ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕ್ಯಾರಿಯಲ್ಲಿ ದಸರಾ ಬೊಂಬೆಗಳ ವೈಭವ

By ಅನಿಲ ತಾಳಿಕೋಟಿ
|
Google Oneindia Kannada News

ದಸರಾ ಬಂತೆಂದರೆ ನಮ್ಮ ಕ್ಯಾರಿ (Cary, NC) ಅಂಗಳದಲ್ಲಿ ನೂರ್ಮಡಿಯಾಗುವ ಸಂಭ್ರಮೋಲ್ಲಾಸ. ನವರಾತ್ರಿಯ ವೈಭವ ಸವಿಯುವುದಕ್ಕೆ ಮೈಸೂರನ್ನು ಬರೀ ಮನಸ್ಸಿನಲ್ಲಿ ಮಾತ್ರ ತುಂಬಿಕೊಳ್ಳಲು ಸಾಧ್ಯವಿರುವ ನಮ್ಮಂಥ ಪರದೇಶಿಗಳಿಗೆ ಇರುವ ಪರ್ಯಾಯ ಮಾರ್ಗವೆಂದರೆ ಮೈಸೂರ ಮಲ್ಲಿಗೆಯ ಮನಸಿನ ಮನೆಗಳನ್ನು ಇಲ್ಲಿಯೆ ಹುಡುಕಿಕೊಳ್ಳುವದು.

ಪುಣ್ಯಕ್ಕೆ ಅಂಥವರು ನಮ್ಮಲ್ಲಿ ಸಾಕಷ್ಟಿದ್ದಾರೆ. ಎಲ್ಲರ ಮನೆಯಲ್ಲೂ ಆತ್ಮೀಯ ವಾತಾವರಣ. ಅನುಪಮ ಶ್ರದ್ಧೆಯಿಂದ ಅವರು ಪ್ರತಿ ವರುಷವೂ ಮಾಡುತ್ತ ಬಂದಿರುವ ಹುರುಪಿನ ಕೆಲಸವೆಂದರೆ ದಸರಾ ಬೊಂಬೆ ಪ್ರದರ್ಶನ. ನಮಗೆಲ್ಲಾ ಗೊತ್ತೆ ಇರುವಂತೆ ಈ ಬೊಂಬೆ ಪ್ರದರ್ಶನಗಳು ಪ್ರತಿಯೊಬ್ಬರ ಅಭಿವ್ಯಕ್ತಿ ಬಿಂಬಿಸುತ್ತಾ, ಸೃಜನಶೀಲತೆ ತುಳುಕಿಸುತ್ತ ನಮ್ಮ ಸಂಸ್ಕ್ರತಿಯ ಅಸಂಖ್ಯ ಮಜಲುಗಳನ್ನು ಪರಿಚಯಿಸುತ್ತವೆ.

ಹನುಮ ರಾಮರಾದಿಯಿಂದ, ರಾಮಾಯಣ, ಮಹಾಭಾರತ ಒಳಗೊಂಡು, ವಿವಿಧ ವಿನ್ಯಾಸಗಳಿಂದ, ಅನೇಕಾನೇಕ ವಿಷಯಗಳನ್ನು ಹರವುತ್ತ, ನೂರೆಂಟು ವಸ್ತುಗಳನ್ನು ನಿರೂಪಿಸುತ್ತ - ಈ ಬೊಂಬೆಗಳು ಚಿತ್ತಾಕರ್ಷಕವಾಗಿರುತ್ತವೆ. ನೋಟದೊಂದಿಗೆ ಊಟವಿದ್ದ ಮೇಲೆ ಹೊತ್ತುಗೊತ್ತಿನ ಪರಿವೆ ಇಲ್ಲದೆ ನಾವೆಲ್ಲರೂ ಇಲ್ಲಿ ಹರಟೆ ಕೊಚ್ಚುತ್ತ ಖುಶಿ ಪಡುತ್ತ ಇರುತ್ತೇವೆ.

