ನ್ಯೂಜೆರ್ಸಿಯಲ್ಲಿ ವಿಜೃಂಭಣೆಯ ಗುರು ರಾಯರ ವರ್ಧಂತಿ

By: ಸರಿತಾ ನವಲಿ, ನ್ಯೂ ಜೆರ್ಸಿ
Subscribe to Oneindia Kannada

ನ್ಯೂ ಜೆರ್ಸಿಯ ಶ್ರೀ ಕೃಷ್ಣವೃಂದಾವನದಲ್ಲಿ ಶ್ರೀ ಗುರು ರಾಘವೇಂದ್ರ ವರ್ಧಂತಿ ಮತ್ತು ದೇವಸ್ಥಾನದ 13ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 2ರಂದು ಶನಿವಾರ ಶ್ರದ್ಧೆ, ಭಕ್ತಿಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.

ದಿನವಿಡೀ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಯಿತು. ಬೆಳಿಗ್ಗೆಯ ಪೂಜೆಗಳಲ್ಲಿ ಪುಣ್ಯವಾಚನ, ವೇದ ಪಾರಾಯಣ, ತತ್ವಹೋಮ, ಮೂಲಮಂತ್ರ ಜಪ, ವಿಷ್ಣುಸಹಸ್ರನಾಮ ಪಾರಾಯಣಗಳಲ್ಲದೇ ಪಂಚಾಮೃತ ಅಭಿಷೇಕ, ವಿಶೇಷವಾಗಿ 108 ಕಲಶ ಪ್ರತಿಷ್ಠೆ ಮತ್ತು ಅಭಿಷೇಕಗಳನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.

Guru Raghavendra vardhanti in New Jersey

ಮಧ್ಯಾಹ್ನದ ಸಮಯದಲ್ಲಿ ಮಹಾಪೂಜೆ, ಮಹಾಮಂಗಳಾರತಿಯೊಂದಿಗೆ ಪಾಲ್ಗೊಂಡಿದ್ದ ನೂರಾರು ಭಕ್ತರಿಗೆ ತೀರ್ಥ-ಪ್ರಸಾದ ಮತ್ತು ಮಹಾಪ್ರಸಾದವನ್ನು ವಿತರಿಸಲಾಯಿತು. ಅಂದಿನ ಸಂಜೆಯ ಪೂಜೆಯ ಅಂಗವಾಗಿ, ಉತ್ಸವ ಪೂಜೆ, ರಂಗ ಪೂಜೆ, ಪಲ್ಲಕ್ಕಿ ಉತ್ಸವ, ರಥೋತ್ಸವ, ಅಷ್ಟಾವಧಾನ ಸೇವೆಗಳನ್ನು ಸಲ್ಲಿಸಿ ಪ್ರಸಾದವನ್ನು ವಿತರಿಸಲಾಯಿತು.

ಶ್ರೀ ಕೃಷ್ಣವೃಂದಾವನ ದೇವಸ್ಥಾನದ 13ನೇ ವಾರ್ಷಿಕೋತ್ಸವದ ವಿಶೇಷ ಆಚರಣೆಯಾಗಿ, 'ಕೃಷ್ಣಾರ್ಪಣಂ' ಎಂಬ ನೃತ್ಯಪಂಚಕವನ್ನು ಪ್ರಸ್ತುತಪಡಿಸಲಾಯಿತು. ಈ ನೃತ್ಯಪಂಚಕದಲ್ಲಿ 5 ಶ್ರಾಸ್ತ್ರೀಯ ನೃತ್ಯಶೈಲಿಗಳಾದ ಭರತನಾಟ್ಯ, ಮೋಹಿನಿ ಅಟ್ಟಂ, ಓಡಿಸ್ಸಿ, ಕಥಕ್ ಮತ್ತು ಕುಚ್ಚಿಪುಡಿ ನೃತ್ಯಗಳು ಮನಸೂರೆಗೊಂಡವು.

Guru Raghavendra vardhanti in New Jersey

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನ್ಯೂ ಯಾರ್ಕ್ ನಲ್ಲಿನ ಭಾರತದ ದೂತಾವಾಸ ಕಛೇರಿಯ ಅಧಿಕಾರಿಗಳಾದ ಕಾನ್ಸುಲ್ ಜೆನರಲ್ ರೀವಾ ಗಂಗೂಲಿ ದಾಸ್, ಡೆಪ್ಯುಟಿ ಕಾನ್ಸುಲ್ ಜೆನರಲ್ ಡಾ. ಮೊಹಾಪಾತ್ರ ಮತ್ತು ಧರ್ಮಾತ್ಮ ಡಾ. ಯಜ್ಞಸುಬ್ರಮಣಿಯನ್ ದಂಪತಿಗಳು ಆಗಮಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿತ್ತು.

