ಚಾಮರಾಜಪೇಟೆ ಒಂದನೇ ಬೀದಿಯ ಆ ದಿನಗಳು!
ನೆನಪುಗಳ ಮಾತು ಮಧುರ ಅನ್ನೋದನ್ನ ಇನ್ನೆಷ್ಟು ಸಾರಿ ಹೇಳಿದರೂ ಹಳತಾಗೋದಿಲ್ಲ. ಬಾಲ್ಯ ಸ್ನೇಹಿತರನ್ನು ಭೇಟಿ ಮಾಡಿದಾಗ ಉಕ್ಕಿ ಹರಿವ ನೆನಪುಗಳು, ಯಾವುದೋ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಹವರ್ತಿ ಸಿಕ್ಕಾಗ ಬರುವ ನೆನಪುಗಳು, ಕೋಲೂರಿಕೊಂಡು ನಡೆವ ದಿನಗಳಲ್ಲಿ ಪಾರ್ಕ್ ನಲ್ಲಿ ಸಿಕ್ಕ ಹಣ್ಣು ಹಣ್ಣು ಸುಂದರಿಯೇ ತನ್ನ ಪ್ರೈಮರಿ ಶಾಲೆಯ ಸಹಪಾಟಿ ಎಂದರಿತಾಗ ಉಮ್ಮಳಿಸಿಕೊಂಡು ಬರುವ ನೆನಪುಗಳು (ಅರುಳು ಮರುಳು ಆಗದಿದ್ದರೆ), ಹೀಗೇ ಒಂದಲ್ಲ ಒಂದು ರೀತಿ ಅಂದಿನ ದಿನಗಳ ವ್ಯಕ್ತಿಗಳನ್ನು ಕಂಡಾಗ ಮಾತ್ರ ಉಕ್ಕೋದೇ ಅಲ್ಲ ನೆನಪುಗಳು. ತಿಂಗಳಿಗೆ ಎರಡು-ಮೂರು ಬಾರಿ ಸಿಗುವ ಸ್ನೇಹಿತರೇ ಸೇರಿದ್ದಾಗಲೂ ಅವರವರ ಅನುಭವಗಳ ನೆನಪಿನ ಮಾತು ಹರಿದಾಗಲೂ ಅವು ಮಧುರ ನೆನಪುಗಳೇ ಆಗಿರುತ್ತದೆ. ಹಾಗೆ ಮಾತನಾಡಿಕೊಂಡಿದ್ದಾಗ ನೆನಪಾದದ್ದೇ ...
***
"ಸಂಜೆ ಸ್ಕೂಲ್ ಮುಗಿದ ಮೇಲೆ ಮಠಕ್ಕೆ ಬಂದುಬಿಡು. ನಾವು ಅಲ್ಲೆ ಇರ್ತೀವಿ, ಊಟ ಆದ ಮೇಲೆ ಒಟ್ಟಿಗೆ ವಾಪಸ್ ಮನೆಗೆ ಹೋಗಬಹುದು". ಅಮ್ಮನ ಆಜ್ಞೆ, ಮೀರಲಾಗೋಲ್ಲ.
ಸಂಜೆ ಶಾಲೆ ಮುಗಿಯಲು ಇನ್ನೊಂದೆರಡು ಪೀರಿಯಡ್ ಇರುವಾಗಲೇ ಹಸಿವೆ ಶುರುವಾಗಿತ್ತು. ಸಾಮಾನ್ಯವಾಗಿ ಆಗೋದಿಲ್ಲ, ಇಂದು ಸ್ಪೆಷಲ್ ಊಟಕ್ಕೆ ಹೋಗಬೇಕು ಅಂತ ವಿಶೇಷ ಹಸಿವೆ! ಸೋಷಿಯಲ್ ಸ್ಟಡೀಸ್ ಪೀರಿಯಡ್ ಆದ ಮೇಲೆ ಕನ್ನಡ. ಅಲ್ಲಿಗೆ ದಿನ ಮುಗಿಯುತ್ತೆ. ರಾಕೆಟ್ ಉಡಾವಣೆಗೆ ಕ್ಷಣಗಣನೆ ಮಾಡಿದಂತೆ ನಾನು ಪೀರಿಯಡ್ ಗಣನೆ ನಡೆಸಿದ್ದೆ. ಸೋಷಿಯಲ್ ಸ್ಟಡೀಸ್ ಮೇಡಂ ಕ್ಲಾಸಿನೊಳಗೆ ಬಂದರು. ಮತ್ತದೇ ಮುಸ್ಲಿಂ ದೊರೆಗಳ ಬಗೆಗಿನ ಪಾಠಗಳು. ಅದರಲ್ಲೂ ಜಹಾಂಗೀರ್ ಬಗ್ಗೆ ಇವತ್ತೇ ಪಾಠ ಮಾಡಬೇಕೇ? ಅಲ್ಲಿ ಇವತ್ತಿನ ಸ್ವೀಟ್ ಜಹಾಂಗೀರ್ ಆದರೆ ಪರವಾಗಿಲ್ಲ, ಜಿಲೇಬಿ ಆದರೆ ನನಗೆ ಸೇರೋಲ್ಲ. ಸಂಜೆ ಎಲೆ ಅಲಂಕರಿಸೋ ಜಹಾಂಗೀರ್ ನೆನಪಲ್ಲಿ ದೊರೆ ಜಹಾಂಗೀರ್ ಬಗ್ಗೆ ಏನೇನೂ ತಲೆಗೆ ಹೋಗಲಿಲ್ಲ. ಅಂತೂ ಹೇಗೋ ಆ ಪೀರಿಯಡ್ ಮುಗೀತು.

