ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಮೈಮರೆಸಿದ ಮುರಳಿ ನಿನಾದ

By ರೇಖಾ ಹೆಗಡೆ ಬಾಳೇಸರ, ಸಿಂಗಪುರ
|
Google Oneindia Kannada News

ಹಿಂದೆ ಗೋಪಾಲಕರು ಗುಡ್ಡ, ಬೆಟ್ಟಗಳಲ್ಲಿ ದನ ಮೇಯಿಸುವಾಗ ಒಂದೆಡೆ ಕುಳಿತು ಪಹಾಡಿ ರಾಗದಲ್ಲಿ ಕೊಳಲು ಊದುತ್ತಿದ್ದರೆ ಅಲ್ಲಿ ಇಲ್ಲಿ ಚದುರಿ ಮೇಯುತ್ತಿದ್ದ ದನಕರುಗಳು, ಇತರ ಪಶುಪಕ್ಷಿಗಳೆಲ್ಲ ದನಗಾಹಿಗಳ ಸುತ್ತುವರಿದು ಮಂತ್ರಮುಗ್ಧರಾದಂತೆ ಆ ನಿನಾದವನ್ನು ಆಲಿಸುತ್ತಿದ್ದರಂತೆ. ಒಂದೊಮ್ಮೆ ಯಾವುದಾದರೂ ದನ ಕಳೆದು ಹೋಯ್ತೆಂದರೆ, ಆ ರಾಗವನ್ನು ನುಡಿಸುವ ಮೂಲಕ ಹಸುವನ್ನು ಆಕರ್ಷಿಸಿ ತಮ್ಮಲ್ಲಿಗೆ ಕರೆಸಿಕೊಳ್ಳುತ್ತಿದ್ದರಂತೆ ದನ ಕಾಯುವವರು. ಮೊನ್ನೆ ಕರ್ನಾಟಕದ ಕೊಳಲು ಮಾಂತ್ರಿಕ 'ಸುರಮಣಿ' ಪ್ರವೀಣ ಗೋಡ್ಖಿಂಡಿ ಈ ಐತಿಹ್ಯವನ್ನು ಹೇಳಿ, ನಂತರ ಈ ಜನಪದ ರಾಗದ ಶಾಸ್ತ್ರೀಯ ರೂಪವಾದ ರಾಗ ಮಿಶ್ರಪಹಾಡಿ ನುಡಿಸಿದರು. ಹದಿನೈದು ನಿಮಿಷ ವಿವಿಧ ಹಾಡುಗಳ ರೂಪದಲ್ಲಿ ನಲಿದ ಈ ರಾಗ ಕೊನೆಗೊಳ್ಳುವ ಹೊತ್ತಿಗೆ ದನವಲ್ಲದಿದ್ದರೂ ಸಭಾಂಗಣದಲ್ಲಿ ನೆರೆದಿದ್ದ ಜನರೆಲ್ಲ ಮೋಡಿಗೊಳಗಾಗಿ ಮೈಮರೆತಿದ್ದರು.

ಗೋಡ್ಖಿಂಡಿಯವರ ಮುರಳಿಯ ಮೋಡಿ ಹರಡಿಕೊಂಡಿದ್ದು ಇದೇ 12ನೇ ಅಕ್ಟೋಬರ್ 2014ರಂದು, ಸಿಂಗಪುರ ಪಾಲಿಟೆಕ್ನಿಕ್ಕಿನ ಸಭಾಂಗಣದಲ್ಲಿ, ಕನ್ನಡ ಸಂಘ (ಸಿಂಗಪುರ) ಆಯೋಜಿಸಿದ್ದ 'ವೇಣು ನಿನಾದ' ಕಾರ್ಯಕ್ರಮದಲ್ಲಿ. ತಮ್ಮ 'ಕೃಷ್ಣ ಫ್ಯೂಷನ್' ತಂಡದೊಂದಿಗೆ ಆಗಮಿಸಿ ಸಿಂಗಪುರ ಕನ್ನಡಿಗರಿಗೆ ಮೋಹನ ಮುರಳಿಯ ಸವಿ ಗಾನ ಉಣಬಡಿಸಿದ ಅವರ ಈ ಸಂಗೀತ ಕಚೇರಿ ಯಾವುದೇ ರಾಕ್ ಕಾನ್ಸರ್ಟ್‍ ಮೀರಿಸುವಂಥ ಅಮೋಘ ಚೈತನ್ಯವನ್ನು ಹೊಂದಿತ್ತು. [ಸಂಗೀತ ಮಾಂತ್ರಿಕರ ಭ್ರಮೆ]


