ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರಕ್ಕೆ ಪ್ರೇಮಲೋಕ ತಂದ ಹಂಸಲೇಖ

By ರೇಖಾ ಹೆಗಡೆ ಬಾಳೇಸರ
|
Google Oneindia Kannada News

ಕನ್ನಡ ಸಂಘ, (ಸಿಂಗಪುರ)ದ ಬಹು ನಿರೀಕ್ಷಿತ, ಮಹತ್ವಾಕಾಂಕ್ಷೆಯ ಕಾರ್ಯಕ್ರಮ, 'ಹಂಸಲೇಖ- ಪ್ರೇಮಲೋಕ' ಮಾರ್ಚ್ 1ರ ಸಂಜೆ ಇಲ್ಲಿನ ಕನ್ನಡಿಗರನ್ನು ಪ್ರೇಮಧಾರೆಯಲ್ಲಿ ತೋಯಿಸಿತು. ಸಿಂಗಪುರ ಪಾಲಿಟೆಕ್ನಿಕ್ ಸಭಾಂಗಣದಲ್ಲಿ, ಅಭಿಮಾನಿಗಳ ಅಭೂತಪೂರ್ವ ಹಾಜರಾತಿಯೊಂದಿಗೆ ನಡೆದ ಈ ಚಲನಚಿತ್ರ ಗೀತೋತ್ಸವದಲ್ಲಿ ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಹಂಸಲೇಖ ಮತ್ತವರ ತಂಡ ಸುಮಾರು ಮೂರೂವರೆ ಗಂಟೆಗಳ ಪ್ರೇಮಲೋಕವನ್ನು ಧರೆಗೆ ತಂದಿತ್ತು.

ಬಹು ಜನಪ್ರಿಯವಾದ ಹಾಗೂ ಹಂಸಲೇಖ ಅವರ ಹೃದಯಕ್ಕೆ ಹತ್ತಿರವಾದ 'ಕ್ಲಿಯರ್ ನ್ಯೂಕ್ಲಿಯರ್' ಹಾಡಿನ ಥೀಮ್ ಹಾಗೂ ಸಂಗೀತದೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ದನಿ ನೀಡಿ ಜೀವ ತುಂಬಿದವರು 'ಹಂಸ'ಜೋಡಿ ಲತಾ ಹಂಸಲೇಖ ಮತ್ತು ಪ್ರತಿಭಾವಂತ ಗಾಯಕರಾದ ಬದರಿ ಪ್ರಸಾದ್, ನಂದಿತ ರಾಕೇಶ್, ಸಂತೋಷ್ ಹಾಗೂ ನಂದಿನಿ ಹಂಸಲೇಖ. ಇವರಿಗೆ ವಾದ್ಯ ಸಹಕಾರ ನೀಡಿದವರು ಎಂ.ಎಸ್.ವಿ. ರಾಜ (ಸ್ಯಾಕ್ಸೋಪೋನ್), ನಟರಾಜ್ (ಕೊಳಲು), ನಾಗರಾಜ್ (ಕೀಬೋರ್ಡ್), ಕಾರ್ತೀಕ್ (ಎಲೆಕ್ಟ್ರಿಕ್ ಗಿಟಾರ್) ಹಾಗೂ ರವಿರಾಜ್ (ಕೀಬೋರ್ಡ್).

