• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕತಾರ್ ರಾಜ್ಯೋತ್ಸವಕ್ಕೆ ರಂಗು ತಂದ ರಂಗೇಗೌಡ, ಶಿವಣ್ಣ

By ಎಚ್.ಕೆ. ಮಧು, ಕತಾರ್
|

ಕತಾರಿನಲ್ಲಿ ವಾರಾಂತ್ಯ ಶುಕ್ರವಾರ, ರಜಾದಿನ. ಆದುದರಿಂದ ನವೆಂಬರ್ 25ರಂದು ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿತ್ತು. ಅದೊಂದು ತಂಪಾದ ಮಧ್ಯಾಹ್ನ, ಇದೇನು ಕೊಲ್ಲಿ ದೇಶದಲ್ಲಿ ತಂಪಾದ ವಾತಾವರಣವೆಂದು ಆಶ್ಚರ್ಯಚಕಿತರಾಗಬೇಡಿ. ಭಾರತದಿಂದ, ಕರ್ನಾಟಕದಲ್ಲಿನ ನಮ್ಮೂರಿನಿಂದ ಆಗಮಿಸಿದ ಮಹಾನುಭಾವರಿಗೆ, ಅದಮ್ಯ ಚೇತನಗಳಿಗೆ, ಕಲಾವಿದರಿಗೆ, ಪ್ರಕೃತಿಯು ಪ್ರಸನ್ನವಾಗಿ, ಮರುಭೂಮಿಯಲ್ಲಿ ಮಳೆಬಿದ್ದು, ನೆಲ, ಸ್ಥಳ, ಪರಿಸರವನ್ನು ತಂಪಾಗಿಸಿತ್ತು.

ಮೂರು ಘಂಟೆಯ ಹೊತ್ತಿಗೆ ಸಂಪೂರ್ಣವಾಗಿ ಸಜ್ಜಾಗಿದ್ದ ವೇದಿಕೆಗೆ, ನೆರೆದಿದ್ದ ವಿಶಾಲ ಜನಸ್ತೋಮದ ಸಮ್ಮುಖದಲಿ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು. ಮಾತೃಭೂಮಿ, ಕನ್ನಡನಾಡಿನಿಂದ ಆಗಮಿಸಿದ್ದ ವಿಶೇಷ ಆಹ್ವಾನಿತರು, ರಾಜ್ಯೋತ್ಸವದ ಗೌರವಾನ್ವಿತ ಅತಿಥಿಗಳಾದ ಡಾ|| ದೊಡ್ಡರಂಗೇಗೌಡರು, ಹಾಗು ಡಾ|| ಪುತ್ತೂರಾಯರು, ಇವರೊಂದಿಗೆ ನೆರೆದ ಇತರ ಗಣ್ಯರು, ಸಂಘದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಎಲ್ಲರೂ ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಇವರುಗಳನ್ನು ಪೂರ್ಣ ಕುಂಭಗಳನ್ನು ಹಿಡಿದ ಸುಮಂಗಲಿಯರು ಸ್ವಾಗತಿಸಿದರು. [ಕತಾರ್ ನಲ್ಲಿ ಕನ್ನಡ ರಾಜ್ಯೋತ್ಸವ, ನಮ್ ರೇಡಿಯೋ ಜತೆ ಶಿವಣ್ಣ]

ನೃತ್ಯ-ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮೊದಲುಗೊಂಡಿತು. ಸಂಘದ ಅಧ್ಯಕ್ಷರಾದ ಎಚ್.ಕೆ. ಮಧುರವರು ರಚಿಸಿದ, ಅಶ್ವಿನ್ ಸಂಗೀತ ಸಂಯೋಜಿಸಿ, ರಾಜೇಶ್ ಕೃಷ್ಣನ್ ಹಾಗು ಮಾನಸ ಹೊಳ್ಳರವರ ಧ್ವನಿ ನೀಡಿರುವಂತಹ ಗೀತೆಗೆ ಪ್ರತಿಭಾನ್ವಿತ ಸ್ಥಳೀಯ ಕಲಾವಿದರಿಂದ ನೃತ್ಯ ಪ್ರದರ್ಶನ ನೀಡಲಾಯಿತು. ಕರ್ನಾಟಕ ಧ್ವಜವು ಹಾಡಿನಾದ್ಯಂತ, ವೇದಿಕೆಯ ಮೇಲೆ ರಾರಾಜಿಸುತ್ತಿತ್ತು. ನಾಟ್ಯವಾಡುತ್ತಿದ್ದ ಪ್ರತಿಯೋರ್ವರ ಉಡುಪು ನಮ್ಮ ನಾಡ ಧ್ವಜದ ಬಣ್ಣವನ್ನು ಹೊಂದಿದ್ದುದು ವಿಶೇಷ ಮೆರುಗು ನೀಡಿತು.

