ವಿಧಾನಸೌಧದಲ್ಲಿ ಸಿದ್ದು ಏಕಾಂಗಿ ಓಡಾಟ, ಸಿಎಂ ಡಿಕೆಶಿ ಮುಖಾಮುಖಿಯಾದರೂ ಮಾತಿಲ್ಲ
ಬೆಂಗಳೂರು: ರಾಜಕೀಯದಲ್ಲಿ ಅಧಿಕಾರ ಮತ್ತು ಸ್ಥಾನಮಾನಗಳು ಬೇಗನೇ ಬದಲಾಗುತ್ತಿರುತ್ತವೆ. ಹಾಗೆಯೇ ಇದು ಯಾವುದು ಶಾಶ್ವತ ಅಲ್ಲ. ಎಷ್ಟೇ ದೊಡ್ಡ ಮನುಷ್ಯ ಆದರೂ ಕೂಡ ಆತನ ಬಳಿ ಅಧಿಕಾರ ಇಲ್ಲದಿದ್ದಾಗ ಪರಿಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ವಿಧಾನಸೌಧದ ಮೊಗಸಾಲೆಯಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಕೇವಲ ಕೆಲವು ದಿನಗಳ ಹಿಂದೆಯಷ್ಟೇ ಹತ್ತಾರು ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಬೆಂಬಲಿಗರ ಪಡೆಯೊಂದಿಗೆ ವಿಧಾನಸೌಧದ ಕಾರಿಡಾರ್‌ನಲ್ಲಿ ಗತ್ತಿನಿಂದ ಹೆಜ್ಜೆ ಹಾಕುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಒಂಟಿಯಾಗಿ ಓಡಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರ ಹಿಂದೆ ಮುಂಚಿನಂತೆ ಯಾವುದೇ ಶಾಸಕರಾಗಲಿ, ಸಚಿವರಾಗಲಿ ಅಥವಾ ಬೆಂಬಲಿಗರ ದಂಡಾಗಲಿ ಇರಲಿಲ್ಲ. ಅಧಿಕಾರ ಹೋಗುತ್ತಿದ್ದಂತೆ ರಾಜಕೀಯದ ಚಿತ್ರಣ ಸಂಪೂರ್ಣ ಬದಲಾಗಿದ್ದು, ಸಿದ್ದರಾಮಯ್ಯ ಅವರು ವಿಧಾನಸೌಧದ ಆವರಣದಲ್ಲಿ ಏಕಾಂಗಿಯಾಗಿ ನಡೆದುಕೊಂಡು ಹೋಗುತ್ತಿದ್ದರು.

ಇದೇ ವೇಳೆ ಮತ್ತೊಂದು ಕುತೂಹಲಕಾರಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಘಟನೆಯೂ ನಡೆದಿದೆ. ವಿಧಾನಸೌಧದ ಆವರಣದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನಿರೀಕ್ಷಿತವಾಗಿ ಮುಖಾಮುಖಿಯಾಗಿದ್ದಾರೆ. ಆದರೆ, ಇಬ್ಬರೂ ನಾಯಕರು ಪರಸ್ಪರ ಎದುರಾದರೂ ಒಬ್ಬರಿಗೊಬ್ಬರು ಮಾತನಾಡಿಸಿಲ್ಲ. ಕನಿಷ್ಠ ಸೌಜನ್ಯದ ನಗು ಕೂಡ ಬೀರದೆ, ಯಾರೋ ಅಪರಿಚಿತರಂತೆ ಇಬ್ಬರೂ ತಮ್ಮ ಪಾಡಿಗೆ ತಾವು ಮುಂದೆ ಸಾಗಿ ಹೋಗಿದ್ದಾರೆ. ಸದ್ಯ ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡಿಂಗ್‌ನಲ್ಲಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗಷ್ಟೇ ಮಹತ್ವದ ನಾಯಕತ್ವ ಬದಲಾವಣೆಯಾಗಿದ್ದು, ಡಿ.ಕೆ. ಶಿವಕುಮಾರ್ ಅವರು ಜೂನ್ 3 ರಂದು ಗಾಜಿನ ಮನೆಯಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದರು. ಉಪಮುಖ್ಯಮಂತ್ರಿಯಾಗಿ ಡಾ. ಜಿ ಪರಮೇಶ್ವರ್ ಹಾಗೂ ಇತರೆ 12 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಸಿದ್ದರಾಮಯ್ಯ ಅವರ ನಾಮಫಲಕವನ್ನು ಸಿಬ್ಬಂದಿ ತೆರವುಗೊಳಿಸಿ, ನೂತನ ಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರಿನ ಬೋರ್ಡ್ ಅಳವಡಿಸಿದ್ದರು. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಈ ಇಬ್ಬರು ಘಟಾನುಘಟಿ ನಾಯಕರ ನಡುವಿನ ಮುಖಾಮುಖಿ ಹಾಗೂ ಮೌನವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರೂ ನಾಯಕರ ಬೆಂಬಲಿಗರ ನಡುವೆ ವಿಡಿಯೋ ಎಡಿಟ್‌ಗಳ ಮಹಾಪೂರವೇ ಹರಿಯುತ್ತಿದೆ. ಒಂದೆಡೆ ಸಿದ್ದರಾಮಯ್ಯ ಅವರ ಬೆಂಬಲಿಗರು ತಮ್ಮ ನಾಯಕನನ್ನು ಏಕಾಂಗಿಯಾಗಿ ನೋಡಿ ಭಾವುಕರಾಗಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಅಧಿಕಾರ ಇದ್ದಾಗ ಮಾತ್ರ ಬೆಂಬಲಕ್ಕೆ ನಿಲ್ಲುವ ರಾಜಕೀಯದ ವಾಸ್ತವತೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಹಳೆಯ ಭಾಷಣಗಳು, ನೃತ್ಯ ಮಾಡಿದ ಕ್ಷಣಗಳನ್ನು ಮರುಹಂಚಿಕೆ ಮಾಡುತ್ತಿದ್ದಾರೆ. ಮತ್ತೊಂದೆಡೆ, ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ತಮ್ಮ ನಾಯಕನ ರಾಜಕೀಯ ಹೋರಾಟ, ಜೈಲುವಾಸದ ದಿನಗಳು ಹಾಗೂ ಈಗ ಸಿಎಂ ಆಗಿ ಹೊರಹೊಮ್ಮಿರುವ ಸಾಧನೆಯನ್ನು ಸಂಭ್ರಮಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಧಾನಸೌಧದ ಮೊಗಸಾಲೆಯಲ್ಲಿ ಅವರ ಸುತ್ತಲೂ ಸದಾ ಶಾಸಕರು ಮತ್ತು ಸಚಿವರು ಜಮಾಯಿಸುತ್ತಿದ್ದರು. ಪ್ರತಿ ಹೆಜ್ಜೆಗೂ ಭಾರಿ ಬೆಂಬಲ ಹಾಗೂ ಭದ್ರತೆ ಇರುತ್ತಿತ್ತು. ಆದರೆ ಇದೀಗ ಸಿದ್ದರಾಮಯ್ಯ ಅವರು ಒಬ್ಬರೇ ಹೆಜ್ಜೆ ಹಾಕುತ್ತಿರುವುದು ರಾಜಕೀಯದ ಮತ್ತೊಂದು ಮುಖವನ್ನು ಅನಾವರಣಗೊಳಿಸಿದೆ. ಇನ್ನು, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ಮುನ್ನ ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಯಿಟ್ಟು ನಮಸ್ಕರಿಸಿದ ವಿಡಿಯೋ ಕೂಡ ವೈರಲ್ ಆಗಿತ್ತು.
No Respect Full Unrespectuuuu Namma Ex CM Siddannage 😫😭 pic.twitter.com/hAn532YUmx
— 🔱🚩YATNAL HINDU SENE 🚩🔱 (@yathnalabhimani) June 5, 2026
ಹೀಗೆ ಒಂದೆಡೆ ಡಿ.ಕೆ. ಶಿವಕುಮಾರ್ ಅವರ ಉತ್ಸಾಹ, ಮತ್ತೊಂದೆಡೆ ಸಿದ್ದರಾಮಯ್ಯ ಅವರ ಮೌನ ರಾಜ್ಯ ರಾಜಕಾರಣದ ಮುಂದಿನ ದಿನಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ, ಇಬ್ಬರು ನಾಯಕರ ನಡುವಿನ ಈ ಶೀತಲ ಸಮರ ವಿಧಾನಸೌಧದ ಅಂಗಳದಲ್ಲಿ ಭಾರಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.












Click it and Unblock the Notifications