ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ಯಾನ್‌ ನೀಡಿದ ಮುತ್ತಿನ ಮತ್ತಿನಲ್ಲಿ ಅನು!

By Staff
|
Google Oneindia Kannada News


ರೂಪಾಳ ನೆನಪು ಬಂದು, ತಾನು ತಪ್ಪಿತಸ್ಥೆ ಎಂಬ ಭಾವನೆ ಅನೂಳಿಗೆ ಮರುಕಳಿಸಿತು. ಅಲ್ಲಿ ಆ ಹೆಣ್ಣು ತನ್ನ ಜೀವಕ್ಕೆ ಹೆದರಿಕೊಂಡಿರುವಾಗ ಇಲ್ಲಿ ಇವಳು ಡ್ಯಾನ್‌ನನ್ನು ನೆನೆಸಿಕೊಳ್ಳುತ್ತ ಭಾವಾವೇಶದಲ್ಲಿ ಮುಳುಗೇಳುತ್ತಿದ್ದಾಳೆ. ಅವಳ ವಿಷಯ ಡ್ಯಾನ್‌ಗೆ ಹೇಳಬೇಕೆ? ದೀಪಕ್‌ನ ಬಳಿ ಗನ್‌ ಇರುವ ವಿಷಯವನ್ನೂ ಹೇಳಬೇಕೆ?

ಆದರೆ ಇವತ್ತು ಡ್ಯಾನ್‌ಗೆ ರಜಾ. ಅವನಿಗೆ ಇವತ್ತು ಇವೆಲ್ಲ ಹೇಳುವುದು ಬೇಡ. ಏನೇ ಇರಲಿ, ರೂಪ ಅಲ್ಲಿಂದ ಬಿಟ್ಟು ಬರಲು ಸಿದ್ದಳಿಲ್ಲ. ಅವಳಿಗೆ 911 ಕರೆ ಮಾಡಲು ಅನು ಹೇಳಿದ್ದಳು. ಸಹಾಯಕ್ಕಾಗಿ ಏನು ಮಾಡಬೇಕು ಎಂದು ಈಗ ಅವಳಿಗೆ ಗೊತ್ತಾಗಿದೆ. ಅದಕ್ಕಿಂತ ಹೆಚ್ಚಾಗಿ ಇವಳು ತಾನೆ ಏನು ಮಾಡಲು ಸಾಧ್ಯ?

ಮಾತನಾಡುವಾಗ, ತಮ್ಮ ಮನೆಯವರು ಬಡವರು ಎಂದು ರೂಪ ಹೇಳಿದ್ದಳು. ದೀಪಕ್‌ನಂತಹವರು ತಮ್ಮ ಮಗಳ ಕೈಹಿಡಿಯುವ ಪ್ರಸ್ತಾಪದೊಂದಿಗೆ ಮನೆಯ ಬಾಗಿಲಿಗೆ ಬಂದಾಗ ಅನೂಳಂತಹವರು ಅವನ ಬಗ್ಗೆ ಏನು ಹೇಳಿದ್ದರೂ ಸಹ ಜನ ಅದನ್ನು ನಂಬುವುದಿಲ್ಲ. ಇದು ಎಲ್ಲಾ ಸಮಯದಲ್ಲಿಯೂ ಆಗುವುದೆ ಎಂದು ಅನು ವಿಚಾರ ಮಾಡಿದಳು. ವರ ಅಮೇರಿಕಾದಿಂದ ಬರುತ್ತಾನೆ. ಹತ್ತು ದಿನಗಳ ನಂತರ, ಅವನ ಯಾವೊಂದು ಹಿನ್ನೆಲೆಯನ್ನೂ ಪರೀಕ್ಷೆ ಮಾಡದೆ, ಮದುವೆ ಮುಗಿದುಹೋಗಿರುತ್ತದೆ.

