• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಪುರಂದರ ನಮನ 2013

By ವಿಶಾಲಾಕ್ಷಿ ವೈದ್ಯ, ಸಿಂಗಪುರ
|

ಸಿಂಗಪುರ ಕನ್ನಡ ಸಂಘದ ಕಾಲಮಾನದಲ್ಲಿ 2 ಮಾರ್ಚ್ 2013, ಶನಿವಾರ ಒಂದು ವಿಶೇಷ ದಿನ. ಅಂದು Woodlands CC - IAECಯ ಸಹಯೋಗಿತ್ವದಲ್ಲಿ ಕನ್ನಡ ಸಂಘವು 'ಪುರಂದರ ನಮನ - 2013' ಆಯೋಜಿಸಿದ ದಿನ. ಸಂಘದ ಸದಸ್ಯರು ಸಿಂಗಪುರದ ಅನೇಕ ಸಂಗೀತ ಪ್ರೇಮಿಗಳ ಜೊತೆಗೂಡಿ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರಿಗೆ ಗೌರವಪೂರ್ಣ ಶ್ರದ್ಧಾಂಜಲಿ ಅರ್ಪಿಸಲು ಹಮ್ಮಿಕೊಂಡ ದಿನ.

ಸಿಂಗಪುರ ಕನ್ನಡ ಸಂಘ ಪ್ರತಿವರ್ಷ 'ಪುರಂದರ ನಮನ' ಕಾರ್ಯಕ್ರಮವನ್ನು ಭಾಗ್ಯ ಮೂರ್ತಿಯವರ ನೇತೃತ್ವದಲ್ಲಿ ಆಚರಿಸಿಕೊಂಡು ಬರುತ್ತಿದೆ. ಈ ಪ್ರಯತ್ನಕ್ಕೆ ಸಿಂಗಪುರದ ಹಾಗೂ ವಿದೇಶಗಳ ಅನೇಕ ಕಲಾವಿದರು ಮತ್ತು ಸಂಘಸಂಸ್ಥೆಗಳ ಉತ್ತಮ ಸಹಕಾರ ಕಾರಣ. ಈ ವರ್ಷದ ಕಾರ್ಯಕ್ರಮ ಪುರಂದರರ 'ನವರತ್ನಮಾಲಿಕೆ' (ಪುರಂದರರು ಶ್ರೀ ಕೃಷ್ಣನನ್ನು ಕುರಿತಾಗಿ ರಚಿಸಿ, ಪೋಣಿಸಿ ಮಾಲಾರ್ಪಣೆ ಮಾಡಿದ ಭಕ್ತಿಪೂರಿತವಾದ 9 ಅನರ್ಘ್ಯ ಮುತ್ತುಗಳು) ಮತ್ತು 'ಭಕ್ತಿ ರಸ ಧಾರೆ' - ಪುರಂದರರ ಭಕ್ತಿ ಭಾವವನ್ನೊಳಗೊಂಡ ಹಾಡುಗಳ ಕಚೇರಿ ಹಾಗೂ ಭರತನಾಟ್ಯದ ಒಂದು ಸುಂದರ ಕಸೂತಿಯಾಗಿತ್ತು. ಆರಾಧನೆಗಾಗಿ ಆಯ್ದುಕೊಂಡ ಹಾಡುಗಳು ಪುರಂದರ ದಾಸರ ಕೃತಿಗಳಿಗೂ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತಕ್ಕೂ ಇರುವ ಸಂಬಂಧವನ್ನು ನಿರೂಪಿಸುವತ್ತ ಒಂದು ಕಿರು ಪ್ರಯತ್ನವೂ ಹೌದು.