ರಾಗ ಹಂಸಧ್ವನಿಯೊಂದಿಗೆ ಕಚೇರಿ ಆರಂಭಿಸಿದ ಅವರು, ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರೊಂದಿಗೆ ಹೊರತಂದ ಜನಪ್ರಿಯ 'ರಾಗ ರಂಗ್' ಅಲ್ಬಂನ ಕೆಲವು ಕೃತಿಗಳನ್ನು ನುಡಿಸಿದರು. ಇದಾದ ಬಳಿಕ ರಾಗ ಮಾಲಕೌಂಸ್ ಅನ್ನು ಅದರ ಶಾಸ್ತ್ರೀಯ ರೂಪದಲ್ಲಿ, ಚಲನಚಿತ್ರಗಳ ಅಳವಡಿಕೆ ರೂಪದಲ್ಲಿ ಪ್ರಸ್ತುತಪಡಿಸಿದ ಅವರು ಕೇಳುಗರ ಆಸಕ್ತಿಯನ್ನು ಹೆಚ್ಚಿಸಿದರು. ರಾಗಗಳ ಕುರಿತಾದ ಕುತೂಹಲಕಾರಿ ವಿಷಯಗಳನ್ನು ತಿಳಿಸುತ್ತ, ಹಿಂದೂಸ್ತಾನಿ ರಾಗಗಳು, ಅವುಗಳ ಕರ್ನಾಟಕ ಸಂಗೀತದ ಅವತರಣಿಕೆಗಳ ಮಾಹಿತಿ ತಿಳಿಸುತ್ತ, ಸಂವಹಿಸುತ್ತ ಕೇಳುಗರನ್ನೂ ಗಾನ ಗಾರುಡಿಯಲ್ಲಿ ತೊಡಗಿಸಿಕೊಂಡರು.

ರಾಗ ಮಿಶ್ರ ಪಹಾಡಿಯಂತೂ ಶುಕಪಿಕಗಳ ಕಲರವವನ್ನೂ ಒಳಗೊಂಡು, ದೂರದ ಬೆಟ್ಟದ ಒಂಟಿ ಮರದ ತಂಪಿನಲ್ಲಿ ಗೋವುಗಳ ಗೋಲೆಯ ನಡುವೆ ಮುರಳಿಯ ಮೋಡಿಯಲ್ಲಿ ಮುಳುಗಿಹೋಗಿರುವ ಗೊಲ್ಲನೊಬ್ಬನ ಮಾಯಾಲೋಕಕ್ಕೆ ಕೇಳುಗರನ್ನು ಕರೆದೊಯ್ದಿತು. ಕಾರ್ಯಕ್ರಮದ ಕೊನೆಯ ಅಂಗವಾಗಿ ರಾಗ ಮೋಹನದಲ್ಲಿ (ಭೂಪ ರಾಗ) ತಮ್ಮದೇ ಕೃತಿ 'ಕೃಷ್ಣ' ಅನ್ನು ಸವಿವರವಾಗಿ ನುಡಿಸಿ ಪ್ರಸ್ತುತಪಡಿಸಿದರು. ಸಂಗೀತದ ಸ್ವರವಿಸ್ತಾರವನ್ನು ಅನುಸರಿಸಿ ಕೇಳುಗರು ಒಕ್ಕೊರಲಿನಲ್ಲಿ 'ಕೃಷ್ಣ' ಎಂದು ಉದ್ಗರಿಸುತ್ತಿದ್ದುದು, ಇಡೀ ಸಭಾಂಗಣವನ್ನು ಸಂಗೀತದಲ್ಲಿ ಒಂದುಗೂಡಿಸಿತ್ತು.

