ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣಾಭಿಷೇಕದ ನಡುವೆ ಸಿಂಗಾರ ಕ್ರೀಡಾ ಸಂಜೆ!

By ವೆಂಕಟ್, ಸಿಂಗಪುರ
|
Google Oneindia Kannada News

ಸಂಜೆಯ ರಾಗಕೆ, ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳೆಕಿನ ಕೋಡಿ ಚೆಲ್ಲಾಡಿದೆ
ಈಗ ರಂಗೇರಿದೆ......

ಸುಬ್ರಾಯ ಚೊಕ್ಕಾಡಿ ಅವರ ಈ ಕವನದ ಸಾಲುಗಳು ಮೊನ್ನೆ, ಅಂದ್ರೆ ಶನಿವಾರ ಜನವರಿ 20ರ ಸಂಜೆ ಇದ್ದಕ್ಕಿದ್ದಂತೆ ನೆನಪಾಗಿ ಮನಸು ಹಾಡಲು ಶುರುಮಾಡಿದ್ದು ಏಕೆಂದರೆ, ಕನ್ನಡ ಸಂಘ (ಸಿಂಗಪುರ) ಏರ್ಪಡಿಸಿದ್ದ "ಸಿಂಗಾರ ಕ್ರೀಡಾ ಸಂಜೆ"ಯ ರಂಗು ಕ್ರೀಡಾಂಗಣದ ಎಲ್ಲೆಡೆ ಹರಡಿ ಎಲ್ಲರನ್ನೂ ಆಡಲು ಕರೆದಂತಿತ್ತು!

ದುಬೈ ಕನ್ನಡ ಕುವರನ ಸಂಗೀತಕ್ಕೆ ಕವಿತಾ ಕೃಷ್ಣಮೂರ್ತಿ ಮೆಚ್ಚುಗೆದುಬೈ ಕನ್ನಡ ಕುವರನ ಸಂಗೀತಕ್ಕೆ ಕವಿತಾ ಕೃಷ್ಣಮೂರ್ತಿ ಮೆಚ್ಚುಗೆ

ವರುಣಾಭಿಷೇಕದ ಮುನ್ನೆಚ್ಚರಿಕೆ ಇದ್ದರೂ, ಎಲ್ಲರ ಉತ್ಸಾಹವನ್ನು ನೋಡಿದಾಗ ಮಕ್ಕಳ ಮನಸ್ಸಿನ ದೊಡ್ಡವರು, ದೊಡ್ಡವರು ಆಡಿ ತೋರುವ ಆಟಗಳನ್ನು ಆಡಲು ಬಂದಂತಹ ಚಿಣ್ಣರು! ಆಟಗಳನ್ನು ಆಡಲು ಸಿದ್ಧರಾಗಿಯೇ ಬಂದಂತೆ ಕಾಣುತಿತ್ತು.

Singara sports evening amid rain in Singapore

ಇದೇ ಪ್ರಪ್ರಥಮ ಬಾರಿ ಸಂಘದಿಂದ ಇಡಿ ಸ್ಟೇಡಿಯಂ (Toa Payoh)ನ ಹೊನಲು ದೀಪದ ಕೆಳಗೆ, ಹಸಿರು ಹುಲ್ಲಿನ ಹಾಸಿಗೆಯ ಹೊದಿಕೆಯ ಮೇಲೆ ಸಾಲು ಸಾಲು ಗ್ರಾಮೀಣ ಆಟಗಳಾದ ಕಬಡ್ಡಿ, ಖೋ-ಖೊ, ಲೆಮನ್-ಸ್ಪೂನ್, ಸ್ಕಿಪ್ಪಿಂಗ್, ಗೋಣಿಚೀಲದ ಓಟ, ಲಗೋರಿ, ಓಟದ ಸ್ಪರ್ಧೆಗಳು ಒಂದೆಡೆ ಆದರೆ, ಅದೇ ಕ್ರೀಡಾಂಗಣದ ಇನ್ನೊಂದು ಬದಿಯ ಛಾವಣಿಯ ಕೆಳಗಡೆ ವಿಧ-ವಿಧ ತಿಂಡಿ, ಭಕ್ಷ್ಯಗಳು ತಿಂಡಿಪೋತ ಆಟಗಾರರಿಗೆ ಸವಾಲಿನಂತೆ ಸಾಲು ಸಾಲಾಗಿ ನಿಂತು ಸ್ವಾಗತಿಸುತ್ತಿದ್ದವು!

