• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜೆರ್ಸಿಯ ಬೃಂದಾವನದಲ್ಲಿ ವಸಂತೋತ್ಸವ

By Staff
|
"ವಸಂತ ತಂತು ಸಂತಸ, ಬೃಂದಾವನಕೆ ಬೃಹದಾನಂದ"

"ವಿರೋಧಿ ನಾಮ ಸಂವತ್ಸರ, ಹೊಮ್ಮಿದೆ ಎಲ್ಲರಲ್ಲಿ ಸಡಗರ"

"ಒಂದೊಂದೇ ಚಿಕ್ಕ ಚಿಕ್ಕ ವಾಕ್ಯ, ಅಡಗಿರಬೆಕು ವಿಚಾರಗಳನೇಕ ಐಕ್ಯ" (ಪ್ರೇರಣೆ : ಗಂಗಾವತಿ ಪ್ರಾಣೇಶ)

ಎನ್ ಸ್ವಾಮಿ, ಏನಂತೀರಾ, ಎಂಥಾ ಸುಂದರ ಸಂಜೆ ಗೊತ್ತೋ,

"ಕುಳಿತಾಗ ಮೂರು ಗಂಡ, ಏಳುವಾಗ ಹತ್ತು ಗಂಡ" ಏನು ಮಜಾ...ಎಷ್ಟು ನಗೆ, "ಬಿಸಿ ಬಿಸಿ ಉಬಟು ತಿಂದು, ಕಾಫಿ ಕುಡಿದು

ಕೂತೇವಾ ನೋಡಿ, ರಾತ್ರಿ ಊಟದ ಸಮಯದ ಪರಿವೇನೇ ಇರಲಿಲ್ಲ.... (ಪ್ರೇರಣೆ : ರಿಚರ್ಡ್ ಲೂಯಿಸ್)

"ಹೌದಪ್ಪಾ, ಅದ್ ಹೆಂಗೆ ಇತ್ತು ಅಂತೀರಾ...ಅಯ್ಯೋ, ಅಯ್ಯೋ, ಅಯ್ಯೋ, ಅದೇನ್ ಮಾತಾಡ್ತಾರೆ ಎಲ್ರೂ ಅಂತೀನಿ, ಅದೆಷ್ಟು ಟ್ಯಾಲೆಂಟು ಇದೆ ಇವರಿಗೆ, ಅಲ್ಲಾ ಹೆಂಗೆ ಅಂತೀನಿ....(ಮುಖ್ಯ ಮಂತ್ರಿ ಚಂದ್ರು ಅವರ ಧ್ವನಿ, ಶೈಲಿಯಲ್ಲಿ ಓದಿಕೊಳ್ಳಿ)...(ಪ್ರೇರಣೆ : ಮಿಮಿಕ್ರಿ ದಯಾನಂದ್)

