ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾರ ಪತ್ರಿಕೆ : ಸಿಂಗನ್ನಡಿಗರ ಪ್ರತಿಭೆಗೆ ಹಿಡಿದ ಕನ್ನಡಿ

By ಸುರೇಶ ಎಚ್.ಸಿ., ಸಿಂಗಪುರ
|
Google Oneindia Kannada News

ಸಂಘ-ಸಂಸ್ಥೆಗಳೆಂದ ಮೇಲೆ ಅದರ ಕಾರ್ಯ-ಚಟುವಟಿಕೆಗಳನ್ನು ದಾಖಲಿಸಲು ಮತ್ತು ಸಂಘದ ಸದಸ್ಯರಲ್ಲಿರುವ ಸಾಹಿತ್ಯಸುಧೆಯನ್ನು ಹೊರತರಲು ಒಂದು ಮಾಧ್ಯಮ ಬೇಕಲ್ಲವೆ? 1996ರಲ್ಲಿ ಅಧಿಕೃತವಾಗಿ ನೋಂದಾಯಿತವಾಗಿ ಪ್ರಾರಂಭವಾದ ಕನ್ನಡ ಸಂಘ (ಸಿಂಗಪುರ)ವು ಸಂಘದ ಸದಸ್ಯರಿಂದ ಸದಸ್ಯರಿಗಾಗಿಯೇ ಮೀಸಲಾದ ಕೈಪಿಡಿ "ಸಿಂಗಾರ ಪತ್ರಿಕೆ"ಯ ಮೊದಲ ಸಂಚಿಕೆಯನ್ನು 1997ರಲ್ಲಿ ಬಿಡುಗಡೆ ಮಾಡಿತ್ತು.

ಆಗ ಅದು ಸಂಘದ ಸದಸ್ಯರ ವಿಳಾಸಗಳ ಪಟ್ಟಿಯನ್ನು ಮಾತ್ರ ಒಳಗೊಂಡಿತ್ತು. ವರ್ಷಗಳು ಕಳೆದಂತೆ, ಸಂಘವು ಬೆಳೆದಂತೆ ಸಂಘದ ಕಾರ್ಯ ಚಟುವಟಿಕೆಗಳ ವರದಿಗಳು, ಛಾಯಾಚಿತ್ರಗಳು, ಕಥೆ-ಕವನ-ಲೇಖನಗಳು ಹೀಗೆ ಹತ್ತು ಹಲವು ವಿಚಾರಗಳನ್ನು ಹೊತ್ತುಕೊಂಡು ಗಾತ್ರ ಹಾಗೂ ಗುಣಮಟ್ಟ ಎರಡರಲ್ಲೂ ಬೆಳೆಯುತ್ತಾ ಬಂದಿದೆ.

2013ರ ಜೂನ್‌ನಲ್ಲಿ ಬಿಡುಗಡೆಯಾದ 167 ಪುಟಗಳ ಸಿಂಗಾರ ಪತ್ರಿಕೆಯ 10ನೇ ಸಂಚಿಕೆ ಬೆಳೆಯುತ್ತಿರುವ ಸಿಂಗಪುರ ಕನ್ನಡ ಸಂಘದ ಹಾಗೂ ಸಿಂಗನ್ನಡಿಗರ ಪ್ರತಿಭೆ ಮತ್ತು ಭಾಗವಹಿಸುವಿಕೆಯ ಸಂಕೇತ. ಆದರೆ ಸ್ವಯಂಸೇವಕರು ತಮ್ಮ ಬಿಡುವಿನ ವೇಳೆಯಲ್ಲಿ ಮಾಡುವ ಪತ್ರಿಕೆ ಹೊರಬರಲು ಸುಮಾರು 8ರಿಂದ 10 ತಿಂಗಳ ಅವಧಿ ಬೇಕು. ಹೀಗಾಗಿಯೋ ಏನೋ, ಮೊದಲು ವರ್ಷಕ್ಕೊಮ್ಮೆ ಬಿಡುಗಡೆಯಾಗುತ್ತಿದ್ದ ಸಿಂಗಾರ ಪತ್ರಿಕೆ ಕಳೆದ 7 ವರ್ಷಗಳಿಂದ ಎರಡು-ಎರಡೂವರೆ ವರ್ಷಕ್ಕೊಮ್ಮೆ ಪ್ರಕಟವಾಗುತ್ತಿದೆ.

