ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ಸಾಹದ ಚಿಲುಮೆ ಸುಜನಾ ಉಮೇಶ್ ಇನ್ನಿಲ್ಲ

By Staff
|
Google Oneindia Kannada News

NRI Social activist Sujana Umash is no more
ವರ್ಜೀನಿಯ, ಅಮೆರಿಕ, ಜು. 8 : ಭಾರತ, ಭಾರತೀಯರ ಬಗ್ಗೆ ತುಂಬಿ ತುಳುಕುವ ಅಭಿಮಾನ ಹೊಂದಿದ್ದ ಅನಿವಾಸಿ ಮಹಿಳೆ ಸುಜನಾ ಉಮೇಶ್ (33) ಅವರು ವರ್ಜೀನಿಯಾ ಬೀಚಿನಲ್ಲಿ ಜುಲೈ 4ರ ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಈಜಲು ಹೋಗಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಜನಾ ಸಮುದ್ರದಲ್ಲಿ ಕಣ್ಮರೆಯಾದರು. ಪೊಲೀಸರು ಮತ್ತು ಜೀವರಕ್ಷಕ ಪಡೆಯವರು ಆಕೆಯನ್ನು ಉಳಿಸಲು ನಡೆಸಿದ ತೀವ್ರ ಪ್ರಯತ್ನ ಫಲಕಾರಿಯಾಗಲಿಲ್ಲ. ಶುಕ್ರವಾರ ರಾತ್ರಿ ಸುಜನಾ ಅವರ ಮೃತ ದೇಹ ಪತ್ತೆಯಾಯಿತು.

ವರ್ಜೀನಿಯಾದ ಆಶ್ ಬರ್ನ್ ನಿವಾಸಿಯಾಗಿದ್ದ ಸುಜನಾ ಓರ್ವ ಜನಾನುರಾಗಿ ಅನಿವಾಸಿ ಭಾರತೀಯ ಮಹಿಳೆಯಾಗಿದ್ದರು. ಅವಿರತ ಸಮಾಜಸೇವೆ, ನಿಸ್ಸಹಾಯಕರ ಬಗ್ಗೆ ಅವರಿಗಿದ್ದ ಸಕ್ರಿಯ ಕಳಕಳಿಯಿಂದಾಗಿ ಅನಿವಾಸಿ ಭಾರತೀಯ ಸಮುದಾಯಗಳಲ್ಲಿ ಅವರು ಜನಪ್ರಿಯರಾಗಿದ್ದರು. ಮೃತರು ಮೂಲತಃ ತೆಲಗು ಮಾತೃಭಾಷೆಯವರಾಗಿದ್ದರೂ ಕರ್ನಾಟಕದ ಮಣ್ಣಿನ ಮಗಳಾಗಿದ್ದರು.

ಮೃತರ ಅಂತಿಮ ದರ್ಶನವನ್ನು ವರ್ಜೀನಿಯಾದ ಚಾಂಟಿಲಿಯಲ್ಲಿ ಜುಲೈ 5ರಂದು ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮಂದಿ ಭಾರತೀಯರು ಚಾಂಟಿಲಿಗೆ ತೆರಳಿ ಸುಜನಾ ಆತ್ಮಕ್ಕೆ ಶಾಂತಿ ಕೋರಿದರು. ಸುಜನಾ ಅವರ ಅಂತ್ಯ ಸಂಸ್ಕಾರ ಭಾರತದಲ್ಲಿ ನಡೆಯಲಿದ್ದು ದೇಹವನ್ನು ಇಂದು (ಜುಲೈ 8 ಬುಧವಾರ) ಸ್ವದೇಶಕ್ಕೆ ತರಲಾಗುತ್ತಿದೆ.

