ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಂಬನೆ : ಗಂಟೆ ದಾಸನ ಪುಣ್ಯ ಕಥೆ

By Shami
|
Google Oneindia Kannada News

PS Maiah, Chicago
ಭೈರಪ್ಪ, ಕಂಬಾರಂಥ ಕೃಪಾಚಾರ್ಯ ದ್ರೋಣಾಚಾರ್ಯರು ಮುದ್ದಾಂ ಹಾಜರಿರುವ ಒಂದು ಕವಿಗೋಷ್ಠಿಯಲ್ಲಿ ಕನಿಷ್ಠ ಬೆಲ್ ಬಾಯ್ ಆಗಿ ಕೆಲಸ ಮಾಡುವ ಗುರುತರ ಜವಾಬ್ದಾರಿ ಕೆಲಸ ಸಿಕ್ಕಿದ್ದು ಅವರ ಪೂರ್ವಜನ್ಮದ ಸುಕೃತ. ಟೇಬಲ್ಲಿನ ಮೇಲೆ ಇಟ್ಟಿರುವ ಕಾಲಿಂಗ್ ಬೆಲ್ಲನ್ನು ಕುಟ್ಟಿ 'ಸಾಕು ನಿಮ್ಮ ಕವಿತಾ ವಾಚನ ನಿಲ್ಲಿಸಿ' ಎಂದು ಸೂಚ್ಯವಾಗಿಯಲ್ಲದೆ ಗಂಟಾಘೋಷವಾಗಿ ಸಾರುವ ಕೆಲಸ ಮೇಲು ನೋಟಕ್ಕೆ ಸುಲಭದಂತೆ ಕಂಡುಬಂದರೂ ಎಲ್ಲರೂ ಮಾಡಿ ಸೈ ಎನಿಸಿಕೊಳ್ಳಲಾಗದು. ಅಂಥ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿ ಪೆಚ್ಚಾದರೂ ಸುಸ್ತಾಗದ ಗಂಟೆ ದಾಸರೊಬ್ಬರ ಆತ್ಮನಿವೇದನೆ ಇಲ್ಲಿದೆ, ಓದಿ - ಸಂಪಾದಕ.

* ಪಿ.ಎಸ್. ಮೈಯ, ಶಿಕಾಗೊ

"ಗಂಟೆ" ಅನ್ನುವ ಶಬ್ದ ಕೇಳಿದ ತಕ್ಷಣ ನನ್ನ ಮಂಡೆಯಲ್ಲಿ ಎಂತ ಎಲ್ಲ ನೆನಪುಗಳು ಒಂದರ ಹಿಂದೊಂದು ಬಂದುಬಿಡ್ತವೆ, ಮಾರಾಯ್ರೇ! ಶಾಲೆಗೆ ಹೋಗ್ತಾ ಗಂಟೆ ಶಬ್ದ ಕೇಳಿ ತಡ ಆಯ್ತು ಅಂತ ಓಡಿದ್ದು! ಆದರೂ ಸಹ ಮೇಷ್ಟ್ರ ಹತ್ತಿರ "ಯಾಕೆ ತಡ ಮಾಡಿ ಬಂದಿದ್ದು" ಅಂತ ಅನ್ನಿಸಿಕೊಂಡು ಏಟು ತಿಂದಿದ್ದು, ಶಾಲೆ ಮುಗಿಯುವ ಗಂಟೆ ಶಬ್ದ ಕೇಳಿ ಖುಷಿಯಿಂದ ಚೀಲ ಎತ್ತಿಕೊಂಡು ಮನೆಗೆ ಓಡಿದ್ದು, ಸಕ್ಕರೆ ನಿದ್ದೆಯಲ್ಲಿದ್ದ ನನ್ನನ್ನು ಬಡಿದೆಬ್ಬಿಸಿದ ಅಲಾರಂ ಗಂಟೆ, ದೇವಸ್ಥಾನದ ಗಂಟೆ ಕೇಳಿ ಪ್ರಸಾದದ ನೆನಪಾಗಿ ಬಾಯಲ್ಲಿ ಜೊಲ್ಲು ಸುರಿಸಿದ್ದು.... ಹೀಗೇ ಏನೇನೋ ಅಲೋಚನೆಗಳು. ಆದರೆ ಇವೆಲ್ಲ ಇನ್ನೊಬ್ಬರು ಬಾರಿಸಿದ ಗಂಟೆಗಳಷ್ಟೆ ಹೊರತು ನಾನು ಬಾರಿಸಿದ್ದಲ್ಲ.

