• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಗ್ಲೆಂಡಿನಲ್ಲಿ ಅಪ್ಪಟ ಕನ್ನಡ ಹಬ್ಬ

By * ರಾ ನಾ ವಿನಯ್, ಯುಕೆ.
|

ತಂಪಾದ ಗಾಳಿ, ಸೋನೆ ಮಳೆ, ಮರದ ಎಲೆಗಳಿಂದ ತೊಟ್ಟಿಕ್ಕುತ್ತಿದ್ದ ಮಳೆಹನಿಗಳ ಮಧ್ಯದಲಿ, ಎಲ್ಲಿಂದಲೋ ಕನ್ನಡದ ಇಂಪು ಅಲೆಅಲೆಯಾಗಿ ಬಂದು ಕಿವಿಗೆ ಅಪ್ಪಳಿಸಿದಾಗ ಮೈಯಲ್ಲಿ ಏನೋ ಒಂಥರಾ ರೋಮಾಂಚನ. ಇದು 21 ನೇ ನವೆಂಬರ್ ನಂದು ಇಂಗ್ಲೆಂಡಿನ ರೆಡಿಂಗ್ ನಲ್ಲಿ ಆದ ಒಂದು ವಿಶಿಷ್ಟ ಅನುಭವ. ದಿನನಿತ್ಯದ ಜಂಜಾಟಗಳ ನಡುವೆ, ಜಾಗತಿಕ ಆರ್ಥಿಕ ಹಿಂಜರಿಕೆಯಂಥಹ ಹಿನ್ನಡೆಗಳ ನಡುವೆಯೂ, ನಮ್ಮ ಕನ್ನಡಿಗರು-ಯುಕೆ ತಂಡ 53 ನೇ ಕನ್ನಡ ರಾಜ್ಯೋತ್ಸವವನ್ನು ಸತತ 5 ನೇ ಬಾರಿಗೆ ರೆಡಿಂಗ್ ನಗರದಲ್ಲಿ ಆಯೋಜಿಸಿತ್ತು.

ನಾನಾ ಬಗೆಯ ಆರ್ಥಿಕ ಹಾಗು ಪ್ರಾಕೃತಿಕ ಕೋಪತಾಪಗಳ ನಡುವೆ, ಈ ವರ್ಷದ ಆಚರಣೆಯ ಬಗ್ಗೆ ಮನದಲ್ಲಿ ಸಂಶಯ ವ್ಯಕ್ತವಾಗುತ್ತಿರುವಂತೆಯೇ, ನನ್ನ ಈ-ಮೇಲ್ ನೋಡಿ ಆದ ಆನಂದ ಅಷ್ಟಿಷ್ಟಲ್ಲ. ಏಕೆಂದರೆ ಅದು ಈ ವರ್ಷದ ರಾಜ್ಯೋತ್ಸವಾಚರಣೆಯ ಬಗೆಗಿನ ಮಾಹಿತಿ ಓಲೆ. ನಮ್ಮ ಮಾತೃ ಭೂಮಿಯಲ್ಲಿರುವವರಿಗೆ ಇದು ಅತಿಶಯೋಕ್ತಿ ಎನಿಸಿದರೂ, ನಮ್ಮಂಥ ಹೊರನಾಡ ಕನ್ನಡಿಗರು ಇಂಥಹ ಕನ್ನಡದ ಕಾರ್ಯಕ್ರಮಗಳಿಗಾಗಿ ಹಪಹಪಿಸುವ ಪರಿ ಹೇಳಲಸಾಧ್ಯವಾದದ್ದು.

ಕಾರ್ಯಕ್ರಮದ ಪಟ್ಟಿಯ ಪ್ರಕಾರ ಸರಿಯಾಗಿ 12 ಗಂಟೆಗೆ ರೆಡಿಂಗ್ ಯುಥ್ ಕಮುನಿಟಿ ಸೆಂಟರ್ ಗೆ ಪ್ರವೇಶಿಸಿದಾಗ ನಮಗೆ ಎದುರಾದದ್ದು ನೋಂದಣಿ ಹಾಗು ಸ್ವಾಗತ ಸಮಿತಿ. ನಮ್ಮ ಹೆಸರನ್ನು ನೋಂದಾಯಿಸಿ, ಪೂರ್ವ ನಿಗದಿಸಿದ ಹಣವನ್ನು ಕಟ್ಟಿ, ನೇರವಾಗಿ ಕಾರ್ಯಕ್ರಮದ ಸಭಾಂಗಣಕ್ಕೆ ಕಾಲಿಟ್ಟಾಗ ಮನಸ್ಸಿಗೆ ಮುದ. ಕೆಂಪು-ಹಳದಿ ಬಣ್ಣದ ಬಾವುಟಗಳು, ಭವ್ಯವಾಗಿ ಅಲಂಕರಿಸಿದ ವೇದಿಕೆ, ಮುತ್ತು ಜೋಡಿಸಿದ ಹಾಗೆ ದಪ್ಪ ದಪ್ಪ ಅಕ್ಷರದಲ್ಲಿ ಬರೆದಿದ್ದ “ಕನ್ನಡ ರಾಜ್ಯೋತ್ಸವದ ಶುಭಾಶಯಗಳು“ ಬ್ಯಾನರ್ ಎಲ್ಲವೂ ನಮ್ಮ ಕಣ್ಮನ ಸೆಳೆಯುತ್ತಿದ್ದವು.