ನಂತರ ಕರ್ನಾಟಕ ಸಂಘ ಕತಾರಿನ ಸಹೋದರ ಸಂಘ ಸಂಸ್ಥೆಗಳಾದ, ತುಳು ಕೂಟ, ಬಂಟ್ಸ್ ಕತಾರ್, ಎಂ.ಸಿ.ಸಿ, ಇವರುಗಳಿಂದ ಡಾ|| ಶಿವರಾಜಕುಮಾರ್ ರವರು ನಟಿಸಿದ ಚಲನಚಿತ್ರಗಳ ಹಾಡುಗಳನ್ನಾಧರಿಸಿ ನೃತ್ಯಗಳನ್ನು ಪ್ರದರ್ಶಿಸಿದರು. ಪ್ರತಿಯೊಂದು ಪ್ರಸ್ತುತಿಯು ವರ್ಣರಂಜಿತವಾಗಿಯು, ವೀಕ್ಷಕರ ಹುಬ್ಬೇರಿಸಿ, ಮೈರೋಮಾಂಚನಗೊಳಿಸಿದವು. ನೋಡುತ್ತಿರುವವರು ಕಣ್ಣು ರೆಪ್ಪೆಗಳನ್ನು ಮಿಟುಕಿಸಲು ಮರೆತೇ ಹೋಗಿದ್ದರು. ನೃತ್ಯದ ಹಿನ್ನೆಲೆ ಸಂಗೀತ ಕೂಡ ಅಷ್ಟೇ ಅದ್ಭುತವಾಗಿತ್ತು.

ಸಭಾಂಗಣದ ಬಗೆಗೆ ಹೇಳದೆ ಮುನ್ನಡೆಯುವುದಸಾಧ್ಯ. 'ಅಲ್-ವಜ್ಬಾ ಬಾಲ್ ರೂಂ', ಸುಮಾರು 1,000 ಜನರನ್ನು ಸುರಕ್ಷಿತವಾಗಿ, ಸ್ಥಳಾವಕಾಶ ಕಲ್ಪಿಸಿಕೊಡುವ ಒಂದು ಬೃಹತ್ ಆಲಯವೆಂದೆ ಪರಿಗಣಿಸಬಹುದು. ಮೂರು ಮುಖ್ಯ ದ್ವಾರಗಳು ಸ್ವಾಗತಿಸಿದರೆ, ವೇದಿಕೆಯ ಹಿಂಬದಿಯಲ್ಲಿ ಎರಡು ದ್ವಿತೀಯ ನಿರ್ಗಮನ ದ್ವಾರಗಳನ್ನು ಹೊಂದಿವೆ. ರಾಜ್ಯೋತ್ಸವದ ಪ್ರಯುಕ್ತ ವೇದಿಕೆಗೆ, ಕರ್ನಾಟಕದ ಭೂಪಟವನ್ನಿಟ್ಟು, ದೀಪಾಲಂಕಾರ ಮಾಡಲಾಗಿತ್ತು. ಹಿನ್ನೆಲೆಯಲ್ಲಿ ಕರ್ನಾಟಕ ಸಂಘದ ಲಾಂಛನ, ದೊಡ್ಡರಂಗೇಗೌಡರ, ಶಿವರಾಜ್ ಕುಮಾರರ ಹಾಗು ಮತ್ತಿತ್ತರ ಆಹ್ವಾನಿತರ ಭಾವ ಚಿತ್ರಗಳನ್ನಿಟ್ಟು ಕಲಾತ್ಮಕವಾಗಿ ವೇದಿಕೆಯನ್ನು ಅಲಂಕರಿಸಲಾಗಿತ್ತು.