ಇದುವರೆಗೆ ಜೀವನದಲ್ಲಿ ನಾನು ಬಾರಿಸಿದ್ದು ಅಂದರೆ ಒಂದೇ ಗಂಟೆ. ಅದು ನನ್ನ ಸೈಕಲ್ ಬೆಲ್. ಪಾರ್ಕಿನಲ್ಲಿ ಸೈಕಲ್ ಬಿಡುವಾಗ ನಾನು ಗಂಟೆ ಬಾರಿಸಿದ ತಕ್ಷಣ ಎದುರಿಗೆ ಸಿಕ್ಕಿದ ಕೋಮಲಾಂಗಿಯರು, ಸ್ಥೂಲಾಂಗಿಯರು, ಭೀಮ ಕಾಯದವರು, ಕ್ಷೀಣ ಕಾಯದವರು ಎಲ್ಲರೂ ಬದಿಗೆ ಸರಿದು ನನಗೆ ದಾರಿ ಬಿಡುವುದನ್ನು ನೋಡಿ ನನಗೆ ಖುಷಿಯೋ ಖುಷಿ! ಮನೆಯಲ್ಲಿ ನನ್ನ ಹೆಂಡತಿ ಕೂಡಾ ನಾನು ಹೇಳಿದ ಮಾತು ಕೇಳುವುದಿಲ್ಲ. ಅಂಥಾದ್ದರಲ್ಲಿ ಪಾರ್ಕಿನಲ್ಲಿ ಸಿಕ್ಕುವ ಅಪರಿಚಿತ ಮಹನೀಯರು, ಮಹಿಳೆಯರೆಲ್ಲ ನನ್ನ ಗಂಟೆಯ ಶಬ್ದ ಕೇಳಿ ವಿಧೇಯ ವಿದ್ಯಾರ್ಥಿಗಳ ತರಹ ಮಾಡುತ್ತಿರುವುದನ್ನು ನೋಡಿ ನನಗೆ ನಾನೂ ಒಬ್ಬ ದೊಡ್ಡ ಮನುಷ್ಯ ಅಂತ ತಲೆಗೆ ಏರಿಬಿಟ್ಟಿತ್ತು! ತಕ್ಷಣವೇ ಬುದ್ಧಿ ಕಲಿಸಿದನಲ್ಲ ಆ ದೇವರು.

ಒಂದು ದಿನ ಪಾರ್ಕಿನಲ್ಲಿ ಸೈಕಲ್ ಓಡಿಸುತ್ತಿರುವಾಗ ಎದುರಿಗೆ ಒಬ್ಬಳು ಚೆಲುವೆ ಸಿಕ್ಕಿದಳು. ಅವಳು ಒಬ್ಬಳೇ ಬಂದಿರಲಿಲ್ಲ. ಜೊತೆಗೆ ನಾಯಕರೂ ಇದ್ದರು, ಡೊಂಕು ಬಾಲದ ನಾಯಕರು. ಅರ್ಥ ಆಯ್ತಲ್ಲ ನಾನು ಹೇಳಿದ್ದು? ಒಂದು ನಾಯಿ ಅವಳ ಪಕ್ಕ ಸಿಂಹ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿತ್ತು. ನಾನು ಯಥಾ ಪ್ರಕಾರ ಗಂಟೆ ಬಾರಿಸಿದೆ. ಆ ನಾಯಕರು ಬೊಗಳಿ ನನ್ನ ಮೇಲೆ ಹಾರಿಯೇ ಬಿಟ್ಟರು! ನಾನು ಹೆದರಿ ಕಂಗಾಲು! ಕಡೆಗೆ ಆಕೆ "ಸಾರಿ ಈವತ್ತು ನಮ್ಮ ಪಾಪುಗೆ ತುಂಬ ಹಸಿವೆ ಆಗಿಬಿಟ್ಟಿದೆ. ಅದಕ್ಕೇ ಹಾಗೆ ಮಾಡಿದ" ಅಂತ ಕ್ಷಮಾಪಣೆ ಕೇಳಿದಳು. ಅಲ್ಲ ಅವಳ ನಾಯಿಗೆ ಹಸಿವಾದರೆ ಆಗಲಿ. ಆದರೆ ಅದಕ್ಕೆ ನಾನೇ ಆಹಾರ ಆಗಬೇಕಾ? ಆವತ್ತಿಂದ ಪಾರ್ಕಿನಲ್ಲಿ ಬೇಕಾಬಿಟ್ಟಿ ಸೈಕಲ್ ಬೆಲ್ ಬಾರಿಸುವುದನ್ನು ಬಿಟ್ಟುಬಿಟ್ಟೆ. ಮನೆಯಲ್ಲಿ ನಮ್ಮ ಅಮ್ಮಾವ್ರ ಹತ್ತಿರ ಮಾಡಿದ ಹಾಗೆ ಪಾರ್ಕಿನಲ್ಲೂ ಸ್ವಲ್ಪ ತಗ್ಗಿ ಬಗ್ಗಿ ನಡಕೊಳ್ಳೋದು ರೂಢಿಸಿಕೊಂಡೆ.