ಮಿಡ್ಲ್ ಈಸ್ಟ್ ನಲ್ಲಿ ಮನೆ ಹುಡುಕಿ ನೋಡು!ಮಿಡ್ಲ್ ಈಸ್ಟ್ ನಲ್ಲಿ ಮನೆ ಹುಡುಕಿ ನೋಡು!

ಕ್ರೀಡಾಂಗಣದ ಅ೦ಕಣದ ರೂಪುರೇಷೆ, ಬಿಳಿ ಬಣ್ಣದ ಗೆರೆಗಳು ಗುರುತುಗಳನ್ನು ನೋಡುತ್ತಿದ್ದರೆ ಕಾರ್ಯಕಾರಿ ಸಮಿತಿ ಹಾಗೂ ಉಪ ಸಮಿತಿಯ ಸದಸ್ಯರ ತಂಡದ ಸಿದ್ಧತೆ ಹಾಗೂ ಶ್ರಮದ ಫಲ ನಿಚ್ಚಳವಾಗಿ ಕಾಣುತಿತ್ತು, ಯಾವುದೇ ತೊಂದರೆ ಇಲ್ಲದೇ ಸುಲಲಿತವಾಗಿ ಸಜ್ಜುಗೊಂಡ ಮೈದಾನದ ಮೆರುಗು.

Singara sports evening amid rain in Singapore

ಸಂಜೆ 5 ಗಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ ಅವರು ಎಲ್ಲರನ್ನೂ ಸ್ವಾಗತಿಸಿ ಆಟಗಾರರಿಗೆ ಶುಭಕೋರಿದರು. ಕಾರ್ಮೋಡದ ಛಾಯೆ ಬೀಸುತ್ತಿದ್ದಂತೆ ಮಕ್ಕಳ ಓಟದ ಸ್ಪರ್ಧೆಗಳೊಂದಿಗೆ ಮೈದಾನ ರಂಗೆದ್ದಿತು. ಮೂರು ಸುತ್ತು ಓಡುವಷ್ಟರಲ್ಲಿ ಮಳೆರಾಯನೂ ಸಹ ನಮ್ಮ ಆಟದಲ್ಲಿ ಪಾಲ್ಗೊಳ್ಳಲು ಬಂದೇ ಬಿಟ್ಟ. ಇನ್ನೇನು ಮಾಡಬೇಕೆನ್ನುವಷ್ಟರಲ್ಲಿ ಸಂಘದ ಉಪಾಧ್ಯಕ್ಷೆ ಅರ್ಚನಾ ಪ್ರಕಾಶ್ ಅವರು ಸ್ಕಿಪ್ಪಿಂಗ್ ಆಟಗಳನ್ನು ಛಾವಣಿಯಡಿಯಲ್ಲಿ ಘೋಷಿಸಿಯೇ ಬಿಟ್ಟರು. ಬಿರುಸಿನಿಂದ ಸಾಗಿದ ಸ್ಕಿಪ್ಪಿಂಗ್ ಆಟದ ಮಧ್ಯೆ ನಡೆದ ಹಾಸ್ಯ ಚಟಾಕಿಗಳು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದವು.