ಸುಮಾರು 18-20 ಅಡಿ ಎತ್ತರದ ಸುತ್ತಣ ಗೋಡೆಗಳು, ಸ್ಥಳೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬಣ್ಣ ಬಣ್ಣದ ಕಲಾಕೃತಿಗಳನ್ನು ಹೊಂದಿದ್ದುವು. ಇನ್ನು ಮೇಲ್ಛಾವಣಿಯಿಂದ 7 ಬೃಹತ್ ಗಾತ್ರದ ದೀಪಗಳನ್ನು ತೂಗಿಸಲಾಗಿತ್ತು. ಅದರಲ್ಲಿ ಮಧ್ಯದ ಪ್ರಮುಖ ದೀಪ, ಸುಮಾರು 6 ಅಡಿಗೂ ಎತ್ತರದ್ದಾಗಿತ್ತು. ನೋಡುಗರಿಗೆ ಅಚ್ಚರಿ ಮೂಡಿಸದೆ ಬಿಡದು. ಇಂತಹ ಅದ್ಭುತ ವಾತಾವರಣದಲ್ಲಿ ರಾಜ್ಯೋತ್ಸವದ ಕಾರ್ಯಕ್ರಮ ನಡೆಸುವುದೆ ಅತೀವ ಸಂಭ್ರಮದ ವಿಷಯ. [ಕನ್ನಡ ನಾಡಗೀತೆ ಹೊಸ ಆವೃತ್ತಿಯ ಸಂಗೀತದಲ್ಲಿ ಕೇಳಿ ಆನಂದಿಸಿ]

ಶಿವರಾಜ್ ಆಗಮನ : ನೃತ್ಯ ಕಾರ್ಯಕ್ರಮಗಳ ನಂತರ, ಜನರಿಗೆ ಹಿರಿಯರ ಬಗೆಗೆ, ವೃದ್ಧಾಪ್ಯದಲ್ಲಿ, ಮಾತೃ-ಪಿತೃಗಳನ್ನು ಅನಾಥರನ್ನಾಗಿಸಬಾರದೆಂಬ ಅರ್ಥಪೂರ್ಣ ನಾಟಕವನ್ನು ಪ್ರದರ್ಶಿಸಲಾಯಿತು. ಇದರ ಸಮಾಪ್ತಿಯ ನಂತರ ಸಂಜೆಯಾಗುತ್ತಿದಂತೆ, ಸಭಾಂಗಣದಲ್ಲಿ ನವೀನದೊಂದು ಅಲೆ ಮೂಡತೊಡಗಿತು. ನಟ ಸಾರ್ವಭೌಮರ ಜ್ಯೇಷ್ಠ ಪುತ್ರ ಡಾ|| ಶಿವರಾಜ್ ಕುಮಾರ್ ರವರ ಆಗಮನ ರಾಜೋಚಿತವಾಗಿತ್ತು. ಅವರೊಡನೆ ಚಿ. ಉದಯಶಂಕರರ ಸುಪುತ್ರರಾದ ಚಿ. ಗುರುದತ್ತರು ತಮ್ಮ ತಂದೆಯ ಸವಿನೆನಪಿನ ಸಂಕೇತವಾಗಿ ಹೆಸರಿಡಲಾಗಿದ್ದ ದ್ವಾರದ ಮೂಲಕ ಪ್ರವೇಶಿಸಿದರು. ಇವರುಗಳನ್ನು ಗಣ್ಯರ ಜೊತೆ ಸಮಸ್ತ ಜನಸ್ತೋಮ ಸೇರಿ ಸ್ವಾಗತಿಸಿದರು. ಅಭಿಮಾನಿಗಳು ಶಿವಣ್ಣರನ್ನು ಸುತ್ತುವರಿದು ಮುನ್ನಡೆಯಲು ಅವಕಾಶ ಸಿಗದಷ್ಟು ಕಿಕ್ಕಿರಿದಿದ್ದರು. ಶಿವಣ್ಣರಿಗೆ ಹಾಗು ನೆರೆದವರೆಲ್ಲರಿಗೂ ಸಂತಸ ತುಂಬಿದ ಹರುಷ.

ಕತಾರ್ ಕನ್ನಡ ಸಮ್ಮಾನ್ : ಸಾರ್ವಜನಿಕ ಕಾರ್ಯಕ್ರಮದಲ್ಲಿ ಡಾ|| ದೊಡ್ಡರಂಗೇಗೌಡರಿಗೆ 'ಕತಾರ್ ಕನ್ನಡ ಸಮ್ಮಾನ್' ನೀಡಿ ಗೌರವಿಸಲಾಯಿತು. ಸನ್ಮಾನದ ನಂತರ ಸಭೆಯನ್ನುದೇಶಿಸಿ ಮಾತನಾಡಿದ ಅವರು, ತಮ್ಮ ಭಾಷಣದಲ್ಲಿ ತಾವು ಈಜಿಪ್ಟಿನಲ್ಲಿ ಕಂಡ 'ಊರಲ್ಲಿ' ಎಂಬ ಕನ್ನಡ ಲಿಪಿಯನ್ನು ಉಲ್ಲೇಖಿಸಿ, ತಾವು ಕರ್ನಾಟಕ ಸರಕಾರಕ್ಕೆ ಇದರ ಬಗ್ಗೆ ಬರೆದು ತಿಳಿಸಿದ ನಂತರವೆ, ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ನೀಡಲಾಯಿತು ಎನ್ನುವುದು ಶ್ಲಾಘನೀಯ ಎಂದರು.