ನಂತರ ಚೆನ್ನಬಸಪ್ಪ ಮೇಷ್ಟರ ಆಗಮನ. ಕೊಂಚ ಹುಷಾರಾಗಿರಬೇಕು. ಗಮನ ಬೇರೆ ಕಡೆ ಇದ್ದರೆ ಯಾವುದೋ ಪದ್ಯದ ಹೆಸರು ಹೇಳಿ ಹತ್ತು ಸಾರಿ ಬರ್ಕೊಂಡ್ ಬಾ ಅಂತಾರೆ. ಅಲ್ಲಾ ಸಾರ್. ಅದೂ... ಅಂತ ಏನಾದರೂ ಸಮಜಾಯಿಶಿ ಕೊಡಲಿಕ್ಕೆ ಹೋದರೆ ಇಪ್ಪತ್ತು ಅಂತಾರೆ. ಒಳಗೆ ಬಂದು ನಿಂತ ಮೇಷ್ಟ್ರು ಎಲ್ಲ ದಿಕ್ಕೂ ಸರಿಯಾಗಿದೆಯೇ ಅಂತ ಒಮ್ಮೆ ಅವಲೋಕಿಸಿದರು. ನಾನು ಅವರ ದಿರಿಸನ್ನು ಅವಲೋಕಿಸಿದೆ. ಅಲ್ಲಾ, ಈ ಮೇಷ್ಟರಿಗೆ ಬೇರೆ ಬಟ್ಟೆ ಇರಲಿಲ್ವಾ? ನನಗೆ ಮೊದಲಿಂದಲೂ ಅಷ್ಟೇ ಈ ಕಂದು ಬಣ್ಣದ ತೂತು ಸ್ವೆಟರ್ ಅಂದ್ರೆ ಏನೋ ಒಂಥರ. ಅರ್ಧ ದಿನ ಶಾಲೆ ಇರೋ ಶನಿವಾರದ ಕೊನೇ ಪೀರಿಯಡ್'ನಲ್ಲಿ ಕಂದು ಬಣ್ಣದ ಸ್ವೆಟರ್ ಕಣ್ಣಿಗೆ ಬಿದ್ದರೆ ಹೇಗಾಗುತ್ತೋ ಹಾಗಾಯ್ತು ಈಗ. ಸ್ವೆಟರ್ ಅಂದ್ರೆ ನನಗೆ ದ್ವೇಷ ಇಲ್ಲ, ಹಸಿವಾದಾಗ ನನಗೆ ಕಂದು ಬಣ್ಣದ ತೂತಿನ ಸ್ವೆಟರು ಬಿಸಿ ಬಿಸಿ ದೋಸೆಯಂತೆ ಕಾಣುತ್ತೆ. ಸ್ವೆಟರ್'ನೇ ಕಿತ್ತು ತಿನ್ನೋಣ ಅನ್ನಿಸುತ್ತೆ! ಎಂದೂ ತಿಂದಿಲ್ಲ, ಭಾವನೆ ಹೇಳ್ದೆ ಅಷ್ಟೇ. ಅಯ್ಯೋ ಇದೊಳ್ಳೇ ಕಥೆ ಆಯ್ತು. ಈಗ ದೋಸೆ ಜೊತೆ ಚಟ್ನಿ, ಆಲೂಗಡ್ಡೆ ಪಲ್ಯ ಎಲ್ಲಾ ನೆನಪಾಗ್ತಿದೆಯಲ್ಲೋ ಶಿವನೇ!
ಪೀರಿಯಡ್ ಮುಗಿದು ಢಣ ಢಣ ಘಂಟೆ ಬಾರಿಸಿತು. ಮಹಾಮಂಗಳಾರತಿಯ ಘಂಟೆಯಂತೆಯೇ ಭಾಸವಾಯಿತು ಎನಗೆ.