* ಕೃಪಾ ರಮೇಶ್

ಏನಿದೆಲ್ಲ ಅಂತ ನೀವು ಅಂದ್ಕೊತಾ ಇದ್ರೆ, ಸರಿ ಹೇಳ್ತೀನಿ ಕೇಳಿ, ನೀವು ಏನ್ ಮಿಸ್ ಮಾಡಿಕೊಂಡಿದ್ದೀರಾ ಅಂತ...ಶನಿವಾರ, ಮೇ ತಿಂಗಳ ಹದಿನಾರರಂದು, ನಮ್ಮ ನ್ಯೂಜೆರ್ಸಿ ಕನ್ನಡ ಕೂಟ ಬೃಂದಾವನದ ವಸಂತೋತ್ಸವ ಕಾರ್ಯಕ್ರಮ ಈಸ್ಟ್ ವಿಂಡ್ಸರ್ ನ ಕ್ರೆಪ್ಸ್ ಮಿಡಲ್ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಆರಂಭದ ಪ್ರಾರ್ಥನೆಯ ನಂತರ, ಪುಟ್ಟ ಪುಟ್ಟ ಮಕ್ಕಳಿಂದ ಬೃಂದಾವನದ ಸಂಕೇತ ಗೀತೆ, ಭಾರತದ ಹಾಗು ಅಮೆರಿಕದ ರಾಷ್ಟ್ರಗೀತೆಗಳನ್ನು ಕರ್ಣಾನಂದಕರವಾಗಿ, ಸ್ಪಷ್ಟವಾಗಿ ಹಾಡಲ್ಪಟ್ಟವು. ಸೀಮಾ ಮೂರ್ತಿಯವರ ಸ್ವಾಗತ ಭಾಷಣದ ನಂತರ ಸಿಂಹಾದ್ರಿ ಸಂತೆಬೆನ್ನೂರ್ ರವರ ಸ್ವವಿರಚಿತ, ಅಮ್ಮನ ಪ್ರೀತಿ, ವಾತ್ಸಲ್ಯ ತುಂಬಿದ ಕವನ ಹಾಗು ಅವರ ಹಾಡುಗಾರಿಕೆ ಅತ್ಯಂತ ಸಮಂಜಸ ಹಾಗೂ ಸುಮಧುರವಾಗಿತ್ತು....

ಬೆಂಗಳೂರಿನ "ಲಯ ತರಂಗ" ತಂಡದವರಿಂದ ನಡೆದ ತಾಳವಾದ್ಯ ಕಛೇರಿ ಹಾಗು ಪ್ರತಿಭಾ ಪ್ರದರ್ಶನದ ಬಗ್ಗೆ ವರ್ಣಿಸಲು ನನ್ನ ಶಬ್ದ ಭಂಡಾರದಲ್ಲಿ ಪದಗಳಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಕರ್ಣಾಟಕದಿಂದ ಆಗಮಿಸಿದ್ದ "ಲಯತರಂಗದ" ಐದು ಮಂದಿ ತಂಡವಾದ ಅರುಣ್ ಕುಮಾರ್, ರಾಜಕಮಲ್, ಗಿರಿಧರ್ ಉಡುಪ, ಸೊಲೊಮನ್ ಹಾಗೂ ಪ್ರಮಥ್ ಕಿರಣ್ ರವರ ಕೊಳಲು, ಘಟಂ, ಮೃದಂಗ, ತಬಲ, ಕೀಬೋರ್ಡ್, ಡ್ರಮ್ಸ್, ಮೋರ್ಚಿಂಗ್ ಮತ್ತಿತರ ವಾದ್ಯಗಳಲ್ಲಿ ಅಪಾರ ನಿಪುಣತೆ ಹೊಂದಿದವರು. ಅವರುಗಳು ಒಬ್ಬರಿಗೊಬ್ಬರು ಸರಿಯಾಗಿ ಹೊಂದಾಣಿಸಿಕೊಂಡು, ಒಳ್ಳೇ ಪೈಪೋಟಿಯೊಂದಿಗೆ ತಮ್ಮ ಕೈಚಳಕ, ಬಾಯ್ಚಳಕ ಮೂಲಕ ಸಂಗೀತದ ರಸದೌತಣವನ್ನೆ ಬಡಿಸಿ ನೆರೆದಿದ್ದ ಪ್ರೇಕ್ಶಕರನ್ನು ಮಂತ್ರಮುಗ್ಧರಾಗಿಸಿದರು. ಅವರೊಂದಿಗೆ, ಇಲ್ಲಿಯವಳೇ ಆದ ಕುಮಾರಿ ಮಧುಮಿತ ಪರ್ಮಾರ್ ಎಂಬ 14 ವರ್ಷದ ಬಾಲೆ ಲಯತರಂಗ ತಂಡದೊಂದಿಗೆ ತನ್ನ ಸಾಕ್ಸೊಫೋನ್ ನುಡಿಸುವಿಕೆಯಿಂದ ನಮ್ಮೆಲ್ಲರ ಮನ ಸೆಳೆದಳು...ಇವರೆಲ್ಲರೂ ಸ್ವದೇಶ, ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಎಲ್ಲರ ಮನರಂಜಿಸಿದ್ದಾರೆ.

ಬೃಂದಾವನದ ಹೆಣ್ಣು ಮಕ್ಕಳಿಂದ ಎರಡು ನೃತ್ಯ ಪ್ರದರ್ಶನ ಬಹಳ ಸೊಗಸಾಗಿತ್ತು. ತದನಂತರದಲ್ಲಿ, ನಮ್ಮ ಬೃಂದಾವನ ಯಾವಾಗಲೂ "ದಾನ ಧರ್ಮ" ಕಾರ್ಯಕ್ರಮಗಳನ್ನು ಹೊಮ್ಮಿಕೊಂಡಿರುವಂತೆ, ಈ ಬಾರಿ 'ಅಕ್ಷಯ ಪಾತ್ರೆ' ಎನ್ನುವ ಸಂಸ್ಥೆಯ ಮಕ್ಕಳಿಗೆ ಉಚಿತ ಊಟ ವ್ಯವಸ್ಥೆ ಮಾಡುವ ಪ್ರೊಗ್ರಾಮ್ ಬಗ್ಗೆ, ವಿಡಿಯೋ ಸಹಿತ ವಿವರಣೆ ಕೊಟ್ಟರು ರಘು ಮೂರ್ತಿಯವರು. ಈ ಒಂದು ಒಳ್ಳೆಯ ಕಾರ್ಯಕ್ಕೆ ರಾಫೆಲ್ ಚೀಟಿ ಮಾರಾಟದ ಮೂಲಕ ಹಣ ಸಂಗ್ರಹಿಸಲಾಗಿತ್ತು. ಅದರಲ್ಲಿ ವಿಜೇತರಾದವರಿಗೆ ಐ-ಪಾಡ್, ಡಿಜಿಟಲ್ ಫೋಟೋ ಫ್ರೇಮ್, ಮುಂತಾದ ಬಹುಮಾನಗಳನ್ನು ವಿತರಿಸಿದುದಲ್ಲದೆ ಸುಮಾರು1100 ಡಾಲರನ್ನು "ಅಕ್ಷಯ ಪಾತ್ರೆ" ಸಂಸ್ಥೆಗೆ ನೀಡಲಾಯಿತು.

