ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾ ಮತ್ತು ಪವನ್‌ ತಲೆಗೆ ದೀಪಕ್‌ ಮರ್ಡರ್‌ ಕೇಸ್‌!?

By Staff
|
Google Oneindia Kannada News


ಆದರೆ ಇದು ಯಾಕೊ ಬಹಳ ಗೋಜಲಾಯಿತು ಎನ್ನಿಸಿತು ಅನೂಗೆ. ರೂಪಾ ತೊಂದರೆಯಲ್ಲಿರುವುದನ್ನು ನೋಡಲು ಅವಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ! ಈ ತನಿಖೆಯನ್ನು ಕೆಡಿಸಬೇಕು ಎಂದು ನಾನು ಬಯಸಿದರೆ ಹೇಗೆ? ಅದೇ ಸಮಯಕ್ಕೆ ಅವಳಿಗೆ ಖುಯೂ ಆಗುತ್ತಿತ್ತು. ನಾನೀಗ ಗೂಢಾಚಾರಿಣಿ ಎನ್ನಿಸುತ್ತಿದೆ!

‘‘ಅದೇನೆ ಇರಲಿ, ಇದರ ಬಗ್ಗೆ ನಿಮ್ಮವರು ಏನು ಅಂದುಕೊಂಡಿದ್ದಾರೆ, ಡ್ಯಾನ್‌? ರೂಪ ದೀಪಕ್‌ನನ್ನು ಕೊಲ್ಲಲು ತನ್ನ ಹೈಹೀಲ್ಸ್‌ನಲ್ಲಿ ಬೆಟ್ಟದಿಂದ ಕೆಳಗೆ ಓಡಿ ಬಂದಿದ್ದಾಳೆ ಎಂದೆ? ಅದು ಅಸಾಧ್ಯ ಅನ್ನಿಸುವುದಿಲ್ಲವೆ?’’

‘‘ಚಿನ್ನ, ಇದಕ್ಕಿಂತ ವಿಚಿತ್ರವಾದವು ಘಟಿಸಿವೆ. ಆದರೆ, ರೂಪ ಕಬ್ಬಿಣದ ಟೈರ್‌ ರಾಡನ್ನು ಹಿಡಿದುಕೊಂಡು ದೀಪಕ್‌ನಿಗೆ ಹೆದರಿಸಿ ಅವನು ಕಮರಿಗೆ ಬೀಳುವಂತೆ ಮಾಡಿದಳು ಎಂದು ಅವರು ನಂಬಿದ್ದಾರೆ ಎಂದು ನನಗನ್ನಿಸುವುದಿಲ್ಲ.’’

‘‘ಈ ಕಬ್ಬಿಣದ ಟೈರ್‌ ರಾಡ್‌ ಅಂದರೆ ಏನು? ಅದರಿಂದ ಏನು ಮಾಡುತ್ತಾರೆ?’’

’’ಅದು ಚಕ್ರದ ಟೈರ್‌ ಬದಲಾಯಿಸಲು ಉಪಯೋಗಿಸುವ ‘ ಎಕ್ಸ್‌’ ಆಕಾರದ ಲೋಹದ ತುಂಡು. ಅದರ ಬಗ್ಗೆ ಯೋಚನೆ ಮಾಡಬೇಡ. ಅವನು ಮಗುವನ್ನು ಗರ್ಭಪಾತ ಮಾಡಿಸಬೇಕು ಎಂದು ಅವಳನ್ನು ಹೆದರಿಸಿದನೆ ಇಲ್ಲವೆ ಎನ್ನುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸು. ಅದು ಕೊಲೆ ಮಾಡಲು ಇರಬಹುದಾದ ಮುಖ್ಯ ಉದ್ದೇಶವನ್ನು ತೋರಿಸುತ್ತದೆ. ಆಮೇಲೆ, ಈಚೆಗೆ ಅವನು ಬಹಳ ಕುಡಿಯುತ್ತಿದ್ದನಾ ಎನ್ನುವುದನ್ನೂ ವಿಚಾರಿಸು... ನೀನು ಮದುವೆಯಾಗಿದ್ದಾಗ ಅವನು ಬಹಳ ಕುಡಿಯುತ್ತಿದ್ದನೆ?’’

‘‘ಇಲ್ಲ, ಆಗ ಅವನು ಸ್ವಲ್ಪವೂ ಕುಡಿಯುತ್ತಿರಲಿಲ್ಲ. ಅವತ್ತು ರಾತ್ರಿ ನಾವು ಭಾರತೀಯ ಹೋಟೆಲಿನಲ್ಲಿ ಅವನನ್ನು ನೋಡಿದಾಗ-ಜ್ಞಾಪಕವಿದೆಯೆ? - ಅವನು ಕುಡಿಯುತ್ತಿದ್ದನ್ನು ನೋಡಿ ನನಗೆ ಬಹಳ ಆಶ್ಚರ್ಯವಾುತು.’’

‘‘ಹೌದು, ಆ ಸಮಯದಲ್ಲಿ ನೀನು ಅದನ್ನು ಹೇಳಿದ್ದು ನನಗೆ ನೆನಪಾಗುತ್ತಿದೆ. ಸರಿ, ನಿನ್ನ ಕೈಯ್ಯಲ್ಲಿ ಎಷ್ಟು ಸಾಧ್ಯವೊ ಅಷ್ಟನ್ನು ಕಂಡುಹಿಡಿ. ನಾವು ಇಲ್ಲಿ ಲ್ಯಾಬ್‌ ಮತ್ತು ಇನ್ನಿತರ ಕೆಲವು ವರದಿಗಳಿಗೆ ಕಾಯುತ್ತಿದ್ದೇವೆ. ನೀನು ರೂಪಾಳ ಮನೆ ಬಿಟ್ಟ ತಕ್ಷಣ ನನಗೆ ಕರೆ ಮಾಡು- ಬೇಡ, ಬೇಡ. ಅಲ್ಲಿ ನಿನಗೆ ಸಿಗ್ನಲ್‌ ಸಿಗುವುದಿಲ್ಲ! ನಾವು ಮಾಡುತ್ತಿರುವುದು ಸರಿಯಾತಪ್ಪೊ ಎಂದು ನನಗೆ ಗೊತ್ತಾಗುತ್ತಿಲ್ಲ.’’

‘‘ಈಗ ಅಂತಹ ಯೋಚನೆಗೆ ಸಮಯ ಮೀರಿ ಬಿಟ್ಟಿದೆ. ಯೋಚನೆ ಮಾಡಬೇಡ. ನನಗೇನೂ ಆಗುವುದಿಲ್ಲ. ಬೆಟ್ಟದಿಂದ ಕೆಳಗೆ ಬಂದ ತಕ್ಷಣ ನಿನಗೆ ಕರೆ ಮಾಡುತ್ತೇನೆ. ಬೈ.’’ ಹಾಗೆನ್ನುತ್ತಲೆ ಫೋನ್‌ ಕಟ್‌ ಮಾಡಿ, ಮತ್ತೆ ಅವನು ಎಲ್ಲಿ ಕರೆ ಮಾಡಿಬಿಡುತ್ತಾನೊ ಎಂದು ಕಾರನ್ನು ಅವಸರವಸರವಾಗಿ ರಸ್ತೆಗೆ ತಂದಳು.

ತನಗೆ ಸುಪರಿಚಿತವಾದ ಆ ಬೆಟ್ಟದ ರಸ್ತೆಯಲ್ಲಿ ಈಗ ಅವಳು ಕಾರನ್ನು ಓಡಿಸುತ್ತಿದ್ದಳು. ಈ ಸಾವಿನಲ್ಲಿ ಯಾವ ರೀತಿಯಲ್ಲೂ ನನ್ನ ಪಾಲು ಇಲ್ಲ. ಯಾರೂ ನನ್ನ ಮೇಲೆ ಆರೋಪ ಹೊರಿಸಲು ಸಾಧ್ಯವಿಲ್ಲ. ಯಾವುದಾದರೂ ಸಮಸ್ಯೆ ಬರಬಹುದೇನೊ ಎಂದುಕೊಂಡು, ಅಂತಹುದರಿಂದ ನನ್ನನ್ನು ಕಾಪಾಡಲಷ್ಟೆ ಡ್ಯಾನ್‌ ಯತ್ನಿಸುತ್ತಿದ್ದಾನೆ. ಆದರೆ ಅವನು ಅವಳನ್ನು ಯಾವುದರಿಂದ ಕಾಪಾಡುತ್ತಿದ್ದಾನೆ? ಅವಳು ಇದರಲ್ಲಿ ನಿಜವಾಗಲೂ ಪಾಲ್ಗೊಂಡಿದ್ದಾಳೆ ಎಂದೇನಾದರೂ ಅವನು ಭಾವಿಸಿ, ಡಿಟೆಕ್ಟಿವ್‌ಗಳು ಅದನ್ನು ಕಂಡುಹಿಡಿಯಲು ಆಗದಂತೆ ಏನಾದರೂ ಪ್ರಯತ್ನಿಸುತ್ತಿದ್ದಾನೆಯೆ?

ಡ್ಯಾನ್‌ನ ಪ್ರೀತಿ ಮತ್ತು ಕಾಳಜಿಯನ್ನು ಅವಳು ಗೌರವಿಸಿದಳಾದರೂ, ಈಗ ತಾನು ರೂಪಾಗೂ ಹಾಗೂ ಪವನ್‌ಗೂ ಸಹಾಯ ಮಾಡುವುದು ತನ್ನ ಕರ್ತವ್ಯ ಎಂದು ಅನು ಭಾವಿಸಿದಳು.

