• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮೇಳನಕ್ಕೆ ಸಕಲವೂ ಸಜ್ಜು : ಒರ್ಲಾಂಡೊದಲ್ಲಿ ದಟ್ಸ್‌ಕನ್ನಡ !

By Staff
|
S.K.Shamasundara, Editor ಎಸ್‌.ಕೆ. ಶಾಮಸುಂದರ

ಕ್ಯಾಂಪ್‌ - ಫ್ಲೊರಿಡಾ

shami.sk@greynium.com

Dr. Kudur Murali‘ಅಕ್ಕ ವಿಶ್ವ ಕನ್ನಡ ಸಮ್ಮೇಳನ ’ದ ಉದ್ದೇಶವೇನು?

‘ಒರ್ಲಾಂಡೊದಲ್ಲಿ ಸೆ. 3 ರಿಂದ 5 ರವರೆಗೆ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನವು, ಜಾಗತಿಕವಾಗಿ ಸಮುದಾಯ- ಭಾತೃತ್ವದ, ಅಮೆರಿಕದಲ್ಲಿ ಕನ್ನಡ-ಕನ್ನಡಿಗ ಸಂಸ್ಕೃತಿಯ ಪುನರುತ್ಥಾನದಲ್ಲೊಂದು ಪ್ರಾಮಾಣಿಕ ಪ್ರಯತ್ನ’. ಹೀಗೆಂದವರು ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ)ದ ಚುನಾಯಿತ ಅಧ್ಯಕ್ಷ ಡಾ।ಕುದೂರು ಮುರಳಿ.

‘ದಟ್ಸ್‌ಕನ್ನಡ’ದೊಂದಿಗೆ ಮಾತನಾಡಿದ ಡಾ।ಮುರಳಿ - ಈ ಸಲ ಸಮ್ಮೇಳನದಲ್ಲಿ ಭಾಗವಹಿಸಲಿರುವ ಪ್ರತಿಯಾಬ್ಬರಿಗೂ ಅಮಿತಾನಂದವಾಗುವಂತೆ ನೋಡಿಕೊಳ್ಳುವ ಹಂಬಲವಿಟ್ಟುಕೊಂಡಿದ್ದೇವೆ. ಮೂರು ದಿನವಿಡೀ ಕನ್ನಡ ನುಡಿ-ನಡೆಯ ಜೇನಹೊಳೆಯಲ್ಲಿ ಎಲ್ಲರೂ ಮಿಂದು ಪಾವನರಾಗಬೇಕು ಎಂಬುದು ನಮ್ಮ ಆಶಯ ಎಂದರು.

ಸಮ್ಮೇಳನದ ಹೆಸರಲ್ಲಿ ಬರೀ ಮೂರು ದಿನ ಮನರಂಜನೆ-ಉತ್ಸವ-ವೈಭವಗಳಷ್ಟೇ ಅಲ್ಲದೆ ಅದರಾಚೆಗೂ ರಚನಾತ್ಮಕ ಯೋಜನೆಗಳತ್ತ ಕಾರ್ಯಪ್ರವೃತ್ತವಾಗುವ ಉದ್ದೇಶವಿದೆ. ಮಾಗ್ಸೆಸ್ಸೆ ಪ್ರಶಸ್ತಿ ವಿಜೇತ ಡಾ। ಎಚ್‌. ಸುದರ್ಶನ್‌ ಅವರು ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಜನರ ಆರೋಗ್ಯಸುಧಾರಣೆ, ಬಡಮಕ್ಕಳಿಗೆ ಶಿಕ್ಷಣ ಸೌಲಭ್ಯ ಇತ್ಯಾದಿ ಪ್ರಗತಿಪರ ಕಾರ್ಯಗಳಲ್ಲಿ ಅಕ್ಕ ತನ್ನನ್ನು ತೊಡಗಿಸಿಕೊಳ್ಳಲು ಉದ್ದೇಶಿಸಿದೆ ಎಂದು ಡಾ।ಮುರಳಿ ತಿಳಿಸಿದ್ದಾರೆ.

