ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಮ್ಫಿಸ್ಸ್ ಪಟ್ಟಣದ ಕನ್ನಡ ತರಂಗಗಳು

By Staff
|
Google Oneindia Kannada News

pushpa sanjay
*ಪುಷ್ಪ ಸಂಜಯ್, ಆರ್ಲಿಂಗ್ ಟನ್, ಮೆಮ್ ಫಿಸ್

ಮನೆಗೆ ಪಂಚಾಂಗ, ಮರಕ್ಕೆ ಬೇರು. ಹಾಗೆಯೇ ಮನಸ್ಸು ಕೂಡ. ಮೂಲದೆಡೆಗೆ ಅದು ಸದಾ ಮಿಡಿಯುತ್ತಲೇ ಇರುವುದು ತುಂಬಸಹಜ. ಇಂತಹ ಪ್ರಕ್ರಿಯೆಯಿಂದಲೇ ಮನುಷ್ಯ ಎಲ್ಲೇ ಇದ್ದರೂ ತನ್ನ ಭಾಷೆ ಸಂಸ್ಕೃತಿಯೆಡೆಗೆ ತುಡಿಯುತ್ತಲೇ ಇರುತ್ತಾನೆ; ಇದ್ದಲ್ಲಿಯೇ ಅದನ್ನು ಬಳಸಲು ಮತ್ತು ಪೋಷಿಸಲು ಕಾತರಿಸುತ್ತಾ ಇರುತ್ತಾನೆ. ಈ ತುಡಿತವೇ ಅಮೆರಿಕಾದ ಮೆಂಫಿಸ್ ನಗರದಲ್ಲಿ ನೆಲೆಸಿರುವ ಕನ್ನಡಿಗರು ಒಂದಾಗಲು ಪ್ರೇರೇಪಿಸಿತು. 'ತರಂಗ ಕನ್ನಡ ಸಂಘ' ಉದಯಿಸಲು ಕಾರಣವಾಯಿತು. ಕನಿಷ್ಠ ಕಳೆದ ಎಂಟು ವರ್ಷಗಳಿಂದ ಈ ರಾಜ್ಯದಲ್ಲಿ ಕನ್ನಡದ ಸಂಸ್ಕೃತಿ, ಭಾಷೆಯನ್ನು ಸಂಭ್ರಮಿಸಲು ಒಂದು ವೇದಿಕೆಯನ್ನು ಒದಗಿಸಿತು.

ಈ ವರ್ಷದ ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮೆಂಫಿಸ್ ನಗರದ ಸೈಕಾಲಜಿ ಆಡಿಟೋರಿಯಮ್ ನಲ್ಲಿ ನವಂಬರ್ 22ರಂದು ವಿಜೃಂಭಣೆಯಿಂದ ನಡೆಯಿತು. ತರಂಗಕ್ಕೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಆಚರಣೆ ಯಾವಾಗಲು ವಿಶಿಷ್ಟವಾದ ಸಂದರ್ಭ. ದೀಪಾವಳಿ ನಮ್ಮ ಸಂಸ್ಕೃತಿಯ ಪ್ರತೀಕ. ಇದರ ಹಿನ್ನೆಲೆಯ ಕಥೆ ಏನೇ ಇದ್ದರೂ ಬೆಳಕಿನೆಡೆಗೆ ಮುಖ ಮಾಡುವ ಈ ಹಬ್ಬ ಇಡೀ ಮನು ಕುಲಕ್ಕೇ ಆದರ್ಶ.

ಸಂಜನ ಹಾಗು ಪ್ರಕೃತಿ ತಮ್ಮ ಮುದ್ದಾದ ಕನ್ನಡದಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸ್ನಿಗ್ಧ ಕೊಳಲಿನಲ್ಲಿ ಅಮೆರಿಕಾದ ಹಾಗೂ ಭಾರತದ ರಾಷ್ಟ್ರ ಗೀತೆಗಳನ್ನು ಸುಶ್ರಾವ್ಯವಾಗಿ ನುಡಿಸಿದಳು.

ಸಂಘದ ಅಧ್ಯಕ್ಷರಾದ ವೆಂಕಟೇಶ್ ಹೊಸ್ಸೂರ್ ರವರು ತರಂಗದ ಕಾರ್ಯಕರ್ತರ ಪರಿಚಯ ಮಾಡಿಸಿಕೊಟ್ಟರು. ಅದಾದ ನಂತರ ತರಂಗದ ಉಪಾಧ್ಯಕ್ಷೆ ಪುಷ್ಪ ಸಂಜಯ್ ಈ ವರುಷದ ತರಂಗದ ಕಾರ್ಯಕ್ರಮಗಳ ಸಿಂಹಾವಲೋಕನ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಒಮ್ಮೆಗೆ ಶುರುವಾದವು. ವೈವಿಧ್ಯಮಯ ಕಾರ್ಯಕ್ರಮಗಳು ಈ ವರುಷದ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ವೈಶಿಷ್ಟ್ಯವಾಗಿತ್ತು. ಮೊದಲಿಗೆ ಸಂಪ್ರದಾಯ ಹಾಡುಗಳು. ಇದರ ವಿಶೇಷವೆಂದರೆ ಲಕ್ಷ್ಮಿಯನ್ನು ಸ್ವಾಗತಿಸಿ, ಪೂಜಿಸಿ, ಆರತಿಯನ್ನು ಬೆಳಗಿ, ವರವನ್ನು ಕೇಳುವವರೆಗೂ ಎಲ್ಲವೂ ಈ ಹಾಡುಗಳಲ್ಲಿ ಸೇರಿದ್ದವು.

