ಸಿಲಿಕಾನ್ ವೇಫರ್ ಮೇಲೆ ಭಗವದ್ಗೀತೆ!

Posted By:
Subscribe to Oneindia Kannada
Dr. Mukund PR
ಖಿಲವಾಗುತ್ತಿರುವ ಪುರಾತನ ಕಾಲದ ಅಮೂಲ್ಯವಾದ ಗ್ರಂಥಗಳನ್ನು ಸಿಲಿಕಾನ್ ವೇಫರ್ ಮೇಲೆ ಮೂಡಿಸಿ ಅಖಿಲವಾಗಿಸುವ ನಿಟ್ಟಿನಲ್ಲಿ ಅಮೆರಿಕದಲ್ಲಿರುವ ಬಸವನಗುಡಿಯ ಪಿಆರ್ ಮುಕುಂದ್ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿಯೇ ಪ್ರೋಫೆಸರ್ ಗಿರಿಯನ್ನು ತ್ಯಜಿಸಿರುವ ಅವರು ನ್ಯಾನೋಆರ್ಕ್ ಎಂಬ ಕಂಪನಿಯನ್ನು ಹುಟ್ಟುಹಾಕಿದ್ದಾರೆ. ಮುಟ್ಟಿದರೆ ಮುರಿಯುವ ಸ್ಥಿತಿಯಲ್ಲಿರುವ ಪುರಾತನ ಕನ್ನಡ ಗ್ರಂಥಗಳೂ ಎಂದೂ ಅಳಿಯದ ಸಿಲಿಕಾನ್ ವೇಫರ್ಸ್ ಮೇಲೆ ಸಿಗುವಂತಾಗಲಿ.

* ಟಿ. ಮಹದೇವ ರಾವ್, ರಾಚೆಸ್ಟರ್, ನ್ಯೂ ಯಾರ್ಕ್

ಮಾನವ ಪ್ರಜ್ಞಾವಂತನಾದ ದಿನದಿಂದ ಜ್ಞಾನವನ್ನು ತನ್ನ ಮುಂದಿನ ಪೀಳಿಗೆಗಳಿಗೆ ತಲುಪಿಸಲು ಬೇರೆ ಬೇರೆ ವಿಧಾನಗಳನ್ನು ಕಂಡುಹಿಡಿಯುತ್ತಲೇ ಇದ್ದಾನೆ. ಜ್ಞಾನವು ಗುರು ಮುಖೇನ ಶಿಷ್ಯ ಪರಂಪರೆಗೆ ವಹನವಾಗುತ್ತಿತ್ತು. ಜ್ಞಾನ ಬಾಹುಳ್ಯ ಹೆಚ್ಚಾದಂತೆಲ್ಲ, ಅದನ್ನು ಪುಸ್ತಕ ರೂಪದಲ್ಲಿ ಬರೆದಿಡುವ ಅವಶ್ಯಕತೆ ಉಂಟಾಯಿತು. ಕಾಗದದ ಆವಿಷ್ಕಾರದ ಮೊದಲು, ತಾಳೆಯಗರಿ, ಗಿಡದ ತೊಗಟೆಗಳೇ ಬರಹದ ಮಾಧ್ಯಮ. ಅಶೋಕ, ಕೃಷ್ಣದೇವರಾಯನಂಥ ರಾಜ ಮಹಾರಾಜರು, ಬಂಡೆಗಳ ಮೇಲೆ, ಗುಹಾಂತರ್ದೇವಾಲಯಗಳಲ್ಲಿ, ತಾಮ್ರಪಟಗಳ ಮೇಲೆ, ತಮ್ಮ ಶಾಸನಗಳನ್ನು ಕೊರೆಯಿಸಿದರು. ಈ ಪ್ರಾಚೀನ ಶಾಸನಗಳು, ಸಂಸ್ಕೃತ, ಪ್ರಾಕೃತ, ಕನ್ನಡ ಮುಂತಾದ ಭಾಷೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಿಗುತ್ತವೆ. ಜಗತ್ತಿನಾದ್ಯಂತ ವಿಶ್ವ ವಿದ್ಯಾಲಯಗಳ ಗ್ರಂಥ ಭಂಡಾರಗಳಲ್ಲಿ, ಖಾಸಗೀ ಗ್ರಂಥ ಸಂಗ್ರಹಗಳಲ್ಲಿ, ಸಾವಿರಾರು ಪುರಾತನ ಗ್ರಂಥಗಳು ಲಭ್ಯವಿವೆ. ಈ ಶಿಲಾಶಾಸನಗಳು, ತಾಮ್ರ ಶಾಸನಗಳು, ಓಲೆಗರಿಯ ಗ್ರಂಥಗಳು, ಮಾನವನ ನಿರ್ಲಕ್ಷ್ಯ, ವಿಧ್ವಂಸಕ ಕೃತ್ಯಗಳು, ಕಾಲರಾಯನ ಆಘಾತ, ಹುಳು ಹುಪ್ಪಟೆ ನುಸಿಗಳ ಕಾಟದಿಂದ ಖಿಲವಾಗುವ ಅಪಾಯದಲ್ಲಿವೆ. ಇವನ್ನೆಲ್ಲ ನಮ್ಮ ಮುಂದಿನ ಪೀಳಿಗೆಗಳಿಗೆ ಕಾಪಾಡುವುದು, ನಮ್ಮೆಲ್ಲರ ಕರ್ತವ್ಯ. ಅಷ್ಟೇ ಅಲ್ಲ, ಅವುಗಳನ್ನು ಅಭ್ಯಸಿಸಲು ಆಸಕ್ತಿ ಇದ್ದವರಿಗೆಲ್ಲಾ ಅವು ಲಭ್ಯವಾಗುವಂತೆ ಮಾಡಬೇಕು.

ಬಯಲಿನಲ್ಲಿ ಬಂಡೆಗಳ ಮೇಲೋ, ಬೆಟ್ಟಗಳಮೇಲೋ, ಗುಹೆಗಳಲ್ಲೋ, ದೇಗುಲಗಳ ಬದಿಯಲ್ಲೋ ಕೆತ್ತಿರುವ ಬರಹಗಳು, ಗಾಳಿ, ಬಿಸಿಲು ಮಳೆಗಳಿಂದ ಅಪಾಯ ಎದುರಿಸುತ್ತವೆ. ಅವನ್ನು ರಕ್ಷಿಸುವುದು ಸರಕಾರ, ಪುರಾತತ್ವ ಇಲಾಖೆಗಳ ಜವಾಬ್ದಾರಿ. ಗ್ರಂಥಾಲಯಗಳಲ್ಲೂ, ಎಲ್ಲ ಧರ್ಮಗಳ ಮಠಗಳಲ್ಲೂ ತಾಳೆಗರಿಯ ಗ್ರಂಥಗಳು ವಿಪುಲವಾಗಿ ಸಿಗುತ್ತವೆ. ಇವನ್ನು ಕೆಡದಂತೆ ರಕ್ಷಿಸಿಡುವುದು ಬಹಳ ಕಷ್ಟದ ಕೆಲಸ. ಬಹುತೇಕ ಗ್ರಂಥಗಳ ಭೌತಿಕ ಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಶತಮಾನಗಳಷ್ಟು ಹಳೆಯದಾದ ಈ ಗ್ರಂಥಗಳು, ಆರ್ದ್ರತೆಯನ್ನು ಕಳೆದುಕೊಂಡು, ಮುಟ್ಟಿದರೆ ಮುರಿದುಹೋಗುವ ಸ್ಥಿತಿಯಲ್ಲಿರುತ್ತವೆ. ಅವನ್ನು ಎಲ್ಲರ ಅಧ್ಯಯನಕ್ಕೂ ತೆರೆದಿಡುವುದು ಅಸಾಧ್ಯ ಮತ್ತು ಅವುಗಳ ಉಳಿವಿಗೇ ಅಪಾಯಕರ. ಇವುಗಳ ರಕ್ಷಣೆಯೂ ಸರಕಾರ ಮತ್ತು ಗ್ರಂಥಾಲಯ ಪಾಲಕರಿಗೆ ಸೇರಿದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಹಂಚಿ ಹೋಗಿರುವ ಈ ಪ್ರಾಚೀನ ಗ್ರಂಥಗಳನ್ನು ಅಭ್ಯಾಸಿಗಳಿಗೆ ಸುಲಭವಾಗಿ ದೊರಕುವಂತೆ ಮಾಡುವುದು ಸಾಧ್ಯವೆ?