ಕ್ಲಾಸಿನಿಂದ ಹೊರಗೆ ಬರುವಷ್ಟರಲ್ಲಿ ಮೈದಾನದ ಹೊರಗಿನ ಗೇಟ್ ಬೀಗ ಬಡಿದಿತ್ತು. ಆ ಬೀಗ ಬಡಿದ ಗೇಟಿಗೂ ಒಬ್ಬ ಆಯಾ ಕಾವಲು. ಛೇ! ನಮ್ಮ ಮೇಲೆ ನಂಬಿಕೆಯೇ ಇಲ್ಲವೇ? ಆಕೆ ಇಲ್ಲದೇ ಇದ್ದಿದ್ದರೆ, ಮೂಲೆಯಲ್ಲಿರೋ ಬೇಲಿ ನುಸುಳಿ ಹೋಗಬಹುದಿತ್ತು. ಸಂಜೆ ಪ್ರಾರ್ಥನೆ ಮುಗಿಯದೆ ಹೋಗುವ ಹಾಗಿಲ್ಲ. ಸಾಲಿನಲ್ಲಿ ನಿಂತೆ. ಆಗಾಗ ಬರುವ ಪ್ರಾಂಶುಪಾಲರು ಇಂದೇ ಬರಬೇಕಿತ್ತೆ? ಪ್ರಾರ್ಥನೆಗೆ ಮುನ್ನ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ಹಸಿದಾಗಲಾಗಲಿ, ಹೊಟ್ಟೆ ತುಂಬಿದ್ದಾಗಾಗಲಿ ಹಿತವಚನ ತಲೆಗೆ ಹೋಗೋಲ್ಲ. ಸಂಕಟ ಬಂದಾಗ ಮಾತ್ರ ವೆಂಕಟರಮಣ. ಅವರ ಮಾತು ಮುಗಿದು, ಪ್ರಾರ್ಥನೆ ಮುಗಿಸಿ ಹೊರಡಲೇ ಅರ್ಧಘಂಟೆ ಆಗಿತ್ತು. ಪ್ರಾರ್ಥನೆ ಸಾಲಿನಲ್ಲಿ ನಾನೇ ಮೊದಲು. ಅಂದರೆ ಅರ್ಥವಾಯ್ತಲ್ಲ? ಹೌದು, ಗೇಟ್ ದಾಟೋದರಲ್ಲಿ ನಾನೇ ಕೊನೆ!
ನಮ್ಮ ಶಾಲೆಯಿಂದ ರಾಯರ ಮಠಕ್ಕೆ ಹದಿನೈದು ನಿಮಿಷಗಳ ನಡಿಗೆಯ ಹಾದಿ. ರಾಧ ಮೆಡಿಕಲ್ಸ್, ವಾದಿರಾಜ ಜನರಲ್ ಸ್ಟೋರ್ಸ್, ಗೋಪಾಲರಾಯರ ದಿನಸಿ ಅಂಗಡಿ ಎಲ್ಲ ದಾಟಿ ಮಿಶ್ರಾ ಸ್ಟೋರ್ಸ್ ಬಳಿ ಬಲಕ್ಕೆ ತಿರುಗಿದೆ. ಫರ್ಸ್ಟ್ ಮೇನ್ ರೋಡ್ ಬಹಳ ಬಿಜಿ ಇರುತ್ತೆ ಅಂತ ಈ ಬೀದಿ. ಹೆಚ್ಚು ರಷ್ ಇರದ ರಸ್ತೆಯಲ್ಲಿ ಸಾಗಿ ಮತ್ತೊಂದು ಬೀದಿಯಲ್ಲಿರೋ ನಮ್ಮ ಬಂಧುಗಳ ಮನೆಗೆ ಸಾಗಿ ಬರಲು ಕಾಣುವುದೇ ಅತ್ಯಂತ ಭಯಂಕರ ಸುಂದರ ದೃಶ್ಯ. ಆ ಬೀದಿಯಿಂದಾಚೆ ಬರೀ ಟ್ರಾನ್ಸ್ಪೋರ್ಟ್ ಅಂಗಡಿಗಳೇ. ಟಾಟಾ, ಅಶೋಕ್ ಲೇಲ್ಯಾಂಡ್ ದೈತ್ಯ ಲಾರಿಗಳೇ ಅಲ್ಲೆಲ್ಲ. ಯಾರು ಎಲ್ಲಿ ಬೇಕಾದರೂ ನಿಲ್ಲಿಸಬಹುದಾದ ಸ್ವಾತಂತ್ರ್ಯ. ಅಲ್ಲಿನ ರಸ್ತೆಯ ಮಣ್ಣು/ಮರಳು ಕಂದು ಬಣ್ಣ ಕಳೆದುಕೊಂಡು ಕಪ್ಪು ತಿರುಗಿ ದಶಮಾನಗಳೇ ಆಗಿವೆ. ಹಿಂದಿನ ದಿನ ಮಳೆ ಬಂದು ನಿಂತಿದ್ದಕ್ಕೋ ಏನೋ ಒಂದು ಬದಿಯಲ್ಲಿ ನಿಂತ ನೀರು ಇನ್ನೊಂದು ಬಡಿಯಲ್ಲಿ ಕೊಚ್ಚೆ ಮಣ್ಣು. ಲಾರಿಯ ಟಯರ್ ನ ಲಾಂಚನ ಹೊತ್ತ ಮಣ್ಣಿಗಂತೂ ಲೆಕ್ಕವೇ ಇಲ್ಲ. ಕೆಲವೆಡೆ ಜಾರಿಕೆ. ಕಾಲಿಟ್ಟು ಜಾರಿದರೆ ಲಾರಿಯ ಟಯರ್ ಕೆಳಗೆ ಲ್ಯಾಂಡ್ ಆಗೋದು ಗ್ಯಾರಂಟಿ!
