Viral Video: ಕೋರ್ಟ್ ಹಾಲ್‌ಗೆ ನುಗ್ಗಿ ನ್ಯಾಯಾಧೀಶರ ಕುರ್ಚಿಯಲ್ಲಿ ಕೂತ ಮಹಿಳೆ; ನಾನೇ ಜಡ್ಜ್, ಸಾಕ್ಷಿ ತನ್ನಿ ಎಂದು ರಂಪಾಟ
ಉತ್ತರ ಪ್ರದೇಶದ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಾಟಕೀಯ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ದಿಢೀರನೆ ನ್ಯಾಯಾಲಯದ ಕೊಠಡಿಯೊಳಗೆ ನುಗ್ಗಿ, ನೇರವಾಗಿ ಜಿಲ್ಲಾ ನ್ಯಾಯಾಧೀಶರ (District Judge) ಕುರ್ಚಿಯನ್ನೇ ಅಲಂಕರಿಸಿದ್ದಾರೆ. ಅಷ್ಟೇ ಅಲ್ಲದೆ ತಾನೇ ಅಂದಿನ ನ್ಯಾಯಾಧೀಶರೆಂದು ಘೋಷಿಸಿಕೊಂಡು ವಿಚಾರಣೆ ನಡೆಸಲು ಮುಂದಾಗಿದ್ದು, ನ್ಯಾಯಾಲಯದ ಸಿಬ್ಬಂದಿ ಹಾಗೂ ವಕೀಲರಲ್ಲಿ ಕೆಲಕಾಲ ಆತಂಕ ಮತ್ತು ಗೊಂದಲ ಮೂಡಿಸಿದೆ. ಈ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
"ನಾನೇ ಜಡ್ಜ್, ಸಾಕ್ಷಿಗಳನ್ನು ಹಾಜರುಪಡಿಸಿ"
ಪ್ರತ್ಯಕ್ಷದರ್ಶಿಗಳು ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಯಜುವೇಂದ್ರ ವಿಕ್ರಮ್ ಸಿಂಗ್ ಅವರು ರಜೆಯಲ್ಲಿದ್ದ ಕಾರಣ ಬೆಳಿಗ್ಗೆ 9:00 ಗಂಟೆಯ ಸುಮಾರಿಗೆ ಕೋರ್ಟ್ ಕೊಠಡಿ ಖಾಲಿ ಇತ್ತು. ಈ ವೇಳೆ ಒಳನುಗ್ಗಿದ ಮಹಿಳೆ, ಮೊದಲು ಸಿಬ್ಬಂದಿ ಬಳಿ "ನ್ಯಾಯಾಧೀಶರು ಎಷ್ಟು ಗಂಟೆಗೆ ಬರುತ್ತಾರೆ?" ಎಂದು ವಿಚಾರಿಸಿದ್ದಾರೆ. ತದನಂತರ ನೇರವಾಗಿ ಡಯಾಸ್ (ಪೀಠ) ಕಡೆಗೆ ನಡೆದುಹೋಗಿ ನ್ಯಾಯಾಧೀಶರ ಆಸನದಲ್ಲೇ ಕುಳಿತಿದ್ದಾರೆ.

ಅಷ್ಟಕ್ಕೇ ನಿಲ್ಲದ ಆಕೆ, ಮೇಜಿನ ಮೇಲಿದ್ದ ಕೇಸ್ ಫೈಲ್‌ಗಳನ್ನು ತಿರುವಿ ಹಾಕಲು ಪ್ರಾರಂಭಿಸಿದ್ದಾರೆ. ಬಳಿಕ ಅಲ್ಲಿಯೇ ಇದ್ದ ನ್ಯಾಯಾಂಗದ ಸುತ್ತಿಗೆಯನ್ನು (Gavel) ಕೈಗೆತ್ತಿಕೊಂಡು ಮೇಜಿಗೆ ಬಡಿದು, "ಆರ್ಡರ್, ಆರ್ಡರ್!... ಇವತ್ತು ನಾನೇ ಈ ಜಿಲ್ಲಾ ನ್ಯಾಯಾಲಯದ ಜಡ್ಜ್. ನನ್ನ ಮುಂದೆ ಸಾಕ್ಷಿ ಮತ್ತು ಪುರಾವೆಗಳನ್ನು ಹಾಜರುಪಡಿಸಿ" ಎಂದು ಜೋರಾಗಿ ಕೂಗಾಡಿದ್ದಾರೆ.