ಇದಕ್ಕೆಲ್ಲ ತಾನೇ ಹೊಣೆ ಎಂದು ಯಾವಾಗಲೂ ಭಾವಿಸಿಕೊಳ್ಳುವುದನ್ನು ಬಿಟ್ಟು ಅನು ತನ್ನ ಬದುಕಿನೊಂದಿಗೆ ತಾನು ಮುಂದುವರಿಯ ಬೇಡವೆ? ಅವಳಲ್ಲಿನ ತಪ್ಪಿತಸ್ಥೆ ಭಾವನೆ ಮತ್ತೊಮ್ಮೆ ಅವಳಲ್ಲೆದ್ದ ಅಸಮಧಾನದೊಂದಿಗೆ ಗುದ್ದಾಡುತ್ತಿರುವುದು ಅವಳ ಅರಿವಿಗೆ ಬಂದಿತು. ಡ್ಯಾನ್‌ನೊಂದಿಗಿನ ಪ್ರೀತಿ ಪ್ರೇಮದ ಭಾವನೆಗಳಲ್ಲಿ ಮುಳುಗಿ ಬೇರೆಯವರ ಸಮಸ್ಯೆಗಳನ್ನೆಲ್ಲ ಮರೆತುಬಿಡಲು ಅವಳು ಬಯಸಿದಳು.

ಬಾಗಿಲ ಕರೆಗಂಟೆ ಶಬ್ದ ಮಾಡಿತು. ಅವನು ಕೈಯಲ್ಲಿ ಹೆಲ್ಮೆಟ್‌ ಹಿಡಿದು ಬಾಗಿಲ ಮುಂದೆ ನಿಂತಿದ್ದ. ಒಳ್ಳೆಯ ಮೈಕಟ್ಟಿನ, ಶಕ್ತಿಶಾಲಿ ಆಸಾಮಿ ಅವನು. ಡ್ಯಾನ್‌ನನ್ನು ಬಿಟ್ಟು ದೀಪಕ್‌ನನ್ನು ಆರಿಸಿಕೊಂಡು ಅವಳು ಎಂತಹ ತಪ್ಪು ಮಾಡಿಬಿಟ್ಟಳು!

‘‘ಹಾಯ್‌ು, ಅನು. ನೀನು ರೆಡಿಯಾ? ’’

ಅವಳು ಮೊದಲೆ ಸಿದ್ಧಳಾಗಿದ್ದಳು. ಆದರೆ ಈಗ ಸ್ವಲ್ಪ ತಮಾಷೆ ಮಾಡಲು ಬಯಸಿದಳು. ‘‘ಇಲ್ಲ. ಬರುವ ಮೊದಲು ಕರೆ ಮಾಡುತ್ತೇನೆ ಎಂದು ನೀನು ಹೇಳಿರಲಿಲ್ಲವೆ? ’’

‘‘ನಾನು ಹಾಗೆ ಹೇಳಿದ್ದೆನೆ? ’’

‘‘ಹೋಗಲಿ ಬಿಡು. ನಿನಗೆ ಏನಾದರೂ ಉಪಾಹಾರ ಬೇಕೆ? ನಾನು ಕೆಲವು ಮೊಟ್ಟೆ ಬೇಯಿಸಬಲ್ಲೆ. ’’

‘‘ಹೌದು, ಬೇಕು. ಹಾಗೆಯೆ ಟೋಸ್ಟ್‌ ಮಾಡಿದ ಬ್ರೆಡ್ಡು ಮತ್ತು ಕರಿದ ಆಲೂಗಡ್ಡೆಯ ಹ್ಯಾಷ್‌ ಬ್ರೌನ್ಸ್‌ ಮಾಡು. ’’

‘‘ನಿನಗೆ ಸ್ವಲ್ಪವೂ ಸಂಕೋಚವಿಲ್ಲ, ಅಲ್ಲವೆ? ಭಾರತದಲ್ಲಿ ನಾವು ಹೀಗೆ ಏನನ್ನೂ ಕೇಳುವುದಿಲ್ಲ. ಬೇರೆಯವರ ಮನೆಗಳಿಗೆ ಹೋದಾಗ ಅವರು ನಮ್ಮನ್ನು ಊಟತಿಂಡಿಗೆ ಆಹ್ವಾನಿಸುತ್ತಾರೆ, ಆದರೆ ನಾವು ಯಾವಾಗಲೂ ಬೇಡ ಎಂದು ಹೇಳುತ್ತೇವೆ. ಆಗಲೂ ಅವರು ಬಹಳ ಒತ್ತಾಯಿಸಿದರೆ ಮಾತ್ರ ತೆಗೆದುಕೊಳ್ಳುತ್ತೇವೆ. ’’

‘‘ಏನೂ ವ್ಯತ್ಯಾಸವಿಲ್ಲ. ಎರಡು ಸನ್ನಿವೇಶಗಳಲ್ಲೂ ಕೊನೆಗೆ ತಿನ್ನುವುದಂತು ಗ್ಯಾರಂಟಿ ತಾನೆ. ’’

‘‘ಹೌದು, ಆದರೆ, ಮೊದಲು ನಾವು ನಿರಾಕರಿಸುತ್ತೇವೆ. ಅಕಸ್ಮಾತ್‌ ಅವರ ಮನೆಯಲ್ಲಿ ಆಗ ಹೆಚ್ಚಿಗೆ ಊಟ ಇಲ್ಲದಿದ್ದರೆ? ಉದಾಹರಣೆಗೆ, ಈಗ ನನ್ನ ಹತ್ತಿರ ಹ್ಯಾಷ್‌ ಬ್ರೌನ್ಸ್‌ ಇಲ್ಲ. ’’

‘‘ಆಗ ನೀನು ಹೇಳಬೇಕಿರುವುದು ಇಷ್ಟೆ, ‘ಕ್ಷಮಿಸಿ, ಈಗ ನಮ್ಮಲ್ಲಿ ಹ್ಯಾಷ್‌ ಬ್ರೌನ್ಸ್‌ ಇಲ್ಲ’. ’’ಭಾರತೀಯ ಉಚ್ಚಾರವನ್ನು ಪ್ರಯತ್ನಿಸುತ್ತ, ಅದು ಬಹಳ ಸೂಕ್ತವಾಗಿ ಸರಿಹೊಂದುವಂತೆ ಡ್ಯಾನ್‌ ಹೇಳಿದ.

ಅವನ ತಮಾಷೆಗೆ ಅನು ನಸುನಕ್ಕಳು. ‘‘ನಾನು ಈಗಾಗಲೆ ಸಿದ್ಧಳಾಗಿದ್ದೇನೆ. ಕೇವಲ ಶೂಸ್‌ ಹಾಕಿಕೊಳ್ಳಬೇಕಷ್ಟೆ. ’’

‘‘ನೀನು ಜೀನ್ಸ್‌ ಹಾಕಿಕೊಳ್ಳುವುದು ಒಳ್ಳೆಯದು.‘‘ ಹಿಮ್ಮಡಿಗಿಂತ ಮೇಲೆ ಇರುವ ಅವಳ ಕಾಕಿ ಕಪ್ರಿ ಪ್ಯಾಂಟು ಬೈಕ್‌ ಸವಾರಿಗೆ ಸೂಕ್ತವಾದ ಉಡುಗೆ ಅಲ್ಲ ಎಂದು ಅವನು ಆ ರೀತಿ ಸೂಚಿಸಿದ. ‘‘ಹಾಗೆಯೆ ನಿನ್ನ ಹಿಮ್ಮಡಿಗಳ ರಕ್ಷಣೆಗಾಗಿ ಬೂಟುಗಳನ್ನು ಹಾಕಿಕೊ. ನಿನ್ನ ಹತ್ತಿರ ಲೆದರ್‌ ಜ್ಯಾಕೆಟ್‌ ಇದೆಯೆ? ’’

