• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಪುರದಲ್ಲಿ ಬೆಂಗಳೂರಿನ ಕಲಾವಿದರ 'ತಾಂಡವ'

By * ಸುರೇಶ ಎಚ್.ಸಿ., ಸಿಂಗಪುರ
|
ಶಾಲೆ ಕಾಲೇಜು ಮುಗಿಸಿದ ಮೇಲೆ ಎಲ್ಲ ಯುವಕರೂ "ಅಂತಾರಾಷ್ಟ್ರೀಯ ಕಂಪನಿಯೊಂದರಲ್ಲಿ ತಮ್ಮ ಮೊದಲ ಕೆಲಸ, ಮೊದಲ ಸಂಬಳ, ಬೈಕು-ಕಾರುಗಳ ಖರೀದಿ, ತಮ್ಮ ಪ್ರತಿಭೆ-ಸಾಮರ್ಥ್ಯವನ್ನು ತೋರಿಸುವ ಹುಮ್ಮಸ್ಸು, ಮೊದಲ ಭಡ್ತಿ, ವಿದೇಶೀ ಪ್ರವಾಸ, ಮುಂದಿನ ವೃತ್ತಿಜೀವನದ ರೂಪು-ರೇಷೆ" ಈ ನಿಟ್ಟಿನಲ್ಲಿ ಯೋಚಿಸುವುದು ಸರ್ವೇಸಾಮಾನ್ಯ. ಇಂತಹ ಮಾರ್ಗವನ್ನು, ಸ್ಥಿರ ಆದಾಯವನ್ನು ಬಿಟ್ಟು ಕಲೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವವರು ವಿರಳ. ಅದರಲ್ಲೂ ಭರತನಾಟ್ಯ? ಬಹುಶಃ ಸಾವಿರಕ್ಕೆ ಒಬ್ಬರು ಇದನ್ನು ಆಯ್ದುಕೊಂಡರೆ ಹೆಚ್ಚು.

ಸಿಂಗಪುರದ ಗೇಲಾಂಗ್ ಶಿವನ್ ದೇವಸ್ಥಾನದ ಸಮಿತಿಯವರು ಕರ್ನಾಟಕದ ಇಂಥದೊಂದು ಅಪರೂಪದ ಭರತನಾಟ್ಯ ಕಲಾವಿದರ ತಂಡವನ್ನು, ಅವರ ಪ್ರತಿಭೆಯನ್ನು ಗುರುತಿಸಿ, ಶಿವರಾತ್ರಿಯ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅವರನ್ನು ನೀಡಲು ಅಹ್ವಾನಿಸಿದ್ದರು.

ಕಲೆಗೆ ಭಾಷೆಯ ಇತಿ-ಮಿತಿಗಳಿಲ್ಲ. ಮಧ್ಯರಾತ್ರಿ 12.45ಕ್ಕೆ ಪ್ರಾರಂಭವಾದ "ತಾಂಡವ" ನೃತ್ಯ ತಂಡದ ಮನಮೋಹಕ ನೃತ್ಯವನ್ನು ನೋಡಲು ಕನ್ನಡಿಗರು, ತಮಿಳಿಯನ್ನರು, ಸ್ಥಳೀಯ ಚೀನೀಯರು ಸೇರಿದಂತೆ ಸುಮಾರು 1000 ಪ್ರೇಕ್ಷಕರು ಸೇರಿದ್ದರು. ಈ ಕಾರ್ಯಕ್ರಮವು ಶಾಸ್ತ್ರೀಯ ಸಂಪ್ರದಾಯದಂತೆ ಭೂದೇವಿ, ವಿಘ್ನೇಶ್ವರನಿಗೆ ಹಾಗೂ ಅಷ್ಟದಿಕ್ಪಾಲಕರಿಗೆ ಪ್ರಣಾಮ ನೀಡುವ ಪುಷ್ಪಮಂಜರಿ ನೃತ್ಯದೊಂದಿಗೆ ಪ್ರಾರಂಭವಾಯಿತು. ಆನಂತರ "ತಾಂಡವ" ನೃತ್ಯ ತಂಡದ ಕಲಾವಿದರು ತಮ್ಮ ವಿಶೇಷ ಕೃತಿ "ಚತುರ್ಮುಖಿ" ನೃತ್ಯದ ಮೂಲಕ ನಟರಾಜನ ಡಮರುವಿನಿಂದ ಹೊರಹೊಮ್ಮಿದ ಹದಿನಾಲ್ಕು ಸ್ವರರೂಪಗಳನ್ನು ಅಮೋಘವಾಗಿ ಪ್ರದರ್ಶಿಸಿದರು. ಸುಮಾರು ಒಂದು ಘಂಟೆಯ ಕಾಲ ಈ ಕಲಾವಿದರು ಸಭಿಕರನ್ನು ತಮ್ಮ ಅಮೋಘ ಹಾವ-ಭಾವ-ಅಭಿನಯದಿಂದ ಮಂತ್ರಮುಗ್ಧರಾಗಿಸಿದ್ದರು.

