IRCTC: ಟಿಕೆಟ್ ತತ್ಕಾಲ್ ಬುಕ್ಕಿಂಗ್ ತಲೆನೋವಿಗೆ ಶೀಘ್ರವೇ ಅಂತ್ಯ: ವಿದ್ಯಾರ್ಥಿನಿ ದೂರಿಗೆ ತಕ್ಷಣ ಸ್ಪಂದಿಸಿದ ಸಚಿವ
Indian Railways: ದೇಶದ ರೈಲು ಜಾಲ ವಿಸ್ತರಣೆ, ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವ ಕೇಂದ್ರ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಜುಲೈ 15ರ ಒಳಗಾಗಿ ಹೊಸ ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಬಿಡುಗಡೆ ಮಾಡಲು ಮುಂದಾಗಿದೆ. ಸಂವಾಧ ಕಾರ್ಯಕ್ರಮದಲ್ಲಿ ತಾಂತ್ರಿಕ ಸಮಸ್ಯೆ ಕುರಿತು ದೂರು ನೀಡಿದ ವಿದ್ಯಾರ್ಥಿನಿ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ತಕ್ಷಣವೇ ರೈಲ್ವೆ ಸಿಬ್ಬಂದಿಗೆ ಕರೆ ಮಾಡಿ ವಿಚಾರಿಸಿದರು. ಬಳಿಕ ಎಲ್ಲ ಸಮಸ್ಯೆ ಬಗೆಹರಿಸುವುದಾಗಿ, ಹೊಸ ವೆಬ್‌ಸೈಟ್ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಇತ್ತೀಚೆಗೆ ಜೈಪುರದ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (MNIT) ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು. ಈ ವೇಳೆ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಇರುವ ತಾಂತ್ರಿಕ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದಿದ್ದಾರೆ. ಈ ಸಂವಾದದ ವೇಳೆ ವಿದ್ಯಾರ್ಥಿಯೊಬ್ಬರು ಐಆರ್‌ಸಿಟಿಸಿ ವೆಬ್‌ಸೈಟ್‌ನ ಕ್ಯಾಪ್ಚಾ (Captcha) ವ್ಯವಸ್ಥೆಯಿಂದ ಸಮಸ್ಯೆಗಳು ಎದುರಾಗುತ್ತಿವೆ ಎಂಬುದನ್ನು ಸಚಿವರ ಗಮನಕ್ಕೆ ತಂದಿದ್ದರು.

ವಿದ್ಯಾರ್ಥಿನಿ ದೂರಿನ ಬಳಿಕ ಅಪ್ಡೇಟ್ ವೆಬ್‌ಸೈಟ್ ಲಾಂಚ್
ವಿದ್ಯಾರ್ಥಿನಿ ದೂರಿನ ನಂತರ ಕಾರ್ಯಪ್ರವೃತ್ತರಾದ ಸಚಿವರು ಕಾರ್ಯಕ್ರಮದಲ್ಲೇ ರೈಲ್ವೆ ಅಧಿಕಾರಿಗಳಿಗೆ ಕರೆ ಮಾಡಿದ ಪ್ರಸಂಗ ನಡೆಯಿತು. ಮುಂಬರುವ 30 ದಿನಗಳಲ್ಲಿ ನವೀಕರಿಸಿದ ವೆಬ್‌ಸೈಟ್ ಸಿದ್ಧಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬಳಿಕ ಜುಲೈ 15ಕ್ಕೆ ನೂತನ ವೆಬ್‌ಸೈಟ್ ಲಾಂಚ್ ಮಾಡಲಾಗುವುದು ಎಂದು ಅವರು ಹೇಳಿದರು.
Bengaluru-Mysuru Expressway: ಟೋಲ್ ಶುಲ್ಕ ಪಾವತಿಗೆ ಹೊಸ ವ್ಯವಸ್ಥೆ, ಸವಾರರಿಗೆ ಹಣ ಉಳಿತಾಯ
ವಿದ್ಯಾರ್ಥಿಗಳ ದೂರುಗಳಿಗೆ ತಕ್ಷಣ ಸ್ಪಂದಿಸಿ ಹೊಸ ತಂತ್ರಜ್ಞಾನ ಅಳವಡಿಸಲು ಮುಂದಾಗಿರುವ ರೈಲ್ವೆ ಸಚಿವರ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂಬರುವ ಜುಲೈ 15 ರಂದು ಬಿಡುಗಡೆಯಾಗಲಿರುವ ನೂತನ ಐಆರ್‌ಸಿಟಿಸಿ ಪೋರ್ಟಲ್ ಕೋಟ್ಯಂತರ ರೈಲ್ವೆ ಪ್ರಯಾಣಿಕರ ಡಿಜಿಟಲ್ ಟಿಕೆಟ್ ಬುಕಿಂಗ್ ಅನುಭವವನ್ನು ಮತ್ತಷ್ಟು ಸುಲಭ ಹಾಗೂ ಸುರಕ್ಷಿತವಾಗಿಸುವ ಸಾಧ್ಯತೆಗಳು ಇವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಸಿಹಿ ಸುದ್ದಿಗಳು ಸಿಗಲಿವೆ.