ಅಕ್ಕ ಸಂಸ್ಥೆಯ ಬಾಲ್ಯಾವಸ್ಥೆಯಲ್ಲಿ ಕಂಡುಬಂದಿದ್ದ ಕೆಲ ನ್ಯೂನತೆಗಳು, ಭಿನ್ನಾಭಿಪ್ರಾಯಗಳೆಲ್ಲ ಈಗ ಮರೆಯಾಗುತ್ತಿದ್ದು ಹಿಂದೆಂದಿಗಿಂತಲೂ ಹೆಚ್ಚಿನ ಹುಮ್ಮಸ್ಸು ಒಗ್ಗಟ್ಟಿನಿಂದ ಹುಮ್ಮಸ್ಸಿನಿಂದ ‘ಅಕ್ಕ’ ಮುನ್ನಡೆಯುತ್ತಿದೆ ಎಂದು ಮುರಳಿ ಅಭಿಪ್ರಾಯಪಟ್ಟರು. ಮಿಷಿಗನ್‌ ರಾಜ್ಯದ ಅವರ ಮನೆಯಿಂದ ದೂರವಾಣಿಯ ಮೂಲಕ ಈ ವರದಿಗಾರನೊಂದಿಗೆ ಮಾತಾಡಿದ ಡಾ।ಕುದೂರ್‌ ಮುರಳಿ, ಗುರುವಾರ ಸೆ.2ರಂದು ಒರ್ಲಾಂಡೊ ತಲುಪುವರು. ಸಮ್ಮೇಳನಾರ್ಥಿಗಳಿಗೆಲ್ಲ ಮತ್ತೊಮ್ಮೆ ಹಾರ್ದಿಕ ಸ್ವಾಗತವನ್ನವರು ಕೋರಿದ್ದಾರೆ.

*

ಕುದೂರು ಮುರಳಿ ಈಗ ಬಿಡುವಿರದ ವ್ಯಕ್ತಿ . ನಾಲ್ಕು ಮಾತನಾಡುವ ಹೊತ್ತಿಗೆ ಅವರಿಗೆ ಮತ್ತೊಂದು ಕರೆ. ಸಮ್ಮೇಳನದ ನೊಗ ಹೊರುವುದೆಂದರೆ ತಮಾಷೆಯಾ ? ಸರಿ, ಮುರಳಿ ಅವರನ್ನು ಅವರ ಪಾಡಿಗೆ ಬಿಟ್ಟು ಅತ್ತ ಹೊರಳಿದಾಗ ಕಂಡದ್ದು , ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌.

ಸಮ್ಮೇಳನ ನಡೆಯುವ ಸ್ಥಳ ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ ಕನ್ನಡ ಸಂಭ್ರಮಕ್ಕೆ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿದೆ. ‘ಸೂರ್ಯಪ್ರಕಾಶದ ನಾಡು’ ಎಂದು ಫ್ಲೊರಿಡಾ ರಾಜ್ಯಕ್ಕೆ ಹೆಸರಿದೆ. ಆದರೆ ಕಳೆದ ಹದಿನೈದು ದಿನಗಳಿಂದ ಚಾರ್ಲಿ ಚಂಡಮಾರುತದಿಂದಾಗಿ ಬಿಸಿಲು ನಾಪತ್ತೆಯಾಗಿದೆ. ಚಾರ್ಲಿಯ ಬೆನ್ನ ಹಿಂದೇ ಫ್ರಾನ್ಸಿನ್‌ ಎಂಬ ಇನ್ನೊಂದು ಚಂಡಮಾರುತವೂ ಫ್ಲೋರಿಡಾದ ಪೂರ್ವ-ಪಶ್ಚಿಮ ತೀರಗಳ ಮೇಲೆ ದಾಳಿಯಿಡಲು ಸನ್ನದ್ಧವಾಗುತ್ತಿದೆಯಾದರೂ ಒಳಪ್ರದೇಶವಾದ ಒರ್ಲಾಂಡೊದಲ್ಲಿ ಅದು ಅಟ್ಟಹಾಸ ತೋರದು ಎಂದೇ ಆಶಾಭಾವವಿಟ್ಟುಕೊಂಡಿದ್ದಾರೆ ಸಮ್ಮೇಳನದ ಆಯೋಜಕರು; ಹಾಗಾಗಲಿ.

ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ ಈ ರೀತಿಯ ಸಮ್ಮೇಳನಗಳಿಗೆ ಹೇಳಿಮಾಡಿಸಿದಂಥ ಸ್ಥಳ. ಇಲ್ಲಿ ಮೂಲಭೂತ ಸೌಕರ್ಯಗಳೆಲ್ಲ ಸಮರ್ಪಕವಾಗಿವೆ. ಕಳೆದ ಸಲ (2002ರಲ್ಲಿ) ಡೆಟ್ರಾಯಿಟ್‌ ಸಮ್ಮೇಳನ ನಡೆದ ಕೊಬೊ ಹಾಲ್‌ ಕೂಡ ಪ್ರಶಸ್ತವಾಗಿತ್ತಾದರೂ ಕೆಲ ಸೌಕರ್ಯಗಳ ದೃಷ್ಟಿಯಿಂದ ಕೊರತೆಯೆನಿಸಿತ್ತು. ಆ ಮಟ್ಟಿಗೆ ಗೇಲಾರ್ಡ್‌ ಪಾಮ್ಸ್‌ ರೆಸಾರ್ಟ್‌ ಬಹಳ ಉತ್ತಮವಾಗಿದೆ.

ಸಮ್ಮೇಳನ ಸ್ಥಳಕ್ಕಾಗಮಿಸುವ ಅತಿಥಿಗಳೆಲ್ಲ ಸ್ವಾಗತಕಕ್ಷೆಯಲ್ಲೇ ಯಾವತ್ತೂ ಮಾಹಿತಿ, ಕೈಪಿಡಿ, ಬ್ಯಾಡ್ಜ್‌, ಕೂಪನ್ಸ್‌ - ಎಲ್ಲವನ್ನೂ ಪಡೆಯಬಹುದಾಗಿದೆ. ಯಾವ್ಯಾವ ಸಭಾಗೃಹಗಳಲ್ಲಿ ಯಾವ ಕಾರ್ಯಕ್ರಮಗಳು ನಡೆಯುತ್ತವೆ ಇತ್ಯಾದಿ ಮಾರ್ಗದರ್ಶಿಗಳೂ ಅಲ್ಲಿರುತ್ತವೆ.

ಫ್ಲೊರಿಡಾದ ಸ್ಥಳೀಯ ‘ಶ್ರೀಗಂಧ’ ಕನ್ನಡ ಕೂಟದ ಸಹಯೋಗದೊಂದಿಗೆ ಅಕ್ಕ ಈ ಸಮ್ಮೇಳನ ನಡೆಸುತ್ತಿದೆ. ಎಲ್ಲ ದೃಷ್ಟಿಯಿಂದಲೂ ಇದೊಂದು ಅದ್ವಿತೀಯ ಸಮಾರಂಭವಾಗುವಂತೆ ಶ್ರೀಗಂಧ ಸ್ವಯಂಸೇವಕರೆಲ್ಲ ಕಳೆದ ಕೆಲ ತಿಂಗಳುಗಳಿಂದ ಅಹರ್ನಿಶಿ ದುಡಿದಿದ್ದಾರೆ, ದುಡಿಯುತ್ತಿದ್ದಾರೆ.