ಮತ್ತೆ ನಾನು "ಗಂಟೆ ದಾಸ" ಆಗಿದ್ದೂ ನಮ್ಮ ಅಮ್ಮಾವ್ರ ದಯದಿಂದಲೇ. ಇತ್ತೀಚೆಗೆ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾಹಿತ್ಯ ಸಮಿತಿಯವರು ಒಂದು ಕವಿ ಗೋಷ್ಠಿ ಇಟ್ಟಿದ್ದರು. ಸಮಿತಿಯ ಹೆಡ್ ಆಗಿದ್ದ ಅಮ್ಮಾವ್ರು ಹೆಡ್ಡನಾದ ನಂಗೆ ಗಂಟೆ ಕೊಟ್ಟು ಆರ್ಡರ್ ಮಾಡಿದರು. "ಪ್ರತಿಯೊಬ್ಬರಿಗೂ ಮೂರು ನಿಮಿಷ ಕಾಲ ಇರುತ್ತೆ ಕವನ ಓದೋಕೆ. ಮೂರು ನಿಮಿಷ ಆದ ತಕ್ಷಣ ಗಂಟೆ ಬಾರಿಸಿ" ಅಂದರು. ಪುರಂದರ ದಾಸರೇ ಹೇಳಿಲ್ಲವೆ? "ಹೆಂಡತಿ ಸಂತತಿ ಸಾವಿರವಾಗಲಿ. ದಂಡಿಗೆ ಬೆತ್ತ ಹಿಡಿಸಿದಳಯ್ಯ" ಅಂತ. ಹಾಗೇ ನಾನೂ. ಹೆಂಡತಿಗೋಸ್ಕರ "ಗಂಟೆ ದಾಸ" ಆದೆ.

ಬಂದೇ ಬಂತು ಆ ದಿನ! ಅಮ್ಮಾವ್ರು, ನಾನು ಇಬ್ಬರೂ ವಸ್ತ್ರಾಲಂಕಾರಭೂಷಿತರಾಗಿ ಸಮ್ಮೇಳನ ನಡೆಯುವ ಜಾಗಕ್ಕೆ ಹೋದೆವು. ಅಲ್ಲಿ ಹೆಜ್ಜೆ ಹೆಜ್ಜೆಗೂ ಅಮ್ಮಾವ್ರನ್ನ ನಿಲ್ಲಿಸಿ ಜನ ಮಾತನಾಡಿಸುತ್ತಿದ್ದರು. ಕಾರ್ಯಕ್ರಮ ಎಲ್ಲಿ? ಎಷ್ಟು ಗಂಟೆಗೆ? ಯಾವಾಗ? ಹೀಗೇ ಏನೇನೋ ಪ್ರಶ್ನೆಗಳನ್ನ ಕೇಳ್ತಾ ಇದ್ದರು. ಅಮ್ಮಾವ್ರು ಮಂದಸ್ಮಿತರಾಗಿ ಎಲ್ಲರಿಗೂ ಉತ್ತರ ಕೊಡುತ್ತಾ ಆಮೆಯ ಗತಿಯಲ್ಲಿ ಮುಂದೆ ಸಾಗುತ್ತಿದ್ದರು. ಭೋಜನ ಶಾಲೆಗೆ ಕೆಲವೇ ಅಡಿಗಳ ಅಂತರ. ನನಗೋ ಹೊಟ್ಟೆ ತಾಳ ಹಾಕ್ತಾ ಇತ್ತು. "ಘಮ್" ಅಂತ ತಿಂಡಿಯ ವಾಸನೆ ಮೂಗಿಗೆ ಬಡೀತಾ ಇತ್ತು. ಆದರೆ ಅಮ್ಮಾವ್ರು ಬೇಗ ಬೇಗ ಆ ಕಡೆ ಹೋಗುವ ಲಕ್ಷಣಗಳೇ ಇಲ್ಲ! ಏನು ಮಾಡೋದು! ನನ್ನ ಗಂಟೆಯನ್ನು ಭದ್ರವಾಗಿ ಹಿಡಿದುಕೊಂಡು ಪಾವ್ಲೊವ್ ಸಾಕಿದ ನಾಯಿಯ ಹಾಗೆ ಜೊಲ್ಲು ಸುರಿಸುತ್ತಾ ನಿಂತಿದ್ದೆ.