ಸಮಾಜದಲ್ಲಿ ವಿವಿಧ ಪ್ರಕಾರದ ಜನ 'ಹೆಣ್ಣನ್ನು ನೋಡುವ ದೃಷ್ಟಿ' ಹೇಗಿರುತ್ತದೆ ಎಂಬುದನ್ನು 'ಹಂಸ'ಗೀತೆಗಳಾದ 'ಈ ನಿಂಬೆ ಹಣ್ಣಿನಂಥ ಹುಡುಗಿ', 'ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು', 'ಬಂಗಾರದಿಂದ ಬಣ್ಣಾನ ತಂದ...'ದಂಥ ಹಾಡುಗಳ ಮೂಲಕ ಆರಂಭಿಸಿದ ತಂಡ ತುಂಟತನ, ನವಿರು ಪ್ರೇಮದ ಲೇಪದೊಂದಿಗೆ ಕೇಳುಗರಿಗೆ ಕಚಗುಳಿ ಇಟ್ಟಿತು. ನಂತರದ ಹಂತದಲ್ಲಿ 'ಎಲೆ ಹೊಂಬಿಸಿಲೆ', 'ಒಂದೆ ಉಸಿರಂತೆ ಇನ್ನು ನಾನು ನೀನು', 'ಪ್ರೀತಿ ಮಾಡಬಾರದು..', 'ಪುಟ್ಟಮಲ್ಲಿ ಪುಟ್ಟಮಲ್ಲಿ..'ನಂಥ ಹಾಡುಗಳ ಮೂಲಕ ಪ್ರೌಢ ಪ್ರೇಮದ ಪರಿಚಯ ಮಾಡಿಕೊಟ್ಟಿತು. ಇದರ ನಡುವೆ ತಂಡದ ಸದಸ್ಯರ ಪರಿಚಯ ಮಾಡಿಕೊಟ್ಟ ಹಂಸಲೇಖ, ಎಲ್ಲ ಗಾಯಕಿ/ಕರು ಹಾಗೂ ವಾದಕರೊಂದಿಗಿನ ತಮ್ಮ ಸಂಬಂಧ, ಒಡನಾಟವನ್ನು, ಅವರ ಮೇಲೆ ತಮಗಿರುವ ಅಭಿಮಾನವನ್ನು ಸಿಂಗನ್ನಡಿಗರೊಂದಿಗೆ ಹಂಚಿಕೊಂಡರು.

Hamsalekha brings Premaloka to Singapore

ಹಂಸಲೇಖ ಅವರಿಗೆ ಅಪಾರ ಜನಪ್ರಿಯತೆ ಹಾಗೂ ಪುರಸ್ಕಾರಗಳನ್ನು ತಂದುಕೊಟ್ಟ ಚಲನಚಿತ್ರಗಳ 'ಆಕಾಶದಾಗೆ ಯಾರೋ ಮಾಯಗಾರನು', 'ಗೀತಾಂಜಲಿ...', 'ಈ ಭೂಮಿ ಬಣ್ಣದ ಬುಗುರಿ', 'ಪ್ರೀತಿಯಲ್ಲಿ ಇರೋ ಸುಖ...' ಮತ್ತಿತರ ಹಾಡುಗಳು ಅವರ ಸಂಗೀತ ಹಾಗೂ ಸಾಹಿತ್ಯ ರಚನೆಯ ವಿಸ್ತಾರವನ್ನು ಸಿಂಗಪುರ ಕನ್ನಡಿಗರೆದುರು ಹರಡಿದ್ದಲ್ಲದೇ, ಅವರೆಲ್ಲರನ್ನು ನೆನಪುಗಳ ಅಲೆಯ ಮೇಲೆ ತೇಲಿಸಿದವು.

ಕನ್ನಡ ಸಂಘ, (ಸಿಂಗಪುರ)ದ ಹೆಮ್ಮೆಯ ಗೌರವ 'ಸಿಂಗಾರ ಕಲಾ ರತ್ನ' ಪುರಸ್ಕಾರವನ್ನು ಹಂಸಲೇಖ ಅವರಿಗೆ ಅರ್ಪಿಸಲಾಯಿತು. ಸಂಘದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ ಅವರ ನೇತೃತ್ವದಲ್ಲಿ ಹಂಸಲೇಖ ದಂಪತಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡಿದ್ದಲ್ಲದೇ, ಎಲ್ಲ ಅತಿಥಿ ಕಲಾವಿದರಿಗೆ ಕಿರುಗಾಣಿಕೆ ನೀಡಿ ಗೌರವಿಸಲಾಯಿತು. ಹಾಗೆಯೇ, ಇತ್ತೀಚಿಗಷ್ಟೇ ನಮ್ಮನ್ನು ಅಗಲಿದ ಕನ್ನಡದ ಖ್ಯಾತ ನಟ, ರಂಗಕರ್ಮಿ ಸಿ.ಆರ್. ಸಿಂಹ ಅವರ ಗೌರವಾರ್ಥ ಕಾರ್ಯಕ್ರಮದಲ್ಲಿ ಮೌನಾಚರಣೆ ಮಾಡಲಾಯಿತು. [ಪಂಚಭೂತಗಳಲ್ಲಿ ಸಿಆರ್ ಸಿಂಹ ಲೀನ]