ರಾಜಕಲಾರತ್ನ : ಈ ಸಂದರ್ಭದಲ್ಲಿ ಕತಾರ್ ಕರ್ನಾಟಕ ಸಂಘದ ವತಿಯಿಂದ ಶಿವರಾಜ್ ಕುಮಾರ್ ರವರಿಗೆ 'ರಾಜಕಲಾರತ್ನ' ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನಂತರ ಶಿವರಾಜ್ ಕುಮಾರ್ ಹಾಗು ಗೀತಾ ಶಿವರಾಜ್ ಕುಮಾರ್ ದಂಪತಿಗಳನ್ನು ಸನ್ಮಾನಿಸಲಾಯಿತು. ಗೀತಾ ಶಿವರಾಜ್ ಕುಮಾರ್ ರವರಿಗೆ ಸಾಂಪ್ರದಾಯಿಕವಾಗಿ ಬಾಗಿನ ನೀಡಿ ಸತ್ಕರಿಸಲಾಯಿತು. ಇನ್ನು ಶಿವಣ್ಣನವರು ತಮ್ಮ ಕಿರು ಭಾಷಣದಲ್ಲಿ ತಮಗೆ ಕತಾರ್ ಬೇರೆಯಲ್ಲ, ಸಮಸ್ತ ಕನ್ನಡಿಗರೆಲ್ಲರೂ ಒಂದೆ ಮನೆಯವರಂತೆ ಎಂದು ಹೇಳಿ ತಮ್ಮ ವಿಶ್ವ ಕನ್ನಡ ಹಿರಿಮೆಯನ್ನು ಮೆರೆದರು.

ಇದೆ ಸಂದರ್ಭದಲ್ಲಿ ಕೆಳಕಂಡ ಸ್ಥಳೀಯ ಗಣ್ಯರಿಗೆ ತಮ್ಮ ಸಾಧನೆಗಳಿಗೆ ಸನ್ಮಾನ ಮಾಡಲಾಯಿತು.

1. ನಿಯಾಜ಼್ ಅಹ್ಮದ್, ಕೆ.ಎಂ.ಸಿ.ಎ. ಅಧ್ಯಕ್ಷರು, 2016ನೇ ಸಾಲಿನ ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

2. ದೀಪಕ್ ಶೆಟ್ಟಿ, ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರು ಹಾಗು ಪ್ರಸ್ತುತ ಸಲಹಾ ಸಮಿತಿ ಅಧ್ಯಕ್ಷರು, 2016ನೇ ಸಾಲಿನ ಆರ್ಯಭಟ ಪ್ರಶಸ್ತಿ ಪುರಸ್ಕೃತರು.

3. ಅಶ್ವಿನ್, ಸಂಗೀತ ಸಂಯೋಜಕರು ಹಾಗು ಬಹುಮುಖ ಪ್ರತಿಭೆ, 2016ನೇ ಸಾಲಿನ 'ರಾಗರತ್ನಾಕರ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೆ ತುಂಬಿದ ಪರಿಪೂರ್ಣ ವೇದಿಕೆಯ ಮೇಲೆ, ಗಣ್ಯರ ಸಮ್ಮುಖದಲ್ಲಿ ಕರ್ನಾಟಕ ಸಂಘ ಕತಾರಿನ ರಾಜ್ಯೋತ್ಸವದ ವಾರ್ಷಿಕ ವಿಶೇಷ ಸಂಚಿಕೆಯಾದ 'ಶ್ರೀಗಂಧ' ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಶಿವಣ್ಣನವರಿಗಾಗಿಯೆ ರಚಿಸಿದ ಹಾಡುಗಳ ಸರಣಿಯನ್ನು ನೃತ್ಯರೂಪದಲ್ಲಿ ಪ್ರದರ್ಶಿಸಲಾಯಿತು. ಸ್ವತಃ ಶಿವಣ್ಣನವರೆ ವೇದಿಕೆಗೆ ಬಂದು ಕುಣಿದು ಮನರಂಜಿಸಿದರು. ನೋಡುಗರಿಗೆ ಆಶ್ಚರ್ಯ ಹಾಗು ಸಂತಸ ಎರಡರ ಸಮ್ಮಿಲನ.