"ತಾಂಡವ" ನೃತ್ಯ ತಂಡ :
ನಾಗಭೂಷಣ್, ಉಷಾ ದಾತಾರ್, ಸುಪರ್ಣಾ ವೆಂಕಟೇಶ್, ಶುಭಾ ಧನಂಜಯ್ ಮುಂತಾದ ಅನೇಕ ಹಲವಾರು ಪ್ರಖ್ಯಾತ ಗುರುಗಳ ಮೂಲಕ ವಿವಿಧ ಪ್ರಾಕಾರದ ನರ್ತನ ಶೈಲಿಗಳನ್ನು ಕಲಿತ ಸಮಾನ ವಯಸ್ಕ ಹಾಗೂ ಸಮಾನ ಮನಸ್ಕರಾದ ಅನಂತ ಬಿ. ಎನ್., ಕಾರ್ತಿಕ್ ಎಸ್. ದಾತಾರ್, ಸೋಮಶೇಖರ್ ಸಿ. ಮತ್ತು ಶ್ರೀನಿವಾಸನ್ ಆರ್. ಮೊದಲು ಭೇಟಿಯಾಗಿದ್ದು Natya Institute of Kathak and Choreography, Bangaloreನಲ್ಲಿ. 2006ರಲ್ಲಿ "ತಾಂಡವ" ತಂಡವನ್ನು ಕಟ್ಟಿದ ಈ ನಾಲ್ವರು ಕಲಾವಿದರು ಅಲ್ಲಿಂದೀಚೆಗೆ ಕರ್ನಾಟಕದಲ್ಲಿ, ಭಾರತದ ವಿವಿಧೆಡೆಗಳಲ್ಲಿ ಹಾಗೂ ಅಮೆರಿಕಾ, ಯು.ಕೆ., ಆಫ್ರಿಕಾ, ಸಿಂಗಪುರ, ಶ್ರೀಲಂಕಾ, ದುಬೈ, ಥಾಯ್‌ಲ್ಯಾಂಡ್, ಇಂಡೋನೇಶಿಯಾ ಮುಂತಾದ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ ಡಾ. ಮಾಯಾರಾವ್, ಮಿನಲ್ ಪ್ರಭು, ನಿರುಪಮಾ ರಾಜೇಂದ್ರ, ಮಧು ನಟರಾಜ್ ಮುಂತಾದ ಮಹಾನ್ ಕಲಾವಿದರೊಂದಿಗೆ ಕೆಲಸ ಮಾಡಿ ಪಳಗಿದ್ದಾರೆ. ಹೆಚ್ಚಿನ ವಿವರಗಳಿಗೆ www.tandavathevibrance.com ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ.

ಕಲಾವಿದರ ಕಿರುಪರಿಚಯ:
1. ಅನಂತ ಬಿ. ಎನ್. - ಬೆಂಗಳೂರು ದೂರದರ್ಶನದಲ್ಲಿ "ಬಿ" ಶ್ರೇಣಿಯ ಕಲಾವಿದ; ಬಿ. ಎ. ಇನ್ ಕೋರಿಯೋಗ್ರಫಿ; ಎಂ. ಎ. (ಭರತನಾಟ್ಯ)ದಲ್ಲಿ ಮೊದಲ ರಾಂಕ್ ಮತ್ತು ಸ್ವರ್ಣಪದಕ.
2. ಕಾರ್ತಿಕ್ ಎಸ್. ದಾತಾರ್ - ಬೆಂಗಳೂರು ದೂರದರ್ಶನದಲ್ಲಿ "ಬಿ" ಶ್ರೇಣಿಯ ಕಲಾವಿದ; ಬಿ. ಎ. ಇನ್ ಕೋರಿಯೋಗ್ರಫಿ; ಎಂ. ಎ. (ರಂಗಭೂಮಿ), ನಟುವಾಂಗಂ ಹಾಗೂ ಮೃದಂಗ ಕಲಾವಿದ.
3. ಸೋಮಶೇಖರ್ ಸಿ. - ಬಿ. ಎ. ಇನ್ ಕೋರಿಯೋಗ್ರಫಿ; ಬಿ. ಎ. ಇನ್ ಕೋರಿಯೋಗ್ರಫಿ; ಎಂ. ಎ. (ಭರತನಾಟ್ಯ) ಮತ್ತು ಸ್ವರ್ಣಪದಕ.
4. ಶ್ರೀನಿವಾಸನ್ ಆರ್. - ಬಿ. ಎ. ಇನ್ ಕೋರಿಯೋಗ್ರಫಿ; Nadanta Institute of Danceನ ಕಲಾ-ಕೌಶಲ್ಯದ ಕಾರ್ಯನಿರ್ವಾಹಕ (Artistic Director).