ತನಗೆ ಗುರುತಿದ್ದ ಬಾಗಿಲ ಮುಂದೆ ನಿಂತು, ಕರೆ ಗಂಟೆ ಬಾರಿಸಿ, ಕಾಯುತ್ತ ನಿಂತಳು. ಈ ಮುಂಚೆ ಆ ಮನೆಗೆ ಬರುತ್ತಿದ್ದಾಗ ಆಗುತ್ತಿದ್ದ ಆತಂಕಕ್ಕೆ ಹೋಲಿಸಿದರೆ ಈಗ ತನ್ನಲ್ಲಿ ಧೈರ್ಯ ಒಗ್ಗೂಡಿರುವುದು ಅವಳ ಗಮನಕ್ಕೆ ಬಂದಿತು.

ರೂಪ ಬಾಗಿಲನ್ನು ತೆರೆದಳು.

ಅವಳನ್ನು ನೋಡಿದಾಕ್ಷಣ, ಅವಳು ತನಗೆ ಎಂದೆಂದಿನಿಂದಲೂ ಪರಿಚಯವಿರುವ ಹಾಗೆ ಅನ್ನಿಸಿತು ಅನೂಗೆ. ಈಗ ಅವಳು ರೂಪಾಳನ್ನು ಆಲಿಂಗಿಸಿಕೊಳ್ಳಬೇಕೆ? ಭಾರತದಲ್ಲಿ ನಾವು ಹಾಗೆ ಮಾಡುವುದಿಲ್ಲ, ಆದರೆ ಈಗ ನಾನು ಭಾರತದಲ್ಲಿಲ್ಲ. ಅನು ತನ್ನ ತೋಳುಗಳನ್ನು ತೆರೆದಳು. ರೂಪ ಒಂದು ಹೆಜ್ಜೆ ಮುಂದಿಟ್ಟು ಸ್ವಲ್ಪ ವಿಚಿತ್ರವಾಗಿ ಆ ಅಪ್ಪುಗೆಯನ್ನು ಸ್ವೀಕರಿಸಿದಳು. ಅವಳು ಅಂತಹ ಅಪ್ಪುಗೆಗಳಿಗೆ ಇನ್ನೂ ಅಭ್ಯಾಸವಾಗಿರಲಿಲ್ಲ.

‘‘ಹೇಗಿದ್ದೀಯ, ರೂಪ?’’

‘‘ಒಳಗೆ ಬಾ, ಅನು. ನೀನು ಕಾಫಿ ಕುಡಿಯುತ್ತೀಯ?’’

‘‘ಹೌದು.’’ ಮನೆಯ ಒಳಗೆ ಎಲ್ಲವೂ ಸಂಪೂರ್ಣವಾಗಿ ಅಚ್ಚುಕಟ್ಟಾಗಿತ್ತು; ಅವಳು ಆ ಮನೆಯನ್ನು ತೊರೆದು ಹೋದ ದಿನ ಹೇಗಿತ್ತೊ ಹಾಗೆಯೆ.

‘‘ಮೊದಲು ನಾವು ದೀಪಕ್‌ನ ತಂದೆತಾುಯರಿಗೆ ಕರೆ ಮಾಡೋಣ. ಅಲ್ಲೀಗ ಮಧ್ಯರಾತ್ರಿ ಮೀರಿಬಿಟ್ಟಿದೆ.’’

‘‘ಅನು, ದಯವಿಟ್ಟು ನೀನೇ ಅವರಿಗೆ ಕರೆ ಮಾಡು.’’

‘‘ಇಲ್ಲ, ನಾನೀಗ ಅವರ ಮನೆಯವಳಲ್ಲ. ನನ್ನ ಕೈಯ್ಯಲ್ಲಿ ಮಾಡಲಾಗುವುದಿಲ್ಲ.’’

ಹಾಗಾಗಿ ರೂಪಾಳೆ ಸ್ಪೀಕರ್‌ ಫೋನಿನಿಂದ ಕರೆ ಮಾಡಿದಳು. ಅತ್ತ ಅವಳ ಅತ್ತೆ ಉತ್ತರಿಸಿದರು.

‘‘ಅತ್ತೆ, ಇದನ್ನು ಹೇಳಲು ನನಗೆ ಬಹಳ ದುಃಖವಾಗುತ್ತಿದೆ. ದೀಪಕ್‌ ನೆನ್ನೆ ರಾತ್ರಿ ತೀರಿಕೊಂಡರು. ಆ್ಯಕ್ಸಿಡೆಂಟ್‌ನಲ್ಲಿ.’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X