ಒಂದಕ್ಕಿಂತ ಒಂದನ್ನು ಮೀರಿಸುವಂಥ ನೃತ್ಯಗಳು ಪುಟಾಣಿ ಮಕ್ಕಳಿಂದ ಹಿಡಿದು ದೊಡ್ದ ಮಕ್ಕಳ ತನಕ. ಕೋಲಾಟ, ಸಿನೆಮಾ ಹಾಡಿನ ನೃತ್ಯಗಳು ಎಲ್ಲರ ಕಣ್ಮನಗಳನ್ನು ಸೆಳೆಯಿತು. ಇನ್ನು ಎಲ್ಲರೂ ಈ ನೃತ್ಯಗಳ ಗುಂಗಿನಲ್ಲಿರುವಾಗಲೇ, ಡಾ. ಶಿವರಾಮ್ ರವರು ನಗೆ ಹನಿಗಳನ್ನು ಪ್ರಸ್ತುತಪಡಿಸಿದರು. ಅದರ ನಂತರ ಕೊನೆಯ ಕಾರ್ಯಕ್ರಮ ಎ.ಎಸ್. ಮೂರ್ತಿಯವರ "ಮೂಕಿ-ಟಾಕಿ" ನಾಟಕ ಪ್ರದರ್ಶನ. ಇದೇ ಮೊದಲ ಬಾರಿಗೆ ಒಂದು ಪೂರ್ಣ ಪ್ರಮಾಣದ ನಾಟಕದ ಪ್ರಯತ್ನ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆ ಗಳಿಸಿತು. ವಂದನಾರ್ಪಣೆಯನ್ನು ಸಾಂಸ್ಕ್ರತಿಕ ಕಾರ್ಯದರ್ಶಿ ದಿನೇಶ್ ಉಡುಪಿ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಊಟದ ವ್ಯವಸ್ಥೆಯು ಇತ್ತು.

ಪಯಣದ ಸುಖ ಇಮ್ಮಡಿಯಾಗುವುದು ನಾವು ನಡೆದು ಬಂದ ದಾರಿಯನ್ನು ಮತ್ತೊಮ್ಮೆ ಅವಲೋಕಿಸಿದಾಗ. ಅಗ ನಮಗೆ ಅರಿವಾಗುವುದು ಇದರಲ್ಲಿ ಎಷ್ಟೊಂದು ಸಂತೋಷದ ಕ್ಷಣಗಳಿವೆ, ಸಾರ್ಥಕತೆಯ ಭಾವವಿದೆ, ಎಷ್ಟೊಂದು ಜನರ ನಿಸ್ವಾರ್ಥ ಸೇವೆಯ ಕೊಡುಗೆ ಇದೆ ಎಂದು ಅರ್ಥವಾಗುವುದು. ಈ ವರ್ಷ ಅಧಿಕ ಸಂಖ್ಯೆಯಲ್ಲಿ ತರಂಗದ ಸದಸ್ಯರು ಭಾಗವಹಿಸಿ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣರಾದರು.

ನಮ್ಮ ವೆಬ್ ಸೈಟ್ ಗಾಗಿ ಬಹಳ ಶ್ರಮಿಸಿದವರು ಸುಭಾಷ್ ಚೌಡಣ್ಣವರ್ ರವರು. ಇಲ್ಲಿ ತರಂಗದ ಎಲ್ಲ ಕಾರ್ಯಕ್ರಮಗಳ ವಿವರವನ್ನು ಪ್ರಕಟಿಸುವುದರ ಜೊತೆಗೆ ಸದಸ್ಯರ ಪ್ರತಿಭೆಯನ್ನು ಬೆಳಕಿಗೆ ತರಲು "ಕಲಾ ತರಂಗ" ಅಂಕಣವನ್ನುವನ್ನೂ ಹೊಂದಿದ್ದೇವೆ. ನಮ್ಮ ಅಂತರ್ಜಾಲ ತಾಣವನ್ನು ತಾವುಗಳು ನೋಡಿ. ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿರಿ. ಇಲ್ಲಿನ ಕನ್ನಡಿಗರ ಸಂತೋಷವನ್ನು ದ್ವಿಗುಣಗೊಳಿಸಿ. ನಮಸ್ಕಾರ. (www.tarangamemphis.org )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X