಜೋಶಿ
ಒರ್ಲಾಂಡೊ -ಫ್ಲಾರಿಡಾ
ಫ್ಲಾರಿಡಾ ರಾಜ್ಯದ ಒರ್ಲಾಂಡೊದಲ್ಲಿ ನಡೆದ ಮೂರನೆ ವಿಶ್ವಕನ್ನಡ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಎಸ್.ಎಂ.ಕೃಷ್ಣ , ಭೌಗೋಳಿಕವಾಗಿ ದೂರವಿದ್ದರೂ ಮಾನಸಿಕವಾಗಿ ಸದಾ ಹತ್ತಿರವಿರುವ ಕನ್ನಡಿಗರ ಮನಸ್ಥಿತಿಯನ್ನು ಹೆಮ್ಮೆಯಿಂದ ನೆನೆದರು. ಸಮ್ಮೇಳನದ ಮೂರನೆಯ ಮತ್ತು ಕೊನೆಯ ದಿನ ವ್ಯವಸ್ಥೆಗೊಳಿಸಲಾಗಿದ್ದ ಭರ್ಜರಿ ಔತಣಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಕರ್ನಾಟಕದಲ್ಲಿ ಶೈಕ್ಷಣಿಕ ಮತ್ತು ಆರೋಗ್ಯಕ್ಷೇತ್ರದಲ್ಲಿ ಅನಿವಾಸಿ ಬಂಧುಗಳ ಪಾಲ್ಗೊಳ್ಳುವಿಕೆಯ ಪ್ರಮಾಣ ವೃದ್ಧಿಯಾಗಬೇಕೆಂದು ಆಶಿಸಿದರು.
ಸಮ್ಮೇಳನದ ಆಯೋಜಕರಿಗೆ ನುಡಿದಂತೆ ನಡೆದ ಸಂತೋಷ ಮತ್ತು ಸಮಾಧಾನ. ಸ್ವಾಗತಸಮಿತಿಯ ಅಧ್ಯಕ್ಷ ಡಾ।ರಾಮಪ್ಪ ಮಾತನಾಡಿ ಪ್ರಕೃತಿಯ ವೈಪರೀತ್ಯಗಳ ಅಡಚಣೆಗಳನ್ನು ದಾಟಿ ಒಂದು ಉಲ್ಲಾಸಮಯ ಸಮ್ಮೇಳನವನ್ನು ಮಾಡಿ ಮುಗಿಸಿದ ಧನ್ಯತೆ ನಮ್ಮದು ಎಂದರು. ದೂರದ ಊರುಗಳಿಂದ ಸಮ್ಮೇಳನಕ್ಕೆ ಬಂದು ಸಂತೋಷದಲ್ಲಿ ಸಮಭಾಗಿಗಳಾದ ಸಮಸ್ತ ಕನ್ನಡಿಗರಿಗೆ ಸಮ್ಮೆಳನಾಧ್ಯಕ್ಷೆ ಡಾ।ರೇಣುಕಾ ರಾಮಪ್ಪ ಧನ್ಯವಾದಗಳನ್ನು ಅರ್ಪಿಸಿದರು. ಭಾನುವಾರ ಸಂಜೆಯ ಈ ಕಾರ್ಯಕ್ರಮವು ಕೃತಜ್ಞತೆಗಳನ್ನು ಸಲ್ಲಿಸುವ, ಸಾಧಕರಿಗೆ ಸನ್ಮಾನಿಸುವ, ತನು-ಮನ-ಧನವನ್ನು ಧಾರೆಯೆರದ ಕಾರ್ಯಕರ್ತರಿಗೆ ಥ್ಯಾಂಕ್ಸ್ ಹೇಳುವ ಸುಂದರ ಸಂಜೆಯಾಗಿ ಮಾರ್ಪಟ್ಟಿತು.


ಕರ್ನಾಟಕದಿಂದ ಆಗಮಿಸಿ ಅಮೆರಿಕನ್ನಡಿಗರನ್ನು ರಂಜಿಸಿದ ಸಾಹಿತಿಗಳು, ಕಲಾವಿದರು ಮತ್ತು ಸಹಕರಿಸಿದ ಕರ್ನಾಟಕ ಸರಕಾರದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಂತೆಯೇ ಸಮ್ಮೇಳನದ ಯಶಸ್ಸಿಗೆ ದುಡಿದ ಸ್ಥಳೀಯ ಕಾರ್ಯಕರ್ತರು ಮತ್ತು ಅಕ್ಕ ಪದಾಧಿಕಾರಿಗಳನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರು ಗಣ್ಯರು - ಡಾ।ವಿಜಯನಗರ್ ಮತ್ತು ಕೃಷ್ಣಾ ರೆಡ್ಡಿ - ಅವರಿಗೆ ‘ಅಕ್ಕ ಪ್ರಶಸ್ತಿ 2004’ ನೀಡಿ ಸನ್ಮಾನಿಸಲಾಯಿತು.