ಈ ಬಾರಿಯೂ ವಾರಾಂತ್ಯಗಳಲ್ಲಿ ಹತ್ತಾರು ಮನೆಗಳಿಗೆ ಹರುಷ ಹಂಚಿಕೊಳ್ಳಲು ನಾವು ದೌಡಾಯಿಸಿದೆವು. ಮಕ್ಕಳಿಗಂತೂ ಇದರಲ್ಲಿ ತಣಿಯದ ದಾಹ. ಯಾರು, ಎಲ್ಲಿಂದ ಇದನ್ನು ಆರಂಭಿಸಿದರು ಎಂಬುದರಿಂದ ಹಿಡಿದುಕೊಂಡು ಅದರ ಪೂರ್ವಾಪರ ಸಂಬಂಧ ಕೆದಕಿ, ಅವನೀಗ್ಯಾಕೆ ಹತ್ತು ತಲೆ, ಇವನ್ಯಾಕೆ ಅವನನ್ನು ಭೂಮಿಯಲ್ಲಿ ತಳ್ಳುತ್ತಿದ್ದಾನೆ ಎಂಬಿತ್ಯಾದಿ ವಿಷಯಗಳನ್ನು ಕರೆದು ಕೇಳಿದೆ.

'ಮೈಸೂರು ದಸರಾ ಆರಂಭವಾಗಿದ್ದು ಯಾವ ಊರಿನಲ್ಲಿ?' ಕೇಳಿದವನಿಗೆ ಬುದ್ಧಿ ಇಲ್ಲವೇನೋ ಎನ್ನುವಂತೆ ನೋಡಿದ ಮಕ್ಕಳು. 'ಇನ್ನೆಲ್ಲಿ? ಮೈಸೂರ ಅರಮನೆಯಲ್ಲಿ' ಎಂದು ನೆಗಾಡಿದವು. ಒಬ್ಬ ಚುರುಕು ಹುಡುಗ ಪ್ರಶ್ನೆ ಕೇಳಿದ್ದರಿಂದ ಅದು ಬೇರೆ ಊರು ಆಗಿರಲೇಬೆಕಲ್ಲವೆ ಎನ್ನುವ ತರ್ಕದಿಂದ ಅವನಿಗೆ ಗೊತ್ತಿದ್ದ ಇನ್ನೊಂದೆ ಊರಾದ 'ಬೆಂಗಳೂರು' ಎಂದ.

ಅವರಿಗೆ ಶ್ರೀರಂಗಪಟ್ಟಣದಲ್ಲಿ 400 ವರುಷಗಳ ಹಿಂದೆ ದಸರಾ ಆರಂಭವಾಯಿತೆಂದು ತಿಳಿಸಿ, ಮೈಸೂರಿನಲ್ಲಿ ನಡೆವ ಅದ್ದೂರಿ ಅಂಬಾರಿ ಸವಾರಿ, ಬೆರಗಿನ ಬಣ್ಣದ ವರ್ಣನೆ ಮಾಡಿದೆ. ಹಾಗಾದರೆ, ಮುಂದಿನ ಬಾರಿ ಬೆಂಗಳೂರಿಗೆ ಬಾಯ್ ಬಾಯ್ ಹೇಳಿ ಮೈಸೂರಿಗೆ ಜೈ ಜೈ ಹೇಳೋಣವೆ ಎಂದು ಸ್ಕೆಚ್ ಹಾಕಿಕೊಂಡು ರೆಡಿಯಾದ ಮಗರಾಯ.

ಒಂದೆಡೆ ಬರೀ ರಿಸಾಯ್ಕಲ್ ಮಾಡಿದ ನಿತ್ಯೋಪಯೋಗಿ ವಸ್ತುಗಳಿಂದ ಮಾಡಿದ ಬೆಟ್ಟ, ಕಾನನಗಳ ನಡುವೆ ನಲಿದಾಡುವ ದೇವ ದೇವತೆಗಳು - ಇನ್ನೊಂದೆಡೆ ನೂರೆಂಟು ತರಹದ ಟ್ರೇನ್, ಏರೋಪ್ಲೇನು ಮಾಡೆಲ್‌ಗಳು, ಮತ್ತೊಂದೆಡೆ ದೇವತೆಗಳ ಜೊತೆಗೆ ದೇಶಭಕ್ತರು. [ದಸರಾ ಬೊಂಬೆಗಳ ಚಿತ್ರಪಟ]