ಸಂಗೀತ ಸಂಜೆಯ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದ ರಾಜಶ್ರೀ ಅವರು ಎಲ್ಲರಿಗೂ ಅಭಿವಂದನೆ ಕೋರಿ, ಪುರಂದರ ದಾಸರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಟ್ಟರು. ನಂತರ ಭಾಗ್ಯ ಮೂರ್ತಿಯವರ ಸುಶ್ರಾವ್ಯ ಕಂಠದಿಂದ ಮೂಡಿಬಂದ 'ಮನ್ಮನೋಭೀಷ್ಟ ವರದಂ' ಶ್ಲೋಕದೊಂದಿಗೆ ಅವರದೇ ನೇತೃತ್ವದಲ್ಲಿ ಸಮೂಹ ಗಾಯನ ಪ್ರಾರಂಭವಾಯಿತು. 'ಶ್ರೀ ಗಣನಾಥ' ಸುಮಧುರವಾಗಿ ಮೂಡಿಬಂದಿತು. ಪಿಳ್ಳಾರಿ ಗೀತೆಗಳಿಂದ ಆರಂಭ ಮಾಡಿದ, ಸಿಂಗಪುರದ ಗಾಯಕರು, ವಾದ್ಯಗಾರರು ಹಾಗೂ ಶಿಷ್ಯವೃಂದಗಳನ್ನೊಳಗೊಂಡ ಸಾಮೂಹಿಕ ಗಾಯನ ತಂಡ, ಒಂದಾದ ಮೇಲೊಂದರಂತೆ ನವರತ್ನಮಾಲಿಕೆಯ ಅಮೂಲ್ಯ ಮಣಿಗಳನ್ನು ಸಭಿಕರ ಮುಂದೆ ಪ್ರದರ್ಶಿಸುತ್ತಾ ಹೋದಂತೆ ಇಡೀ ಸಭಾಂಗಣವು ವಿವಿಧ ರಾಗ-ಭಾವಗಳ ಸಮ್ಮೇಳದಿಂದ ಮೊಳಗುತ್ತಿದ್ದಂತೆ ಭಾಸವಾಯಿತು.

'ಜಯ ಜಾನಕೀ ಕಾಂತ', 'ಕಲ್ಲುಸಕ್ಕರೆ ಕೊಳ್ಳಿರೋ', 'ಸಕಲ ಗ್ರಹಬಲ ನೀನೇ', ಓಡಿ ಬಾರಯ್ಯ', 'ನಾ ನಿನ್ನ ಧ್ಯಾನದೊಳಿರಲು', 'ಕೃಷ್ಣಮೂರ್ತಿ ಕಣ್ಣ ಮುಂದೆ', 'ಬಂದನೇನೇ ರಂಗ'... ಒಂದೇ, ಎರಡೇ. ಈ ಅನರ್ಘ್ಯ ಹಾರವನ್ನು ಪೂರ್ಣಗೊಳಿಸಿದ್ದು, ಭರತನಾಟ್ಯ ಕಲಾವಿದೆ ವರ್ಣ ಅರುಣ್ ಅವರ ನೃತ್ಯ. 'ಆಡಿದನೋ ರಂಗ' ಕೃಷ್ಣನ ಕಾಳಿ ಮರ್ದನವನ್ನು ನಿರೂಪಿಸಿದರೆ, 'ಪೋಗದಿರೆಲೊ ರಂಗ' ಪುಟ್ಟ ತುಂಟನನ್ನು ಮನೆಯಲ್ಲಿಯೇ ಹಿಡಿದಿಟ್ಟುಕೊಳ್ಳಲು ತಾಯಿ ಯಶೋದೆ ಪರಿಪರಿಯಿಂದ ಬೇಡುವ, ಬೆದರಿಸುವ ಮಾತುಗಳ ಒಂದು ಚಿತ್ರಣ.

ನಂತರ ಸಿಂಗಪುರ ಕನ್ನಡ ಸಂಘದ ಅಧ್ಯಕ್ಷರಾದ ಡಾ।।ವಿಜಯ್ ಕುಮಾರ್ ಅವರು ಸಭಿಕರನ್ನೂ, ಕಲಾವಿದರನ್ನು ಸ್ವಾಗತಿಸುತ್ತಾ ಒಂದು ಕಿರು ಭಾಷಣ ಮಾಡಿ ಅಂತೆಯೇ ಅಂದಿನ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ Ms. ಎಲ್ಲೆನ್ ಲೀ ಅವರನ್ನು ಪರಿಚಯಿಸಿದರು. Ms. Lee ಸೆಂಬವಾಂಗ್ (ವುಡ್ಲ್ಯಾಂಡ್ಸ್) ತೃಣಮೂಲ ಸಂಸ್ಥೆಯ ಸಲಹಗಾರರು ಮತ್ತು ಸಂಸತ್ ಸದಸ್ಯರು.