ಇದೇ ಪ್ರಶ್ನೆ, ಕನ್ನಡಿಗ ಪಿ.ಆರ್. ಮುಕುಂದ್ ಅವರನ್ನು ಕಾಡಿದ್ದು. ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ ಮುಕುಂದ್, ಬೆಂಗಳೂರಿನವರು. ಆರಂಕುಸವಿಟ್ಟರೂ ಅವರ ಮನ ಬಸವನಗುಡಿಯನ್ನು ನೆನೆಯುತ್ತದೆ. ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದ ನಂತರ, ಟೆನ್ನೆಸೀ ವಿಶ್ವವಿದ್ಯಾಲದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪಡೆದವರು. ಈಗ ನ್ಯೂ ಯಾರ್ಕ್ ರಾಜ್ಯದ ರಾಚೆಸ್ಟರ್ ತಾಂತ್ರಿಕ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕಲಿಸುವುದಲ್ಲದೆ, ಆಸಕ್ತರಿಗೆ ಹಿಂದೂ ಧರ್ಮ, ತತ್ತ್ವ ಶಾಸ್ತ್ರಗಳ ಬಗ್ಗೆ ಉಪನ್ಯಾಸವನ್ನೂ ಕೊಡುತ್ತಾರೆ. ಶುಕ್ರವಾರ ಮಧ್ಯಾಹ್ನದ ಅವರ ಧಾರ್ಮಿಕ ಉಪನ್ಯಾಸಗಳಲ್ಲಿ, ಭಾರತೀಯ ವಿದ್ಯಾರ್ಥಿಗಳಲ್ಲದೆ ಅನೇಕ ಅಮೇರಿಕನ್ ವಿದ್ಯಾರ್ಥಿಗಳೂ ಭಾಗವಹಿಸುತ್ತಾರೆ. ಕಂಪ್ಯೂಟರ್ ಒಳಗಡೆ ಅಳವಡಿಸುವ ಮೈಕ್ರೋ ಚಿಪ್‌ಗಳ ವಿನ್ಯಾಸ ಮುಕುಂದ್ ಮತ್ತು ಅವರ ಶಿಷ್ಯರ ಮುಖ್ಯ ಸಂಶೋಧನಾ ವಿಷಯ. ಕಿರಿಬೆರಳಿನ ಉಗುರಿಗಿಂತಲೂ ಚಿಕ್ಕ ಸಿಲಿಕಾನ್ ವೇಫರ್ ಮೇಲೆ, ಲಕ್ಷಗಟ್ಟಲೆ ವಿದ್ಯುನ್ಮಾನ ಬಿಡಿ ಭಾಗಗಳನ್ನು ತುರುಕುವ ವಿಜ್ಞಾನದಲ್ಲಿ ಅವರಿಗೆ ವಿಶೇಷ ಪರಿಣತಿ.

Bhagavad Gita on Silicon Wafers
ಮತ್ತೆ ಪ್ರಾಚೀನ ಗ್ರಂಥಗಳ ವಿಷಯಕ್ಕೆ ಬರೋಣ. ಸಿಲಿಕಾನ್ ವೇಫರ್‌ಗಳ ಮೇಲೆ, ವಿದ್ಯುನ್ಮಾನೀಯ ಸರ್ಕಿಟ್‌ಗಳನ್ನು ಎರಕ ಹೊಯ್ಯಬಹುದಾದರೆ, ಯಾವುದೇ ಬರವಣಿಗೆಯ ಬಿಂಬವನ್ನು ಎರಕ ಹೊಯ್ಯಲು ಸಾಧ್ಯವಿಲ್ಲವೆ? ಸಾಧ್ಯ ಇದೆ, ಎನ್ನುತ್ತಾರೆ ಪ್ರೊಫೆಸರ್ ಮುಕುಂದ್. ಅದು ಹೇಗೆ? ಎಂಬ ಪ್ರಶ್ನೆಗೆ, ಅವರು ಈಚೆಗೆ ಪ್ರಸ್ತುತ ಪಡಿಸಿದ "ಸರ್ವಮೂಲ ಗ್ರಂಥ"ದ ಉದಾಹರಣೆ ಕೊಡುತ್ತಾರೆ. ಸರ್ವಮೂಲ ಗ್ರಂಥ, ಆಚಾರ್ಯ ಮಧ್ವ ವಿರಚಿತ ಧಾರ್ಮಿಕ ಗ್ರಂಥ. ಅದನ್ನು ಅವರ ಶಿಷ್ಯರಾದ ಹೃಷೀಕೇಶ ತೀರ್ಥರಿಗೆ ಬೋಧಿಸಿದರಂತೆ. ಈ ಗ್ರಂಥದ ಒಂದು ತಾಳೆಗರಿ ಪ್ರತಿ, ಉಡುಪಿಯ ಪಲಿಮಾರು ಮಠದಲ್ಲಿ ಇದೆ. ತುಂಬಾ ಸೂಕ್ಷ್ಮ ಪರಿಸ್ಥಿತಿಯಲ್ಲಿದ್ದ ಈ ಪ್ರತಿಯನ್ನು ಯಾರಿಗೂ ನಿಲುಕದ ಹಾಗೆ ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದಾರಂತೆ. ಇತ್ತೀಚಿಗೆ ಗಾಳಿಯಲ್ಲಿ ಹೆಚ್ಚಾಗಿರುವ ಆಮ್ಲಾಂಶದಿಂದ ಗ್ರಂಥ ಇನ್ನೂ ವೇಗವಾಗಿ ಖಿಲವಾಗುತ್ತಿದೆ ಎಂಬುದು ಮುಕುಂದ್ ಅವರ ಅನಿಸಿಕೆ. ಈ ಗ್ರಂಥವನ್ನು ರಕ್ಷಿಸುವುದು, ಮತ್ತು ಅದರೊಳಗಿನ ಜ್ಞಾನವನ್ನು ಎಲ್ಲರಿಗೂ ನಿಲುಕುವ ಹಾಗೆ ಮಾಡುವುದು ಮುಕುಂದ್ ಅವರು ಹಮ್ಮಿಕೊಂಡ ಮೊದಲ ಪ್ರಾಜೆಕ್ಟ್. ಸ್ವಲ್ಪ ಮನವೊಲಿಕೆಯ ನಂತರ ಮೂಲ ಪ್ರತಿಯ ಅವಲೋಕನಕ್ಕೆ ಮಠಾಧಿಕಾರಿಗಳಿಂದ ಅನುಮತಿ ದೊರೆಯಿತು. ಮೂಲ ಪ್ರತಿಯು ಸೂಕ್ಷ್ಮ ಸ್ಥಿತಿಯಲ್ಲಿರುವುದಲ್ಲದೆ, ಅದರ ಮೇಲಿನ ಅಕ್ಷರಗಳು ಬರಿಗಣ್ಣಿಗೆ ಕಾಣದಷ್ಟು ಮಂಕಾಗಿ ಹೋಗಿದ್ದವು. ಸಂಸ್ಕರಣದ ಮೊದಲ ಹೆಜ್ಜೆ, ಪ್ರತಿಯೊಂದು ತಾಳೆಗರಿಯ, ನಸುಗೆಂಪು ಬಿಂಬಗಳನ್ನು (infrared image) ವಿವಿಧ ತರಂಗಾಂತರಗಳಲ್ಲಿ ತೆಗೆಯುವುದು. ಈ ನಸುಗೆಂಪು ಬಿಂಬಗಳಲ್ಲಿ ಕಣ್ಣಿಗೆ ಕಾಣದಿರುವ ಗೆರೆಗಳೂ ಗೋಚರವಾಗುತ್ತವೆ. ನಂತರದ ಹೆಜ್ಜೆ ಈ ಬಿಂಬಗಳನ್ನು 'ಹೊಲಿದು' ಒಂದೇ ಬಿಂಬವಾಗಿ ಪರಿವರ್ತಿಸುವುದು. ಮುಂದಿನ ಹೆಜ್ಜೆ, ಬಿಂಬವರ್ಧಕ ವಿಧಾನಗಳಿಂದ ಅವುಗಳಲ್ಲಿನ ಮಾಲಿನ್ಯವನ್ನು ತೆಗೆಯುವುದು. ತದನಂತರ ಅದನ್ನು ದ್ವಿಮಾನಕ್ಕೆ ಪರಿವರ್ತಿಸಿ (binarization) ಕರಿ-ಬಿಳಿ ಬಿಂಬವಾಗಿಸುವುದು. ಈ ಬಿಂಬವನ್ನು ಸಿಲಿಕಾನ್ ವೇಫರ್ ಮೇಲೆ ಎರಕ ಹುಯ್ಯುತ್ತಾರೆ. ಆರಿಂಚು ವ್ಯಾಸವುಳ್ಳ ಸಿಲಿಕಾನ್ ತಟ್ಟೆಯ ಮೇಲೆ ಎರಡು ಸಾವಿರ ಬಿಂಬಗಳನ್ನು ಮುದ್ರಿಸಬಹುದು. ಅಂದರೆ, ಇಡೀ ಗ್ರಂಥ ಒಂದೇ ತಟ್ಟೆಯ ಮೇಲೆ ಮುದ್ರಿತವಾಗುತ್ತದೆ. ಈ ರೀತಿ ಸಂಸ್ಕಾರಗೊಂಡ ತಟ್ಟೆಗಳು ಅಕ್ಷರಶಃ ಅವಿನಾಶಿ. ಗಾಳಿ, ಬೆಳಕು, ತೇವ, ಉಷ್ಣತೆಗಳಿಂದ ಇವು ನಾಶವಾಗಲಾರವು. ಬೆಂಕಿಯಲ್ಲಿ ಬಿದ್ದರೂ, ಪ್ಲಾಸ್ಟಿಕ್ ಕೇಸಿಂಗ್ ಕರಗಿಹೋಗಬಹುದೇ ಹೊರತು, ಸಿಲಿಕಾನ್ ವೇಫರ್ ಹಾಳಾಗುವುದಿಲ್ಲ, ಎನ್ನುತ್ತಾರೆ ಮುಕುಂದ್. ಈ ಸಾಧ್ಯತೆಯನ್ನು ಕಂಡುಕೊಂಡ ತಕ್ಷಣ ಮುಕುಂದ್ ಅವರ ಮನಸ್ಸು, ಪುರಾತನ ಗ್ರಂಥಗಳನ್ನು ಸಾಮಾನ್ಯ ಅಭ್ಯಾಸಿಗಳಿಗೆ ಸುಲಭವಾಗಿ ಸಿಗುವ ಯೋಜನೆಯೊಂದನ್ನು ರೂಪಿಸಿತು. ಈ ತಟ್ಟೆಗಳನ್ನು ನಿಮ್ಮ ಕಂಪ್ಯೂಟರ್‌ಗೆ ಲಗತ್ತಿಸಿ, ಪುಟಗಳನ್ನು ಒಂದೊದಾಗಿ ಸ್ಕ್ರೀನ್ ಮೇಲೆ ಮೂಡಿಸುವ ತಂತ್ರಾಂಶವನ್ನೂ ಮುಕುಂದ್ ಮತ್ತು ಅವರ ಸಹೋದ್ಯೋಗಿಗಳು ಸಿದ್ಧಪಡಿಸಿದ್ದಾರೆ. ಈ ತಂತ್ರಜ್ಞಾನವನ್ನು ಉಪಯೋಗಿಸಿ ಗ್ರಂಥಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ, ಪ್ರೊಫೆಸರ್‌ಗಿರಿಯನ್ನು ತೊರೆದು, ಮುಕುಂದ್ ಈಗ ನ್ಯಾನೋಆರ್ಕ್ ಎಂಬ ಕಂಪನಿಯನ್ನು ಹುಟ್ಟು ಹಾಕಿದ್ದಾರೆ (www.nanoarkcorp.com). ಈ ಕಂಪನಿಯ ಮೂಲಕ ಬೇರೆ ಬೇರೆ ಪ್ರಾಚೀನ ಗ್ರಂಥಗಳನ್ನು ಹೊರತರುವ ಯೋಜನೆ ಇದೆ.