ಕೊನೆಯ ಮಾತು : ಕಾರ್ಯಕ್ರಮದ ನಂತರ ಕಲಾವಿದರೊಂದಿಗೆ ಸ್ವಲ್ಪ ಸಮಯ ಕಳೆಯುವ ಅವಕಾಶ ನನಗೆ ಒದಗಿಬಂದಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಹೆಸರು, ಖ್ಯಾತಿ ಗಳಿಸಿದ್ದರೂ ಅವರಲ್ಲಿ ಬಹಳ ಸರಳ ವ್ಯಕ್ತಿತ್ವ-ಮನೋಭಾವ ತುಂಬಿ ತುಳುಕುತ್ತಿತ್ತು. ಅವರೊಂದಿಗೆ ಮಾತನಾಡಿದಾಗ ನಾನು ಅವರ ವೃತ್ತಿಜೀವನದಲ್ಲಿ ಅತ್ಯಂತ ಕ್ಲಿಷ್ಟಕರ ಸವಾಲುಗಳ ಬಗ್ಗೆ ಕೇಳಿದೆ. ಅವರೇ ಹೇಳುವಂತೆ ತಮ್ಮ ಪ್ರವೃತ್ತಿಯನ್ನೇ ಅವರ ವೃತ್ತಿಯಾಗಿ ಅವರು ಆಯ್ದುಕೊಂಡಿರುವುದನ್ನು ಜನಸಾಮಾನ್ಯರು ಇನ್ನೂ ನಂಬಲು-ಒಪ್ಪಲು ಸಿದ್ಧರಿಲ್ಲ! ಅಲ್ಲದೇ ತೆಂಡೂಲ್ಕರ್ ಪ್ರತೀಸಾರಿ ಕಣಕ್ಕಿಳಿದಾಗಲೂ ಶತಕವನ್ನು ನಿರೀಕ್ಷಿಸುವಂತೆಯೇ ಕಲಾವಿದರು ಪ್ರತೀಸಾರಿ ರಂಗಕ್ಕಿಳಿದಾಗಲೂ ಪ್ರತಿಶತ 100ಕ್ಕೆ ನೂರು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಾರೆ - ಇಲ್ಲಿ ಯಾವುದೇ ರೀತಿಯ ತಪ್ಪು, ಅನಾಹುತಗಳಿಗೆ ಎಡೆಯಿಲ್ಲ. ಆದರೆ ಸಂತೋಷ ಪಡುವ ವಿಷಯವೆಂದರೆ ಉತ್ತಮ ದರ್ಜೆಯ ನೃತ್ಯ ಕಲಾವಿದರಿಗೆ ಎಲ್ಲೆಡೆ ಬೇಡಿಕೆಯಿದೆ ಹಾಗೂ ಅಂತಹ ಕಲಾವಿದರನ್ನು ನೀಡುವ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಮುಂಚೂಣಿಯಲ್ಲಿದೆ.

ಕಲಾಪ್ರೇಮಿಗಳಿರುವವರೆಗೆ ಕಲಾವಿದರಿಗೆ ಚಿಂತೆಯಿಲ್ಲ. ಇಂತಹ ಕಲಾವಿದರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಅಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಭರತನಾಟ್ಯ ಸುದ್ದಿಗಳುView All

English summary
Talented Bharatanatyam artists from Bangalore perform in Singapore on Shivaratri. Four young artists have formed a team called 'Tandava' and have been showcasing their talent all over the world. Kannadigas, Tamilians, Japanese attend the function organized by Singapore Kannada Sangha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more