ಬಾಯಿ ಸೊಟ್ಟ ಮಾಡ್ಕೊಂಡು, ನಾಲಿಗೆ ಹೊರ್ಗಡೆ ಚಾಚ್ಕೊಂಡು!

By: ನಾಗರಾಜ್ ಎಂ., ಕನೆಕ್ಟಿಕಟ್
Subscribe to Oneindia Kannada

ಎದುರಿಗಿದ್ದ ಗಡಿಯಾರ ನೋಡಿದ್ರೆ... ಆಗ್ಲೇ ಒಂಬತ್ತು ಗಂಟೆ ತೋರಿಸ್ತಿತ್ತು...
ಇವತ್ತೂ ಆಫೀಸಿಗೆ ಲೇಟ್... ಹಿಂಗೇ ಆದ್ರೆ ಒಂದಿನ ತೋರಿಸ್ತಾರೆ ಗೇಟ್!

ಅಂತ ಅಂದುಕೊಳ್ತಾ ಭರಭರನೇ ಶರ್ಟು, ಪ್ಯಾಂಟು ಹಾಕೋಳ್ತಾನೆ, ತಯಾರಾಗಿದ್ದ ದೋಸಾ ತಿಂತಾ ಇರೋವಾಗ... ಮೊನ್ನೆ ತಾನೇ ಹಳ್ಳಿಯಿಂದ ಬಹಳ ವರುಷಗಳಾದ ಮೇಲೆ ನನ್ನ ನೋಡಲೆಂದು ಬೆಂಗಳೂರಿಗೆ ಬಂದಿದ್ದ ನನ್ನ ಅಜ್ಜಿ ತುಳಿಸಿ ಕಟ್ಟೆ ಸುತ್ತುತ್ತಾ ಊದಿನ ಕಡ್ಡಿ ಬೆಳಗುತ್ತಿದ್ದುದು ಹಾಗೆ ಕಿಟಕಿಯಲ್ಲಿ ಕಂಡಿತ್ತು.

ಅಜ್ಜಿ ಮಾಡಿದ ಅಡುಗೆ ಸೂಪರ್ ಅಂತ ಮನದಲ್ಲೇ ಅಂದುಕೊಂಡು ಶೂ ಹಾಕಿ ಕೊಳ್ಳಲು ಬಗ್ಗಿ ಇನ್ನೇನು ಹಾಕ್ಕೋಬೇಕು ಅನ್ನೋಷ್ಟರಲ್ಲಿ... ಅಜ್ಜಿ "ಲೋ ಮಗ... ಬೇಗ ಬಾರೋ" ಅಂತ ಜೋರಾಗಿ ಚೀರಿದಾಗ... ಒಮ್ಮೆಲೇ ಹೆದರಿಕೆ, ಭಯವಾಗಿ... "ಅಯ್ಯೋ ಅಜ್ಜಿಗೆ ಏನಾರ ಆಯ್ತಾ, ಅಯ್ಯೋ" ಅಂತ ಕೈಯಲ್ಲಿದ್ದ ಶೂಸ್ ಬಿಸಾಕಿ ಓಡಿದ್ದೆ ಬಾಗಿಲೆಡೆ "ಏನಾಯಿತು ಅಜ್ಜಿ..." ಅಂತ ಕೇಳ್ತಾ ಗಾಬರಿಯಿಂದ.

Grand mother and selfie by beautiful girl

"ನಂಗೆ ಏನು ಆಗಿಲ್ಲ ಕಣೋ... ಪಕ್ಕದ ಮನೆ ಹುಡುಗಿಗೆ ಫಿಟ್ಸ್ ಬರುತ್ತಾ ಇದೆ, ಮುಖ ತಿರುವುತ್ತಾ ಇದ್ದಾಳೆ, ಬಾಯಿ ತುಟಿ ಸೊಟ್ಟ ಮಾಡ್ಕೋತ ನಾಲಿಗೆ ಹೊರ ಚಾಚ್ತಾ ಇದಾಳೆ... ಕಣ್ಣು ಗುಡ್ಡೆ ಆಕಡೆ ಒಮ್ಮೆ, ಈ ಕಡೆ ಒಮ್ಮೆ ತಿರುಗುಸ್ತಾ ಇದಾಳೆ..." ಅಜ್ಜಿ ಜೋರಾಗಿ ಕೂಗಿ ಹೇಳಿದಾಗ... ಇನ್ನೇನು ಹೊರಬಾಗಿಲ ಹೊಸ್ತಿಲ ದಾಟುತ್ತಿದ್ದವ ಹಾಗೆ ಥಟ್ ಅಂತ ನಿಂತಿದ್ದೆ!

ಅಲ್ಲೇ ನಿಂತುಕೊಂಡು ಉಸ್ಸಪ್ಪ ಅಂತ ಏದುಸಿರು ಬಿಟ್ಟು... ಸಮಾಧಾನದಿಂದಲೇ ಅಜ್ಜಿಗೆ ಕೇಳಿದ್ದೆ "ಆ ಹುಡುಗಿ ಕೈಯಲ್ಲಿ ಏನಿದೆ ನೋಡಜ್ಜಿ" ಅಂತ.

"ಏನೋಪ್ಪ... ನಂಗೆ ಅಷ್ಟೊಂದು ಕ್ಲಿಯರ್ ಆಗಿ ಕಾಣಿಸ್ತಿಲ್ಲ... ಏನೋ ಇದ್ದಂಗೆ ಇದೆ... ಬೇಗ ನೀನಾದ್ರೂ ಕಬ್ಬಿಣ, ಬೀಗದ ಕೈ ಏನಾರ ಸಿಕ್ರೆ ಬೇಗ ತೊಗೊಂಡು ಬಾ" ಅಜ್ಜಿ ಹೇಳಿದಾಗ...

ಹೊರಗಡೆ ಬಂದು ಹೇಳಿದ್ದೆ "ಅಯ್ಯೋ ಅಜ್ಜಿ... ಅದು ಫಿಟ್ಸ್ ಅಲ್ಲ, ಅವಳು ಸೆಲ್ಫಿ ತಗೋತಿದಾಳೆ. ಅವಳ ಕೈಯಲ್ಲಿರೋದು ಮೊಬೈಲ್ ಫೋನ್... ಅದರಲ್ಲಿ ಅವಳೇ, ಅವಳ ಚಿತ್ರ ವಿಚಿತ್ರ ಭಂಗಿಯಲ್ಲಿ ಫೋಟೋ ತೇಗೋತಿದ್ದಾಳೆ... ನೀನು ಏನು ಗಾಬರಿ ಮಾಡ್ಕೋಬೇಡ" ಅಂತ ಹೇಳಿ ಸಮಾಧಾನ ಮಾಡಿ ಹೇಳಿದಾಗ... ಇನ್ನು ಒಂದು ರೌಂಡ್ ತುಳಸಿ ಕಟ್ಟೆಗೆ ಹೆಚ್ಚಿನ ರೌಂಡ್ ಹಾಕಿ "ಶಾಂತಂ ಪಾಪಂ" ಅಂತ ಅಜ್ಜಿ ತಿರುಗಿದಾಗ...

ನಾ ಕೇಳಿದ್ದೆ "ಅವಳ ಹೆಸರು ನಿಂಗೆ ಹೆಂಗೆ ಗೊತ್ತಾಯ್ತು ಅಜ್ಜಿ?" ಅಜ್ಜಿ ನನ್ನ ಕಡೆನೇ ನೋಡಿ "ಅಂದ್ರೆ?..." "ಅಂದ್ರೆ ಅವಳ ಹೆಸರು ಶಾಂತ... ಅದಕ್ಕೆ ಕೇಳ್ದೆ" ... ತಡವರಿಸ್ತಾನೆ ನಾ ನುಡಿದಿದ್ದೆ!

"ಓಹ್ ಹಂಗಾ ..ಯಾವದಕ್ಕೂ ನೀ ಹುಷಾರು ಮಗ... ನಿನ್ನ ಮೇಲೆ ಏನಾರ ಮೋಡಿಗೀಡಿ ಮಾಡ್ಯಾಳು?" ಅಂತ ಗೊಣಗುತ್ತಲೇ... ಅಜ್ಜಿ ಒಳಗಡೆ ಹೋಗಿದ್ದರು. ಸರಿ ಅಜ್ಜಿ... "ನಾ ಆಫೀಸಿಗೆ ಹೋಗಿ ಬರ್ತೀನಿ" ಅಂತ ಹೇಳಿ ಗೇಟ್ ಹಾಕೊಂಡು ಮುಂದೆ ಹೆಜ್ಜೆ ಇಟ್ಟಾಗ "ಹೇ ನಾಗ್... ಹೆಂಗಿದೆ ನನ್ನ ಹೊಸ ಮೊಬೈಲು?" ಅಂತ ಶಾಂತಾ ತುಸು ಹತ್ತಿರಾನೆ ಬಂದು ಕೇಳಿದಳು.