ಇದೇ ಮೊದಲ ಬಾರಿಗೆ ಕನ್ನಡ ಸಂಘವು 8ರಿಂದ 18 ವರ್ಷಗಳವರೆಗಿನ ಮಕ್ಕಳಿಗಾಗಿ ಪುರಂದರ ದಾಸರ ಕೃತಿಗಳ ಕರ್ನಾಟಕ ಸಂಗೀತ ಗಾಯನ (ತನಿ) ಸ್ಪರ್ಧೆಯನ್ನು ಆಯೋಜಿಸಿತ್ತು. ಅಗ್ರ ಬಹುಮಾನಗಳಿಗಾಗಿ ಕಿರಿಯರ ವಿಭಾಗ ಹಾಗೂ ಹಿರಿಯ ವಿಭಾಗ ಎರಡರಲ್ಲೂ ಮಕ್ಕಳಲ್ಲಿ ಕಠಿಣ ಪೈಪೋಟಿ ನಡೆದಿತ್ತು. ಬಹುಮಾನ ವಿಜೇತರ ಹೆಸರನ್ನು 'ಪುರಂದರ ನಮನ' ಕಾರ್ಯಕ್ರಮದ ದಿನದಂದು ಘೋಷಿಸಲಾಯಿತು. ಅತಿಥಿಗಳು ವಿಜೇತರಿಗೆ ಸುಂದರ ಪಾರಿತೋಷಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.

ವಿಜೇತರ ಹೆಸರುಗಳು ಹೀಗಿವೆ : ಕಿರಿಯರ ವಿಭಾಗ : (1) ಕು।। ಅನನ್ಯ ಬಾಳೆಹಿತ್ಲು, (2) ಕು।। ರಚನಾ ಮುರಳಿ ನಾರಾಯಣನ್ ಮತ್ತು (3) ಕು।। ಸಾಯಿ ಲಲಿತ ಅಯ್ಯರ್, ಹಿರಿಯರ ವಿಭಾಗ : (1) ಕು।। ಅಕ್ಷಯ ಪ್ರಭು ಹಾಗೂ ಕು।। ಆರತಿ ರಾಮಚಂದ್ರನ್ (ಜಂಟಿ), (2) ಕು।।ರಚಿತ ರಾಘವೇಂದ್ರ ಮತ್ತು (3) ಕು।। ಶಿವಾನುಜ ರಾಂಕುಮಾರ್.

ಕಾರ್ಯಕ್ರಮದ ಎರಡನೆಯ ಭಾಗದಲ್ಲಿ ಬೆಂಗಳೂರಿನ ಖ್ಯಾತ ಕಲಾವಿದೆ ವಾಣಿ ಸತೀಶ್ ಅವರಿಂದ 'ಭಕ್ತಿ ರಸ ಧಾರೆ'. ತಮ್ಮ ಮಧುರ ಕಂಠ, ಸಾಹಿತ್ಯ ಹಾಗೂ ನಿರೂಪಣೆಯ ಮೇಲಿನ ಹಿಡಿತ ಮತ್ತು ಭಾವಪೂರ್ಣ ಗಾಯನದಿಂದಾಗಿ, ನೆರೆದಿದ್ದ ಸಂಗೀತ ರಸಿಕರ ಮನ ಸೆಳೆದ ವಾಣಿ ತಮ್ಮ ಆರಂಭಿಕ ಕೃತಿ - 'ಜಯ ಜಾನಕೀ ಕಾಂತ'ದಲ್ಲಿ ಸ್ವರಪ್ರಸ್ತಾರ ಮಾಡುವ ಮೂಲಕ ಮುಂಬರುವ ಸುಂದರ ಪ್ರಸ್ತುತಿಗಳ ಬಗ್ಗೆ ಒಂದು ನಸುನೋಟ ನೀಡಿದರು. ಕಚೇರಿಯುದ್ದಕ್ಕೂ ಭಾವಾರ್ಥ ಹಾಗೂ ಸಾಹಿತ್ಯಕ್ಕೆ ಅವರು ನೀಡಿದ ಗಮನ ಎದ್ದು ತೋರುತ್ತಿತ್ತು. ಜನಪ್ರಿಯ ಕೃತಿಗಳಾದ 'ಗೋವಿಂದ ಗೋವಿಂದ', 'ರಾಮ ರಾಮ', ಸ್ವಲ್ಪ ಜನಪದ ಶೈಲಿಯ 'ಗುರುವಿನ ಗುಲಾಮ', ಜನರ ಚಪ್ಪಾಳೆ ಜೊತೆಗೂಡಿಸಿದ 'ತಾರಕ್ಕ ಬಿಂದಿಗೆ' ಎಲ್ಲವೂ ಗಾಯಕಿಯ ಪ್ರೌಢಿಮೆ ತೋರಿತು.