*

Amarnath Gowda‘ಅಕ್ಕ’ದ ಮಾಜಿ ಅಧ್ಯಕ್ಷ ಅಮರನಾಥ ಗೌಡ ಅವರೂ ಮಾತಿಗೆ ಸಿಕ್ಕಿದರು. ಮಿಷಿಗನ್‌ನ ಫಾರ್ಮಿಂಗ್ಟನ್‌ ಹಿಲ್ಸ್‌ ಮನೆಯಿಂದ ದೂರವಾಣಿಯಲ್ಲಿ ಮಾತಾಡಿದ ಅವರು, ಡೆಟ್ರಾಯಿಟ್‌ ಸಮ್ಮೇಳನದಿಂದ ಸಾಕಷ್ಟು ಕಲಿತುಕೊಂಡಿದ್ದೇವೆ. ಈಸಲ ಒರ್ಲಾಂಡೊದಲ್ಲಿ ಇನ್ನೂ ಹೆಚ್ಚು ಮುತುವರ್ಜಿ ವಹಿಸಿ, ಇನ್ನೂ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ ಸಮ್ಮೇಳನ ನಡೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಆಗಸ್ಟ್‌ 15ರ ತಾರೀಕಿನೊಳಗೆ ಸಮ್ಮೇಳನಕ್ಕೆ ನೋಂದಾಯಿಸಿದವರ ಸಂಖ್ಯೆ 2000 ತಲುಪಿದ್ದು ಇನ್ನೂ ಕೊನೆಕ್ಷಣದ ನೊಂದಾಯಿಸುವಿಕೆಯೂ ಸೇರಿದರೆ ಸಮ್ಮೇಳನಕ್ಕೆ ಒಟ್ಟು ಸುಮಾರು 3000 ಮಂದಿ ಬರುವ ಅಂದಾಜಿದೆ. ಪ್ರತಿಯಾಬ್ಬರಿಗೂ ಬ್ಯಾಡ್ಜ್‌/ಗುರುತಿನಚೀಟಿ, ಊಟೋಪಚಾರಗಳಿಗೆ ಕೂಪನ್ಸ್‌ ಇತ್ಯಾದಿ ವ್ಯವಸ್ಥೆ ಮಾಡಿದ್ದು ಗೊಂದಲ, ನೂಕುನುಗ್ಗಲು, ಅವ್ಯವಸ್ಥೆ ಮರುಕಳಿಸದಂತೆ ನಿಗಾ ವಹಿಸಿದ್ದೇವೆ ಎಂದು ಅಮರನಾಥ ಗೌಡ ಹೇಳಿದರು.

ಸದುದ್ದೇಶದಿಂದ ಕಟ್ಟಿದ ಅಕ್ಕದಂಥ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯಾಬ್ಬ ಕನ್ನಡಿಗನೂ ತೊಡಗಿಸಿಕೊಳ್ಳಬೇಕು ಎಂದವರು ವಿನಂತಿಸಿಕೊಂಡರು.

*

Dr. Renuka Ramappa‘ಒರ್ಲಾಂಡೊಗೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ’!

- ಸಮ್ಮೇಳನದ ಸಕಲ ಸಿದ್ಧತೆಗಳೆಲ್ಲ ಅಂತಿಮರೂಪು ಪಡೆದಿರುವ ಈ ಸಂಭ್ರಮ ಗಳಿಗೆಯಲ್ಲಿ ಸಮ್ಮೇಳನಾಧ್ಯಕ್ಷೆ ಹಾಗೂ ಆತಿಥೇಯರ ಮುಖ್ಯಸ್ಥೆ ಡಾ।ರೇಣುಕಾ ರಾಮಪ್ಪ ಅವರ ವಿನಮ್ರ ನುಡಿಯಿದು.

ಚಾರ್ಲಿ ಚಂಡಮಾರುತ ಬಂದುಹೋದರೇನಂತೆ, ನಮ್ಮ ಹುಮ್ಮಸ್ಸಿಗೇನೂ ಧಕ್ಕೆಯಿಲ್ಲ. ನೋಡುತ್ತಿರಿ, ಮನರಂಜನೆಯ ಭರದಲ್ಲಿ ಚಾರ್ಲಿ ಚಾಪ್ಲಿನ್‌ ಬಂದನೇನೊ ಎಂದು ನಿಮಗನಿಸಲಿದೆ, ಅಷ್ಟೂ ಇದೆ ರಸಗವಳ.... ಎಂದರು ರೇಣುಕಾ. ಶ್ರೀಗಂಧ ಕನ್ನಡಕೂಟದವರ ಅವಿರತ ಶ್ರಮದ ಫಲ ಅವರ ಈ ಆತ್ಮವಿಶ್ವಾಸ.