ಸಿಂಗಪುರದಲ್ಲಿ ಸ್ಟೇಡಿಯಂನಲ್ಲಿ ನಾವಿದ್ದೀವಿ ಎಂಬುದನ್ನು ಮರೆತು ಯಾವುದೋ ಹಳ್ಳಿ/ಪಟ್ಟಣದ ಜಾತ್ರೆಯ ಸಡಗರದಲ್ಲಿದ್ದಂತೆ ಭಾಸವಾಗುತಿತ್ತು. ಗುಂಪು ಗುಂಪಾಗಿ ಮಾತಾಡುತ್ತಾ, ಅಲ್ಲಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡಿ ನಲಿಯುತ್ತಾ, ಕೆಲವರು ಕೂಗಿ ಕರೆದು ಪ್ರೋತ್ಸಾಹಿಸಿದರೆ, ಇನ್ನು ಕೆಲವರು ಅವರಿವರ ಕಾಲೆಯುಳುತ್ತಾ ಛೇಡಿಸಿ ಹಾಗಾಗ ಮಧ್ಯದಲ್ಲಿ ಪಾನಿಪೂರಿ, ಮಸಾಲಾ ಹಪ್ಪಳ, ವೆಜ್-ಬರ್ಗರ್, ಸ್ವೀಟ್ಸ್, ಚಪಾತಿ, ಬಿಸಿಬೇಳೆ ಬಾತ್ಗಳ ಸ್ವಾದವನ್ನು ಗುಳುಂ ಮಾಡಿ ಮತ್ತೆ ಆಟದ ಟ್ರ್ಯಾಕ್ಗೆ ಬಂದು ಮೆಲ್ಲನೆ ಯಾವುದಾದರೂ ಆಟದಲ್ಲಿ ನುಸುಳಿಗೊಳ್ಳುತ್ತಿದ್ದರು!

Singara sports evening amid rain in Singapore

ಇದೆಲ್ಲಾ ಹಾಗೂ ಎಲ್ಲರ ಆಟಗಳನ್ನು ಯಾರಿಗೂ ಅರಿಯದಂತೆ ಆಕಾಶದಿಂದ ಗಮನಿಸುತ್ತಾ, ಎಲ್ಲವನ್ನೂ ರೆಕಾರ್ಡ್ ಮಾಡುತ್ತಾ ಹಾರಾಡುತ್ತಿದ್ದ ದ್ರೋಣಾಚಾರ್ಯರು (ಡ್ರೊನ್ ಕ್ಯಾಮರಾ) ಎಲ್ಲರ ಗುರುಗಳು ಮೇಲೆ ಇದ್ದರೆ, ಅದನ್ನು ನೋಡಿ ನೋಡಿ ಆಟ ಆಡಿ ತಮ್ಮ ಗಮನ ಸೆಳೆಯುವಂತೆ ಮಾಡಿ ಆಕರ್ಷಿಸುವ ಅನೇಕಾನೇಕ ಶಿಷ್ಯ ಏಕಲವ್ಯರು ಕೆಳಗಡೆ!

ಒಟ್ಟಿನಲ್ಲಿ ಇಡಿ ವಾತಾವರಣ ಒಂದು ತರಹದ ಮಾಯಾಬಜಾರ್ ನಂತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳು ಆಟದ ರೂಲ್ಸ್ ಅರ್ಥವಾಗದಿದ್ದರೂ ಸುಮ್ಮನೆ ಅಲ್ಲಿ -ಇಲ್ಲಿ ಓಡಾಡುತ್ತಾ ಆಟ ಆಡುತ್ತಿದ್ದರೆ, ಕೆಲವು ಮಕ್ಕಳು ಓಟ, ಸ್ಕಿಪ್ಪಿಂಗ್ನಲ್ಲಿ ಗಂಭೀರವಾಗಿ ಗೆಲ್ಲಬೇಕೆಂಬ ಛಲದಲ್ಲಿ ಆಡುತ್ತಿದ್ದರು!

ದೊಡ್ಡವರು ಯಾವುದೋ ಶಕ್ತಿಯನ್ನು ಆವಾಹನೆ ಮಾಡಿಕೊಂಡು 200 ಮೀಟರ್ ರೌಂಡ್ ಮುಗಿಸಿದೆ ಎಂದು ಹೆಮ್ಮೆಯಿಂದ ದ್ರೋಣಾಚಾರ್ಯರಿಗೆ ವರದಿಯನ್ನು ಸಲ್ಲಿಸಿದರೆ, ಹೆಂಗಳೆಯರ ಕಬಡ್ಡಿಗೆ ಇಡಿ ದಂಡು ದಂಡೇ ನಿಂತು ಪ್ರೋತ್ಸಾಹಿಸಿದ್ದನ್ನು, ದ್ರೋಣರೂ ಮೂಕವಿಸ್ಮಿತರಾಗಿ ನೋಡುತ್ತಾ ಅಲ್ಲೇ ಹಾರಾಡುವಂತಾಗಿತ್ತು!