ಇಷ್ಟರಲ್ಲಿ ಶ್ರೀಮತಿ ಗಜಲಕ್ಷ್ಮಿ ಅವರು ಬಂದರು. ಅವರ ಹೆಸರು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಅವರ ಗಾತ್ರ ನೋಡಿ ಗಜಲಕ್ಷ್ಮಿ ಅಂತ ನಾನೇ ಹೆಸರಿಟ್ಟಿದ್ದು. ಬಂದವರೇ ಅಮ್ಮಾವ್ರ ಹತ್ತಿರ ತಮ್ಮ ಪರಿಚಯ ಹೇಳಿಕೊಂಡರು. ತಮ್ಮ ಯಜಮಾನರ (ಅಲ್ಲ ಗುಲಾಮನ) ಪರಿಚಯವನ್ನೂ ಮಾಡಿಸಿದರು. ಒಂದು ಪುಟ್ಟ ಉಡುಗೊರೆಯನ್ನು ಅಮ್ಮಾವ್ರ ಕೈಯಲ್ಲಿ ತುರುಕಿದರು. ಅಮ್ಮಾವ್ರು "ಇದೆಲ್ಲ ಯಾಕೆ?" ಅಂತ ಬಾಯಲ್ಲಿ ಹೇಳುತ್ತಲೇ ಉಡುಗೊರೆ ಬ್ಯಾಗಿಗೆ ಹಾಕಿಕೊಂಡರು. "ಅಲ್ಲ ನೀವು ಕನ್ನಡಕ್ಕಾಗಿ ಇಷ್ಟೆಲ್ಲ ಕೆಲಸ ಮಾಡ್ತಾ ಇದ್ದೀರಿ. ಅದಕ್ಕೋಸ್ಕರ ನನ್ನ ಅಭಿಮಾನದ ಕಾಣಿಕೆ ಇದು" ಅಂದರು. ಆಮೇಲೆ ಶ್ರೀಮತಿ ಗಜಲಕ್ಷ್ಮಿ ಅವರು ತಮ್ಮ ಯಜಮಾನರಿಗೆ (ಅಲ್ಲ ಗುಲಾಮನಿಗೆ) "ಸ್ವಲ್ಪ ನಮ್ಮಿಬ್ಬರ ಫೋಟೋ ತೆಗೀರಿ" ಅಂತ ಆರ್ಡರ್ ಮಾಡಿದರು. ಪಾಪ ಆತನೂ ನನ್ನ ಹಾಗೇ ದಾಸ. ಆದರೆ ನಾನು ಗಂಟೆ ದಾಸ, ಆತ ಕ್ಯಾಮೆರಾ ದಾಸ ಅಷ್ಟೆ ವ್ಯತ್ಯಾಸ. ವಿಧೇಯನಾಗಿ ಫೋಟೋ ತೆಗೆಯುವ ಕೆಲಸ ಮಾಡಿದ.

"ನಾವು ಸಾವಿರಾರು ಮೈಲಿ ಪ್ರಯಾಣ ಮಾಡಿ ಈ ಸಮ್ಮೇಳನಕ್ಕೆ ಬಂದಿದ್ದೀವಿ. ದಯವಿಟ್ಟು ಕವಿ ಗೋಷ್ಠಿಯಲ್ಲಿ ನನಗೆ ಸ್ವಲ್ಪ ಹೆಚ್ಚು ಕಾಲಾವಕಾಶ ಕೊಡಿ" ಅಂತ ವಿನಮ್ರತೆಯಿಂದ ಬೇಡಿಕೊಂಡರು ಗಜಲಕ್ಷ್ಮಿ ಅವರು. ನಮ್ಮ ಅಮ್ಮಾವ್ರು ಅಷ್ಟೇ ವಿನಮ್ರತೆಯಿಂದ "ನಮಗೆ ಸುಮಾರು ಇಪ್ಪತ್ತೈದು ಕವನಗಳು ಬಂದಿವೆ. ಅಷ್ಟಕ್ಕೂ ಸಮಯ ಸಾಕಾಗಲ್ಲ. ದಯವಿಟ್ಟು ಕ್ಷಮಿಸಿ. ಮೂರು ನಿಮಿಷಕ್ಕಿಂತ ಜಾಸ್ತಿ ಕೊಡೋಕೆ ಸಾಧ್ಯವೇ ಇಲ್ಲ" ಅಂದುಬಿಟ್ಟರು. ಪಾಪ ಗಜಲಕ್ಷ್ಮಿ ಅವರು "ಇವರಿಗೆ ಉಡುಗೊರೆ ಕೊಟ್ಟಿದ್ದು ದಂಡ." ಅಂತ ಒಳಗೊಳಗೇ ಬೈದುಕೊಂಡಿರಬೇಕು. ಅಮ್ಮಾವ್ರು ನನ್ನ ಪರಿಚಯ ಮಾಡಿಸಿ "ಇವರು ಮೂರು ನಿಮಿಷ ಆದ ತಕ್ಷಣ ಗಂಟೆ ಬಾರಿಸ್ತಾರೆ" ಅಂದರು. ಈ ಕೆಲಸ ಮುಂಚೇನೇ ಮಾಡಬಾರದಾಗಿತ್ತಾ ನಮ್ಮ ಅಮ್ಮಾವ್ರು? ಆಗ ನನ್ನ ಗಂಟೆಯ ಮಹತ್ವದಿಂದ ನನಗೂ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಕ್ಕುತ್ತಿತ್ತು. ಏನೋ ಎಲ್ಲಾದಕ್ಕೂ ಪಡಕೊಂಡು ಬಂದಿರಬೇಕು. ಹೋಗಲಿ ಬಿಡಿ.

