ಚಳಿಗಾಲದಲ್ಲಿ ಏರ್‌ಟೆಲ್‌ಗೆ ಹಿಡಿದ ವೈರಲ್ ಜ್ವರ

ಅಂತೂ ಇಂತೂ ಬಂತು ಶುಕ್ರವಾರ. 3 ಗಂಟೆ ಮುಂಚಿತವಾಗಿ ವಿಮಾನನಿಲ್ದಾಣದ ಕಡೆಗೆ ಧಾವಿಸಿದೆ. check-in ಕ್ಯೂನಲ್ಲಿ ನಾನೇ ಮೊದಲನೆಯವನು. ಸಮಯಕ್ಕೆ ಸರಿಯಾಗಿ ವಿಮಾನ ಹೊರಡುತ್ತಾ ಅಂತ ನನ್ನ ಮನದಲ್ಲಿ ಪ್ರಶ್ನೆ. ಬೆಂಗಳೂರಿಗೆ ಹೊರಡುವಾಗ ಇಂತಹ ಪ್ರಶ್ನೆಗಳು ಸಹಜ ಅನ್ನಿ. ವಿಮಾನ ಹೊರಡುವ ಮೊದಲು ಮಲಗಿದ ನನಗೆ ಅದು ಬೆಂಗಳೂರಿನಲ್ಲಿ ಇಳಿದಾಗಲೇ ಎಚ್ಚರ. ಕಣ್ಣು ಮುಚ್ಚಿ ಬಿಡುವುದರೊಳಗೆ ಬೆಂಗಳೂರು ಬಂತೆನ್ನುವ ಭಾವನೆ. ಬೆಂಗಳೂರಿನಲ್ಲಿ ಇಳಿದಾಗ ತಟ್ಟಿತು ಮಾಗಿ ಚಳಿ. ಅಬ್ಬಾ ಇದು ಬೆಂಗಳೂರಾ? ಅಥವಾ ಅಟ್ಲಾಂಟಾನಾ? ಅನ್ನುವ ಅನುಭವ. ಸಿಂಗಪುರದಲ್ಲಿದ್ದ ನಮಗೆ ಚಳಿಯ ಅನುಭವ ಅಪರೂಪ. ಎಲ್ಲಾ ಸಾಫ್ಟ್‌ವೇರ್ ಕೆಲಸಗಳನ್ನು ಔಟ್‌ಸೋರ್ಸ್ ಮಾಡಿರುವ ಅಮೆರಿಕನ್ನರು ಜೊತೆಗೆ ಚಳಿಯನ್ನು ಔಟ್‌ಸೋರ್ಸ್ ಮಾಡಿದ್ದಾರೇನೋ ಅನ್ನುವಂತಿತ್ತು. ಹೇಗಿದ್ದರೂ ನಮ್ಮ ಊರು ಚಂದ.
ಮೂರು ವಾರ ಅಲ್ಲಿರುವುದರಿಂದ ಒಂದು ಸಿಮ್‌ಕಾರ್ಡ್‌ನ ಅವಶ್ಯಕತೆ ಇತ್ತು. ನೋಡಿ... ಒಂದು ಕೈ ಇಲ್ಲದಿದ್ದರೂ ಪರವಾಗಿಲ್ಲ. ಮೊಬೈಲ್ ಫೋನ್ ಇಲ್ಲದ್ದಿದರೆ ತಲೆಯಮೇಲೆ ಆಕಾಶವೇ ಕಳಚಿಬಿದ್ದಂತಾಗುತ್ತದೆ ನಮಗೆ. ಎಲ್ಲಾ Service-providersಗಳನ್ನೂ ವಿಚಾರಿಸಿದನಂತರ Airtel ಸಿಮ್‌ಕಾರ್ಡ್ ತೆಗೆದುಕೊಳ್ಳಲು ಅಂತ ಏರ್ಟೆಲ್ ಅಂಗಡಿಗೆ ಹೋದೆ. ಅಲ್ಲಿ ಕಂಡಿದ್ದು ಜನರ ಸಂತೆ. ಯಾವ ಕ್ಯೂನಲ್ಲಿ ನಿಲ್ಲಬೇಕು ಅಂತ ನೋಡುತ್ತಿದ್ದೆ. ಪ್ರತಿಯೊಂದು ಕೌಂಟರ್‌ನಲ್ಲೂ ಇರುವೆಗೂಡಿನಂತೆ ಜನ ತುಂಬಿಕೊಂಡಿದ್ದರು. ಹೀಗೆ ನಿಂತಿದ್ದರೆ ನನ್ನ ಕೆಲಸ ಆಗಲ್ಲ ಅಂತ ಜ್ಞಾನೋದಯವಾಗಿ... Prepaid ಕೌಂಟರ್‌ಗೆ ನುಗ್ಗಿದೆ. ಅಲ್ಲಿ ಮುತ್ತಿದ್ದ ಎಲ್ಲಾ ಗ್ರಾಹಕರ ತೊಡಕುಗಳನ್ನೂ ನಗುನಗುತ್ತಾ ನಿವಾರಿಸುತ್ತಾ ಒಂದು ಕಿವಿ ಮೊಬೈಲ್‌ನತ್ತ, ಮತ್ತೊಂದು ಕಿವಿ ಗ್ರಾಹಕರತ್ತ, ಕೈ ಕಂಪ್ಯುಟರ್ ಕೀಬೊರ್ಡ್ ಮೇಲೆ, ಕಣ್ಣು ಅಲ್ಲಿ ಯಾವ ಹೊಸ ಗ್ರಾಹಕರು ಬಂದಿದ್ದಾರೆ ಎಂಬ ಕಡೆ... ಹೀಗೆ ತನ್ನ ಪಂಚೇಂದ್ರಿಯಗಳನ್ನೂ ಸದುಪಯೋಗ ಪಡಿಸಿಕೊಳ್ಳುತ್ತಾ ಇದ್ದ ಅಷ್ಟಾವಧಾನಿ – ಗ್ರಾಹಕರ ಸೇವೆಯ ಮಹಾಶಯನನ್ನು ನೋಡಿ ಭಲೆ ಅಂದುಕೊಂಡೆ.
ಕಡೆಗೂ ನನ್ನ ಕಡೆ ನೋಡಿ "Sir how can I help you?" ಅಂದ. ಕನ್ನಡದ ಮೇಲೆ ಆಂಗ್ಲದ ಆಕ್ರಮಣ ಎಷ್ಟರಮಟ್ಟಿಗೆ ಎಂಬ ಅನುಭವವಾಯಿತು. "ನನಗೆ ಒಂದು prepaid with 3G ಸಿಮ್‌ಕಾರ್ಡ್ ಬೇಕಿತ್ತು" ಅಂದೆ. "ನೋ ಪ್ರಾಬ್ಲಮ್ ಸಾರ್ ನಿಮ್ಮ Address proof, passport size photo ಕೊಡಿ, ಆದರೆ ಸಿಮ್‌ಕಾರ್ಡ್ activate ಮಾಡಲು 48 ಗಂಟೆಕಾಲ ಆಗುತ್ತೆ” ಅಂದ. "ಇಲ್ಲಪ್ಪ ನನಗೆ urgent ಆಗಿ ಬೇಕು, 3 ವಾರಕ್ಕೆ ಅಂತ ಭಾರತಕ್ಕೆ ಬಂದಿದ್ದೇನೆ. 48 ಗಂಟೆಗಳ ಕಾಲ ಮೊಬೈಲ್ ಕನೆಕ್ಷನ್ ಇಲ್ಲದ್ದಿದ್ದರೆ ಬಹಳ ಕಷ್ಟ ಆಗುತ್ತೆ” ಅಂತ ನಾನಂದೆ. "ನೋಡೋಣ ಸಾರ್" ಅಂತ ಹೇಳಿ 3 ಪುಟಗಳ ಅಪ್ಲಿಕೇಷನ್ ಫಾರ್ಮ್ ತುಂಬಿಸಲು ಕೊಟ್ಟ. ಇದನ್ನು ನೋಡಿದ ನನಗೆ ನಮ್ಮ ದೇಶದ ಭದ್ರತೆಯ ರಕ್ಷಣೆಯನ್ನು ಆಲೋಚಿಸಿ ಮಾಡಿರುವ ಈ ವ್ಯವಸ್ಥೆಯ ಬಗ್ಗೆ ಸಂತೋಷವಾಯಿತು.












Click it and Unblock the Notifications