ಕಳೆದ ಬಾರಿಯ ಹಾಗೆ ಕಾರ್ಯಕ್ರಮ ತಡವಾಗಬಾರದೆಂದು ಈ ಬಾರಿ ಕಾರ್ಯಕ್ರಮದ ಮೊದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಪ್ಪಟ ಕರ್ನಾಟಕದ ತಿನಿಸುಗಳಾದ ಬಿಸಿಬೇಳೆ ಬಾತ್, ಮೊಸರನ್ನ, ಪಾಯಸ ಎಲ್ಲರ ಉದರಗಳನ್ನು ತೃಪ್ತಿ ಪಡಿಸಿದವು. ಎಷ್ಟೇ ಕಷ್ಟ ಪಟ್ಟರೂ ಕಾರ್ಯಕ್ರಮ ಅರ್ಧ ಗಂಟೆ ತಡವಾಗಿಯೇ ಶುರುವಾಯಿತು. ಇರಲಿ.

ನಿರೂಪಕರಾದ ರೂಪ ಹಾಗು ರವಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯ ಅತಿಥಿಗಳಾದ ಶ್ರೀಮತಿ ಮತ್ತು ಶ್ರೀ 'ಮುಖ್ಯಮಂತ್ರಿ' ಚಂದ್ರು ಅವರನ್ನು ಹಾಗು ಲಂಡನ್ ನ ಕೌನ್ಸಲರ್ ಆದ ನೀರಜ್ ಪಾಟೀಲ್ ಅವರನ್ನು ವೇದಿಕೆ ಮೇಲೆ ಆಹ್ವಾನಿಸಿದರು. ನಂತರ ಮುಖ್ಯ ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ. ಮೊದಲಿಗೆ ನೆರೆಯಿಂದ ತತ್ತರಿಸಿರುವ ನಮ್ಮ ಉತ್ತರ ಕರ್ನಾಟಕದ ಬಾಂಧವರಿಗಾಗಿ ಒಂದು ನಿಮಿಷ ಮೌನ ಆಚರಿಸಲಾಯಿತು. ನಂತರ ನೀರಜ್ ಪಾಟೇಲ್ ಅವರ ಸಂಕ್ಷಿಪ್ತ ಭಾಷಣದೊಂದಿಗೆ ಶುರುವಾಗಿ, ನಮ್ಮ 'ಮುಖ್ಯಮಂತ್ರಿ' ಚಂದ್ರು ಅವರ ಹಾಸ್ಯಮಿಶ್ರಿತ ಭಾಷಣದೊಂದಿಗೆ ಮುಖ್ಯ ಅತಿಥಿಗಳ ಭಾಷಣದ ಸಂಪ್ರದಾಯವು ಮುಗಿಯಿತು. ನಮ್ಮ ಕನ್ನಡಿಗರು ಯುಕೆ ತಂಡದವರಿಂದ “ಜಯ ಭಾರತ ಜನನಿಯ ತನುಜಾತೆ“ ಸಮೂಹ ಗಾಯನ ಮೈಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತ್ತು.

ಎಂದಿನಂತೆ ಈ ಬಾರಿಯೂ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಹಾಗು ಹಾಡುಗಾರಿಕೆಗೆ ಪ್ರಾಶಸ್ಥ್ಯ ನೀಡಲಾಗಿತ್ತು. ಅದರಂತೆಯೇ ಭರತನಾಟ್ಯ, ಸಿನಿಮಾ ನೃತ್ಯ, ಮುಂತಾದವುಗಳು ಒಂದರ ನಂತರ ಒಂದರಂತೆ ಸಾಂಗವಾಗಿ ಸಾಗಿದವು. ನಂತರ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾದ ರವೀಂದ್ರ ಸೊರಗಾಂವಿ ಹಾಗು ಶ್ರೀಮತಿ ಸೀಮಾ ರಾಯ್ಕರ್ ಅವರ ಗಾನಸುಧೆ. ಸರಿಸುಮಾರು ಒಂದೂವರೆ ಗಂಟೆಗಳ ಕಾಲ ತಮ್ಮ ಸಿರಿಕಂಠದಿಂದ ನೆರೆದಿದ್ದವರನ್ನು ಗಾನಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ದೇವರನಾಮ, ಭಾವಗೀತೆ, ಜನಪದಗೀತೆ ಹೀಗೆ ಎಲ್ಲಾ ಪ್ರಕಾರದ ಹಾಡುಗಳನ್ನು ಹಾಡಿ ಎಲ್ಲರಿಗೂ ವಿಶಿಷ್ಟ ಅನುಭವ ನೀಡಿದರು.

ಆನಂತರ ದಿವ್ಯಾ ರೆಡ್ಡಿಯವರ ವೀಣಾ ವಾದನ, ಪ್ರತಾಪ್ ರವರ ಘಟಂ, ವಿಷ್ಣು ರವರ ಮೃದಂಗ ಹಾಗು ಅವರ ಸಂಗಡಿಗರಿಂದ ಹೊರಹೊಮ್ಮಿದ ನಾದದ ಹೊಳೆಯು ಕೇಳುಗರನ್ನು ಕೆಲ ಕಾಲ ಮೂಕವಿಸ್ಮಿತರನ್ನಾಗಿ ಮಾಡಿದವು. ಇಂಥ ಅಚ್ಚುಕಟ್ಟಾದ ಕನ್ನಡ ಕಾರ್ಯಕ್ರಮ ನೆರವೇರಿಸಿದ ಕನ್ನಡಿಗರು ಯುಕೆ ಗೆಳೆಯರ ಬಳಗಕ್ಕೆ ಧನ್ಯವಾದ ಹೇಳುತ್ತಾ ಮತ್ತು ಮುಂದಿನ ಬಾರಿ ಇನ್ನೂ ಚೆನ್ನಾಗಿರಲಿ ಎಂದು ಆಶಿಸುತ್ತಾ ನನ್ನ ಈ ನಾಕು ಅಕ್ಷರಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ! ನಮಸ್ಕಾರ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more