ಈ ಸಂಜೆಯ ವಿಶೇಷ ಕಾರ್ಯಕ್ರಮ "ಅಕ್ಕ" ಸಂಸ್ಥೆಯವರು ಎಲ್ಲ ಕನ್ನಡ ಕೂಟಗಳಿಗೆ ಉಗಾದಿಯ ಉಡುಗೊರೆಯಾಗಿ ನೀಡಿದ "ನಗೋಕೆ ಇಲ್ಲ ರಿಸಿಶೆನ್ನು" ಪ್ರಾರಂಭವಾಯಿತು. ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದರಿಂದ ಹಾಸ್ಯಸಂಜೆ ರಿಚರ್ಡ್ ಲೂಯಿಸ್, ಗಂಗಾವತಿ ಪ್ರಾಣೇಶ್ ಹಾಗೂ ಮಿಮಿಕ್ರಿ ದಯಾನಂದ್ ಅವರುಗಳು ನಡೆಸಿಕೊಟ್ಟ ಕಾರ್ಯಕ್ರಮ ಇದಾಗಿತ್ತು. ಅಶೋಕ ಕಟ್ಟಿಮನಿಯವರು ಕಲಾವಿದರನ್ನು ಪರಿಚಯ ಮಾಡಿಸಿಕೊಟ್ಟರು. ಮೊದಲಿಗೆ ರಿಚರ್ಡ್ ಲೂಯಿಸ್ ಹಾಗು ಪ್ರಾಣೇಶ್ ರವರು ತಮ್ಮ ಅಮೊಘ ವಾಕ್ಚಾತುರ್ಯ, ನವಿರಾದ ಹಾಸ್ಯದ ಹೊನಲಿಂದ ನೆರೆದಿದ್ದ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿದರು. ಇದೇ ವಿಧದಲ್ಲಿ ಜೀವನದಲ್ಲಿ ಎಲ್ಲಾ ಆಗುಹೋಗುಗಳನ್ನೂ ಒಂದು ಸಲೀಸಾದ ಹಾಸ್ಯದೃಷ್ಟಿಯಿಂದ ಅನುಭವಿಸುವ ಪ್ರವೃತ್ತಿ ಬೆಳೆಸಿಕೊಂಡರೆ, ನಮ್ಮ ಜೀವನಯಾತ್ರೆ ಎಷ್ಟು ಸುಗಮ, ಸುಂದರವಾಗಿರಬಹುದು, ಅಲ್ವಾ? ನಂತರ ಬಂದ ದಯಾನಂದರವರು ಚಿತ್ರರಂಗದ ಅನೇಕ ನಟರ ಅಭಿನಯ, ನಾಟ್ಯ ಶೈಲಿಯ ಅನುಕರಣೆಯಿಂದ ನಮ್ಮನ್ನು ರಂಜಿಸಿದರು...'ಅಣ್ಣಾವ್ರು', ಬಾಲಕೃಷ್ಣ, ಶಂಕರನಾಗ್, ಹೀಗೆ ಹಲವಾರು ನಟರನ್ನು ನಮ್ಮ ಮುಂದೆ ತಂದರು. ಸಮಯದ ಪರಿವೆಯೇ ನಮಗಾರಿಗೂ ಇರಲಿಲ್ಲ.

ಬೃಂದಾವನದ ಅಧ್ಯಕ್ಷೆ ಉಷ ಪ್ರಸನ್ನ ಕುಮಾರ್ ರವರಿಂದ ಎರಡು ಮಾತು ಹಾಗು ಮೆರ್ಲಿನ್ ಮೆಂಡೊಂಕ ರವರಿಂದ ವಂದನಾರ್ಪಣೆಯೊಂದಿಗೆ ವಿಜೃಂಭಣೆಯಿಂದ ನಡೆದ "ವಸಂತೋತ್ಸವ" ಸಮಾರಂಭಕ್ಕೆ ತೆರೆ ಬಿದ್ದಿತು. ಈ ಉನ್ನತ ಮಟ್ಟದ ಕಾರ್ಯಕ್ರಮಗಳಾದ ಮೇಲೆ, ಕಾಯುತಿತ್ತು 'ಹಬ್ಬದೂಟ' ಹೊಯ್ಸಳ ದವರಿಂದ - ರುಚಿಕಟ್ಟಾದ ಮೊಳಕೆ ಕಟ್ಟಿದ ಹೆಸರು ಕಾಳಿನ ಸಾಲಡ್, ಚಪಾತಿ ಪಲ್ಯ, ಬೆಂಡೆಕಾಯಿ ಗೊಜ್ಜು, ಅವರೇಕಾಳು ಬಾತು, ಮೊಸರು ರಾಯಿತ, ಗರಿ ಗರಿ ಪಕೊಡ, ಹಪ್ಪಳ, ಮೈಸೂರ್ ಪಾಕ್, ಮೊಸರನ್ನ ಉಪ್ಪಿನಕಾಯಿಗಳೊಂದಿಗೆ ಸುಪುಷ್ಟ ಭೋಜನದ ವ್ಯವಸ್ಥೆ. ನಮಗೆಲ್ಲಾ ಊಟದ ತಟ್ಟೆಗಳ ಅಣಿ ಮಾಡಿಕೊಟ್ಟದ್ದು ಬೃಂದಾವನದ ಯುವ ಸ್ವಯಂಸೇವಕರ ತಂಡ ಅಚ್ಚುಕಟ್ಟಾಗಿ ನಗೆಮೊಗದಿಂದ ಊಟ ಬಡಿಸಿದ ಮಕ್ಕಳ ನಡುವಳಿಕೆ ಶ್ಲಾಘನೀಯ.