ನೂರಾರು ಭಕ್ತರನ್ನುದ್ದೇಶಿಸಿ ಮಾತನಾಡಿದ ಕಾನ್ಸುಲ್ ಜೆನರಲ್ ರೀವಾ ಗಂಗೂಲಿ ದಾಸ್ ಅವರು, ಸಾವಿರಾರು ವರ್ಷಗಳ ನಾಗರೀಕತೆ ಮತ್ತು ಇತಿಹಾಸ ಹೊಂದಿರುವ ಭಾರತದ ಸಂಸ್ಕೃತಿ, ಪರಂಪರೆಗಳನ್ನು, ಅಮೆರಿಕಾದಲ್ಲಿ ಬೆಳೆಸಿ, ಮುಂದಿನ ಪೀಳಿಗೆಗೆ ಅದನ್ನು ತಿಳಿಯಪಡಿಸುವ ಒಳ್ಳೆಯ ಕಾರ್ಯವನ್ನು ಉಡುಪಿಯ ಶ್ರೀ ಪುತ್ತಿಗೆ ಮಠದ ಶಾಖೆಯಾದ ಶ್ರೀ ಕೃಷ್ಣವೃಂದಾವನ ನೆರವೇರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

Guru Raghavendra vardhanti in New Jersey

ಇದೇ ಸಂದರ್ಭದಲ್ಲಿ ಅಮೆರಿಕಾದಲ್ಲಿ ಬಹಳಷ್ಟು ಹಿಂದೂ ದೇವಾಲಯಗಳನ್ನು ನಿರ್ಮಿಸಿರುವ ಧರ್ಮಾತ್ಮ ಡಾ. ಯಜ್ಞಸುಬ್ರಮಣಿಯನ್ ಅವರು ಮಾತನಾಡಿ, ಶ್ರೀ ಕೃಷ್ಣವೃಂದಾವನ ದೇವಸ್ಥಾನ ಅಮೆರಿಕಾದಲ್ಲಿ ಬೆಳೆದು ಬಂದ ರೀತಿ, ನ್ಯೂ ಜೆರ್ಸಿಯಲ್ಲದೇ ಅಮೆರಿಕಾದ ಇತರ ರಾಜ್ಯಗಳಲ್ಲಿ ಮತ್ತು ಕೆನಡಾದಲ್ಲೂ ಶಾಖೆಗಳನ್ನು ಹೊಂದಿರುವ ಬಗ್ಗೆ ವಿವರಣೆ ನೀಡಿದರು.

ಪ್ರಧಾನ ಅರ್ಚಕರಾದ ಶ್ರೀ ಯೋಗೀಂದ್ರ ಭಟ್ ಅವರು ಮಾತನಾಡಿ, ನ್ಯೂ ಜೆರ್ಸಿಯಲ್ಲಿ ಶ್ರೀ ಕೃಷ್ಣವೃಂದಾವನ ಬೆಳೆದು ಬಂದ ರೀತಿಯನ್ನು ವಿವರಿಸುತ್ತ, ಶ್ರೀ ಕೃಷ್ಣನ ಅನುಗ್ರಹ, ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥಸ್ವಾಮಿಗಳ ಆಶೀರ್ವಾದ ಮತ್ತು ನೂರಾರು ಭಕ್ತರು, ಸ್ವಯಂಸೇವಕರುಗಳ ಸೇವೆ, ದೇವಸ್ಥಾನದ ಅಭಿವೃದ್ಧಿಗೆ ಕಾರಣವಾಗಿವೆಯೆಂದು ಅಭಿಪ್ರಾಯಪಟ್ಟರು.

Guru Raghavendra vardhanti in New Jersey

'ಭಗವದ್ಗೀತೆ' ಮತ್ತು 'ಮನುಸ್ಮೃತಿ' ಧರ್ಮಗ್ರಂಥಗಳ ಶ್ಲೋಕಗಳನ್ನು ಉಲ್ಲೇಖಿಸುತ್ತಾ, ಶ್ರೀ ಕೃಷ್ಣನ ಸಂದೇಶವನ್ನು ಮತ್ತು ಶುದ್ಧಸಂಕಲ್ಪದ ಮಹತ್ವವನ್ನು ವಿವರಿಸಿದರು. ಅಲ್ಲದೇ ಸ್ವಯಂಸೇವಕರುಗಳನ್ನು ಗೌರವಿಸಿ, ಮುಂಬರುವ ಶ್ರೀರಾಮನವಮಿಯ ಪ್ರಯುಕ್ತ ಏಪ್ರಿಲ್ 16ರಂದು, ಶ್ರೀ ಸೀತಾರಾಮ ಕಲ್ಯಾಣೋತ್ಸವವನ್ನು ವಿಶೇಷ ಪೂಜೆಗಳೊಂದಿಗೆ ಆಚರಿಸಲಾಗುವುದೆಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sri Guru Raghavendra vardhanti was celebrated at Sri Krishna Vrindavana in New Jersey on 2nd April. Maha pooja, homa havana, vishnu sahasranama, cultural activities were performed in the presence of thousands of devotees fro America.
Please Wait while comments are loading...