ಮನದಲ್ಲಿ ಒಂತರಾ ಖುಷಿಯಾದ್ರೂ... ಅಜ್ಜಿ ಗಿಜ್ಜಿ ಏನಾರ ನೋಡಿಬಿಟ್ರೆ... ಹೋಗಿ ಊರಲ್ಲಿ ಅಪ್ಪ-ಅಮ್ಮನ ಮುಂದೆ ಫಿಟ್ಟಿಂಗು ಏನಾರ ಇಟ್ಬಿಟ್ರೆ ..ಏನ್ ಗತಿ? ಅಂತ ಅಂದುಕೊಳ್ಳುತ್ತಲೇ... "ಓಹ್ ಸೂಪರ್ ಇದೆ..." ಅಂತ ಪಟಪಟನೆ ಹೇಳಿ ಬೈಕ್ ಒಂದೇ ಕಿಕ್ಕಿಗೆ ಸ್ಟಾರ್ಟ್ ಮಾಡಿ ಬರ್ರ್ ಅಂತ ಓಡಿಸಿದ್ದೆ.

"ಹೇ ನಾಗ್ ..wait ..ವಿಲ್ ಶೋ ಮೈ new pics.. ಸರಿ ಬಿಡು... ಮೆಸೇಜ್ ನಲ್ಲಿ ಕಳಿಸ್ತೀನಿ... ಆಫೀಸ್ನಲ್ಲೆ ನೋಡಿ... ಮೆಸೇಜ್ ಮಾಡು ಹೆಂಗಿವೆ" ಅಂತ ಅವಳಂದಿದ್ದು ಕೇಳಿತ್ತು.

"ಅಜ್ಜಿಗೂ ಒಂದು ಮೊಬೈಲ್ ಕೊಡಿಸಿ... ಅದರಲ್ಲಿ ಅಜ್ಜಿ selfie ಫೋಟೋ ತಗೊಂಡು, ಅಜ್ಜನಿಗೆ ಏನಾರ ಕಳಿಸಿದ್ರೆ (ಬಾಯಿ ಗೀಯಿ ಸೊಟ್ಟ ಮಾಡಿಕೊಂಡು.. ಆ ಶಾಂತಳ ಹಾಗೆ... ಪಾಪ ಹಲ್ಲಿಲ್ಲದ ಬೊಚ್ಚು ಬಾಯಲ್ಲೇ... ಊರಲ್ಲಿರೋ ಮೊಮ್ಮಕ್ಕಳೊಂದಿಗೆ ಕುಳಿತು ಕುಲ್ಫಿ ತಿಂತಾ ಇರೋ ಅಜ್ಜ.. ಏನಾರ ಗಾಬರಿ ಮಾಡ್ಕೊಂಡು ಏನಾರ ಆಗ್ಬಿಟ್ರೆ...?

ಹಾಗೇ ಬಂದ ಯೋಚನೆಗೆ ನನ್ನಷ್ಟಕ್ಕೆ ನಾನೇ ನಕ್ಕು ಬೈಕ್ ಪಾರ್ಕು ಮಾಡಿ ಒಳಗಡೆ ಹೆಜ್ಜೆ ಇಟ್ಟಾಗ, ಉರಿ ಮುಖದಲ್ಲಿ ನಿಂತಿದ್ದ ಬಾಸ್ ನೋಡಿ... ನನ್ನ ಬಾಯಲ್ಲೂ ನನಗರಿವಿಲ್ಲದಂತೆ "ಶಾಂತಂ ಪಾಪಂ.. ಕಷ್ಟ ನಿವಾರಣಂ" ಅಂತ ಕೇಳಿ ಬಂದಿತ್ತು!

ಬಾಯಿ ಸೊಟ್ಟ ಮಾಡ್ಕೊಂಡು
ನಾಲಿಗೆ ಹೊರಗಡೆ ಚಾಚ್ಕೊಂಡು
ಕಣ್ಣುಗಳ ಆಕಡೆ - ಈಕಡೆ ತಿರುಗಿಸ್ಕೊಂಡು
ಇರೋ ಹುಡುಗಿ ನಿಮಗೆ ಏನಾರ ಕಾಣಿಸ್ಕೊಂಡು
ಬಂದ್ರೆ... ಒಮ್ಮೆಲೇ ಗಾಬರಿಯಾಗದೆ
ನೋಡಿ ಏನಿಡಿದೆ, ಅವಳ ಕೈ...
ಯಾವದಕ್ಕೂ ನೀವೂ ರೆಡಿ
ಆಗಿರಿ... ಕೊಡಲು ಕೈ...! (ಅಂದ್ರೆ ಕಬ್ಬಿಣದ ಬೀಗದ ಕೈ...)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Grand mother and selfie by beautiful girl, a Kannada short story by Nagaraja Maheswarappa, Connecticut, USA.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