ಸಂಪದಾ ವಿಜಯ ಮನೆಯಲ್ಲಿ

ಸಂಪದಾ ವಿಜಯ ಮನೆಯಲ್ಲಿ

ಪ್ರತಿ ವರುಷವೂ ಬೊಂಬೆ ಕೂಡಿಸುವ, ಅಂದವಾಗಿ ಅಲಂಕರಿಸುವ ಸಂಪದಾ ವಿಜಯ ಮನೆಯಲ್ಲಿ ಈ ಬಾರಿ ಭರ್ಜರಿ ಊಟ. ಅಂಗಳದಲ್ಲಿಯೆ ಗರಿಗರಿಯಾದ ದೋಸೆ, ಉತ್ತಪ್ಪ ಮಾಡಿಕೊಡುವ ಪಾಕ ಪ್ರವೀಣರು. ಮನದಣಿ ಉಂಡು ನೆಕ್ಸ್ಟ, ನೆಕ್ಸ್ಟ ಎನ್ನುತ್ತ ಹೊರಟೆವು.

ಸವಿತಾ-ರವಿಶಂಕರ ಮನೆಯಲ್ಲಿ

ಸವಿತಾ-ರವಿಶಂಕರ ಮನೆಯಲ್ಲಿ

ನನಗರಿವಿರುವಂತೆ ಒಂದು ವರುಷವೂ ತಪ್ಪದಂತೆ ಅತ್ಯಂತ ಆಸಕ್ತಿಯಿಂದ, ದಣಿವರಿಯದ ಉಲ್ಲಾಸದಿಂದ ದಸರಾ ನಡೆಸುವ ಇನ್ನೊಂದು ಕುಟುಂಬವೆಂದರೆ ಸವಿತಾ-ರವಿಶಂಕರ ಅವರದು. ಕೆಲ ವರುಷದ ಹಿಂದೆ ಅವರ ದಸರಾ ಉತ್ಸಾಹ ನೋಡಿ ನಾನು ಒಂದು ಬಾರಿ ಹೇಳಿದ್ದು. ಮುಂದಿನ ಪುಟದಲ್ಲಿದೆ ಓದಿರಿ.

ಕುಣಿದಾಡಿದ ಬೊಂಬಾಟ ಬೊಂಬೆ

ಕುಣಿದಾಡಿದ ಬೊಂಬಾಟ ಬೊಂಬೆ

ರಾಮಾಯಣದ ರೆಂಬೆ ಕೊಂಬೆಗಳಲಿ
ಕುಣಿದಾಡಿದ ಬೊಂಬಾಟ ಬೊಂಬೆ
ಮನೆ ಮನದಲಿ ಸಂತಸ ತುಂಬೆ
ಪ್ರತಿ ವರುಷ ಹರುಷ ತರಲಿ ಎಂಬೆ
ಇನ್ನೊಂದು ಬಾರಿ
ಬೊಂಬೆ ಆಟವಯ್ಯ
ಕೆರಿಯೇ, ಆ ರವಿ-ಸವಿಯರ ಅಂಗಳವಯ್ಯ
ತನುವ ಕುಣಿಸಿ, ಮನ ಬೆಳಿಸಿ, ಜಠರವ ತಣಿಸುವ ಬೊಂಬೆ ಆಟವಯ್ಯ
ವರುಷ ವರುಷವೂ ಹೇಗೆ ಮಾಡುವರೋ ನಾ ಅರಿಯೆ
ಎಷ್ಟು ಥೀಮು, ಎಷ್ಟು ಸ್ಟೋರಿ ಯಾರು ಬಲ್ಲರು
ಮಲ್ಲಿಗೆಯ ಘಮ್ಮಿರುವಂತೆ -ಪರಿಶ್ರಮಕೆ ಫಲವಿರಲಿ
ಯಾರ ನೋಟದ ಬೆರಗೋ, ಯಾರ ಭಾವನೆಯ ಚಿಗುರೋ
ಒಂದಕ್ಕೊಂದು ಅಂಟಿ ಬಂದಿಹುದು ನವರಾತ್ರಿಗೆ ಮೆರಗು
ಚೈತನ್ಯ, ತನ್ಮಯತೆ ಹೀಗೆ ಇರಲಿ ಕೊನೆವರೆಗೂ.

