Bengaluru Rains: ನಗರದ 92 ವಾರ್ಡ್‌ಗಳಲ್ಲಿ ಜೋರು ಮಳೆ, ಸಂಚಾರ ತೊಂದರೆ: ಭಾನುವಾರ ಯೆಲ್ಲೋ ಅಲರ್ಟ್
ಬೆಂಗಳೂರು: ಮುಂಗಾರು ಮಳೆ ಚುರುಕು ಪಡೆದಿದ್ದು, ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಶನಿವಾರ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಅತ್ಯಧಿಕ ಮಳೆ ಆಗಿದ್ದು, ಇನ್ನುಳಿದಂತೆ ಬೆಂಗಳೂರಿನ 92 ವಾರ್ಡ್‌ಗಳಲ್ಲಿ ಸಂಜೆ ಜೋರು ಮಳೆ ಆಗಿದೆ. ವಿವಿಧೆಡೆ ಬಂದ ಮಳೆಗೆ ಅಲ್ಲಲ್ಲಿ ಸಂಚಾರ ದಟ್ಟಣೆ ಕಂಡು ಬಂದಿದ್ದು, ಕೆಲವೆಡೆ ರಸ್ತೆಗಳ ಮೇಲೆ ನೀರು ನಿಂತು ಸಮಸ್ಯೆ ಆಯಿತು. ಈ ಮಳೆ ಇಂದು ರಾತ್ರಿವರೆಗೂ ಮುಂದುವರಿಯುವ ಸೂಚನೆ ಇದೆ. ಮುಂದಿನ ಜೂನ್ 16ರವರೆಗೆ ಮುಂದುವರಿಯುವ ಸಾಧ್ಯತೆ ಇದ್ದು, ಭಾನುವಾರ ನಗರಕ್ಕೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಕನಕಪುರ ರಸ್ತೆ, ಹಾರೋಹಳ್ಳಿ, ಬನಶಂಕರಿ, ಜಕ್ಕಸಂದ್ರ ಸೇರಿದಂತೆ ಕಳೆದ ಎರಡು ಮೂರು ದಿನಗಳಿಂದ ಉತ್ತಮ ಮಳೆ ಆಗುತ್ತಿದೆ. ಆದರೆ ನಗರದ ತುಂಬೆಲ್ಲ ಮುಂಗಾರು ವಿಸ್ತರಿಸಿದಂತೆ ಕಾಣುತ್ತಿಲ್ಲ. ವಿವಿಧ ಭಾಗಗಳಲ್ಲಿ ಮಳೆ ಆದರೆ, ಇನ್ನುಳಿದ ಪ್ರದೇಶ ತಂಪು ವಾತಾವರಣ ಕಂಡು ಬರುತ್ತಿದೆ. ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಬಿಸಿಲಿನ ಸಾಮಾನ್ಯ ವಾತಾವರಣ ನಿರ್ಮಾಣವಾಗುತ್ತಿದೆ.

ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಇಂದು ಸಂಜೆ 6.30ರವರೆಗೆ ನೀಡಿದ ಮಾಹಿತಿ ಪ್ರಕಾರ, ಹಾರೋಹಳ್ಳಿಯಲ್ಲಿ ಅತ್ಯಧಿಕ 34 ಮಿಲಿ ಮೀಟರ್ ಮಳೆ ದಾಖಲಾಗಿದೆ. ಹಂಪಿ ನಗರದಲ್ಲಿ 18 ಮಿಲಿ ಮೀಟರ್, ರಾಜರಾಜೇಶ್ವರಿ ನಗರ -2 15 ಮಿಲಿ ಮೀಟರ್, ಪೀಣ್ಯ ಕೈಗಾರಿಕೆ ಪ್ರದೇಶ 14.5 ಮಿಲಿ ಮೀಟರ್, ಎಚ್.ಗೊಲ್ಲಹಳ್ಳಿ 14.5ಮಿಲಿ ಮೀಟರ್, ದೊಡ್ಡ ಬಿದರಕಲ್ಲು 14 ಮಿಲಿ ಮೀಟರ್, 11.5 ಮಿಲಿ ಮೀಟರ್, ಎಚ್‌ಎಎಲ್ ಏರ್ ಪೋರ್ಟ್ 10ಮಿಲಿ ಮೀಟರ್ ಮಳೆ ದಾಖಲಾಗಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.
Monsoon Rain: ಜೂನ್ 10 ದಿನಗಳಲ್ಲಿ ಮುಂಗಾರು ಮಳೆ ಕೊರತೆ: ಮುಂದಿನ 2 ವಾರಗಳ ಮುನ್ಸೂಚನೆ ಇಲ್ಲಿದೆ
ಆರ್‌ಆರ್‌ಎಂಆರ್ ಜಂಕ್ಷನ್‌ನಲ್ಲಿ ಮರ ಬಿದ್ದ ಪರಿಣಾಮ ಹಡ್ಸನ್ ಸರ್ಕಲ್ ಕಡೆಗೆ ಹಾಗೂ ಪಣತ್ತೂರು ಜಂಕ್ಷನ್ ಬಳಿ ಮಳೆ ನೀರು ನಿಂತಿರುವುದರಿಂದ ಕಾಡುಬೀಸನಹಳ್ಳಿ ಕಡೆಗೆ ನಿಧಾನಗತಿಯ ಸಂಚಾರ ಇದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಉಳಿದಂತೆ ಕೋರಮಂಗಲ, ಬಿಟಿಎಂ ಬಡಾವಣೆ, ಎಚ್ ಎಸ್ ಆರ್ ಬಡಾವಣೆ, ಸಿಲ್ಕ್ ಬೋರ್ಡ್ ಜಂಕ್ಷನ್, ಮಾರತ್ತಹಳ್ಳಿ, ಡೈರಿ ವೃತ್ತ, ಹಳೇ ಮದ್ರಾಸ್ ರಸ್ತೆ, ಕೆಂಗೇರಿ, ವಿಜಯನಗರ, ಇನ್ನಿತರ ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಆಗಿದೆ.
ನಗರಾದ್ಯಂತ ಮುಂದಿನ ಮೂರು ದಿನ ಬಿರುಗಾಳಿ ಸಹಿತ ಆಗಾಗ ಜೋರು ಮಳೆಯ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣ ಜೊತೆಗೆ ಆಗಾಗ ಮಬ್ಬು ಕವಿದು ಜಿಟಿ ಜಿಟಿ ಮಳೆ ಆಗಲಿದೆ. ಜೂನ್ 14ರಂದು ನಾಳೆ ಭಾನುವಾರ ಮಾತ್ರ ಜೋರು ಮಳೆ ಆರ್ಭಟ ಕಂಡು ಬರಲಿದ್ದು, ಒಂದು ದಿನ ಬೆಂಗಳೂರು ನಗರಕ್ಕೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ನಗರದಲ್ಲಿ ಸಾಮಾನ್ಯವಾಗಿ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications