ಧರ್ಮಕ್ಕೆ ದಟ್ಟಿ ಕೊಟ್ಟರೆ ...


ಧರ್ಮಕ್ಕೆ ದಟ್ಟಿ ಕೊಟ್ಟರೆ ...
(ಈ ಕವನವು ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ‘ ಸ್ವರ್ಣಸೇತು’ವಿನ 2005ನೆಯ ಇಸವಿಯ ಸಂಚಿಕೆಯಲ್ಲಿ ಮೊದಲಬಾರಿಗೆ ಪ್ರಕಟಿಸಲಾಗಿದೆ. ಅಂತರ್ಜಾಲದಲ್ಲಿ ಓದುವವರಿಗೂ ಇದರಲ್ಲಿ ಆಸಕ್ತಿಯಿರಬಹುದೆಂದು ಇಲ್ಲಿ ಪುನಃ ಪ್ರಕಟಿಸಲಾಗಿದೆ. -ಸಂಪಾದಕ)
Ramapriyan
  • ಹಂ. ಕ. ರಾಮಪ್ರಿಯನ್‌, ಕ್ಲಾರ್ಕ್ಸ್‌ವಿಲ್‌, ಮೇರಿಲ್ಯಾಂಡ್‌
    [email protected]
ಧರ್ಮಕೆ ಕೊಟ್ಟಿಹ ದಟ್ಟಿಯ ಹಿತ್ತಲೊಳೇತಕೆ ನೀ ಮೊಳ ಹಾಕುತಿಹೆ?
ಉಡುಗೊರೆಯೆನ್ನುತ ಸೀರೆಯ ಕೊಟ್ಟಿರಲೇತಕೆ ಜರಿಯನ್ನಳೆಯುತಿಹೆ?

ಧರ್ಮಕೆ ಕೊಟ್ಟಿಹ ದನವನು ಮನೆಯಲಿ ಕಟ್ಟುತ ಹಾಲನು ನೀ ಕರೆದು
ದಿವಸಕೆ ನಾಲ್ಕೇ ಲೀಟರ ಕೊಡುವುದು ಎನ್ನುತಲೇತಕೆ ಬಯ್ಯುತಿಹೆ? ... ಧರ್ಮಕೆ ...

ಧರ್ಮಕೆ ಕೊಟ್ಟಿಹ ಕುದುರೆಯ ಬಯಲಲಿ ಸವಾರಿಮಾಡಲು ನೀ ಹಿಡಿದು
ಕುದುರೆಯ ಬಾಯನು ತೆರೆಯುತಲಿಣುಕುತ ಹಲ್ಗಳನೇತಕ್ಕೆಣಿಸುತಿಹೆ? ... ಧರ್ಮಕೆ ...

‘ಕುಳ್ಳಿರಿ’ ಎನ್ನುತಲೇಳುತ ತುಂಬಿಹ ಬಸ್ಸಲಿ ಜಾಗವ ಕೊಟ್ಟವನ
ತೆಳ್ಳಗಿರುವನಿವನಿಷ್ಟೇ ಜಾಗವ ಕೊಟ್ಟಿಹನೆಂದೇಕೆನ್ನುತಿಹೆ? ... ಧರ್ಮಕೆ ...

ಭಾರಿಯೌತಣವ ತಿಂದು ತೇಗುತಲಿ ಮದುವೆಯ ಮನೆಯಿಂ ಹಿಂದಿರುಗಿ,
ಸಾರಿಗೆ ಉಪ್ಪೇ ಸಾಲದೆ ಹೋಗಿತ್ತೆನ್ನುತಲೇತಕೆ ಹೇಳುತಿಹೆ? ... ಧರ್ಮಕೆ ...

ಬಂತು ಪರೀಕ್ಷೆಯು ಎನ್ನುತ ಗುರುಗಳು ಬಿಟ್ಟಿಯ ಪಾಠವ ಹೇಳುತಿರೆ,
ತುಂತುರಿನೆಂಜಲ ಸುರಿಸುವರೆನ್ನುತ ಹಾಸ್ಯವನೇತಕೆ ಮಾಡುತಿಹೆ? ... ಧರ್ಮಕೆ ...

ರಜೆಯಲಿ ತಿಂಗಳಿಗೂರಿಗೆ ಹೋಗಿರೆ ನೆರೆಯವ ಹುಲ್ಲನು ಕತ್ತರಿಸೆ,
ಅಂಚನು ನೆಟ್ಟಗೆ ಮಾಡದೆ ಬಿಟ್ಟಿಹನೆನ್ನುತಲೇತಕೆ ಗೊಣಗುತಿಹೆ? ... ಧರ್ಮಕೆ ...

ಭಾರದ ಸಾಮಾನುಗಳನು ಕಾರಲಿ ಹಾಕಲು ನೆರವನ್ನಿತ್ತವನ,
‘ಕಾರನ್ನೇತಕೆ ಕೊಳೆಮಾಡಿದೆಯೋ?’ ಎನ್ನುತಲೇತಕೆ ಬಯ್ಯುತಿಹೆ? ... ಧರ್ಮಕೆ ...

ಬಿದ್ದಿಹ ಹಿಮವನು ತಳ್ಳಲು ಪಕ್ಕದ ಮನೆಯವ ನೆರವನು ನೀಡಿದೊಡೆ,
ಅರ್ಧ ಕೆಲಸವನೆ ಮಾಡಿಹೋದನವನೆನ್ನುತಲೇತಕೆ ಗೊಣಗುತಿಹೆ? ... ಧರ್ಮಕೆ ...

ಮುಳುಗುತ ನೀರಲಿ ‘ಅಯ್ಯೋ!’ ಎಂದಿರೆ ಸೆಳೆಯುತ ಬದುಕಿಸಿಕೊಟ್ಟವನ,
‘ತೋಳನ್ನೇತಕ್ಕುಳುಕಿಸಿಬಿಟ್ಟೆಯಾ?’ ಎನ್ನುತಲೇತಕೆ ಜರೆಯುತಿಹೆ? ... ಧರ್ಮಕೆ ...

ಊಟಬಟ್ಟೆಗಳನೆಡೆಯನು ದೇವರು ಹೇರಳವಾಗಿಯೆ ಕೊಟ್ಟಿರಲು
‘ಆತಂಗಷ್ಟೊಂದೆನಕೇಗಿಷ್ಟೇ?’ ಎನ್ನುತಲೇತಕೆ ಗೊಣಗುತಿಹೆ? ... ಧರ್ಮಕೆ ...


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+