ತತ್ಕಾಲ್ ಟಿಕೆಟ್ ಬುಕಿಂಗ್ ಸಮಸ್ಯೆ
ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಸದ್ಯ ಸರ್ವರ್ ಕ್ರಾಶ್, ನಿಧಾನಗತಿಯ ಕಾರ್ಯಾಚರಣೆ, ಒಟಿಪಿ ಪಡೆಯುವಲ್ಲಿನ ವಿಳಂಬ ಇದೆ. ಪ್ರಯಾಣಿಕರು ತತ್ಕಾಲ್ ಬುಕಿಂಗ್ ವೇಳೆ ಭಾರಿ ಟ್ರಾಫಿಕ್‌ನಿಂದಾಗಿ ಟಿಕೆಟ್ ಕಾಯ್ದಿರಿಸಲು ಹರಸಾಹರಪಡುವಂತಾಗಿದೆ. ದೇಶದ ಒಟ್ಟು ರೈಲ್ವೆ ಟಿಕೆಟ್‌ಗಳಲ್ಲಿ ಶೇಕಡಾ 88 ರಷ್ಟು ಬುಕಿಂಗ್ ಇಂಟರ್‌ನೆಟ್ ಮೂಲಕವೇ ನಡೆಯುತ್ತಿದೆ. 2025ರಲ್ಲಿ ಕೇಂದ್ರ ಸರ್ಕಾರವು ತತ್ಕಾಲ್ ಬುಕಿಂಗ್‌ಗೆ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿ ನಿಯಮ ಜಾರಿಗೆ ತಂದಿತ್ತು.
ರೈಲ್ವೆ ಇಲಾಖೆಯು ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿನ ದುರುಪಯೋಗ ತಡೆಗೆ ಸಾಕಷ್ಟು ಕಠಿಣ ಕ್ರಮಗಳನ್ನು ರೂಪಿಸಿದೆ. ಇದರ ಭಾಗವಾಗಿ 2025 ರ ಅವಧಿಯಲ್ಲಿ 3 ಕೋಟಿಗಿಂತಲೂ ಅಧಿಕ ಐಆರ್‌ಸಿಟಿಸಿ ಖಾತೆಗಳನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಲಾಗಿದೆ. ಅಲ್ಲದೆ ಸುಮಾರು 2.94 ಕೋಟಿ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ವಿವರಗಳನ್ನು ಮರುಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ರೈಲು ತಂತ್ರಜ್ಞಾನದಲ್ಲಿ ಪ್ರಗತಿ
ರೈಲ್ವೆ ಸೇವೆಗಳು ತಾಂತ್ರಿಕವಾಗಿಯು ಸಾಕಷ್ಟು ಅಭಿವೃದ್ಧಿಗೊಳಿಸಲಾಗಿದೆ. ಐಆರ್‌ಸಿಟಿಸಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಆಹಾರ ಉಸ್ತುವಾರಿ ವ್ಯವಸ್ಥೆ ಜಾರಿಗೆ ತಂದಿದೆ. ನವದೆಹಲಿಯ ಪ್ರಧಾನ ನಿಯಂತ್ರಣ ಕೊಠಡಿಯಿಂದ ದೇಶಾದ್ಯಂತ ಇರುವ 800 ಕ್ಕೂ ಹೆಚ್ಚು ರೈಲ್ವೆ ಅಡುಗೆ ಕೋಣೆಗಳ ಸ್ವಚ್ಛತೆಯನ್ನು ಎಐ ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಜೊತೆಗೆ ಸರ್ಕಾರವು ಪ್ರಸ್ತುತ ಇರುವ ಎಂ-ಆಧಾರ್ ಆ್ಯಪ್ ಬದಲಿಗೆ ಹೊಸ ಆಧಾರ್ ಅಪ್ಲಿಕೇಶನ್ ಪರಿಚಯಿಸಲು ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.












Click it and Unblock the Notifications