ಅಂತೂ ಇಂತೂ ಕವಿ ಗೋಷ್ಠಿ ಶುರುವಾಯಿತು. ರೂಮ್ ತುಂಬ ಜನ. ಅಲ್ಲಿ ನೆರೆದಿದ್ದ ಸಭಿಕರ ಪೈಕಿ ಭೈರಪ್ಪ, ಮುಖ್ಯಮಂತ್ರಿ ಚಂದ್ರು ಅಂತಹ ಗಣ್ಯ ವ್ಯಕ್ತಿಗಳಿದ್ದರು. ಅಧ್ಯಕ್ಷರಾಗಿ ಕಂಬಾರರು. ಇಂತಹ ದೊಡ್ಡ ಜನರ ಎದುರು ಗಂಟೆ ಬಾರಿಸುವ ಅತಿ ದೊಡ್ಡ ಜವಾಬ್ದಾರಿ ನನಗೆ ವಹಿಸಿದ ಅಮ್ಮಾವ್ರನ್ನು ಮನಸ್ಸಿನಲ್ಲೇ ವಂದಿಸಿದೆ. ಗಂಟಾಧಾರಿಯಾಗಿ ಎದುರು ಸಾಲಿನಲ್ಲೇ ಕುಳಿತೆ.

ಮನುಷ್ಯನ ಸ್ವಭಾವ ಅರ್ಥ ಮಾಡಿಕೊಳ್ಳಬೇಕಾದ್ರೆ ನೀವು ಈ ಗಂಟಾದಾಸನ ಕೆಲಸ ಮಾಡ್ಬೇಕು, ಮಾರಾಯ್ರೆ. ಒಬ್ಬೊಬ್ಬರದು ಒಂದೊಂದು ತರ ಪ್ರತಿಕ್ರಿಯೆ ನನ್ನ ಗಂಟೆಗೆ. ಗಂಟೆ ಶಬ್ದ ಕೇಳಿ ನನ್ನನ್ನು ನುಂಗುವ ಹಾಗೆ ನೋಡಿ "ಇನ್ನೇನು ಮುಗಿಯಿತು" ಅಂತ ಹೇಳಿ ಮತ್ತೂ ಎರಡು ನಿಮಿಷಗಳ ಕಾಲ ಎಳೆಯುವವರು ಒಂಥರ. ಗಂಟೆ ಕೇಳಿದರೂ ಕೇಳಲೇ ಇಲ್ಲ ಅಂತ ಜಾಣ ಕಿವುಡು ಮಾಡಿಕೊಂಡು ಮತ್ತೂ ಕೊರೆಯುವವರು ಇನ್ನೊಂಥರ. "ನೀವು ಮೆರವಣಿಗೆಗೆ ಎರಡು ಗಂಟೆ ಕಾಲ ಕೊಟ್ಟಿದ್ದೀರಿ. ಕವನ ವಾಚನಕ್ಕೆ ಮೂರು ನಿಮಿಷಕ್ಕಿಂತ ಹೆಚ್ಚು ಕೊಡೋಕಾಗಲ್ವಾ?"ಅಂತ ಇದ್ದ ಮೂರು ನಿಮಿಷದಲ್ಲಿ ಒಂದು ನಿಮಿಷವನ್ನು ಗೋಳಾಡುವುದರಲ್ಲೇ ಕಳೆಯುವವರು ಇನ್ನೂ ಒಂಥರ!