ರಸ್ತೆಯ ಮೂಲೆಯಲ್ಲಿ ಒಂದು ಪೆಟ್ಟಿಗೆ ಅಂಗಡಿ. ಅವನ ಅಂಗಡಿಯಲ್ಲಿ ಖರ್ಚಾಗುತ್ತಿದ್ದ ಐಟಂಗಳು ಎಂದರೆ ಗಣೇಶ ಬೀಡಿ, ಬಾಳೆಹಣ್ಣು ಮತ್ತು ಸ್ಟೀಲ್ ಲೋಟದಲ್ಲಿ ಕೊಡುತ್ತಿದ್ದ ಚಾಯ್ ಮತ್ತು ಟೀ-ಬನ್ನು. ಎಂದೋ ಮಾಡಿಟ್ಟ, ಮುಗ್ಗುಲು ಹಿಡಿದ ಮೈಸೂರ್ ಪಾಕ್ ಅವನ ಗಾಜಿನ ಜಾರ್ ನಲ್ಲಿ ಬಿಡುಗಡೆ ಭಾಗ್ಯವ ಕಾಣದೆ ಭದ್ರವಾಗಿ ಕುಳಿತಿರುತ್ತಿತ್ತು. ಅಂಗಡಿ ದಾಟಿ ಬೀದಿಯ ಒಳ ಹೊಕ್ಕಂತೆ ನರಕ.
ಕೆಲವು ಲಾರಿಗಳು ಗಡ ಗಡ ಸದ್ದು ಮಾಡಿಕೊಂಡು ಮಧ್ಯರಸ್ತೆಯಲ್ಲಿ ನಿಂತಿರುತ್ತಿತ್ತು. ಆತ ಹೊರಟಿದ್ದಾನೋ ಅಥವಾ ಈಗ ಬಂದಿದ್ದಾನೋ ಒಂದೂ ಅರಿಯದು. ಗಾಡಿ ಆನ್ ಮಾಡಿಕೊಂಡು ಹಲ್ಲುಗಳ ಮಧ್ಯೆ ಕಡ್ಡಿ ಸಿಗಿಸಿಕೊಂಡು ಅಗೆಯುತ್ತ ಆರಾಮವಾಗಿ ಕೂತಿರುತ್ತಿದ್ದ ತಮಿಳನೋ, ಮಲೆಯಾಳಿಯೋ ಆದ ಡ್ರೈವರ್. ಅಡ್ಡ ನಿಂತ ಗಾಡಿಯನ್ನು ತೆಗೆಯಯ್ಯಾ ನಾನು ಹೋಗಬೇಕು ಅನ್ನೋಕ್ಕಂತೂ ಆಗ್ತಿರ್ಲಿಲ್ಲ. ಕೆಲವೊಮ್ಮೆ ಅವನ ಹಿಂದೆ ಮತ್ಯಾವುದೋ ಲಾರಿಯ ಡ್ರೈವರ್ ಸುಮ್ಮನೆ ಹಾರನ್ ಒತ್ತುತ್ತಿದ್ದ. ಇರಲಿ, ಮಣ್ಣಿನ ಮೇಲೆ ಕಾಲಿಡಲಾಗದೇ, ಸೈಡಿನಲ್ಲಿ ಅಲ್ಲಲ್ಲೇ ಎದ್ದಿದ್ದ ಸೈಜು ಕಲ್ಲುಗಳ ಮೇಲೆ ಕಾಲಿರಿಸಿಕೊಂಡು ಸರ್ಕಸ್ ಮಾಡಿಕೊಂಡು ಮುಂದೆ ಸಾಗುತ್ತಿದ್ದೆ. ಕಲ್ಲುಗಳೂ ಇಲ್ಲದೆಡೆ ಅಂಗಡಿಗಳ ಮುಂದಿನ ಚಪ್ಪಡಿ ಕಲ್ಲಿನ ಮೇಲೆ ನಡಿಗೆ. ಕೆಲವೊಮ್ಮೆ ಆ ಚಪ್ಪಡಿ ಕಲ್ಲಿನ ಮೇಲೆ ನಾಯಿ ಕೂಡ ಮಲಗಿರುತ್ತಿತ್ತು. ಬೀದಿ ನಾಯಿಗಳು ಅಂದ್ರೆ ನನಗೆ ಭಯ. ನಾನು ಆ ಕಡೆ ಹೋಗೋ ಸಮಯಕ್ಕೆ ಸರಿಯಾಗಿ ಅಂಗಡಿಯಲ್ಲಿ ಯಾರೋ ಊಟ ಮಾಡಿದ ಕೈಯನ್ನು ಆ ನಾಯಿಯ ಮೇಲೆ ತೊಳೆದುಕೊಳ್ಳುತ್ತಾರೆ. ಕೈ ಸ್ವಚ್ಛದ ಜೊತೆ ನಾಯಿಯನ್ನೂ ಓಡಿಸಿದ ಹಾಗಾಗುತ್ತೆ ಅನ್ನೋ (ದುರ್)ಉದ್ದೇಶ. ಪಾಪ ನಾಯಿ ಕುಯ್ ಗುಡುತ್ತ ಓಡಿ ನನ್ನೆಡೆ ಬರುತ್ತೆ. ಆ ಬೀದಿಯಲ್ಲಿ ಓಡೋದೆಲ್ಲಿ? ನಿಂತಲ್ಲೇ ಶಿಲೆಯಂತೆ ನಿಂತು ಬಿಡುತ್ತಿದ್ದೆ. ಸದ್ಯಕ್ಕೆ ಇದುವರೆಗೂ ಯಾವ ನಾಯಿಗಳೂ ಕಚ್ಚಿಲ್ಲ!