ಮಿಂಚಿದ ಅಮೆರಿಕನ್ನಡತಿ : ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಅಮೆರಿಕನ್ನಡತಿ ಸೌಂದರ್ಯ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಬಂತು. ವಿಶ್ವಸುಂದರಿ ಸ್ಪರ್ಧೆಯ ಮಾನದಂಡಗಳಿಗೆ ಅನುಗುಣವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ರೂಪಿಸಿ ಪ್ರಸ್ತುತ ಪಡಿಸಿದವರು ಕಲಾಶ್ರೀ ಸುಪ್ರಿಯಾ ದೇಸಾಯಿ. ಅಮೆರಿಕನ್ನಡತಿಯಾಗಿ ತೇಲಿ ಬಂದ ಷೋಡಶಿ - ಶೀಲಾ ಪ್ರಕಾಶ್. ಬಹುತೇಕ ಹಿರಿಯರಿಗೆ ಪ್ರಾಶಸ್ತ್ಯ ಕೊಡುವ ಸಮ್ಮೇಳನ ಯುವಜನಾಂಗವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಈ ಪ್ರಯತ್ನಕ್ಕೆ ಬರಲಿರುವ ವರ್ಷಗಳಲ್ಲಿ ಹೆಚ್ಚಿನ ಆಕರ್ಷಣೆ ಲಭ್ಯವಾಗುವ ಸಾಧ್ಯತೆಯಿದೆ.
ಸಮ್ಮೇಳನದ ಮೂರೂ ದಿನ ರುಚಿರುಚಿಯಾದ ತಿಂಡಿತೀರ್ಥ ಭಕ್ಷ್ಯಭೋಜ್ಯಗಳನ್ನು ಉಣಬಡಿಸಿದ ಅಡುಗೆಭಟ್ಟರನ್ನೂ ವೇದಿಕೆಗೆ ಕರೆತಂದು ಸನ್ಮಾನಿಸಲಾಯಿತು. ಅಡುಗೆ ಮಾಡಿ ಬಡಿಸಿದವರು ಹ್ಯೂಸ್ಟನ್‌ನ ಸತೀಶ್ ರಾವ್ ಮತ್ತವರ ನಳಬಳಗ. ಎಲ್ಲರಿಗೂ ಸನ್ಮಾನ ಮಾಡಿದ ಮೇಲೆ ಸಮ್ಮೇಳನದ ವರದಿಗಳನ್ನು ವಿಶ್ವಕನ್ನಡಿಗರಿಗೆ ಮುಟ್ಟಿಸಿದ www.thatskannada.com ಮತ್ತು ‘ವಿಜಯ ಕರ್ನಾಟಕ’ಕ್ಕೆ ಧನ್ಯವಾದಗಳನ್ನು ಹೇಳಲು ಆಯೋಜಕರು ಮರೆಯಲಿಲ್ಲ.
ಕೋಲ್ಮಿಂಚ ಸಾಲು
- ಇದೇ ಪ್ರಥಮ ಬಾರಿಗೆ ಸಮ್ಮೇಳನದಲ್ಲಿ ಒಂದು ಕನ್ನಡ ಚಲನಚಿತ್ರೋತ್ಸವವೂ ಏರ್ಪಾಡಾಗಿತ್ತು. ಚಿತ್ರಗಳ ಪ್ರದರ್ಶನ ನಡೆದ ಹಾಲ್‌ಗೆ ಕೆಂಪೇಗೌಡ ಚಿತ್ರಮಂದಿರ ಎಂಬ ಹೆಸರು ಬೇರೆ ಇತ್ತು. ಪಿ.ಶೇಷಾದ್ರಿ ನಿರ್ದೇಶನದ ಪ್ರಶಸ್ತಿ ವಿಜೇತ ಚಿತ್ರ ‘ಅತಿಥಿ’ ಚಿತ್ರೋತ್ಸವದಲ್ಲಿ ತೆರೆ ಕಂಡಿತು. ಉತ್ಸವದಲ್ಲಿ ಮತದಾನ, ಅಮೆರಿಕಾ ಅಮೆರಿಕಾ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ ಚಿತ್ರದ ಡಿವಿಡಿಗಳು ಬಿಡುಗಡೆಗೊಂಡವು. ಮಾಯಾಮೃಗ ಧಾರಾವಾಹಿ ವಿಸಿಡಿ ಕೂಡ ಇಲ್ಲಿ ಲಭ್ಯವಿತ್ತು.
- ಅಮೆರಿಕನ್ನಡಿಗರ ಪ್ರೀತಿ ಮತ್ತು ಸಿಟ್ಟಿಗೆ ಏಕಕಾಲಕ್ಕೆ ಪಾತ್ರವಾಗುವ ನಾಗತಿಹಳ್ಳಿ ಚಂದ್ರಶೇಖರ್ ಸಮ್ಮೇಳನಕ್ಕಾಗಿಯೇ ಬಂದಿದ್ದರು. ಚಿತ್ರೋತ್ಸವದಲ್ಲಿ ಪಾಲ್ಗೊಂಡು ಕನ್ನಡ ಚಿತ್ರಗಳ ಸ್ಥಿತಿಗತಿ ಡಿವಿಡಿ ಮತ್ತು ವಿಸಿಡಿಗಳ ಮಾರುಕಟ್ಟೆಯ ಅಧೋಗತಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಿದ್ದರು. ಕನ್ನಡ ಚಿತ್ರ ಚೆನ್ನಾಗಿದ್ದರೂ ಕನ್ನಡಿಗರು ಏಕೆ ನೋಡುವುದಿಲ್ಲ ಎಂದು ಅವರು ತಮಗೆ ತಾವೇ ಪ್ರಶ್ನಿಸಿಕೊಳ್ಳುತ್ತಿದ್ದರು. ಪ್ರಸ್ತುತ ಭೇಟಿಯಲ್ಲಿ ಅಮೆರಿಕದಲ್ಲಿ ಶೂಟಿಂಗ್ ಕೆಲಸಗಳಾವುವನ್ನೂ ಅಂಟಿಸಿಕೊಳ್ಳದ ನಾಗತಿಹಳ್ಳಿಗೆ ಇಲ್ಲಿ ಇನ್ನೊಂದು ಕೆಲಸವೂ ಇತ್ತು. ಅವರು ಸೌಂದರ್ಯ ಸ್ಪರ್ಧೆಗೆ ತೀರ್ಪುಗಾರರಲ್ಲೊಬ್ಬರಾಗಿದ್ದರು. ಅವರ ಮುಂದಿನ ಚಿತ್ರಕ್ಕೆ ಅಮೆರಿಕದಲ್ಲಿರುವ ಕನ್ನಡತಿಯಾಬ್ಬಳು ನಾಯಕಿಯಾಗುವ ಸಾಧ್ಯತೆಗಳುಂಟಾ?
- ಸಮ್ಮೇಳನವೇನೊ ನಡೆಯಿತು. ಆದರೆ ಇದೀಗ ತಾನೆ ಅಸ್ತಿತ್ವಕ್ಕೆ ಬಂದಿರುವ ಅಕ್ಕ ಆಡಳಿತ ಮಂಡಳಿಯ ಮೊದಲ ಸಭೆ ನಡೆಯಿತಾ? ಸಂಸ್ಥೆಯ ಮುಂದಿನ ಕಾರ್ಯಕ್ರಮಗಳ ರೂಪುರೇಷೆಯೇನು ಚರ್ಚೆಯಾಯಿತಾ? ಭಿನ್ನಾಭಿಪ್ರಾಯ ಅಳಿದುಳಿದ ಬಿಕ್ಕಟ್ಟುಗಳು ಬಗೆಹರಿದವಾ? ಕಾದು ನೋಡಬೇಕು.
- ಅಕ್ಕ ಸಂಸ್ಥೆಯ ಮೂಲ ಉದ್ದೇಶಗಳಲ್ಲಿ ಎದ್ದುಕಾಣುವ ಅಂಶ ಸ್ನೇಹಶೀಲತೆ ಮತ್ತು ಬಾಂಧವ್ಯ ವರ್ಧನೆ. ಕನ್ನಡಿಗರ ಮಧ್ಯೆ ಪರಸ್ಪರ ಸಂಬಂಧಗಳ ವರ್ಧನೆಯ ಉದ್ದೇಶವಂತೂ ಈಡೇರಿತು. ಸರಿಸುಮಾರು 1500 ಮಂದಿ ಕನ್ನಡಿಗರು ಮೂರುದಿನಗಳ ವಾರಾಂತ್ಯರಜೆಯನ್ನು ಆನಂದದಿಂದ ಕಳೆದರು. ಇದಕ್ಕೆ ಕಾರಣರಾದ ದಾನಿಗಳು, ಸ್ವಯಂಸೇವಕರು ಮತ್ತು ಕನ್ನಡದ ಬಂಟರು ಮತ್ತು ನೆಂಟರು ಅಭಿನಂದನೆಗೆ ಪಾತ್ರರು.











Click it and Unblock the Notifications