Pravin Godkhindi flute mesmerizes Singapore

ಮೂರು ತಾಸುಗಳ ಈ ಕಾರ್ಯಕ್ರಮವನ್ನು ಪ್ರವೀಣ ಗೋಡ್ಖಿಂಡಿ ಅವರು ನಿಂತುಕೊಂಡೇ ಪ್ರಸ್ತುತಪಡಿಸಿದ್ದು ಪ್ರೇಕ್ಷಕರಲ್ಲಿ ಅಚ್ಚರಿ ಮೂಡಿಸಿತು. ಅವರಿಗೆ ಜೊತೆಯಾದ ತಂಡದ ಇತರ ಸದಸ್ಯರಾದ ಕಿರಣ್ ಗೋಡ್ಖಿಂಡಿ (ತಬಲ), ಪದ್ಮನಾಭ ಕಾಮತ್ (ರಿದಂ ಪ್ಯಾಡ್) ಮತ್ತು ಉಮೇಶ್ (ಕೀ ಬೋರ್ಡ್), 'ಕೃಷ್ಣ ಫ್ಯೂಷನ್'ನ ಜನಪ್ರಿಯತೆಯ ಕಾರಣವನ್ನು ತಮ್ಮ ಕೈಚಳಕದ ಮೂಲಕ ಸಮರ್ಥವಾಗಿ ನಿರೂಪಿಸಿದರು.

ಹೆಸರಿಗೆ ತಕ್ಕಂತೆ ತಮಗೊಲಿದ ವಾದ್ಯದ ವಾದನದಲ್ಲಿ 'ಪ್ರವೀಣ'ರಾದ ಕಲಾವಿದ ಗೋಡ್ಖಿಂಡಿ ಅವರಿಗೆ ಕನ್ನಡ ಸಂಘ (ಸಿಂಗಪುರ)ವು ಈ ಸಂದರ್ಭದಲ್ಲಿ 'ಸಿಂಗಾರ ಕಲಾ ರತ್ನ' ಪ್ರಶಸ್ತಿ ನೀಡಿ ಗೌರವಿಸಿತು.

ಸ್ಥಳೀಯ ಸಂಗೀತ ಗುರು ಭಾಗ್ಯ ಮೂರ್ತಿ ಅವರು ಪ್ರವೀಣ ಗೋಡ್ಖಿಂಡಿ ಅವರಿಗೆ ಸಂಘದ ಪರವಾಗಿ ಶಾಲು ಹೊದೆಸಿ ಸನ್ಮಾನಿಸಿದರೆ, ಸಂಘದ ಉಪಾಧ್ಯಕ್ಷೆ ಕವಿತಾ ರಾಘವೇಂದ್ರ ಅವರು ಇತರ ಕಲಾವಿದರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಮಸ್ತ ಕೇಳುಗರು ಎದ್ದು ನಿಂತು ಐದು ನಿಮಿಷ ಎಡೆಬಿಡದ ಕರತಾಡನದ ಮೂಲಕ ತಮ್ಮ ಅಭಿಮಾನ, ಪ್ರಶಂಸೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿದು ಸಂಗೀತದ ದನಿ ಅಡಗಿದ್ದರೂ, ಪ್ರೇಕ್ಷಕರು ಇನಿಗಾನದ ಗುಂಗಿನಿಂದ ಹೊರಬಂದಿರಲಿಲ್ಲ, ಮೆಚ್ಚುಗೆಯ ಮಹಾಪೂರ ಹರಿಸುತ್ತ, ತಮ್ಮ ಪುಳಕಕ್ಕೆ, ಪರವಶತೆಗೆ ದನಿಯಾಗುತ್ತಲಿದ್ದರು.

English summary
Flute (bansuri) player Pravin Godkhindi mesmerizes Singapore Kannadigas with variety of renditions in a musical program 'Venu Ninaada' organized by Singapore Kannada Sangha on 12th October. Report by Rekha Hegde Balesara, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X