‘‘ಗೊತ್ತಾಯಿತು. ಇನ್ನೊಂದೆರಡು ನಿಮಿಷದಲ್ಲಿ ನಾನು ಸಿದ್ಧಳಾಗುತ್ತೇನೆ. ’’

ಅವಳು ಎಲ್ಲವನ್ನೂ ಧರಿಸಿಕೊಂಡು ಹೊರಗೆ ಬಂದಳು. ಅವಳ ನೀಳ ಕಪ್ಪು ಕೂದಲನ್ನು ಹೆಲ್ಮೆಟ್‌ ಒಳಗೆ ಸರಿಯಾಗಿ ತೂರಿಸಲು ಡ್ಯಾನ್‌ ಸಹಾಯ ಮಾಡಿದ. ಅವಳ ಲೆದರ್‌ ಜ್ಯಾಕೆಟ್‌ನ ಜಿಪ್‌ ಅನ್ನು ಮೆಲಕ್ಕೆಳೆದು, ಕುತ್ತಿಗೆಯ ಸುತ್ತಲೂ ಚೆನ್ನಾಗಿ ಮುಚ್ಚುವಂತೆ ಹಾಕಿದ. ಅವಳು ಚಳಿಗಾಲದಲ್ಲಿ ಅವಳ ಅಪ್ಪ ಬೆಚ್ಚನೆಯ ಬಟ್ಟೆ ಹಾಕುವಾಗ ಸಡಗರಿಸುತ್ತಿದ್ದ ಹುಡುಗಿಯಂತೆ ಸಡಗರಿಸಿದಳು.

‘‘ಓಕೆ, ಈಗ ನಾವು ಹೋಗಲು ಸಿದ್ಧರಾಗಿದ್ದೇವೆ... ಒಂದು ನಿಮಿಷ ತಡೆ, ನಿನ್ನ ತಂಪು ಕನ್ನಡಕ ಎಲ್ಲಿ? ’’

‘‘ಕಾರಲ್ಲಿದೆ,‘‘ ಅವಳೆಂದಳು. ‘‘ಒಂದು ಕ್ಷಣದಲ್ಲಿ ತರುತ್ತೇನೆ. ’’

ಡ್ಯಾನ್‌ ಮೋಟಾರ್‌ ಬೈಕಿನ ಇಂಜಿನ್‌ ಅನ್ನು ಚಾಲು ಮಾಡಿ ಒಂದೆರಡು ಇಂಚು ಹಿಂದೆ ಮುಂದೆ ಮಾಡುತ್ತಿದ್ದ. ‘‘ನೀನು ಬಹಳ ಸಣ್ಣವಳು. ನಿನಗೆ ಹಿಂದೆ ಬೇಕಾದಷ್ಟು ಜಾಗ ಇರುತ್ತೆ.’’

ಬೇಕಾದಷ್ಟು? ಅದು ಬಹಳಷ್ಟು ಅಂತ ಕಾಣಿಸುತ್ತಲೆ ಇಲ್ಲ. ನಾನು ಬಿದ್ದುಬಿಡಬಹುದು! ಅನು ಅವನ ಹಿಂದೆ ಬೈಕ್‌ ಏರಿ ಕುಳಿತಳು.

‘‘ಓಕೆ, ರೆಡಿ? ನನ್ನನ್ನು ಗಟ್ಟಿಯಾಗಿ ಹಿಡಿದುಕೊ. ’’ ಸಂಕೋಚದಿಂದ, ತನ್ನ ಚಿಕ್ಕ ಕೈಗಳನ್ನು ಅವನ ಸುತ್ತ ಮೃದುವಾಗಿ ಬಳಸಿ ಹಿಡಿದುಕೊಂಡಳು. ಡ್ಯಾನ್‌ ಅವಳ ಕೈಗಳನ್ನು ಸೆಳೆದುಕೊಂಡು ತನ್ನ ನಡುವಿನ ಸುತ್ತಲೂ ಗಟ್ಟಿಯಾಗಿ ಬಿಗಿದುಕೊಂಡ. ಅವನ ಬಲವಾದ ಬೆನ್ನಿನ ಅಪ್ಪುಗೆಯನ್ನು ಆಸ್ವಾದಿಸುತ್ತ ಅವಳು ತನ್ನ ಗಲ್ಲವನ್ನು ಅವನ ವಿಶಾಲವಾದ ಭುಜಕ್ಕೆ ಆನಿಸಿದಳು.

ಡ್ಯಾನ್‌ ಗಾಡಿಯನ್ನು ಮುಂದಕ್ಕೆ ಚಲಾಯಿಸಿದ. ಅವನು ಗಾಡಿಯನ್ನು ತನ್ನ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು ಅಧಿಕಾರಯುತವಾಗಿ ಓಡಿಸಿದ. ಅನೂಳಿಗೆ ಸುರಕ್ಷತೆಯ ಭಾವನೆ ಬಂದಿತು. ಈ ಮನುಷ್ಯನಿಗೆ ತಾನು ಏನು ಮಾಡುತ್ತಿದ್ದೇನೆ ಎಂದು ಗೊತ್ತಿದೆ. ಜನರಿಂದ ತುಂಬಿದ ಸಣ್ಣ ರಸ್ತೆಗಳಲ್ಲಿ ವೇಗವಾಗಿ ಹೋಗುವ ಭಾರತದಲ್ಲಿನ ಸವಾರರಂತೆ ಅವನು ನಿರ್ಲಕ್ಷ್ಯದ ಮನೋಭಾವದವನಲ್ಲ. ಪ್ರತಿಯಾಂದು ಅಡ್ಡರಸ್ತೆಯ ಬಳಿಯೂ ಬ್ರೇಕು ಹಾಕಿ ಎಡಕ್ಕೆ ಮತ್ತು ಬಲಕ್ಕೆ ನೋಡುತ್ತ ನಿಧಾನವಾಗಿ ಹೋಗುತ್ತಿದ್ದ. ಎಡಕ್ಕೆಬಲಕ್ಕೆ ಏನಿದೆ ಎಂದು ಇಷ್ಟು ಜಾಗರೂಕನಾಗಿ ನೋಡುತ್ತಿದ್ದಾನೆ? ಎಲ್ಲಿಯೂ ಟ್ರಾಫಿಕ್ಕೆ ಇಲ್ಲವಲ್ಲ?

ಸವಾರಿ ಮಾಡುವಾಗ ಅವರಿಬ್ಬರಿಗೂ ಪರಸ್ಪರ ಮಾತನಾಡುವ ಅವಕಾಶವೆ ಇರಲಿಲ್ಲ. ಅವರ ಹೆಲ್ಮೆಟ್‌ಗಳು ಹೊರಗಿನ ಯಾವ ಶಬ್ದವೂ ಕೇಳಿಸದಷ್ಟು ಬಂದೋಬಸ್ತಾಗಿ ಕಿವಿಯನ್ನು ಮುಚ್ಚಿದ್ದವು. ಇದೊಂದು ಒಳ್ಳೆಯ ಮೋಜಿನ ಅನುಭವ!