ಸಮ್ಮೇಳನದ ವಿಶೇಷಗಳ ಬಗೆಗೆ ರೇಣುಕಾ ಅವರು ನೀಡಿದ ಮಾಹಿತಿಗಳಿವು :

  • ಸಮ್ಮೇಳನದಲ್ಲಿ ಭಾಗವಹಿಸಲು ಕರ್ನಾಟಕದಿಂದ (ಸರಕಾರದ ಪ್ರಾಯೋಜಕತ್ವದಲ್ಲಿ) 19 ಮಂದಿ ವಿವಿಧ ಕ್ಷೇತ್ರಗಳ ಕಲಾವಿದರ ತಂಡ ಈಗಾಗಲೇ ಅಮೆರಿಕವನ್ನು ತಲುಪಿದೆ. ಉಷಾ ಗಣೇಶ್‌ ನೇತೃತ್ವದ ಈ ತಂಡದಲ್ಲಿ ಮುದ್ದುಮೋಹನ್‌ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಸರಕಾರದ ಪ್ರತಿನಿಧಿಯಾಗಿದ್ದಾರೆ. ಸಿ.ಆರ್‌.ಸಿಂಹ, ಕಸ್ತೂರಿ ಶಂಕರ್‌, ಸುಭದ್ರಮ್ಮ ಮನ್ಸೂರ್‌, ವೆಂಕಟೇಶ್‌ ಕುಮಾರ್‌, ವಸುಂಧರಾ ದೊರೆಸ್ವಾಮಿ ಮೊದಲಾದವರೆಲ್ಲ ಈ ತಂಡದಲ್ಲಿದ್ದಾರೆ.
  • ಕರ್ನಾಟಕದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಸೆಪ್ಟೆಂಬರ್‌ 4ರ ಬೆಳಿಗ್ಗೆ ವಿಧ್ಯುಕ್ತವಾಗಿ ಸಮ್ಮೇಳನದ ಉದ್ಘಾಟನೆ ನಡೆಸಲಿದ್ದಾರೆ. ಖ್ಯಾತ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರಿಂದ ಮುಖ್ಯ ಅತಿಥಿಗಳ ಭಾಷಣವಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಈಗಾಗಲೇ ಅಮೆರಿಕ ತಲುಪಿದ್ದು ಸಮ್ಮೇಳನದ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಈ ಹಿಂದಿನ ಎರಡೂ ಸಮ್ಮೇಳನಗಳ ವೇಳೆ ಪದವಿಯಲ್ಲಿದ್ದಾಗ, ವೀರಪ್ಪನ್‌ ಪ್ರಕರಣ ಮತ್ತು ನಾಗಪ್ಪ ಹತ್ಯೆಯಿಂದಾಗಿ ಕೃಷ್ಣ ಅವರು ಅಮೆರಿಕಯಾತ್ರೆಯನ್ನು ರದ್ದುಪಡಿಸಬೇಕಾಗಿ ಬಂದದ್ದನ್ನು ಇಲ್ಲಿ ಸ್ಮರಿಸಬಹುದು.
  • ಉಪಮುಖ್ಯಮಂತ್ರಿಯ ಜತೆಯಲ್ಲೇ ಕರ್ನಾಟಕ ಸರಕಾರದ ಪ್ರಧಾನ ಕಾರ್ಯದರ್ಶಿ ಮಿಶ್ರಾ ಅವರೂ ಸಭೆಯನ್ನಲಂಕರಿಸುತ್ತಾರೆ. ಅಮೆರಿಕದಲ್ಲಿ ಭಾರತದ ರಾಯಭಾರಿ ರೊಮೆನ್‌ ಸೇನ್‌ ಕೂಡ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ನಿವೃತ್ತ ನ್ಯಾಯಮೂರ್ತಿ ಎಮ್‌ ಎನ್‌ ವೆಂಕಟಾಚಲಯ್ಯ ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಬೇಕಿತ್ತು . ಆದರೆ ಕೇಂದ್ರ ಸರಕಾರದ ಹಸಿರುನಿಶಾನೆ ಅವರಿಗೆ ದೊರೆತಿಲ್ಲವಾದ್ದರಿಂದ ಅವರು ಬರುತ್ತಿಲ್ಲ. ಫ್ಲೊರಿಡಾ ಸಂಸ್ಥಾನದ ಆಟಾರ್ನಿ ಜನರಲ್‌ ಚಾರ್ಲಿ ಕ್ರಿಸ್ಟ್‌ ಅವರು ಸಮ್ಮೇಳನದಲ್ಲಿ ನಡೆಯುವ ವಾಣಿಜ್ಯ-ವ್ಯವಹಾರ ಕಮ್ಮಟದಲ್ಲಿ ಮಾತನಾಡಲಿದ್ದಾರೆ.
  • ಮನರಂಜನೆಯ ಮಹಾಪೂರವನ್ನು ಹರಿಸಲಿರುವ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ತಂಡದ ರಸಮಂಜರಿ ಕಾರ್ಯಕ್ರಮ ಶನಿವಾರದಂದು ಇದೆ. ಶುಕ್ರವಾರ 3ರ ಸಂಜೆಯ ಹೊತ್ತಿಗೆ ಸಮ್ಮೇಳನಾರ್ಥಿಗಳೆಲ್ಲ ದೂರದೂರುಗಳಿಂದ ಬಂದು ಸೇರುತ್ತಾರೆ. ಅಂದು ಸಂಗೀತಾಕಟ್ಟಿಯವರ ಸುಗಮಸಂಗೀತ ಕಾರ್ಯಕ್ರಮ ಇರುತ್ತದೆ.