Singara : Literary magazine by Singapore Kannadigas

ಸಿಂಗಾರ ಪತ್ರಿಕೆಯೊಂದಿಗೆ ನನ್ನ ನಂಟು ಪ್ರಾರಂಭವಾದದ್ದು 2006ರಲ್ಲಿ. ಆಗ ಸಿಂಗಪುರ ಕನ್ನಡ ಸಂಘ ದಶಮಾನೋತ್ಸವದ ಸಂಭ್ರಮವನ್ನು ಸಿಂಗಾರ ಪುಸ್ತಕರೂಪದಲ್ಲಿ (ಸಂಚಿಕೆ 7) ತರುವುದರಲ್ಲಿತ್ತು. ಆ ಪುಸ್ತಕದ ಉಪಸಮಿತಿಯ ಸದಸ್ಯನಾಗಿ ಸೇರುವ ಅವಕಾಶ ನನಗೆ ದೊರೆಯಿತು. ಅಲ್ಲಿಂದ ಮುಂದೆ ಸಂಘದ ಕಾರ್ಯದರ್ಶಿಯಾಗಿ (2007-09), ಸಿಂಗಾರ ಪತ್ರಿಕೆಯ ಸಂಪಾದಕೀಯ ಸಮಿತಿಯ ಸದಸ್ಯನಾಗಿ (2009), ಪ್ರಧಾನ ಸಂಪಾದಕನಾಗಿ (2010-11), ಸಿಂಚನ ಮಾಸಪತ್ರಿಕೆ ಉಪಸಮಿತಿಯ ಅಧ್ಯಕ್ಷನಾಗಿ (2011-2013) ಹೀಗೆ ವಿವಿಧ ರೀತಿಯಲ್ಲಿ ನನ್ನ ಅಳಿಲು ಸೇವೆ ಸಲ್ಲಿಸಲು ಕನ್ನಡ ಸಂಘ ಸಿಂಗಪುರವು ಅವಕಾಶ ನೀಡಿದೆ.

ವರ್ಣರಂಜಿತವಾದ ಸಿಂಗಾರ ಪತ್ರಿಕೆಯ 10ನೇ ಸಂಚಿಕೆಯನ್ನು 27ನೇ ಜುಲೈ 2013ರಂದು "ವಚನಾಂಜಲಿ" ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗೆ ವಿತರಣೆ ಮಾಡಲಾಯಿತು. ಈ ಸಂಚಿಕೆಯಲ್ಲಿ ಸಿಂಚನ ಸ್ಪರ್ಧೆಯ ಲೇಖನಗಳು, ಸ್ಥಳೀಯರ ಹಾಗೂ ವಿಶ್ವ ಕನ್ನಡಿಗರ ಲೇಖನಗಳು, ಮಾಹಿತಿಗಳು, ವರ್ಣರಂಜಿತ ಚಿತ್ರ-ವರದಿಗಳು; ಒಟ್ಟು 70ಕ್ಕೂ ಹೆಚ್ಚು ಲೇಖನಗಳು ಹಾಗೂ 160ಕ್ಕೂ ಹೆಚ್ಚು ಪುಟಗಳಿವೆ.

ಸಮೃದ್ಧ ಸಂಚಿಕೆ : ಯಾಕಾಗಲಿಲ್ಲ ಪ್ರಳಯ, ಆಣುಶಕ್ತಿ, ಬಣ್ಣದ ಮೀನುಗಳೊಂದಿಗೆ ಒಂದು ಸಂಜೆ, ತೈಲವಿದ್ದಂತೆ ಹಣ, ಮುಪ್ಪು ಬರಬಾರ್ದ್ರೀ ಮುಂತಾದ ಕವನಗಳು; ಮಹಿಳೆ:ಭಾರತ VS ಸಿಂಗಪುರ. ದಾ(ಧ)ನ ಮತ್ತು ಕನ್ನಡ ಭಾಷೆಯ ಚರಿತ್ರೆ ಲೇಖನಗಳು ಸುಂದರವಾಗಿರುವುಷ್ಟೇ ಅಲ್ಲದೇ ಓದುಗರನ್ನು ಚಿಂತನೆಗೆ ಒಡ್ಡುತ್ತವೆ. ಈ ಸಂಚಿಕೆಯು ಹಲವಾರು ಮಾಹಿತಿ ಮತ್ತು ಮಾಹಿತಿಯುಕ್ತ ಲೇಖನಗಳನ್ನೊಳಗೊಂಡಿದೆ. ಅಲ್ಲಲ್ಲಿ ಸಿಗುವ ಹಾಸ್ಯ-ಲೇಖನ, ಕಥೆ, ನಗೆಹನಿ, ಕವನ, ಹನಿಗವನ ಹಾಗೂ ವ್ಯಂಗ್ಯಚಿತ್ರಗಳು ಮುದ ನೀಡುತ್ತವೆ. ಮತ್ತೆ ನಕ್ಕವು ಹೂಗಳು ಮತ್ತು ದೊಡ್ಡೆತ್ತು ಕಥೆಗಳು ಉತ್ತರ ಕನ್ನಡ ಭಾಷೆಯ ಸೊಗಡನ್ನು ಉಣಿಸುತ್ತವೆ. ಮಕ್ಕಳ ವಿಭಾಗ ಮಕ್ಕಳ ಹೂಮನಸ್ಸು, ಚಿಂತನೆ ಹಾಗೂ ಅದರ ಅಭಿವ್ಯಕ್ತಿಯ ಕಿರುಪರಿಚಯ ನೀಡುತ್ತದೆ.

