ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ 5 ಕೋಟಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ
ಚಿಕ್ಕಬಳ್ಳಾಪುರ, ಜೂನ್ 13: ಪರಿಸರ ಸಂರಕ್ಷಣೆ ಉದ್ದೇಶದಿಂದ ಕರ್ನಾಟಕದಾದ್ಯಂತ ಐದು ಕೋಟಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಐದು ಲಕ್ಷ ಸಸಿಗಳನ್ನು ನೆಡುವ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಶನಿವಾರ (ಜೂನ್ 14) ಅಧಿಕೃತ ಚಾಲನೆ ಸಿಕ್ಕಿದೆ. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿಭು ಬಖ್ರು ಅವರು ಸಸಿ ನೆಡುವ ಮೂಲಕ ಈ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದರು.
ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಸಹಯೋಗದಲ್ಲಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಪ್ರಾಧಿಕಾರ, ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘ, ಧಾರೆ ಪ್ರತಿಷ್ಠಾನ ಹಾಗೂ ವಂದೇ ಭಾರತಂ ಪ್ರತಿಷ್ಠಾನಗಳು ಜಂಟಿಯಾಗಿ ಈ ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಕೇವಲ ಗಿಡ ನೆಡುವುದಷ್ಟೇ ಅಲ್ಲದೆ, ಜಲಮೂಲಗಳ ಶುದ್ಧೀಕರಣ ಮತ್ತು ಮರುಸ್ಥಾಪನೆ ಉಪಕ್ರಮಗಳು ಕೂಡ ಈ ಯೋಜನೆಯಲ್ಲಿ ಸೇರಿವೆ.

ಉಳಿದು-ಬೆಳೆದ ಗಿಡಗಳಿಂದ ಯಶಸ್ಸು ನಿರ್ಧಾರ
ಈ ಕುರಿತು ಮಾತಾನಾಡಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರು, 'ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಗಿಡ ನೆಡುವುದಕ್ಕೆ ಸೀಮಿತವಲ್ಲ. ಅದು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯೊಂದಿಗೆ ಬೆಸೆದುಕೊಂಡಿದೆ. ನಾವು ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ ಎನ್ನುವುದಕ್ಕಿಂತ, ಅವುಗಳಲ್ಲಿ ಎಷ್ಟು ಗಿಡಗಳು ಉಳಿದು ಮರವಾಗಿ ಬೆಳೆದಿವೆ ಎಂಬುದರ ಆಧಾರದ ಮೇಲೆ ಈ ಅಭಿಯಾನದ ಯಶಸ್ಸನ್ನು ಅಳೆಯಬೇಕು. ಮರಗಳನ್ನು ಪೋಷಿಸುವುದರಿಂದ ಆರ್ಥಿಕ ಹಾಗೂ ಆಧ್ಯಾತ್ಮಿಕ ಲಾಭಗಳೂ ಇವೆ. ಮುಖ್ಯವಾಗಿ ಮಕ್ಕಳು ಪರಿಸರದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು,' ಎಂದು ಕರೆ ನೀಡಿದರು.
'ಪ್ರೀತಿಯೇ ಅತ್ಯಂತ ಪ್ರಬಲ ಕಾನೂನು'
ಪ್ರಸ್ತುತ ಯುರೋಪ್ ಪ್ರವಾಸದಲ್ಲಿರುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ವಿಡಿಯೋ ಸಂದೇಶದ ಮೂಲಕ ನೆರೆದಿದ್ದ ಎಲ್ಲರನ್ನೂ ಹರಸಿದರು. 'ಪ್ರಕೃತಿಯೂ ನಮ್ಮ ಕುಟುಂಬದ ಒಂದು ಭಾಗ. ಮಾನವನ ಅಸ್ತಿತ್ವಕ್ಕೆ ಗಿಡ-ಮರ, ಬೆಟ್ಟ-ಗುಡ್ಡಗಳು ಅತ್ಯಗತ್ಯ. ಪ್ರೀತಿ ಸಮೃದ್ಧವಾಗಿರುವ ಕಡೆ ಇತರ ಕಾನೂನುಗಳ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಪ್ರೀತಿಯೇ ಅತಿದೊಡ್ಡ ಕಾನೂನು. ಧರ್ಮದ ಆಧಾರದ ಮೇಲೆ ನ್ಯಾಯವು ನಮ್ಮನ್ನು ಮುನ್ನಡೆಸುತ್ತದೆ,' ಎಂದು ಅವರು ವಿಶ್ಲೇಷಿಸಿದರು.
ಪ್ರಶಾಂತಿ ಬಾಲ ಮಂದಿರ ಟ್ರಸ್ಟ್‌ನ ಅಧ್ಯಕ್ಷ ಡಾ.ಬಿ.ಎನ್. ನರಸಿಂಹಮೂರ್ತಿ ಮಾತನಾಡಿ, '2,600 ವರ್ಷಗಳ ಹಿಂದೆಯೇ ಗೌತಮ ಬುದ್ಧ ಪಾರಿಸರಿಕ ನೈತಿಕತೆ ಬಗ್ಗೆ ಹೇಳಿದ್ದರು ಹಾಗೂ ತನ್ನ ಅನುಯಾಯಿಗಳು ಪ್ರತಿ 5 ವರ್ಷಕ್ಕೊಮ್ಮೆ ಗಿಡ ನೆಡಬೇಕೆಂದು ನಿಯಮ ಮಾಡಿದ್ದರು. ಸಂವಿಧಾನದಷ್ಟೇ ಪರಿಸರದ ನೈತಿಕತೆಯೂ ಮುಖ್ಯ. ಪ್ರತಿಯೊಬ್ಬ ಭಾರತೀಯನೂ ತಲಾ 5 ಗಿಡಗಳನ್ನು ಬೆಳೆಸಿದರೆ ದೇಶದಲ್ಲಿ 50 ಲಕ್ಷ ಕೋಟಿ ರೂಪಾಯಿ ಮೌಲ್ಯದ ನೈಸರ್ಗಿಕ ಸಂಪತ್ತು ಸೃಷ್ಟಿಯಾಗುತ್ತದೆ. ಇದು ದೇಶದ ಬಜೆಟ್‌ಗಿಂತ ದೊಡ್ಡದು ಮತ್ತು ನಿರುದ್ಯೋಗ, ಹವಾಮಾನ ವೈಪರಿತ್ಯದಂತಹ ದೊಡ್ಡ ಸಮಸ್ಯೆಗಳಿಗೆ ಮರಗಳ ಪೋಷಣೆ ಮದ್ದಾಗಬಲ್ಲದು,' ಎಂದು ಹೇಳಿದರು.
ಮಿಯಾವಾಕಿ ಮಾದರಿಯ ಅರಣ್ಯಗಳ ನಿರ್ಮಾಣ
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತ ನ್ಯಾಯಾಧೀಶರಾದ ಹಂಚಟೆ ಸಂಜೀವ್ ಕುಮಾರ್ ಮಾತನಾಡಿ, 'ಅಂತರ್ಜಲ ಕುಸಿತದ ಭೀತಿ ಎದುರಿಸುತ್ತಿರುವ ಚಿಕ್ಕಬಳ್ಳಾಪುರಕ್ಕೆ ಜಪಾನ್ ತಂತ್ರಜ್ಞಾನದ 'ಮಿಯಾವಾಕಿ' ಮಾದರಿಯ ಮಾನವ ನಿರ್ಮಿತ ಅರಣ್ಯಗಳು ಸಂಜೀವಿನಿಯಾಗುತ್ತವೆ. ಜಿಲ್ಲೆಯಲ್ಲಿ ಇವುಗಳನ್ನು 'ಅಮೃತವನ' ಹೆಸರಿನಲ್ಲಿ ಬೆಳೆಸಲಾಗುತ್ತಿದೆ. ನಾವು ಪಂಚಭೂತಗಳನ್ನು ಕಲುಷಿತಗೊಳಿಸಿದ್ದೇವೆ. ಮಣ್ಣಿಗೆ ರಾಸಾಯನಿಕದ ವಿಷ ನೀಡಿ, ಮರಳಿ ಧಾನ್ಯಗಳ ರೂಪದಲ್ಲಿ ಅದೇ ವಿಷವನ್ನು ಉಣ್ಣುವ ದುಸ್ಥಿತಿಗೆ ತಲುಪಿದ್ದೇವೆ,' ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಅನು ಶಿವರಾಮನ್ ಮಾತನಾಡಿ, 'ಪರಿಸರ ಮಾಲಿನ್ಯದ ದುಷ್ಪರಿಣಾಮಗಳು ಮೊದಲು ತಟ್ಟುವುದೇ ಸಮಾಜದ ಬಡವರು ಮತ್ತು ಹಿಂದುಳಿದ ವರ್ಗದವರಿಗೆ. ಗಿಡ ನೆಡುವ ಮೂಲಕ ಭೂಮಿಯಲ್ಲಿ ಮನುಷ್ಯರು ಬದುಕಲು ಬೇಕಾದ ವ್ಯವಸ್ಥೆ ರೂಪಿಸಿದಂತೆ ಆಗುತ್ತದೆ,' ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಆಡಳಿತ ನ್ಯಾಯಾಧೀಶರಾದ ನ್ಯಾಯಮೂರ್ತಿ ಹಂಚಟೆ ಸಂಜೀವ್ ಕುಮಾರ್ ಅವರು 'ಕೆಸಿ ವ್ಯಾಲಿ' ಯೋಜನೆಯ ಭೀಕರತೆಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದರು. 'ಅತ್ಯಂತ ವಿನಯಪೂರ್ವಕವಾಗಿ ನಾನು ಈ ವೇದಿಕೆಯ ಮೂಲಕ ಸಿಜೆ ಅವರ ಗಮನಕ್ಕೆ ತರುತ್ತಿದ್ದೇನೆಂದರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ತತ್ತರಿಸುತ್ತಿದ್ದಾರೆ. ಕೆಸಿ ವ್ಯಾಲಿ ಯೋಜನೆಯಿಂದಾಗಿ ಇಲ್ಲಿನ ಜನರಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಇದು ಭೀಕರ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ಇದರಿಂದಾಗಿ ನಾಗರಿಕರ ಸಂವಿಧಾನಬದ್ಧ 'ಜೀವಿಸುವ ಹಕ್ಕು' ಅಪಾಯದಲ್ಲಿದೆ. ಉನ್ನತ ನ್ಯಾಯಾಲಯವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ಕಾನೂನಾತ್ಮಕವಾಗಿ ಜಿಲ್ಲೆಯ ಜನರನ್ನು ರಕ್ಷಿಸಬೇಕು,' ಎಂದು ಬಹಿರಂಗವಾಗಿ ಮನವಿ ಮಾಡಿದರು.
ಸಮಾರಂಭದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಎಂ.ಚಂದ್ರಶೇಖರ ರೆಡ್ಡಿ, ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ, ವಕೀಲರ ಸಂಘದ ಅಧ್ಯಕ್ಷ ಕೆ.ವಿ.ಅಭಿಲಾಷ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ವಕೀಲರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.












Click it and Unblock the Notifications