ನೂರಾರು ಪುಟಗಳನ್ನು ಒಂದೇ ಪ್ಲಾಸ್ಟಿಕ್ ಷೀಟ್ ಮೇಲೆ ಮುದ್ರಿಸುವ, ಮೈಕ್ರೋಫಿಷ್ ಮತ್ತು ಮೈಕ್ರೊಫಿಲ್ಮ್ ಎನ್ನುವ ತಂತ್ರಜ್ಞಾನ ಕೆಲವಾರು ದಶಕಗಳಿಂದ ಲಭ್ಯವಿದೆ. ಲೈಬ್ರರಿಗಳಲ್ಲಿ ನೀವು ಮೈಕ್ರೋಫಿಲ್ಮ್ ರೀಡರುಗಳನ್ನೂ ನೋಡಿರಬಹುದು. ಈ ಸಾಮ್ಯದಿಂದ ಮುಕುಂದ್ ಅವರು ತಮ್ಮ ಹೊಸ ತಂತ್ರಜ್ಞಾನಕ್ಕೆ "ವೇಫರ್ ಫಿಷ್" ಎಂದು ಹೆಸರಿಸಿದ್ದಾರೆ. ಆದರೆ, ಇದು ಅತ್ಯಾಧುನಿಕ ತಂತ್ರಜ್ಞಾನ. ಒಂದು ಮೈಕ್ರೊಫಿಷ್‌ನಲ್ಲಿ ಸುಮಾರು 64 ಪುಟಗಳನ್ನು ಅಳವಡಿಸಬಹುದು. ವೇಫರ್‌ಫಿಷ್‌ನಲ್ಲಿ ಸಾವಿರಗಟ್ಟಲೆ ಇಮೇಜ್‌ಗಳನ್ನು ಮುದ್ರಿಸಬಹುದು. ಮೈಕ್ರೋಫಿಷ್ ತೇವಾಂಶದಿಂದ ಹಾಳಾಗಬಹುದು, ಬೆಂಕಿಯಲ್ಲಿ ಸುಟ್ಟು ಹೋಗಬಹುದು. ಆದರೆ ವೇಫರ್ ಫಿಷ್ ಅವಿನಾಶಿ. ಸಾಮಾನ್ಯ ಉಪಯೋಗದಲ್ಲಿ ಐನೂರು ವರ್ಷ ಕಾಲ ಬಾಳಬಲ್ಲದು ಎನ್ನುತ್ತಾರೆ ಮುಕುಂದ್.

ಬೆಂಗಳೂರಿನಲ್ಲಿ ಸಾವಿರಾರು ಹೈಟೆಕ್ ಕಂಪನಿಗಳಿವೆ ಎಂಬುದು ಸರ್ವವಿದಿತ. ಅವುಗಳಲ್ಲಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಕಂಪನಿಗಳೆಷ್ಟು? ನನಗಂತೂ ಗೊತ್ತಿಲ್ಲ. ಬೆರಳೆಣಿಕೆಯಷ್ಟೇ ಎಂದು ನನ್ನ ಅನುಮಾನ. ಅಮೇರಿಕದ ರಾಚೆಸ್ಟರ್‌ನಲ್ಲಿ ಅಂಥದೊಂದು ಕಂಪನಿ ಇದೆ ಎಂದರೆ ನಂಬುತ್ತೀರಾ? ಈ ಹೆಗ್ಗಳಿಕೆಗೆ ಪಾತ್ರವಾಗಿರುವುದು ನ್ಯಾನೋ ಆರ್ಕ್ ಕಂಪನಿ. ಸಧ್ಯಕ್ಕೆ, ಈ ಕಂಪನಿಯಲ್ಲಿ ಆರು ಉದ್ಯೋಗಿಗಳಿದ್ದಾರೆ. ಅದರಲ್ಲಿ ನಾಲ್ಕು ಕನ್ನಡಿಗರು. ನ್ಯಾನೋ ಆರ್ಕ್ ಸಂಸ್ಥೆಯು ಹೆರಿಟೇಜ್ ಸೀರೀಸ್ ಎಂಬ ಮಾಲೆಯೊಂದನ್ನು ಆರಂಭಿಸಿದೆ. ಈ ಮಾಲೆಯ ಮೊದಲ ಪುಷ್ಪ ಸರ್ವಮೂಲ ಗ್ರಂಥ. ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ, ಕ್ರಿ.ಶ. 1492ರಲ್ಲಿ ಮರದ ತೊಗಟೆಯಮೇಲೆ ಬರೆಯಲಾದ ಭಗವದ್ಗೀತೆಯ ಪ್ರತಿಯೊಂದಿದೆ. ಅದು ನೇವಾರಿ ಲಿಪಿಯಲ್ಲಿದೆ. ಆ ವಿಶ್ವವಿದ್ಯಾಲಯದ ಸಹಯೋಗದಿಂದ, ಈಗ ಭಗವದ್ಗೀತೆಯು ಹೆರಿಟೇಜ್ ಮಾಲೆಯ ಎರಡನೆಯ ಕುಸುಮವಾಗಿ ಹೊರಬಂದಿದೆ. ಒಂದಿಲ್ಲೊಂದು ದಿನ, ಪ್ರಾಚೀನ ಕನ್ನಡ ಗ್ರಂಥಗಳು ಕೂಡ ಹೆರಿಟೇಜ್ ಮಾಲೆಯಲ್ಲಿ ಬರುತ್ತವೆಂದು ಹಾರೈಸೋಣವೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