ಈ ಸಂಚಿಕೆಯಲ್ಲಿ ಸಿಂಚನ ಮಾಸಪತ್ರಿಕೆಯಿಂದ ಹಲವಾರು ಲೇಖನಗಳನ್ನು ಬಳಸಿಕೊಳ್ಳಲಾಗಿದೆ; ಆದರೆ ಸಿಂಗನ್ನಡಿಗರಿಗಾಗಿ ಮೀಸಲಿರುವ ಸಿಂಗಾರ ಪತ್ರಿಕೆಯಲ್ಲಿ ಸಿಂಗಪುರದಾಚೆಯ ಕನ್ನಡಿಗರ ಇಷ್ಟೊಂದು ಲೇಖನಗಳು ಬೇಕಿತ್ತೇ ಎಂಬ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ. ಸಮಯದ ಅಭಾವವೋ, ತಿದ್ದುಪಡಿ ಮಾಡಲು ಸಂಪಾದಕೀಯ ಸಮಿತಿಯ ಸದಸ್ಯರ ಅಭಾವವೋ - ಮುದ್ರಾರಾಕ್ಷಸನ ಪ್ರಭಾವ ಹಲವೆಡೆ ಕಾಣಸಿಗುತ್ತದೆ. ಪುಸ್ತಕದಲ್ಲಿ ಬಳಸಲಾದ ಅಕ್ಷರಗಳ ನಮೂನೆ ಮತ್ತು ಗಾತ್ರದಲ್ಲಿನ ವೈವಿಧ್ಯತೆ ಓದುಗರ, ಅದರಲ್ಲೂ ವಯಸ್ಸಾದ ಓದುಗರ ಕಣ್ಣುಗಳಿಗೆ ಸ್ವಲ್ಪ ಮಟ್ಟಿಗೆ ತೊಂದರೆ ನೀಡುತ್ತದೆ! ಏನೇ ಇರಲಿ, ಹೊರನಾಡಿನಲ್ಲಿ, ತಮ್ಮ ಬಿಡುವಿನ ವೇಳೆಯಲ್ಲಿ ಇಂಥದೊಂದು ಕಾಯಕವನ್ನು ಕೈಗೆತ್ತಿಕೊಂಡ ಎಲ್ಲರ ಪರಿಶ್ರಮ ಶ್ಲಾಘನೀಯ.

ಈ ರೀತಿಯ ಪತ್ರಿಕೆಗಳು ಯಾರೊಬ್ಬರ ವೈಯುಕ್ತಿಕ ಅಭಿಲಾಷೆಗಳಿಂದ ಮಾತ್ರ ನಡೆಸುವಂಥದಲ್ಲ. ಇದರಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ಸೇರಿಸಿಕೊಂಡು ಇದನ್ನು ತಂಡದ ಸಾಧನೆಯಾಗಿ ಮಾಡಿದಾಗ ಅದರ ಗುಣಮಟ್ಟ ಮತ್ತು ಭಾಗವಹಿಸಿದ ಸ್ವಯಂಸೇವಕರಿಗೆ ಕನ್ನಡ ಸೇವೆಯ ಸಂತೃಪ್ತಿ ನೀಡಲು ಸಾಧ್ಯ. ಪತ್ರಿಕೆಯ ಗಾತ್ರ ಕಡಿಮೆಯಿದ್ದರೂ ಸರಿ, ವಿಶ್ವದ ಇತರ ಸಂಘ-ಸಂಸ್ಥೆಗಳ ಪತ್ರಿಕೆಗಳಂತೆ ಕನ್ನಡ ಸಂಘ(ಸಿಂಗಪುರ)ದ ಸಿಂಗಾರ ಪತ್ರಿಕೆಯೂ ಪುನಃ ವಾರ್ಷಿಕ ಸಂಚಿಕೆಯಾಗಿ ಪರಿವರ್ತಿತವಾಗಲಿ, ಮಕ್ಕಳನ್ನೂ ಒಡಗೂಡಿ ಇನ್ನೂ ಹೆಚ್ಚಿನ ಸಿಂಗನ್ನಡಿಗರಿಗೆ ಸಂಪಾದಕೀಯ ಸಮಿತಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಿ ಎಂಬುದೇ ನನ್ನ ಆಶಯ.

English summary
Singapore Kannada Sangha has been bringing literary magazine since 1997. It has helped Kannadigas in Singapore to show their talent in literary field. 10th edition of the magazine was released in July, 2013. A book review by Suresha Bhatta, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X