‘‘ಸಾಂಟಾ ಕ್ರೂಜ್‌ ಬೆಟ್ಟಗಳಲ್ಲಿ ಹಾದುಹೋಗುವ, ಸುಂದರ ದೃಶ್ಯವೈಭವದಿಂದ ಕೂಡಿದ ರಸ್ತೆ ಹೈವೇ 9. ಅದರಲ್ಲಿ ಬರುವ ಪ್ರತಿಯಾಂದು ಕಠಿಣ ತಿರುವನ್ನೂ ವೃತ್ತಿಪರ ಅನುಭವಿ ಸವಾರನಂತೆ ಡ್ಯಾನ್‌ ಚಲಾಯಿಸಿದ. ಅವರು ಒಂದು ಗಂಟೆಗೂ ಹೆಚ್ಚು ಸವಾರಿ ಮಾಡಿದ ಮೇಲೆ ಒಂದು ಹೊರತಿರುವೊಂದರ ಬಳಿ ಡ್ಯಾನ್‌ ಬೈಕನ್ನು ನಿಲ್ಲಿಸಿದ. ಅಲ್ಲಿಂದ ದೂರದಲ್ಲಿ ಪೆಸಿಫಿಕ್‌ ಸಾಗರದ ಸುಂದರ ವಿಹಂಗಮ ನೋಟ ಮತ್ತು ಕೆಳಗೆ, ದೊಡ್ಡದೊಡ್ಡ ಹಸಿರು ಮರಗಳಿಂದ ಮುಚ್ಚಿದ ಕಣಿವೆ ಕಾಣಿಸುತ್ತಿತ್ತು.

‘‘ಮಜಾ ಬರ್ತಾ ಇದೆಯ, ಅನು?’’ ಅವಳು ಬೈಕಿನಿಂದ ಕೆಳಗೆ ಇಳಿಯಲು ಕಷ್ಟಪಡುತ್ತಿದ್ದಳು. ಅವಳು ಇಳಿದ ನಂತರ ಹಿಂದಿನ ಸೀಟಿಗೆ ಸರಿದ ಡ್ಯಾನ್‌ ತನ್ನ ಹೆಲ್ಮೆಟ್‌ ಅನ್ನು ತೆಗೆದ.

‘‘ನಿನ್ನ ಹೆಲ್ಮೆಟ್‌ ಅನ್ನೂ ತೆಗಿ. ಸ್ವಲ್ಪ ಸುಧಾರಿಸಿಕೊ. ಇಲ್ಲಿಂದ ಸೂರ್ಯಾಸ್ತವನ್ನು ವೀಕ್ಷಿಸಲು ನಾನು ಬಹಳ ಸಲ ಬರುತ್ತಿರುತ್ತೇನೆ.’’

ಆ ಬೈಕ್‌ ಸವಾರಿ ಅವಳ ಮೈಯಲ್ಲಿ ಅಡ್ರೆನಲಿನ್‌ ಸಂಚಾರವನ್ನು ಹೆಚ್ಚಿಸಿತ್ತು. ಅದರಿಂದ ಇನ್ನೂ ಚೇತರಿಸಿಕೊಳ್ಳುತ್ತ ಅನು ರೋಮಾಂಚನವನ್ನು ಅನುಭವಿಸುತ್ತಿದ್ದಳು. ಡ್ಯಾನ್‌ ಅವಳನ್ನು ಹತ್ತಿರಕ್ಕೆ ಸೆಳೆದುಕೊಂಡು ತುಟಿಗಳ ಮೇಲೆ ಚುಂಬಿಸಿದ. ಅವಳಿಗೆ ತನ್ನಲ್ಲಿನ ಹಿಂಜರಿಕೆ ಸ್ವಲ್ಪಸ್ವಲ್ಪವೆ ಕಡಿಮೆಯಾದಂತೆ ಭಾಸವಾಯಿತು. ಜೀವನ ಇದಕ್ಕಿಂತ ಚೆನ್ನಾಗಿ ಇರುವುದಿಲ್ಲ. ಬದುಕು ನನ್ನ ಜೀವನವನ್ನು ಹೇಗೆ ಕರೆದುಕೊಂಡು ಹೋಗುತ್ತದೊ ನಾನೂ ಹಾಗೆಯೆ ಹೋಗುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X