ನಮ್ಮ ಅಮ್ಮಾವ್ರೂ ಒಂದು ಕವನ ಓದಿದರು. ಮೂರು ನಿಮಿಷ ಆಗಿಯೇ ಹೋಯಿತು. ಅಮ್ಮಾವ್ರು ಇನ್ನೂ ಓದ್ತಾನೇ ಇದ್ದಾರೆ. ಏನು ಮಾಡುವುದು? ಮಧ್ಯೆ ಗಂಟೆ ಬಾರಿಸಿ ಅವರ ಕೋಪಕ್ಕೆ ತುತ್ತಾದರೆ? ಅಥವಾ ಗಂಟೆ ಬಾರಿಸಿಲ್ಲ ಅಂತ ಯಾರಾದರೂ ದೂರು ಹೇಳಿ ಅವರಿಗೆ ಕೋಪ ಬರಬಹುದಾ? ಏನಾದರಾಗಲಿ ಅಂತ ದೇವರ ಮೇಲೆ ಭಾರ ಹಾಕಿ ನಡುಗುವ ಕೈಗಳಿಂದ ಗಂಟೆ ಬಾರಿಸಿಯೇ ಬಿಟ್ಟೆ. ನೆರೆದಿದ್ದ ಜನರಲ್ಲಿ ಸುಮಾರು ಮಂದಿ "ನಿಮ್ಮ ದೈರ್ಯಕ್ಕೆ ಕೊಡಬೇಕು!" ಅಂತ ಹೊಗಳಿದರು. ಅವರಿಗೇನು ಗೊತ್ತು? ನನ್ನ ಎದೆ ಇನ್ನೂ ಡವ ಡವ ಅಂತ ಹೊಡೆದುಕೊಳ್ಳುತ್ತಿದೆ ಅಂತ. ಅಮ್ಮಾವ್ರು ನನ್ನನ್ನು ಒಮ್ಮೆ ದುರುಗುಟ್ಟಿ ನೋಡಿದರು. "ಮನೆಗೆ ಬನ್ನಿ ವಿಚಾರಿಸಿಕೊಳ್ತೀನಿ" ಎಂಬಂತಿತ್ತು ಆ ನೋಟ. ಆದರೆ ಈ ಹಿಂದೆಯೂ ಎಷ್ಟೋ ಸಾರಿ, ಅಮ್ಮಾವ್ರ ಕೈಲಿ ಮಂಗಳಾರತಿ ಮಾಡಿಸಿಕೊಂಡು ಅಭ್ಯಾಸವಾಗಿದೆ ನನಗೆ.

ಕವಿಗೋಷ್ಠಿ ಮುಗಿಯುತ್ತಲೇ ಅಮ್ಮಾವ್ರಿಗೆ ಅಭಿನಂದನೆಗಳ ಸುರಿಮಳೆ. "ತುಂಬ ಚೆನ್ನಾಗಿ ಮಾಡಿದಿರಿ. ಏನು ವ್ಯವಸ್ಥೆ. ಎಷ್ಟು ದಕ್ಷತೆ. ಸಮಯ ಪರಿಪಾಲನೆಯಂತೂ ಚಕಾರ ಎತ್ತುವ ಹಾಗಿಲ್ಲ" ಅಂತ. ಕೇಳಿ ನಾನೂ ಹಿಗ್ಗಿದೆ. ನಾನಿಲ್ಲದಿದ್ದರೆ ಅಮ್ಮಾವ್ರು ಹೇಗೆ ಸಮಯ ಪರಿಪಾಲನೆ ಮಾಡುತ್ತಿದ್ದರು?