'ಸಂಸರವೆಂಬಂಥ' ರಾಗಮಾಲಿಕೆ ಪುರಂದರ ದಾಸರು ಅದೆಷ್ಟು ಸುಲಭವಾಗಿ ತಾತ್ವಿಕ ಹಾಗೂ ಸಾಮಾಜಿಕ ಸಂದೇಶಗಳನ್ನು ಸಾಮಾನ್ಯ ಜನರಿಗೆ ತಿಳಿಯುವಂತೆ ಸರಳ, ಸುಂದರ ಕನ್ನಡ ಭಾಷೆಯಲ್ಲಿ ತಮ್ಮ ಹಾಡುಗಳಲ್ಲಿ ಅಳವಡಿಸಿದ್ದರೆನ್ನುವುದು ಸ್ಪುಟವಾಗಿಸಿತು. ಸುದೀರ್ಘ ನಿರವಲ್ ಮೂಲಕ ಸುಂದರವಾಗಿ ಪ್ರಸ್ತುತ ಪಡಿಸಿದ ನಿತ್ಯನೂತನ 'ದಯ ಮಾಡೋ ರಂಗ', ಸಮರ್ಥವಾಗಿ ಅವರ ಜೊತೆಗೂಡಿಸಿದ ಪಕ್ಕ ವಾದ್ಯದವರ ತನಿ ಆವರ್ತನ ಆ ಸಂಜೆಯ ಉದ್ದಿಶ್ಯಗಳಲ್ಲೊಂದಾದ 'ಕರ್ಣಾಟಕ ಶಾಸ್ತ್ರೀಯ ಸಂಗೀತ ಮೌಲ್ಯಗಳಲ್ಲಿ ಶ್ರೀ ಪುರಂದರ ದಾಸರ ಕೃತಿಗಳು' ಎಂಬುದಕ್ಕೆ ತಕ್ಕ ಸಮರ್ಥನೆ ನೀಡಿದವು. ಅವರ ಗುರುಗಳು ರಚಿಸಿದ ಸ್ವಕೃತ ಹ್ರಾದಿನಿ ರಾಗದ 'ಶ್ರೀ ಪುರಂದರ ಗುರುಂ' ಕೃತಿಯು ಸಂಗೀತ ಲೋಕಕ್ಕೆ ಶ್ರೀ ಪುರಂದರ ದಾಸರ ಅಮೋಘ ಕೊಡುಗೆಯನ್ನು ಸಭಿಕರೆಲ್ಲ ಮತ್ತೊಮ್ಮೆ ಹೃತ್ಪೂರ್ವಕ ನೆನೆಯುವಂತೆ ಉತ್ತೇಜಿಸಿತು.