ಇನ್ನೂ ಹಲವಾರು ವಿಚಾರಗಳು ನಾನಲ್ಲಿ ಬಂದಾಗಲೇ ನಡೆಯುತ್ತೆ. ಎಲ್ಲಿಂದಲೋ ಬಂದ ಮುಖ ತೊಳೆದು ಮೂರು ದಿನ ಆದ ಡ್ರೈವರ್ ತನ್ನ ಮುಖವನ್ನು ತೊಳೆದುಕೊಳ್ಳುವುದೂ ನಾನು ಬಂದಾಗಲೇ. ಬಾಯಿಗೆ ನೀರು ಸುರಿಕೊಂಡು ಥೂ ಎಂದು ಉಗಿಯುವುದೂ ನಾ ಬಂದಾಗಲೇ. ಅಂಗಡಿ ಒಳಗಿನಿಂದ ಗೋಣಿಚೀಲವನ್ನು ಕೊಡವೋ ಕೆಲಸವೂ ನಾ ಬಂದಾಗಲೇ. ತಾ ತಿಂದ ಬಾಳೇಹಣ್ಣಿನ ಸಿಪ್ಪೆಯನ್ನು ಬೀದಿಗೆ ಎಸೆಯುವುದೂ ನಾ ಬಂದಾಗಲೇ. ಸತ್ವ ಕಳೆದುಕೊಂಡ ಮೋಟು ಬೀಡಿಯನ್ನು ಸೊರ ಸೊರ ಎಳೆದು ಬೀದಿಗೆಸೆದು ಮುಕ್ತಿ ಕೊಡುವುದೂ ನಾ ಬಂದಾಗಲೇ!
ಈಗ ಮತ್ತೊಂದು ನೋಟ. ಹೆಚ್ಚು ಕಮ್ಮಿ ಅಲ್ಲಿನ ಕೂಲಿಕಾರಾರು ಟಾಪ್ಲೆಸ್ ಅಥವಾ ಸ್ಲೀವ್ಲೆಸ್ ಬನಿಯನ್ ಧಾರಿಗಳು. ಅದರ ಜೊತೆ ಕೊಂಡಾಗಿನಿಂದ ನೀರೇ ಕಾಣದ ತಲೆಯ ಸುತ್ತಲೂ ಕಟ್ಟಿಕೊಳ್ಳುವ ಬಟ್ಟೆ. ಮೂಟೆಗಳನ್ನು ಬೆನ್ನ ಮೇಲೆ ಹಾಕಿಕೊಂಡು, ಬೆನ್ನು ಬಾಗಿಸಿ, ಲಾರಿಯೆಡೆಗೆ ನಡೆದು, ಹಿಂದಕ್ಕೆ ತಿರುಗಿ ಚೀಲವನ್ನು ಲಾರಿಯೊಳಗೆ ಬಿಟ್ಟರೆ, ಅಲ್ಲಿಂದ ಮತ್ತೊಬ್ಬ ಅದನ್ನು ತೆಗೆದುಕೊಂಡು ಒಳಗೆ ಪೇರಿಸುತ್ತಾನೆ. ಕೆಲವೊಮ್ಮೆ ಭಾರ ಹೊತ್ತುಕೊಂಡವ ಲಾರಿಗೆ ಒರಗಿಸಿದ ಮರದ ಏಣಿಯನ್ನು ಏರಿಕೊಂಡು ಲಾರಿಯ ಒಳ ಹೊಕ್ಕು ತಾನೇ ಪೇರಿಸಿ ಹೊರಬರುತ್ತಾನೆ. ಬಿರುಕು ಬಿಟ್ಟ ಮರದ ಹಲಗೆಯನ್ನು ಕಂಡರೆ ಮುರಿದೇ ಹೋಗುತ್ತೇನೋ ಎಂದು ಭಯವಾಗುತ್ತದೆ. ಮೂಟೆ ಹೊತ್ತುಕೊಳ್ಳುವಾಗ, ಹೊತ್ತುಕೊಂಡು ನಡೆವಾಗ ಮತ್ತು ಏಣಿ ಏರಿ ನಡೆವಾಗ ಬಿದ್ದವರೆಷ್ಟೋ? ಕೈಕಾಲು ಮುರಿದುಕೊಂಡವರೆಷ್ಟೋ? ಯಾವುದೋ ಊರಿಂದ ಬಂದು ಇಲ್ಲಿ ಇಲ್ಲವಾದವರೂ ಉಂಟು. ಇವರು ಇಲ್ಲಿ ಇಲ್ಲವಾಗಿದ್ದು ಇನ್ನೆಲ್ಲೋ ಯಾವುದೋ ಊರಿನಲ್ಲಿರೋ ಅವರ ಸಂಸಾರಕ್ಕೆ ವಿಷಯವೇ ತಿಳಿಯದೇ ಹೋದದ್ದೂ ಉಂಟು.