ಸಂಪೂರ್ಣ ಕಾರ್ಯಕ್ರಮವನ್ನು ಹಸನ್ಮುಖಿಯಾಗಿ, ಸ್ಫೂರ್ತಿತುಂಬಿದ ನಿರೂಪಣೆಯಿಂದ ನಡೆಸಿಕೊಟ್ಟದ್ದು ಬೆಂಗಳೂರಿನಿಂದ ಆಗಮಿಸಿದ್ದ 'ನಮ್ ರೇಡಿಯೋ' ಖ್ಯಾತಿಯ ರೂಪಾ ಗುರುರಾಜ್ ರವರು. ಸುಶ್ರಾವ್ಯ ವಾದ್ಯ ತಂಡದಿಂದ ಸಂಗೀತ ಕಾರ್ಯಕ್ರಮ ಮಿಕ್ಕ ಸಂಜೆಗೆ ಮೆರುಗು ನೀಡಿತು. ಯುವ ಪ್ರತಿಭೆ ಚೆನ್ನಪ್ಪ ಹುದ್ದಾರರಿಂದ ಬಬ್ರುವಾಹನ ಚಲನಚಿತ್ರದಲ್ಲಿನ ಅಣ್ಣಾವ್ರ ನಟನೆ, ಧ್ವನಿ, ಆರ್ಭಟ, ಠೀವಿ, ಗತ್ತು ಅಲ್ಲಿದ್ದವರಿಗೆ ಮಾತ್ರ ಅದನ್ನು ನೋಡಿ ಕೇಳಿ, ಆನಂದಿಸುವ ಅವಕಾಶ, ಅದನ್ನು ಭಾಷೆಯಲ್ಲಿನ ಪದಗಳಲ್ಲಿ ವಿಶ್ಲೇಶಿಸಿದರೆ ಅದು ಅಪೂರ್ಣವಾಗುಳಿಯುತ್ತದೆ. ಒಂದಂತು ನಿಜ ಸಾಕ್ಷಾತ್ ಅಣ್ಣಾವ್ರ ಜೀವಂತ ನೋಡಿದ ಭಾಸವಾಯಿತು.

ಒಟ್ಟಿನಲ್ಲಿ ಒಂದು ಅವಿಸ್ಮರಣೀಯ ಸಂಜೆ. ಸಂಗೀತ, ನೃತ್ಯ, ಮಾತುಗಳ ಮಧ್ಯೆ ಮೈಮರೆತು ಮಧ್ಯಾಹ್ನ ಸಂಜೆಯಾಗಿ, ಸಂಜೆಯು ರಾತ್ರಿಯಾದುದೆ ತಿಳಿಯಲಿಲ್ಲ. ಹೊರದೇಶಗಳಲ್ಲಿ, ಅದರಲ್ಲು ಕೊಲ್ಲಿ ದೇಶದಲ್ಲಿ, ಕರ್ನಾಟಕದ ದ್ವಜ ಹೀಗೆ ಮೇಲೇರುತ್ತಿರಲಿ, ನಮ್ಮ ನಾಡು ನುಡಿ, ಸಂಸ್ಕೃತಿ, ಹೆಸರು, ಸಂಪ್ರದಾಯ ಎಲ್ಲೆಡೆ ಹರಡಲಿ, ನಮ್ಮ ನಾಡ ಕಂಪು-ಇಂಪು ಸಕಲ ದಿಕ್ಕುಗಳಲ್ಲಿ ಪಸರಿಸಲಿ, ಎಂದು ಆಶಿಸಿವುದು ಮಾತ್ರವಲ್ಲದೆ, ಅದಕ್ಕಾಗಿ ಇರುವನಕ ದುಡಿಯಲು ಪಣತೊಟ್ಟು, ಸೇವಕರಾಗೋಣ ಬನ್ನಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Rajyotsava was celebrated by Qatar Kannada Sangha on November 25 in the presence of Kannada actors Shiva Rajkumar, Chi Gurudatta, lyricist Dodda Rangegowda and Geetha Shiva Rajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more