ಒಂದು ಮಗುವಿನ ಸಂಸಾರ ಭಾರ, ಜತೆಗೆ ಜೀವನ ನಿರ್ವಹಣೆಗೆ ಉದ್ಯೋಗದಲ್ಲಿ ನಿರತರಾಗಿದ್ದರೂ ದಿನದ ಸ್ವಲ್ಪ ಸಮಯವನ್ನು ಇತರರು ಅಂದರೆ ಭಾರತೀಯರ ಅಭ್ಯುದಯಕ್ಕಾಗಿ ಮೀಸಲಿಡುತ್ತಿದ್ದ ಉತ್ಸಾಹ ಅವರನ್ನು ಇತರ ಅನೇಕರಿಗಿಂತ ಭಿನ್ನವಾಗಿಟ್ಟಿತ್ತು. ತಾನು ಭಾರತದಲ್ಲಿ ಜನಿಸಿದ್ದೇ ಪುಣ್ಯ ಎಂದು ಅವರು ಭಾವಿಸಿದ್ದರು. ಜತೆಗೆ, ತೊಂದರೆಗೆ ಸಿಲುಕಿದವರಿಗೆ, ಅವಕಾಶ ವಂಚಿತರಿಗೆ ನಮ್ಮ ಕೈಲಾದ ನೆರವು ಮತ್ತು ಪ್ರೋತ್ಸಾಹ ನೀಡಬೇಕೆಂದು ಜತೆಗಾರ ಭಾರತೀಯರನ್ನು ಸದಾ ಹುರಿದುಂಬಿಸುತ್ತಿದ್ದರು.

ಸಮಾಜಸೇವೆಯ ಪ್ರೀತಿ ಮತ್ತು ಶ್ರಮಗಳು ಪೋಲಾಗದಂತೆ ನೋಡಿಕೊಳ್ಳುವುದಕ್ಕೆ ಸುಜನಾ ಅವರು ಒಂದು ಸಂಸ್ಥೆಯನ್ನು ಹುಟ್ಟಿಹಾಕಿದ್ದರು. ಅದರ ಹೆಸರು ಎನ್ಆರ್ಐ ವಿಎ ಕುಟುಂಬ. [NRIVA Family www.NRIVA.org] ಈ ಸಂಸ್ಥೆಯ ವತಿಯಿಂದ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮುಖ್ಯವಾದವುಗಳೆಂದರೆ ; ವಿದ್ಯಾರ್ಥಿಯನ್ನು ದತ್ತು ತೆಗೆದುಕೊಳ್ಳುವುದು, ಶಾಶ್ವತ ಶಿಕ್ಷಣ ನಿಧಿ ಸ್ಥಾಪನೆ, ನಾನಾ ಬಗೆಯ ವಿದ್ಯಾರ್ಥಿವೇತನ ಸ್ಥಾಪನೆ ಮತ್ತು ಭಾರತದಲ್ಲಿ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು.

ಈ ಕೆಲಸಗಳಿಗೆ ಮೂಲಭೂತವಾಗಿ ಅಗತ್ಯವಾದ ದೇಶಪ್ರೇಮ, ಕಷ್ಟಪಟ್ಟು ಕೆಲಸ ಮಾಡುವುದು ಹಾಗೂ ಒಂದು ಹಿಡಿ ಪ್ರೀತಿ ಅವರಲ್ಲಿ ಸದಾ ಚಿಮ್ಮುತ್ತಿರುತ್ತಿತ್ತು. ಶಿರಡಿ ಸಾಯಿಬಾಬಾ ಭಕ್ತರಾಗಿದ್ದರು ಸುಜನಾ. ಅಲ್ಲದೆ ಅಮೆರಿಕಾದಲ್ಲಿ ತಾಯಂದಿರ ದಿನ ಅಂದರೆ ಮದರ್ಸ್ ಡೇ ಆಚರಣೆ ಹಾಗೂ ಉತ್ತರ ಅಮೆರಿಕದಾದ್ಯಂತ ವಾಸವಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದಕ್ಕೆ ಪ್ರೇರಕ ಶಕ್ತಿಯಾಗಿದ್ದರು.

ಸುಜನಾ ಉಮೇಶ್ ಆಕಾಶಕ್ಕೆ ಕೈಚಾಚಿದ್ದರು. ಕೆಲವು ನಕ್ಷತ್ರಗಳು ಅವರದಾದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X