ವೈಭವ್ ಸೂರ್ಯವಂಶಿ ತನ್ನ ಸಹೋದರನ 'ಶತಕ'ವನ್ನು ಸಂಭ್ರಮಿಸಿದ್ದು ಹೀಗೆ
Vaibhav Sooryavanshi: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಕ್ರಮಣಕಾರಿ ಆಟವಾಡಿದ್ದ 15 ವರ್ಷದ ವಯಭವ್ ಸೂರ್ಯವಂಶಿ ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೀಗ ಸಹೋದರ ಸಹ ಕ್ರಿಕೆಟ್ ಪಂದ್ಯವೊಂದರಲ್ಲಿ ಶತಕ ಬಾರಿಸಿ ಗಮನ ಸೆಳೆದಿದ್ದು, ಇದಕ್ಕೆ ವೈಭವ್ ವಿಶೇಷ ಮೆಚ್ಚುಗೆ ಸೂಚಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಭಾರತೀಯ ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ಮತ್ತು ಭರವಸೆಯ ಯುವ ಆಟಗಾರರಲ್ಲಿ ಬಿಹಾರದ ವೈಭವ್ ಸೂರ್ಯವಂಶಿ ಪ್ರಮುಖರಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿ ಇತಿಹಾಸ ಸೃಷ್ಟಿಸಿರುವ ವೈಭವ್, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.

ಸಹೋದರನ ಶತಕ ಸಂಭ್ರಮಿಸಿದ ವೈಭವ್
ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ತಮ್ಮ ಸಹೋದರ ಆಶೀರ್ವಾದ್ ಸೂರ್ಯವಂಶಿ ಅವರು ಕ್ರಿಕೆಟ್ ಪಂದ್ಯವೊಂದರಲ್ಲಿ ಭರ್ಜರಿ ಶತಕ ಗಳಿಸಿದ ಸಾಧನೆಯನ್ನು ವೈಭವ್ ಇನ್‌ಸ್ಟಾಗ್ರಾಮ್ ಸ್ಟೋರಿ ಹಾಕಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ವೈಭಬ್ ಇನ್‌ಸ್ಟಾ ಪೋಸ್ಟ್‌ನಲ್ಲಿ ಏನಿದೆ?
ವೈಭವ್ ಸೂರ್ಯವಂಶಿ ತಮ್ಮ ಸಹೋದರನ ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಹೋದರ ಮೈದಾನದಲ್ಲಿ ಶತಕ ಬಾರಿಸಿದ ನಂತರ ಬ್ಯಾಟ್ ಎತ್ತಿ ಸಂಭ್ರಮಿಸುತ್ತಿರುವ ಫೋಟೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ 'ಸಹೋದರನಿಂದ ಶತಕದ ಅಬ್ಬರ,' ಎಂದು ಬರೆದುಕೊಂಡು, ಹಾರ್ಟ್ ಎಮೋಜಿ ಹಾಕಿ ತಮ್ಮ ಸೋದರನ ಮೇಲಿರುವ ಪ್ರೀತಿಯನ್ನು ಎತ್ತಿತೋರಿಸಿದ್ದಾರೆ.
ವೈಭವ್ ಇನ್‌ಸ್ಟಾ ಪೋಸ್ಟ್ ಭಾರಿ ವೈರಲ್
ಕ್ರೀಡಾ ಹಿನ್ನೆಲೆಯುಳ್ಳ ಈ ಕುಟುಂಬದಲ್ಲಿ ಮತ್ತೊಬ್ಬ ಪ್ರತಿಭೆ ಮೂಡಿಬರುತ್ತಿರುವುದಕ್ಕೆ ಈ ಪೋಸ್ಟ್ ಸಾಕ್ಷಿಯಾಗಿದೆ. ವೈಭವ್ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸಹೋದರರಿಬ್ಬರಿಗೂ ಶುಭ ಹಾರೈಸುತ್ತಿದ್ದಾರೆ. ಇನ್ನೂ ವೈಭವ್ ಸೂರ್ಯವಂಶಿ ಅವರ ಇತಿಹಾಸವನ್ನು ಗಮನಿಸಿದರೆ, ಅವರು ಕೇವಲ 13ನೇ ವಯಸ್ಸಿನಲ್ಲಿಯೇ ಭಾರತದ ಪ್ರತಿಷ್ಠಿತ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಿಹಾರ ತಂಡದ ಪರವಾಗಿ ಪದಾರ್ಪಣೆ ಮಾಡಿ ಆಕ್ರಮಣಕಾರಿ ಆಟದ ಮೂಲಕ ದಿಗ್ಗಜರ ಗಮನ ಸೆಳೆದಿದ್ದರು.