ಸ್ತ್ರೀ ಶಕ್ತಿ ಎಂದಾಕ್ಷಣ ಮೂಡಿದ ಭಾವಗಳು

ಸ್ತ್ರೀ ಶಕ್ತಿ ಎಂದಾಕ್ಷಣ ಮೂಡಿದ ಭಾವಗಳು

ಸವಿತಾ ಕಾಲ್ ಮಾಡಿ ಈ ಬಾರಿಯ ಥೀಮು 'ಸ್ತ್ರೀ ಶಕ್ತಿ' ಎಂದರು. ಸ್ತ್ರೀ ಶಕ್ತಿ ಎಂದಾಕ್ಷಣ ಮನಸ್ಸಿನಲ್ಲಿ ಮೂಡಿದ ಭಾವಗಳು. ಮನುಜರೆಂದಿಗೂ ಮಾತೆಯ ಮಕ್ಕಳು. ಮಕ್ಕಳಿಗೆ ಸರ್ವಸ್ವ ತಾಯಿ. ತಾಯಿ ಮಮತೆಯ ಮೂರ್ತಿ ಎಷ್ಟೋ, ಅಷ್ಟೆ ಶಕ್ತಿವಂತಳು ಕೂಡಾ. ಶಕ್ತಿ ಎಂದರೆ ಕಠಿಣತೆ ಶಿಕ್ಷಿಸುವ ಶೌರ್ಯತೆ ಎಂದು ಸಮೀಕರಿಸುವದು ಘೋರ ತಪ್ಪು. ಶಕ್ತಿ ಎಂದರೆ ಕರುಣೆ.

ಬಾ, ಬಾ ನನ್ನ ಮುದ್ದು ಕಂದ

ಬಾ, ಬಾ ನನ್ನ ಮುದ್ದು ಕಂದ

ತನ್ನ ಇರುವನ್ನು ಇದ್ದಂತೆಯೆ ಇದ್ದು ನೋಡುಗನ ಮಿತಿಗೆ ನಿಲುಕುವಷ್ಟು, ಮತಿಗೆ ತಲುಕುವಷ್ಟು ತೋರ್ಪಡಿಸಿಕೊಳ್ಳುವ ಮಮತೆಯ ಮಾಯೆ. ಶಕ್ತಿವಂತಳಾದ ಮಾತೆ ನಮ್ಮ ಭಿತ್ತಿಗೆ ತೋರುವದದೆಂತು? ಬಹುರೂಪಿ ಅವಳು. ನೋಡಲಾರೆವು ನಾವವಳ ಪ್ರಭೆಯ ಸಿರಿಯನ್ನು. ನಮ್ಮ ತಿಳಿವಿಗೆ ನಿಲುಕುವ ಅವಳ ರೂಪವೆಂದರೆ ಪ್ರಕೃತಿ. ಸಕಲ ಚರಾಚರಗಳ ಪೋಷಿಸಿ, ಪ್ರೀತಿಸಿ, ಬಾ, ನನ್ನ ಬಯಸು, ನನ್ನ ಬಗೆ, ಕೈ ಜೋಡಿಸು- ನಿನಗೇನು ಬೇಕೋ ಅದನ್ನು ಭಗಿಸು, ಭುಂಜಿಸು, ಪಡೆ -ಬಾ, ಬಾ ನನ್ನ ಕಂದ ಎಂದು ಕೈ ಬೀಸಿ ಕರೆಯುತಿರುವ ಆ ಮಹಾಮಾತೆ.