ಈ ಸುಂದರ ಸಂಗೀತ ಸಂಜೆಯಲ್ಲಿ ಪಕ್ಕವಾದ್ಯದ ನಿರ್ವಹಣೆಯನ್ನು ಸಮರ್ಥವಾಗಿ ನಿರ್ವಹಿಸಿದವರು - ವಿದ್ವಾನ್ ಆನಂದ್ - ವಯೊಲಿನ್ , ವಿದ್ವಾನ್ ರಮಣನ್ - ಮೃದಂಗ, ವಿದ್ವಾನ್ ಗಜನ್ - ಮೋರ್ಚಿಂಗ್ ಮತ್ತು ತಬಲ. ಸಮೂಹ ಗಾಯನದ ಮುಂಚೂಣಿಯಲ್ಲಿ ಭಾಗ್ಯ ಅವರಿಗೆ ಜೊತೆ ಕೊಟ್ಟ ಗಾಯಕಿಯರು - ಶೋಭಾ ರಘು, ವೈಷ್ಣವಿ ಆನಂದ್, ಶ್ರುತಿ ಜಯದೇವ್, ಅಶ್ವಿನಿ ಸತೀಶ್ ಮತ್ತು ಇತರರು ಹಾಗೂ ವೀಣೆ ನುಡಿಸಿದವರು - ರಾಂಕುಮಾರ್ ವಾಸುದೇವನ್.

ಕನ್ನಡ ಸಂಘ ವಾಣಿ ಸತೀಶ್, ಭಾಗ್ಯ ಮೂರ್ತಿ ಮತ್ತು ವರ್ಣ ಅರುಣ್ ಅವರುಗಳನ್ನು ಮತ್ತು ಪಕ್ಕ ವಾದ್ಯ ಕಲಾವಿದರನ್ನು ಶಾಲು ಹೊದಿಸಿ, ಹಾರ ಮತ್ತು ನೆನಪಿನ ಕಾಣಿಕೆಗಳನ್ನು ನೀಡಿ ಗೌರವಿಸಿತು. ತದನಂತರ ಸಂಘದ ಉಪಾಧ್ಯಕ್ಷರಾದ ವಿಜಯರಂಗ ಅವರು ವಂದನಾರ್ಪಣೆ ಮಾಡುತ್ತಾ, ಕಾರ್ಯಕ್ರಮದ ಯಶಸ್ಸಿಗೆ ಪುರಂದರರ ಆಶೀರ್ವಾದವೇ ಮುಖ್ಯ ಕಾರಣವೆಂದು ಹೇಳಿ ಜೊತೆಗೆ ವಾರಗಟ್ಟಲೆಯಿಂದ ಶ್ರಮಿಸಿದ ಎಲ್ಲ ಸ್ವಯಂಸೇವಕರ ಕೊಡುಗೆಯನ್ನು ಸ್ಮರಿಸಿದರು. ಇಷ್ಟರಲ್ಲೇ ತೃಪ್ತಿ ಪಡದ ಸಭಿಕರ ಕೋರಿಕೆಯನ್ನು ಮನ್ನಿಸಿ ತಮ್ಮ ಗಾಯನವನ್ನು ಮುಂದುವರಿಸಿದ ವಾಣಿ ಜನರ ಇಷ್ಟದಂತೆ ಜನಪ್ರಿಯ ಕೃತಿಗಳಾದ 'ಜಗದೋದ್ಧಾರನ', 'ನಾರಾಯಣ ನಿನ್ನ' ಕೃತಿಗಳನ್ನು ಹಾಡಿದರು. ಈ ಸುಂದರ ಹಾಡುಗಳ ನಂತರ ಪ್ರಸ್ತುತ ಪಡಿಸಿದ 'ಮಂಗಳಂ ಜಯ ಮಂಗಳಂ' ಈ ಅಪೂರ್ವ ರೀತಿಯ 'ಪುರಂದರ ನಮನ - 2013'ಕ್ಕೆ ಸೂಕ್ತ ಮುಕ್ತಾಯ ಹಾಕಿತು.

English summary
Kannada Sangha Singapore observed Puradara Namana 2013 in Singapore on 2nd March in association with Woodlands CC - IAEC. Purandara Namana is being observed every year in Singapore under the guidance of Bhagya Murthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X