Singara sports evening amid rain in Singapore

ಸೋ ಕಾಲ್ಡ್ ಗಂಡಸರು ಮೊಣಕಾಲನ್ನು ಊರದೆ ನಿಂತುಕೊಂಡು ಖೊ...ಖೋ ಕೊಟ್ಟಿದ್ದು, ಸಿಕ್ಕಿದ್ದೇ ಚಾನ್ಸ್ ಅಂತ ಕಬಡ್ಡಿಯಲ್ಲಿ ಸಿಕ್ಕ ಒಬ್ಬ ಬಕ್ರಾನ ಮೇಲೆ ಹಿಂಡು-ಹಿಂಡಾಗಿ ಮುಗಿಬಿದ್ದು ಕೈ-ಕಾಲು ತಿರುಗಿಸಿದ್ದು, ಓಡುತ್ತಾ...ಓಡುತ್ತಾ ಮುಗ್ಗರಿಸಿಯೇ ಬಿದ್ದು ಓಡುವ ಪಂದ್ಯವನ್ನು ಗೆದ್ದಿದ್ದು, ಸ್ಕಿಪ್ಪಿಂಗ್ನಲ್ಲಿ ಕೆಲವರು ಹೈ ಜಂಪ್ ಆಟವನ್ನೂ ಸೇರಿಸಿ ಆಡಿದ್ದು, ಮಳೆ ಬರುವಾಗ ಎಲ್ಲರೂ ತಂಪಾಗಿ ಸುತ್ತ ಯಾರಿಲ್ಲವೆಂಬಂತೆ ತಿಂಡಿ-ತೀರ್ಥಗಳನ್ನು ಸೇವಿಸಿದ್ದು ದಿನದ ಮುಖ್ಯಾಂಶಗಳು ಎನ್ನಬಹುದು.

ಒಟ್ಟಿನಲ್ಲಿ ಒಂದು ಅನಿರ್ವಚನೀಯವಾದಂತಹ ಅನುಭವ, ಎಲ್ಲರ ಮುಖದಲ್ಲೂ ನಗು, ಎಲ್ಲರೂ ಮಕ್ಕಳಂತೆ ಆಡಿ ನಲಿದಿದ್ದು, ಸಂಘದ ಸದಸ್ಯರ ಶ್ರಮಕ್ಕೆ ಸಿಕ್ಕ ಪ್ರತಿಫಲವೆನ್ನಬಹುದು.

ಮೊದಲ ಬಾರಿಗೆ ಸಂಘದ ಕಾರ್ಯಕ್ರಮದಲ್ಲಿ ರುಚಿ-ರುಚಿಯಾಗಿ ತಿಂಡಿಗಳನ್ನು ಸಿಂಗನ್ನಡಿಗ ಮಹಿಳೆಯರು ತಯಾರಿಸಿಕೊಂಡು ಬಂದು ಅಗ್ಗದ ದರದಲ್ಲಿ ಮಾರುವ ಅವಕಾಶವನ್ನು ಕೊಟ್ಟಿದ್ದು ಒಂದು ವಾಣಿಜ್ಯೋದ್ಯಮದ ಮನೋಭಾವಕ್ಕೆ ಕೊಟ್ಟಂತಹ ವೇದಿಕೆ ಎಂಬುದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ಹೊಸ ಹೊಸ ಪ್ರಯೋಗಗಳಲ್ಲಿ ಸಂಘವು ತನ್ನನ್ನು ತೊಡಗಿಸಿಕೊಂಡು ಬೆಳೆಯುತ್ತಿರುವುದು ಹೆಮ್ಮೆಯ ವಿಷಯ.

Singara sports evening amid rain in Singapore

ಕೊನೆಯಲ್ಲಿ ಕೆಲವು ಪಂದ್ಯಗಳ ಅಂತಿಮ ಸುತ್ತು ನಡೆದವು, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಿಂದ ಗೆದ್ದಂತಹ ಪಟುಗಳಿಗೆ, ತಂಡಗಳಿಗೆ ಪದಕಗಳನ್ನು ನೀಡಲಾಲಾಯಿತು. ರಾತ್ರಿ ಹತ್ತಾದರೂ, ಮಕ್ಕಳು ಇನ್ನೂ ನಮಗೆ ಕಬಡ್ಡಿ ಆಡಿಸೋಲ್ವಾ ಅಂಕಲ್ ಅಂದ್ರೆ, ದೊಡ್ಡವರು ನಾವಿನ್ನೂ ಲಗೋರಿ ಆಡಿಲ್ಲ, ಮಕ್ಕಳು ಇನ್ನೊಂದು ಸಲ ಖೊ-ಖೊ ಆಡಬಹುದಾ, ಹೀಗೆ ಸಾಗುತಿತ್ತು ಎಡಬಿಡದ ಆಡುವ ದಾಹ.