ಸೀ-ವರ್ಲ್ಡ್‌ ಸಹಯೋಗದೊಂದಿಗೆ ಆಯೋಜಿಸಬೇಕೆಂದಿದ್ದ ಜಲಕ್ರೀಡೆ (ವಾಟರ್‌ಸ್ಪೋರ್ಟ್‌) ಮನರಂಜನೆ ಕಾರ್ಯಕ್ರಮವನ್ನು ಪ್ರತಿಕೂಲ ಹವಾಮಾನದಿಂದಾಗಿ ರದ್ದುಪಡಿಸಬೇಕಾಗಿದೆ ಎಂದು ಡಾ।ರೇಣುಕಾ ಖೇದ ವ್ಯಕ್ತಪಡಿಸಿದರು.

*

Indira Shastryಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಒಂದು ಪಕ್ಷಿನೋಟ ತೋರಿದವರು ಆ ವಿಭಾಗದ ಹೊಣೆಹೊತ್ತ ಇಂದಿರಾ ಶಾಸ್ತ್ರಿಯವರು. ಕರ್ನಾಟಕದಿಂದಾಗಮಿಸಿದ ಮತ್ತು ಅಮೆರಿಕದ ಸ್ಥಳೀಯ ಕಲಾವಿದ-ಪ್ರತಿಭಾವಂತರ ದೊಡ್ಡ ಪಟ್ಟಿಯೇ ಇದ್ದು ಎಲ್ಲ ಕನ್ನಡಕೂಟಗಳ, ಪ್ರದೇಶಗಳ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ಶುಕ್ರವಾರ ಸೆ.3 ರ ಸಂಜೆ ’ಕವಿ ಸಮರ್ಪಣೆ’ ಎಂಬ ಭಾವಪೂರ್ಣ ಪ್ರಸ್ತುತಿಯಲ್ಲಿ ಕುವೆಂಪು ನಮನ ನಡೆಯಲಿದೆ. ಮುದ್ದು ಮೋಹನ್‌, ಸುಭದ್ರಮ್ಮ ಮನ್ಸೂರ್‌, ವೆಂಕಟೇಶ್‌ ಕುಮಾರ್‌ ಮತ್ತು ಸಂಗೀತಾ ಕಟ್ಟಿ - ಇವರೆಲ್ಲರ ಕಂಠಸಿರಿಯ ರಸಧಾರೆಯಲ್ಲಿ ಸಭಿಕರೆಲ್ಲ ಪುಳಕಿತರಾಗಲಿದ್ದಾರೆ. ಕ್ಯಾಲಿಫೋರ್ನಿಯಾದ ‘ಆರತಿ’ ಆರ್ಕೆಸ್ಟ್ರಾ ತಂಡದವರು ನಡೆಸಿಕೊಡುವ ‘ಮನ ಮೆಚ್ಚಿದ ಗೀತೆಗಳು’ ಕಾರ್ಯಕ್ರಮವನ್ನಂತೂ ತಪ್ಪಿಸಿಕೊಳ್ಳಬೇಡಿ ಎಂದು ಕಣ್ಣರಳಿಸುತ್ತಾರೆ ಇಂದಿರಾ ಶಾಸ್ತ್ರಿ.