ಹೀಗೆ ನಾನು ಹಿಗ್ಗಿನಲ್ಲಿ ಮೈ ಮರೆತಿರುವಾಗ ಗಜಲಕ್ಷ್ಮಿ ಅವರು ಸೀದಾ ನನ್ನ ಹತ್ತಿರ ಬಂದರು. ನನ್ನ ಹತ್ತಿರ ಇವರಿಗೇನು ಕೆಲಸ? ಅಮ್ಮಾವ್ರ ಹತ್ತಿರ ಮಾತಾಡೋಕೆ ಬಂದಿರಬೇಕು ಅಂತ ನಾನು ಸುಮ್ಮನೆ ನಿಂತಿದ್ದೆ. ಅವರು ನನ್ನನ್ನೇ ತರಾಟೆಗೆ ತೆಗೆದುಕೊಂಡರು. "ರೀ ನೀವು ಒಬ್ಬೊಬ್ಬರಿಗೆ ಒಂದೊಂದು ಥರ ಗಂಟೆ ಬಾರಿಸಿದ್ದೀರಾ. ಕೆಲವರಿಗೆ ಜಾಸ್ತಿ ಟೈಮ್ ಕೊಟ್ಟಿದ್ದೀರಾ" ಅಂದರು ದೂರುವ ಧ್ವನಿಯಲ್ಲಿ. ನಾನು ನನ್ನ ಗಂಟೆಯನ್ನು ಎತ್ತಿ ಹಿಡಿದು ಘಂಟಾಘೋಷವಾಗಿ ಸಾರಿದೆ "ಖಂಡಿತಾ ಇಲ್ಲ ಮೇಡಂ, ಈ ಗಂಟೆಯ ಆಣೆ, ನನ್ನ ಟೈಮರ್ ಆಣೆ. ನಾನು ಎಲ್ಲರಿಗೂ ಒಂದೇ ತರಹ ಗಂಟೆ ಬಾರಿಸಿದ್ದು." ಅವರು "ನಿಮ್ಮ ಹತ್ತಿರ ಮಾತಾಡಿ ಪ್ರಯೋಜನವಿಲ್ಲ" ಅನ್ನೋ ತರ ಮುಖ ಮಾಡಿ ಹೊರಟೇ ಹೋದರು. ನಾನು ದೊಡ್ಡದಾಗಿ ನಿಟ್ಟುಸಿರುಬಿಟ್ಟೆ. ನಿಜ ಹೇಳಬೇಕೆಂದರೆ ಆಯಮ್ಮ ನನಗೆ "ಥ್ಯಾಂಕ್ಸ್" ಹೇಳಬೇಕು. ಅವರು ಒಂದೇ ಸಮನೆ ಕೇಳುಗರ ಕಿವಿ ಕೊರೆದಿದ್ದರೆ ಎಷ್ಟು ಜನ ಅವರಿಗೆ ಶಾಪ ಹಾಕುತ್ತಿದ್ದರೋ ಏನೋ! ನಾನು ಸಮಯದಲ್ಲಿ ಗಂಟೆ ಬಾರಿಸಿ ಅವರು ಶಾಪಕ್ಕೆ ತುತ್ತಾಗುವುದನ್ನು ನಿಲ್ಲಿಸಿದೆ. ಕಲಿ ಯುಗದಲ್ಲಿ ಯಾರಿಗೂ ಉಪಕಾರ ಸ್ಮರಣೆ ಎಂಬುವುದೇ ಇಲ್ಲ!

ನನ್ನ ಗಂಟೆ ಬಾರಿಸುವಿಕೆ ಎಷ್ಟು ಹೆಸರು ವಾಸಿ ಆಗಿಬಿಟ್ಟಿತೆಂದರೆ ಮುಂದೆ "ಪುಸ್ತಕ ಪರಿಚಯ" ಕಾರ್ಯಕ್ರಮಕ್ಕೂ "ನೀವೇ ಗಂಟೆ ಬಾರಿಸಬೇಕು" ಎಂಬ ಬೇಡಿಕೆ ಬಂತು ನಿರ್ವಾಹಕರಾದ ತ್ರಿವೇಣಿ ಅವರಿಂದ! ಅವರು ಕೇಳುವುದು ಹೆಚ್ಚೋ, ನಾನು ಬಾರಿಸುವುದು ಹೆಚ್ಚೋ! "ಆಗಲಿ" ಅಂದೆ. ಇದೂ ಒಂದು ಕನ್ನಡ ಸೇವೆ. ಕೆಲವರು ಪುಸ್ತಕ ಬರೆದು ಸೇವೆ ಮಾಡ್ತಾರೆ. ಕೆಲವರು ಪುಸ್ತಕ ಓದಿ ಸೇವೆ ಮಾಡ್ತಾರೆ. ಇನ್ನೂ ಕೆಲವರು ನಮ್ಮ ಅಮ್ಮಾವ್ರ ಹಾಗೆ ಕಪಿ ಗೋಷ್ಠಿ...ಸಾರಿ ಕವಿ ಗೋಷ್ಠಿ ಅದೂ ಇದೂ ಏರ್ಪಡಿಸಿ ಸೇವೆ ಮಾಡ್ತಾರೆ. ನನ್ನ ಅಳಿಲು ಸೇವೆ ಏನಪ್ಪಾ ಅಂದ್ರೆ ಗಂಟೆ ಬಾರಿಸಿ ನಿಮ್ಮಂಥವರ ಕಿವಿಗಳನ್ನು ಕೊರೆತದಿಂದ ಕಾಪಾಡುವುದು!