ಇದುವರೆವಿಗೂ ನೂರಾರು ಬಾರಿ ಅದೇ ಬೀದಿಯಲ್ಲಿ ಸಾಗಿ ಬವಳಿದ್ದರೂ ಕೆಲವು ನಿತ್ಯನೋಟಗಳಲ್ಲಂತೂ ಬದಲಾವಣೆಯೇ ಇರುತ್ತಿರಲಿಲ್ಲ. ಮಂಡಿಯ ಮೇಲ್ ಲುಂಗಿ ಕಟ್ಟಿದವ, ನೀರನ್ನೇ ಕಾಣದ ಬನಿಯನ್ ತೊಟ್ಟವ, ಎಣ್ಣೆಯನ್ನೇ ಕಾಣದ ತಲೆಗೂದಲು ಹೊತ್ತವ, ಸಿಮೆಂಟ್ ಮೂಟೆ ಹೊತ್ತೂ ಹೊತ್ತು ಮೈಬಣ್ಣವನ್ನೇ ಕಳೆದುಕೊಂಡವ, ರಾತ್ರಿಯೆಲ್ಲ ಗಾಡಿ ಓಡಿಸಿಕೊಂಡು ಬಂದು ಎಣ್ಣೆ ಹಾಕಿ ಬದಿಯಲ್ಲಿ ಬಿದ್ದಿದ್ದವ, ಯಜಮಾನನ ಕೈಯಲ್ಲಿ ಬೈಸಿಕೊಳ್ಳುತ್ತಿದ್ದವ, ಜೋರು ಗಂಟಲಲ್ಲಿ ಹರಟೆ ಕೊಚ್ಚುವವ, ಕುಕ್ಕರಗಾಲಲ್ಲಿ ಸುಮ್ಮನೆ ಕುಳಿತವ, ಕುಕ್ಕರುಗಾಲಿನಲ್ಲಿ ಕೂತು ಬೆಂಕಿಕಡ್ಡಿಯನ್ನು ಕಿವಿಯಲ್ಲಿ ಚುಚ್ಚಿಕೊಳ್ಳುತ್ತಿದ್ದವ, ಎಲೆಯಡಿಕೆ ಜಗಿಯುತ್ತ ಕಂಡಲ್ಲೇ ಉಗಿಯುತ್ತಿದ್ದವ, ನಾಳಿನ ಚಿಂತೆ ಇಲ್ಲದೆ ನಿರಾಳವಾಗಿ ಮಲಗಿದ್ದವ ಹೀಗೆ ಹತ್ತು ಹಲವು ಬದುಕಿನ ಮುಖಗಳನ್ನು ನೋಡುತ್ತ ಲಾರಿಗಳಿಂದ ಹೊರಹೊಮ್ಮುತ್ತಿದ್ದ ಕಪ್ಪನೆ ಹೊಗೆ ಕುಡಿದುಕೊಂಡು ದಾಟಿ ಬಂದಿದ್ದೆ.
ಇದೇ ಅವತಾರದಲ್ಲಿ ಸಾಗಿ ಕಾಳಿಗುಡಿಯ ಬೀದಿಗೆ ಬಂದಾಗ ದೃಶ್ಯದಲ್ಲಿ ಭಾರೀ ಬದಲಾವಣೆ. ಅಲ್ಲಲ್ಲೇ ಉದುರಿದ ಕುಂಕುಮ, ಹೂಗಳು, ಈಡುಗಾಯಿ ಒಡೆದಾಗ ಒಡೆದ ಕಾಯಿಯ ಕಡೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡ ಮೇಲೆ ಮಿಕ್ಕ ಚೂರುಗಳು, ದಾರಿ ಮಧ್ಯದಲ್ಲಿ ತೆಂಗಿನಚಿಪ್ಪಿನ ಚೂರುಗಳು, ತಿಂದೆಸೆದಿದ್ದ ಬಾಳೆಹಣ್ಣಿನ ಸಿಪ್ಪೆ, ಯಾರೋ ಬೀಳಿಸಿಕೊಂಡು ಹೋಗಿದ್ದ ಸೇವಂತಿಗೆ ಹೂವು, ಜರತಾರಿ ಸೀರೆ ಉಟ್ಟ ಹೆಂಗಸರು, ಬಿಲೆ ಪಂಚೆ ಕಟ್ಟಿದ ಗಂಡಸರು, ತಾಂಬೂಲ ಮೆಂದುಕೊಂಡು ತುಟಿ ಕೆಂಪುಮಾಡಿಕೊಂಡು ಹೊರಟವರು, ಬೀದಿಯ ಮಧ್ಯೆ ನಿಂತು ಕೈಯನ್ನು ಬಿಸಿಲಿಗೆ ಅಡ್ಡಲಾಗಿ ಕಣ್ಣಿಗೆ ಹಿಡಿದುಕೊಂಡು ಯಾರಾನ್ನೋ ನಿರೀಕ್ಷಿಸುವ ಜನ, ಕಾಡುಹರಟೆಯಲ್ಲಿ ಬಿಜಿ ಇದ್ದ ಹಿರಿಯರು, ಬೀದಿಯಲ್ಲೇ ಆಡಿಕೊಂಡಿದ್ದ ಅವರ ಮಕ್ಕಳು, ಸೈಕಲ್ಲಿನಲ್ಲಿ ವೇಗವಾಗಿ ಬಂದು ಅವರನ್ನು ಸುತ್ತಿಹಾಕಿಕೊಂಡು ಸಾಗಿದವ, ಸಿರಿವಂತರಾರೋ ಕಾರಿನಲ್ಲಿ ಸಾಗುತ್ತಿದ್ದರೆ ಬಸ್ ಸ್ಟ್ಯಾಂಡ್ ಹತ್ತಿರ ಬಿಡಬಾರದೇ ಎಂದು ಆಸೆಕಣ್ಣುಗಳಿಂದ ನೋಡುವ ಮಂದಿ, ತಮ್ಮ ಊಟ ಮುಗಿಸಿ ಮಾತ್ಯಾರಿಗೋ ಕಾಯುತ್ತ ಅಲ್ಲೇ ಸುಡುವ ಕಲ್ಲುಬೆಂಚಿನ ಮೇಲೆ ಎರಡು ಕಂಗಳನ್ನು ಮುಚ್ಚಿ ಹೊಟ್ಟೆಯ ಮೇಲೆ ಕೈಯಿಟ್ಟುಕೊಂಡವರು ಹೀಗೆ. ಒಟ್ಟಾರೆ ಎರಡು ಬೀದಿಗಳ ದೃಶ್ಯ ಅನೇಕತೆಯಲ್ಲಿ ಏಕತೆಯ ಕಥೆ ಹೇಳಿತ್ತು.
ಅಂತೂ ಇಂತೂ ಅಮ್ಮನ ಬಳಿ ಸೇರಿದ್ದೆ. ಬೀದಿಯ ಕೊಚ್ಚೆಯೆಲ್ಲ ಕ್ಯಾನ್ವಾಸ್ ಶೂಗೆ ಮೆತ್ತಿಕೊಂಡು, ಕಂದಾಗಿದ್ದ ಬಿಳೀ ಯೂನಿಫಾರ್ಮ್ ಶರಟು ತೊಟ್ಟ, ಕಪ್ಪು ಹೊಗೆ ಮೆತ್ತಿಕೊಂಡ ಮುಖ ಹೊತ್ತ, ಕೂಲಿಯವ ಹೊತ್ತ ಮೂಟೆಯಂತೆ ಬ್ಯಾಗ್ ಹೊತ್ತ ನನ್ನನ್ನು ಕಂಡು ಅಮ್ಮ ಹೌಹಾರಿದ್ದರು. "ಬ್ಯಾಗ್ ಅಲ್ಲೇ ಮೂಲೆಯಲ್ಲಿಟ್ಟು ಮೊದಲು ಕೈಕಾಲು ಮುಖ ತೊಳೆದುಕೊಂಡು ಬಾ" ಅಂತಂದರು. ಶಾಲೆ ಮುಗಿಸಿ ಬಂದ ನನ್ನಂಥೋರಿಗೇ ಸ್ಪೆಷಲ್ ಸರದಿ ಊಟದ ಸಮಯವದು. ಬಾಳೇ ಎಲೆಯ ಮೇಲಿನ ಸಾಲು ನನಗೆ ಎಟಕುತ್ತಿರಲಿಲ್ಲ. ಅರ್ಥಾತ್ ಆ ಪಲ್ಯಗಳು, ಕೋಸಂಬರಿ, ಹಾಗಲಕಾಯಿ ಗೊಜ್ಜು ಯಾವುದೂ ನನಗೆ ಬೇಕಿರಲಿಲ್ಲ. ಎರಡನೇ ಬದಿಯ ಆಹಾರ ಮಾತ್ರ ನನ್ನದು. ಪಾಯಸ ಮೊದಲು. ಕಷ್ಟ ಪಟ್ಟುಕೊಂಡು ತೊವ್ವೆ ತಿನ್ನಾಟ. ಇನ್ನೂ ಹಪ್ಪಳಕ್ಕೆ ಕೈಹಚ್ಚೋ ಮುನ್ನ ಕೂಟು ಪ್ರತ್ಯಕ್ಷ. ಹಲಸಿನಕಾಯಿಯೇ ಪ್ರಮುಖವಾಗಿದ್ದರಿಂದ ಮೇಣದಂತಿತ್ತು. ಎಂಥ ಗಟ್ಟಿ ಮಾರಾಯ್ರೇ? ಅವರು ಹಾಕಿದ ಕೂಟಿನಿಂದ ಎಲ್ಲ ತರಕಾರಿ ಪಕ್ಕಕ್ಕೆ ಇಟ್ಟ ಮೇಲೆ ಉಳಿದಿದ್ದು ಏನೂ ಇಲ್ಲ ಅನ್ನಬಹುದೇನೋ? ಇದ್ದಷ್ಟೆ ಕಲಿಸಿಕೊಂಡು ಮೆದ್ದು, ಹಪ್ಪಳ, ಚಿತ್ರಾನ್ನ ಮುಗಿಸೋಷ್ಟರಲ್ಲಿ ಸಾರಿಗೆ ಅನ್ನ!
ಆಹಾ! ಸಾರು ಅಂದರೆ ನನಗೆ ಪ್ರಾಣ. ಬರೀ ಸಾರು ತಿಂದುಕೊಂಡೇ ದೇಹ ಒಣಗಿರೋದು ಅಂತ ಬೈಸಿಕೊಂಡಿರೋದಕ್ಕೆ ಲೆಕ್ಕವೇ ಇಲ್ಲ. ಅನ್ನ ಸಿದ್ದ ಮಾಡಿಟ್ಟುಕೊಂಡೆ. ಸಾರು ಬಂತು. ಅವರು ಹಾಕಿದ ಸಾರು ನನ್ನ ಎಲೆಯಲ್ಲಿ ನಿಲ್ಲಲೇ ಇಲ್ಲ. ಪಕ್ಕದೆಲೆಗೆ ಹೋಗಿತ್ತು. ಥತ್! ಮೊದಲಲ್ಲಿ ಕೂಡಬಾರದಿತ್ತು. ಕನಿಷ್ಟ ಎರಡನೇಯವನಾಗಿ ಕೂತಿದ್ದರೂ ಎಡಬದಿಯ ಸಾರು ನನ್ನೆಲೆಗೆ ಬಂದಿರೋದು. ಆ ಸಮಾರಾಧನೆಯೂ ಆಯ್ತು. ಸಿಹಿಯನ್ನು ತಂದವರು ಹಿರಿಯ ಅಡುಗೆಯವರು. "ಮೇಲಿನ ಸಾಲಲ್ಲಿರೋದನ್ನ ಯಾರೋ ತಿಂತಾರೆ?" ಅಂತ ಗದರಿದರು. ನಾನು ನೋ ಟಾಕಿಂಗು! ಸ್ವೀಟ್ ಬಡಿಸಿ ಮುಂದೆ ಹೋದರು. ಜಿಲೇಬಿ ಕಣ್ರೀ ಜಿಲೇಬಿ! ನನ್ನದೇ ಸ್ವೀಟುಗಳ ಸಾಮ್ರಾಜ್ಯದ ಪರಮವೈರಿ! ಬೇರೆ ಸ್ವೀಟ್ ಮಾಡೋಕ್ಕೆ ಬರೋಲ್ವಾ ಇವರಿಗೇ? ಹೋಳಿಗೆ, ಲಾಡು, ಮೈಸೂರುಪಾಕು, ಗೋಡಂಬಿ-ದ್ರಾಕ್ಷಿಯುಕ್ತ ರವೆಉಂಡೆ ಬದಿಗೆ ಬೊಂಬಾಯಿ ಬೋಂಡ ಇವೆಲ್ಲ ಮಾಡ್ಲಿಕ್ಕೆ ಬರೋಲ್ವೇ ಇವರಿಗೆ?
ಯಾವುದೇನೇ ಆಗಲಿ ಕರಿಬೇವು, ಶುಂಠಿಯುಕ್ತ ನೀರು ಮಜ್ಜಿಗೆ ಅದ್ಬುತವಾಗಿತ್ತು. ಊಟದ ಆಟ ಮುಗಿದಿತ್ತು. ಹೊಟ್ಟೆ ತುಂಬಿತು ಅನ್ನಿಸಿತು! ಕೈ ತೊಳೆಯಲು ಹಾದು ಹೋಗುತ್ತಿರುವವರಾರೋ 'ಕೋಳಿ ಕೆದೆರಿದ ಹಾಗೆ ಎಲೆ ಕೆದರಿದ್ದೀಯಾ' ಅಂತಂದು ಮುಂದೆ ಹೋದರು. ಚಿಕ್ಕವರಾಗಿ ಹುಟ್ಟಬಾರದು ಕಣ್ರೀ! ಸುಮ್ಮನೆ ಇರಲಿ ಇಟ್ಕೋ ಅಂತ ಬೈದು ಮುಂದೆಹೋಗ್ತಾರೆ! ನಮ್ ದುಡ್ಡು ನಮ್ ಕಾಸು ನಿಮ್ದೇನು ಅನ್ನೋಣ ಅಂತ ಮನಸ್ಸಿಗೆ ಬಂತು ಬಿಟ್ಟಿ ಊಟ ಅಂತ ಸುಮ್ಮನಾದೆ!
ಬ್ಯಾಗ್ ಏರಿಸಿ ಅಮ್ಮನ ಜೊತೆ ಮನೆ ಕಡೆ ಪಯಣ. ಒಂದೂವರೆ ಘಂಟೆ ಬಸ್ ಪಯಣ ಆದ ಮೇಲೆ ಮನೆ ಒಳಗೆ ಹೊಕ್ಕಂತೆ ಅಮ್ಮನನ್ನು ಕೇಳಿದೆ "ಹಸಿವೆ ಆಗ್ತಿದೆ. ಊಟಕ್ಕೆ ಏನಿದೆ?"...











Click it and Unblock the Notifications