ಒಂದು ಗಂಟೆ ಕಾಲ ನಡೆದ ಮನವೊಲಿಕೆ ಯತ್ನ
ಮಹಿಳೆಯ ಈ ಹಠಾತ್ ವರ್ತನೆಯಿಂದ ಕಂಗಾಲಾದ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು, ಆಕೆಯನ್ನು ಕುರ್ಚಿಯಿಂದ ಕೆಳಗಿಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ತನ್ನ ಬಳಿಗೆ ಬರಲು ಯತ್ನಿಸಿದ ಪ್ರತಿಯೊಬ್ಬರ ಮೇಲೂ ಆಕೆ ತೀವ್ರವಾಗಿ ಕಿರುಚಾಡಿ ಆಕ್ರೋಶ ಹೊರಹಾಕಿದ್ದಾಳೆ. ಈ ಹೈಡ್ರಾಮಾ ಸುಮಾರು ಒಂದು ಗಂಟೆಯ ಕಾಲ ಮುಂದುವರಿದಿದೆ. ಕೊನೆಗೆ ಮಾಹಿತಿ ತಿಳಿದು ಮಹಿಳಾ ಪೊಲೀಸರು ಸೇರಿದಂತೆ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಧಾವಿಸಿತು. ಹರಸಾಹಸ ಪಟ್ಟ ಪೊಲೀಸರು ಆಕೆಯನ್ನು ಜಡ್ಜ್ ಕುರ್ಚಿಯಿಂದ ಕೆಳಗಿಳಿಸಿ, ವಶಕ್ಕೆ ಪಡೆದರು.
A woman climbed onto the district judge's chair inside Varanasi court and began acting as judge herself. Identified as 50 year old Vandana Gupta from Shivpur, she sat at Judge Sanjeev Shukla's dais, banged the hammer repeatedly shouting order order, and told lawyers present that… pic.twitter.com/8i1Of47oHF
— G K Gourav (@GouravGKRepots) June 13, 2026
ಮಾನಸಿಕ ಅಸ್ವಸ್ಥತೆ ಶಂಕೆ: ತನಿಖೆಗೆ ಆದೇಶ
ಮಹಿಳೆಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಪ್ರಮುಖ ಮಾಹಿತಿಯೊಂದನ್ನು ನೀಡಿದ್ದಾರೆ. ಮಹಿಳೆಯ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆಕೆ ತೀವ್ರ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದೆ, ಆಕೆಯನ್ನು ಸುರಕ್ಷಿತವಾಗಿ ಕುಟುಂಬದ ಸದಸ್ಯರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ವಕೀಲರ ಪ್ರಕಾರ, ಈ ಮಹಿಳೆ ಈ ಹಿಂದೆ ಕೂಡ ಇದೇ ರೀತಿ ನ್ಯಾಯಾಧೀಶರ ಕುರ್ಚಿಯ ಮೇಲೆ ಕೂರಲು ಯತ್ನಿಸಿದ್ದಳು ಎನ್ನಲಾಗಿದೆ.
ಭದ್ರತಾ ಲೋಪದ ಬಗ್ಗೆ ತನಿಖೆ
ಈ ಘಟನೆಯ ನಂತರ ಕೋರ್ಟ್ ಕೊಠಡಿಗೆ ಭೇಟಿ ನೀಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಯಜುವೇಂದ್ರ ವಿಕ್ರಮ್ ಸಿಂಗ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯದ ಕಟ್ಟುನಿಟ್ಟಿನ ಭದ್ರತೆಯನ್ನು ದಾಟಿ ಮಹಿಳೆ ಹೇಗೆ ಒಳಗೆ ಬಂದಳು? ಎಂಬ ಬಗ್ಗೆ ತನಿಖೆಗೆ ಆದೇಶಿಸಿದ್ದು, ಅಂದು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯಿಂದ ಲಿಖಿತ ಸ್ಪಷ್ಟನೆಯನ್ನು ಕೇಳಿದ್ದಾರೆ.
ಸಾಮಾನ್ಯ ನಾಗರಿಕರು ಅಥವಾ ಕಕ್ಷಿದಾರರು ಕೋರ್ಟ್ ಆವರಣ ಪ್ರವೇಶಿಸಬೇಕಾದರೆ ಕಟ್ಟುನಿಟ್ಟಾದ ತಪಾಸಣೆ ಮತ್ತು ಗುರುತಿನ ಚೀಟಿ (ID Check) ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಇಷ್ಟೆಲ್ಲಾ ಬಿಗಿ ಭದ್ರತೆಯ ನಡುವೆಯೂ ಮಹಿಳೆಯೊಬ್ಬರು ಇಷ್ಟು ಸುಲಭವಾಗಿ ನ್ಯಾಯಾಧೀಶರ ಪೀಠದವರೆಗೂ ನಡೆದು ಬಂದಿದ್ದು ಹೇಗೆ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಕ್ರಿಯವಾಗಿರುವ ನ್ಯಾಯಾಲಯದ ಕೊಠಡಿಯೊಳಗೆ ಇಂತಹ ಗಂಭೀರ ಭದ್ರತಾ ಲೋಪ ಉಂಟಾಗಿರುವುದು ನ್ಯಾಯಾಧೀಶರು ಮತ್ತು ಸೂಕ್ಷ್ಮ ಪ್ರಕರಣಗಳ ವಿಚಾರಣೆಯ ಸುರಕ್ಷತೆಯ ಬಗ್ಗೆಯೂ ಆತಂಕ ಮೂಡಿಸಿದೆ.












Click it and Unblock the Notifications