ವಂಡರ್ ಕಿಡ್ ವೈಭವ್ ಸಾಧನೆ
ಸಚಿನ್ ತೆಂಡೂಲ್ಕರ್ ಮತ್ತು ಯುವರಾಜ್ ಸಿಂಗ್ ಅವರಂತಹ ದಿಗ್ಗಜ ಆಟಗಾರರಿಗಿಂತಲೂ ಕಿರಿಯ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಹೆಗ್ಗಳಿಕೆ ಇವರದ್ದಾಗಿದೆ. ಇದಾದ ಬಳಿಕ ಭಾರತದ ಅಂಡರ್-19 ತಂಡದಲ್ಲೂ ಸ್ಥಾನ ಪಡೆದ ವೈಭವ್, ಆಸ್ಟ್ರೇಲಿಯಾ ಅಂಡರ್-19 ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲಿ ಇಂತಹ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಅವರ ಪ್ರತಿಭೆಯನ್ನು ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದರು.
ಇವರ ಈ ಅಸಾಧಾರಣ ಪ್ರತಿಭೆಗೆ ಇತ್ತೀಚೆಗೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಭಾರಿ ಮನ್ನಣೆ ಸಿಕ್ಕಿತು. ಹರಾಜಿನಲ್ಲಿ ಕೇವಲ 30 ಲಕ್ಷ ರೂಪಾಯಿಗಳ ಮೂಲ ಬೆಲೆ ಹೊಂದಿದ್ದ ವೈಭವ್ ಅವರನ್ನು ಖರೀದಿಸಲು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ತಂಡವು ಇವರನ್ನು ಬರೋಬ್ಬರಿ 1.10 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿಯೇ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ವೈಭವ್ ಸೂರ್ಯವಂಶಿ ತಮ್ಮ ಹೆಸರಿಗೆ ಬರೆದುಕೊಂಡರು.
ಸದ್ಯ ವೈಭವ್ ಸೂರ್ಯವಂಶಿ ದೊಡ್ಡ ವೇದಿಕೆಗಳಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣಲು ಕಠಿಣ ತರಬೇತಿ ಪಡೆಯುತ್ತಿದ್ದಾರೆ. ಇದರ ನಡುವೆಯೂ ತಮ್ಮ ಕುಟುಂಬ ಸದಸ್ಯರ, ಅದರಲ್ಲೂ ಮುಖ್ಯವಾಗಿ ತಮ್ಮ ಸಹೋದರನ ಕ್ರೀಡಾ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಅವರ ಕ್ರೀಡಾ ಮನೋಭಾವ ಮತ್ತು ಕೌಟುಂಬಿಕ ಬದ್ಧತೆಯನ್ನು ತೋರಿಸುತ್ತದೆ. ಸಹೋದರನ ಶತಕದ ಸಂಭ್ರಮದ ಈ ಇನ್‌ಸ್ಟಾಗ್ರಾಮ್ ಪೋಸ್ಟ್, ಸೂರ್ಯವಂಶಿ ಕುಟುಂಬದಲ್ಲಿ ಕ್ರಿಕೆಟ್ ರಕ್ತಗತವಾಗಿ ಹರಿದುಬರುತ್ತಿದೆ ಎಂಬುದನ್ನು ಸಾಬೀತುಪಡಿಸುವಂತಿದೆ. ಮುಂದಿನ ದಿನಗಳಲ್ಲಿ ಇಬ್ಬರೂ ಸಹೋದರರು ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲಿ ಎಂದು ಕ್ರಿಕೆಟ್ ಪ್ರೇಮಿಗಳು ಆಶಿಸುತ್ತಿದ್ದಾರೆ.












Click it and Unblock the Notifications