ಕಣ್ಮನ ಸೆಳೆಯುವ ಶಾಂತ ಪ್ರತಿರೂಪ

ಕಣ್ಮನ ಸೆಳೆಯುವ ಶಾಂತ ಪ್ರತಿರೂಪ

ಅವಳೆ ಪ್ರಕೃತಿ -ಶಕ್ತಿಯ ಮನಮೋಹಕ, ಕಣ್ಮನ ಸೆಳೆಯುವ ಶಾಂತ ಪ್ರತಿರೂಪ. ಅವಳನ್ನು ನಾವು ಏನೆಲ್ಲಾ ಬಗೆಯಲ್ಲಿ, ಎಷ್ಟೊಂದು ವಿಧದಲ್ಲಿ ಕಲ್ಪಿಸಿಕೊಳ್ಳಬಲ್ಲೆವು? ಪ್ರಕಟಗೊಳ್ಳುವ ಹುರುಪು ಅವಳದು. ಅವಳೇ ತ್ರಿಪುರ ಸುಂದರಿ, ಭುವನೇಶ್ವರಿ, ಕಾಳಿ, ತಾರಾ, ಚಿನ್ನಮಸ್ತಾ, ಭೈರವಿ, ಧುಮಾವತಿ, ಬಗಲಾಮುಖಿ, ಮಾತಂಗಿ, ಕಮಲಾತ್ಮಿಕಾ, ದುರ್ಗಾ, ಸರಸ್ವತಿ, ವರಾಹಿ, ಪ್ರತ್ಯಾನ್ಜಿರಾ, ಭದ್ರ ಕಾಳಿ.

ಮಹಾಮಾತೆಯ ವಿಧವಿಧ ರೂಪಗಳು

ಮಹಾಮಾತೆಯ ವಿಧವಿಧ ರೂಪಗಳು

ಅವಳೇ ತಾಯಿ, ತಂಗಿ, ಮಗಳು, ಹೆಂಡತಿ - ನೆನೆವವರ ಮನಸ್ಥಿತಿಯ ಶಿಶು ಅವಳು. ನಾನಾ ರೂಪಗಳಲ್ಲಿ ಬಂದು ನಮ್ಮನ್ನು ಹರಸುವ ಆ ಮಹಾಮಾತೆಯ ವಿಧವಿಧ ರೂಪಗಳನ್ನು ನಮ್ಮ ನಿಲುವಿನ, ಅರಿವಿನ ಆಳದ(ಸಂಕುಚಿತವಿದ್ದರೂ) ಮಿತಿಯುಳ್ಳ ಮತಿಯಿಂದ ನೋಡೋಣ -ಅವಳ ಕೃಪಾಕಟಾಕ್ಷೆ ಪಡೆದು ಬನ್ನಿ ನಲಿಯೋಣ, ನಮ್ಮ ಇರುವಿನ, ಅರಿವಿನ ವಿಸ್ತಾರ ಅಗಲಿಸಿಕೊಳ್ಳೊಣ.

ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ಪರಿಚಯ

ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ಪರಿಚಯ

ಸ್ತ್ರೀ ಶಕ್ತಿಯ ಪ್ರತೀಕವಾಗಿ ದುರ್ಗೆಯಿಂದ ಹಿಡಿದು ದುರ್ಗ ಕಾಯ್ದ ಓಬವ್ವನ ವರೆಗೆ ಅನೇಕಾನೇಕ ಪ್ರತಿಮೆಗಳು. ಚಿಣ್ಣರಿಗೆ ತಿಳಿಸಲು ಅದರ ಬಗ್ಗೆ ವಿವರವಾದ ಫಲಕಗಳು. ಮಕ್ಕಳಿಗೆ ನಮ್ಮ ಸಂಸ್ಕ್ರತಿಯ ಪರಿಚಯಿಸುತ್ತ, ಮನಕೆ ಮುದ ನೀಡುತ್ತ ಸಾಗುವ ಇ ಪಯಣ ಪ್ರತಿ ವರುಷವು ಹೀಗೆ ಇರಲಿ ಎನ್ನುತ್ತ ನವರಾತ್ರಿಗಳಲಿ ನವ್ಯ ಹಣತೆಗಳ ಬೆಳಗುತ್ತಲಿದ್ದೆವೆ ನಾವಿಲ್ಲಿ.

English summary
In US too Kannadigas celebrate Dasara festival in a grand fashion. Many exhibit doll show at their home and celebrate Navaratri. Savitha Ravishankar and Sampada Vijay had organized wonderful doll shows at their home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X