ಶನಿವಾರ ಬೆಳಿಗ್ಗೆ ಎಲ್ಲ ಕನ್ನಡಕೂಟಗಳೂ ಭಾಗವಹಿಸುವ ಭವ್ಯ ಮೆರವಣಿಗೆಯಿದೆ. ಕನ್ನಡ-ಕರ್ನಾಟಕ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ತಬ್ಧ ಚಿತ್ರಗಳು, ವೇಷಭೂಷಣಗಳು, ಸಂಗೀತವಾದ್ಯಗಳು ನೋಡುಗರ ಮನತಣಿಸಲಿವೆ. ಸ್ವತಃ ಇಂದಿರಾ ಶಾಸ್ತ್ರಿಯವರೇ ನಿರ್ಮಿಸಿ ನಿರ್ದೇಶಿಸಿದ ‘ಕೃಷ್ಣ ದೇವರಾಯ ದಿಗ್ವಿಜಯ’ ದೃಶ್ಯರೂಪಕವೂ ಮೆರವಣಿಗೆಯ ಒಂದು ಪ್ರಮುಖ ಆಕರ್ಷಣೆಯಾಗಲಿದೆ ಎನ್ನುವುದನ್ನು ಹೇಳಲು ಅವರು ಮರೆಯುವುದಿಲ್ಲ !

ಕರ್ನಾಟಕ ಸಂಸ್ಕೃತಿಯ ಸಕಲ ವೈಭವಗಳ ಪ್ರತೀಕವಾಗಲಿರುವ ಈ ಭುವನೇಶ್ವರಿ ಮೆರವಣಿಗೆಯನ್ನು ನೀವು ಮಿಸ್‌ ಮಾಡಬಾರದೆಂದಾದರೆ ಶುಕ್ರವಾರ ಸಂಜೆಯಾಳಗೇ ಸಮ್ಮೇಳನ ಸ್ಥಳವನ್ನು ಸೇರುವಂತೆ ನಿಮ್ಮ ಪ್ರಯಾಣವನ್ನು ಯೋಜಿಸುವುದೊಳಿತು.

*

ಅಂದಹಾಗೆ, ಸಮ್ಮೇಳನಕ್ಕೆ ಹೊರಟಿರಾ ? ಹೌದಾದರೆ ಸಮ್ಮೇಳನ ಸ್ಥಳದಲ್ಲಿ ಭೇಟಿಯಾಗುವ. ಊರಲ್ಲೇ ಉಳಿದರೆ, ದಟ್ಸ್‌ಕನ್ನಡ ನಿಮಗೆ ಸಮ್ಮೇಳನ ದರ್ಶನ ಮಾಡಿಸಲಿದೆ. ದಟ್ಸ್‌ಕನ್ನಡ ಟೀಂನ ಒಂದು ಕವಲು ಈಗಾಗಲೇ ಫ್ಲಾರಿಡಾದಲ್ಲಿ ಬೇರೂರಿದೆ. ಬೆಂಗಳೂರಿನ ಕಚೇರಿ ಹಾಗೂ ಬಳಗಕ್ಕೆ ಈ ಬಾರಿ ಶನಿವಾರ ಮಾತ್ರವಲ್ಲ , ಭಾನುವಾರವೂ ರಜೆಯಿಲ್ಲ . ಕನ್ನಡ ಸಂಭ್ರಮ ದೊಡ್ಡದು.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more