ಅನಾರೋಗ್ಯದಿಂದ ಬಳಲುತ್ತಿದ್ದು, ನಗರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ, ಕನ್ನಡ ಚಿತ್ರರಂಗದ ಮುಂದಾಳು ಅಂಬರೀಶ್ ಅವರು ಶೀಘ್ರ ಚೇತರಿಸಿಕೊಳ್ಳಲೆಂದು ಕಾರ್ಯಕ್ರಮದಲ್ಲಿ ಹಾರೈಸಿ, ಶುಭ ಕೋರಲಾಯಿತು. ತಂಡ ಪ್ರಸ್ತುತ ಪಡಿಸಿದ, ಅಂಬರೀಶ್ ಅವರ ಅಭಿನಯದಲ್ಲಿ ಮೂಡಿಬಂದ ಹಂಸಲೇಖ ಅವರ ಗೀತೆ 'ಓ ಅಭಿಮಾನಿ', ಕೇಳುಗರಲ್ಲಿ ಅಂಬರೀಶ್ ಪರ ಸದಾಶಯ ಮೂಡಿಸುವಲ್ಲಿ ಸಾರ್ಥಕವಾಯಿತು. ಹಂಸಲೇಖ ಅವರ ಜನಪ್ರಿಯತೆಗೆ ಮೈಲಿಗಲ್ಲಾದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಸಿಂಗಪುರ ಕನ್ನಡ ಸಮುದಾಯದ ಅನೇಕ ಸದಸ್ಯರು ವಯಸ್ಸಿನ ಭೇದವಿಲ್ಲದೇ ಹೆಜ್ಜೆ ಹಾಕಿ ಕುಣಿದು ಅಭಿಮಾನ ಮೆರೆದರು. ಅಣು ಸಮರದ ಪೊಳ್ಳುತನವನ್ನು ಸಾರುವ 'ಕ್ಲಿಯರ್ ನ್ಯೂಕ್ಲಿಯರ್' ಹಾಡು ಪ್ರೇಕ್ಷಕರ ಮನ ಕಲಕಿದ್ದಲ್ಲದೇ, ಪ್ರೇಮದ ಮಹತ್ವವನ್ನು ಮನಗಾಣಿಸಿತು, 'ಪ್ರೇಮಾಸ್ತ್ರದಿಂದ ಅಣ್ವಸ್ತ್ರವನ್ನು ಗೆಲ್ಲೋಣ' ಎಂಬ ಸಂದೇಶವನ್ನು ಸಭಿಕರೆಲ್ಲರ ಮನದಲ್ಲಿ ನಾಟಿಸಿತು. [ಅಂಬರೀಶ್ ಅನಾರೋಗ್ಯ]

ಆರಂಭದಲ್ಲಿ ಸಂಘ‌ದ ಅಧ್ಯಕ್ಷೆ ವಿಶಾಲಾಕ್ಷಿ ವೈದ್ಯ ಅವರು ಹಂಸಲೇಖ ಮತ್ತು ತಂಡದವರಿಗೆ, ಸಿಂಗನ್ನಡಿಗರಿಗೆ ಸ್ವಾಗತ ಕೋರಿದರೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್ ಅವರು ವಂದನಾರ್ಪಣೆ ಮಾಡಿದರು. ಸಮಯದ ಅಭಾವದಿಂದ ಬೇಗ ತೆರೆ ಬಿದ್ದರೂ, ಕಾರ್ಯಕ್ರಮ ಕೇಳುಗರ ಮಸ್ತಕದ 'ಪ್ಲೇಯರ್'ನ ದೂಳು ಕೊಡವಿ... 'ಆನ್' ಗುಂಡಿ ಒತ್ತಿ, ಅದರಲ್ಲಿ ಒಂದಿಷ್ಟು ಸಮಯಾತೀತ 'ಹಂಸ'ಗೀತೆಗಳು ತಿರುತಿರುಗಿ ಗಿರಗಟ್ಟೆ ಹೊಡೆದು ನುಡಿಸುತ್ತಿರುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

English summary
Kannada cineme music director Hamsalekha created Premaloka through variety of Kannada movie songs composed by him. Singapore Kannada Sangha had organized Hamsalekha musical evening on March 1. He was presented with Singara Kala Ratna award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X