ಸಂಜೆಯ ಬಿಸಿ ಬಿಸಿ ಉಪ್ಪಿಟ್ಟಿನ ವ್ಯವಸ್ಥೆ ಮಾಡಿದ್ದ ಕಾರೈಕುಡಿ ಚೆಟ್ಟಿನಾಡ್ ಹೋಟೆಲ್ ನವರಿಗೂ, ರಾಫೆಲ್ ಟಿಕೆಟ್ ಗೆ ಬಹುಮಾನದ ವ್ಯವಸ್ಥೆ ಮಾಡಿದ್ದ ವೆಸ್ಟೆರ್ನ್ ಯುನಿಯನ್ನವರಿಗೂ, ಲಯತರಂಗ ಹಾಗು ಹಾಸ್ಯ ಸಂಜೆ ಕಾರ್ಯಕ್ರಮಗಳನ್ನು ಸ್ಪಾನ್ಸರ್ ಮಾಡಿದ ಗಾರ್ಡಿಯನ್ ಇನ್ಷುರೆನ್ಸೆನವರಿಗೂ, ಲಾಭರಹಿತ ಸಂಸ್ಥೆಯಾದ ನಮ್ಮ ಬೃಂದಾವನಕ್ಕೆ ವಿನಾಯಿತಿ ದರದಲ್ಲಿ ಒಳ್ಳೆಯ ಆಡಿಟೊರಿಯಮ್ ಹಾಗು ಕೆಫೆಟೀರಿಯಗಳನ್ನು ನೀಡಿದ್ದ ಈಸ್ಟ್ ವಿಂಡ್ಸರಿನ ಸ್ಕೂಲ್ ಬೋರ್ಡಿನವರಿಗೂ ನಮ್ಮೆಲ್ಲರ ಹೃತ್ಪೂರ್ವಕ ವಂದನೆಗಳು.

ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದರಿಗೂ, ಮತ್ತು ಬೃಂದಾವನಕ್ಕೆ ಅವರೆಲ್ಲರೂ ಬರಲು ಸಹಕಾರ ಮಾಡಿದ ಅಕ್ಕ ತಂಡದವರಿಗೂ ನಮ್ಮೆಲ್ಲರ ವಂದನೆಗಳು. ಇಷ್ಟು ಒಳ್ಳೇ ರೀತಿಯ ಕಾರ್ಯಕ್ರಮಗಳನ್ನು ಆಯೊಜಿಸುತ್ತಾ, ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಬೃಂದಾವನದ "ಸ್ಫೂರ್ತಿ" ತಂಡಕ್ಕೆ ಹೃದಯಾಳದಿಂದ ಜಯಕಾರ ಸಲ್ಲಲೇ ಬೇಕು.

ಇದೇ ರೀತಿ ' ಈ ಸುಮಧುರ ಸ್ನೇಹ ಸಮ್ಮಿಲನ, ನಮ್ಮೀ ಬೃಂದಾವನ' ಇನ್ನೂ ಹೀಗೇ ಏಳಿಗೆ ಹೊಂದುತ್ತಾ ಮತ್ತಷ್ಟು ಎತ್ತರಕ್ಕೆ ಬೆಳಯಲಿ ಎಂದು ಪ್ರೀತಿಯಿಂದ ಆಶಿಸುತ್ತ ನಾನು ವಿರಮಿಸುತ್ತೇನೆ...ಮತ್ತೆ ನೋಡೋಣ...

ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more