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ನಾನು "ಪುಸ್ತಕ ಪರಿಚಯ" ಕಾರ್ಯಕ್ರಮದಲ್ಲಿ ಗಂಟೆ ಬಾರಿಸಿದ್ದನ್ನು ಅಧ್ಯಕ್ಷರಾಗಿದ್ದ ಜಯಂತ್ ಕಾಯ್ಕಿಣಿ ಅವರು ಬಹುವಾಗಿ ಮೆಚ್ಚಿಕೊಂಡರು. ನನಗೆ ಹೇಗೆ ಗೊತ್ತಾಯ್ತಪ್ಪಾ ಅಂದರೆ ಸಮ್ಮೇಳನದ ಕೊನೆಯ ದಿನ ಅವರು ಅಮ್ಮಾವ್ರಿಗೆ ವಿದಾಯ ಹೇಳಿ ಆದ ಮೇಲೆ ನನ್ನ ಕಡೆ ತಿರುಗಿ ನನಗೂ "ಥ್ಯಾಂಕ್ಸ್" ಹೇಳಿದರು. ಅದಕ್ಕೆ "ನಾನು ಏನೂ ಮಾಡಲಿಲ್ಲ ಸಾರ್, ಥ್ಯಾಂಕ್ಸ್ ಹೇಳೋಕೆ" ಅಂದೆ. ಅವರು "ಅದಕ್ಕೇ ಐ ಲೈಕ್ ಯು" ಅಂದರು. ಆಮೇಲೆ ನನ್ನವಳಿಗೆ ಕಳಿಸಿದ ವಿ ಅಂಚೆಯಲ್ಲಿ ಕೂಡಾ ನಾನು ಎಷ್ಟು ಚೆನ್ನಾಗಿ ಗಂಟೆ ಬಾರಿಸಿದೆ ಅನ್ನೋ ಬಗ್ಗೆ ಪ್ರಸ್ತಾಪ ಮಾಡಿದ್ದರು! ಅವರದ್ದು ಎಷ್ಟು ದೊಡ್ಡ ಮನಸ್ಸು!

"ಗಂಟೆ ಬಾರಿಸಿದ್ದರಿಂದ ನಿಮಗೆ ಏನೋ ಒಂದು ಗೆಲುವು ಸಾಧಿಸಿದ ಭಾವನೆ ಬಂದಿದೆಯಾ?" ಅಂತ ಕೇಳಿದರು ಯಾರೋ. "ಗೆಲುವು" ಅಂತ ಹೇಳೋಕಾಗಲ್ಲ. ಆದರೂ ಈ ಗಂಟೆಯ ಮೂಲಕ ನಾನೂ ತುಂಬ ಹೆಸರುವಾಸಿಯಾಗಿಬಿಟ್ಟಿದ್ದೀನಿ ಅಂತ ಅನ್ನಿಸುತ್ತೆ. ಮೊನ್ನೆ ಕನ್ನಡ ಕೂಟದ ಗಣೇಶನ ಹಬ್ಬದ ಫಂಕ್ಷನ್ನಿನಲ್ಲಿ ಯಾರೋ ಒಬ್ಬರು ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ಆಮೇಲೆ ನನ್ನ ಹತ್ತಿರ ಬಂದು "ನಿಮ್ಮನ್ನು ಎಲ್ಲೋ ನೋಡಿದ ಹಾಗಿದೆಯಲ್ಲ. ಯುವರ್ ಫೇಸ್ ರಿಂಗ್ಸ್ ಎ ಬೆಲ್" ಅಂದರು. ಆಮೇಲೆ ಒಮ್ಮೆಲೆ ಜ್ಞಾನೋದಯವಾದವರ ಹಾಗೆ "ಓಹೋ ಈಗ ನೆನಪಾಯಿತು. ನಿಮ್ಮ ಫೇಸ್ ಅಲ್ಲ ಬೆಲ್ ಬಾರಿಸಿದ್ದು ನಿಮ್ಮ ಕೈಯಲ್ಲವೋ ಕವಿ ಗೋಷ್ಠಿಯಲ್ಲಿ?" ಅಂತ ಹೇಳಿ ಗೊಳ್ಳೆಂದು ನಕ್ಕರು. ನಾನೂ ತುಂಬು ಹೃದಯದಿಂದ ಅವರ ನಗೆಯಲ್ಲಿ ನನ್ನ ನಗು ಬೆರೆಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X