ತಮ್ಮ ಬಾಲ್ಯದಲ್ಲಿ ಆಡುತ್ತಿದ್ದ ಆಟಗಳ ಪರಿಯನ್ನು ವ್ಯಕ್ತಪಡಿಸಿ ತೋರಲು ಎಲ್ಲಾ ಪೋಷಕರು ಉತ್ಸುಕರಾಗಿದ್ದರೆ, ಮಕ್ಕಳೆಲ್ಲರೂ "It's... So FUN, you are ಸೊ.... lucky to have such games"! ಅಂತ ಎಲ್ಲೋ ಒಂದು ಮಗು ಹೇಳುವುದನ್ನು, ಕೇಳಿ ನಕ್ಕೆ, ಹೌದು ನಿಜಕ್ಕೂ ನಾವು luckyನೇ!

ಕೊನೆಯಲ್ಲಿ ಸೇರಿದ್ದ ಎಲ್ಲಾ 200 ಜನರು ಕನ್ನಡಕ್ಕಾಗಿ ಮಾನವ ಸರಪಳಿಯನ್ನು ಸೃಷ್ಟಿಸಿದಾಗ, ಎಲ್ಲ ಸದಸ್ಯರು ಕನ್ನಡ ಸಂಘ (ಸಿಂಗಪುರ)ಕ್ಕೆ ಜೈಕಾರ ಹಾಕಿ, ಶುಭಕೋರಿದರು.

Singara sports evening amid rain in Singapore

"ಸಿಂಗಾರ ಕ್ರೀಡಾ ಸಂಜೆ" ಎನ್ನುವುದು ಆಟದ ವಾರ್ಷಿಕೋತ್ಸವದ ಕಾರ್ಯಕ್ರಮವಾಗಲಿ ಎಂದು ಎಲ್ಲರೂ ಆಶಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಎಲ್ಲರನ್ನೂ ಈ ಕ್ರೀಡಾಂಗಣದ ಅಖಾಡಕ್ಕೆ ಕರೆದೊಯ್ದು ಎಲ್ಲರನ್ನೂ ಆಟ ಆಡಿಸಿದ ಮುಂಚೂಣಿಯ ಪಟುಗಳು, ಸಿಂಗಾರ ಕ್ರೀಡಾ ಸಮಿತಿಯ ಸದಸ್ಯರಾದ ನರೇಂದ್ರ ಮಧುಗಿರಿ, ರಮ್ಯಾ, ನಿರ್ಮಲ, ಸತೀಶ್, ವಿನಾಯಕ್ ಹಾಗೂ ಸಮಂತ್ ಅವರಿಗೊಂದು ದೊಡ್ಡ ಸಲಾಂ!

ಕ್ಯಾಮರ ಕಣ್ಣಲ್ಲೇ ಎಲ್ಲಾ ಆಟಗಳನ್ನು ನೋಡಿ ಮೋಡಿ ಮಾಡಿದ ByTu ಸ್ಟುಡಿಯೋದ ವರುಣ್ ಸಮಂತ್ ಹಾಗು ಆನಂದ್ ಮತ್ತು ಬಹು ಮುಖ್ಯವಾಗಿ ಸತತ 5 ಗಂಟೆಗಳ ಕಾಲ ದ್ರೋಣಾಚಾರ್ಯರಿಗೆ ಮಾರ್ಗದರ್ಶನ ಮಾಡಿದಂತಹ ಗುರುಗಳಾದ ಗುರುರಾಜ್ ಉಪಾಧ್ಯ ಅವರ ಸಮರ್ಪಣಾ ಭಾವ ಶ್ಲಾಘನೀಯ.

English summary
It was fun all the way. Kids, elders, men, women enthusiastically participated in sports event conducted by Singapore Kannada Sangha on January 20. The rain did not dampen the spirits of the participants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X