ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಲೇಖಕ ಲೇಖಕಿಯರಿಗೆ ಪತ್ರ

By Staff
|
Google Oneindia Kannada News

ವಿಶಾಲ ಅಮೆರಿಕ ವಾಸಿ ಕನ್ನಡ ಸಾಹಿತ್ಯ ಪ್ರೇಮಿಗಳ ಚಾವಡಿ 'ಕನ್ನಡ ಸಾಹಿತ್ಯ ರಂಗ'ದ ಒಂದು ಪ್ರಕಟಣೆಯನ್ನು ನೀವಿಲ್ಲಿ ಓದುತ್ತಿದ್ದೀರಿ. ಈ ಲಾಭರಹಿತ ಸಂಸ್ಥೆಯು ಈ ಸಲ ಪೂರ್ವ ಕರಾವಳಿಯ ಮೇರಿಲ್ಯಾಂಡಿನಲ್ಲಿ 2009ರ ಮೇ ಮಾಹೆಯಲ್ಲಿ ಏರ್ಪಡಿಸಿರುವ ನಾಲಕ್ಕನೇ ಕನ್ನಡ ಸಾಹಿತ್ಯ ಅಧಿವೇಶನದ ಜ್ಞಾಪಕಾರ್ಥ ಪುಸ್ತಕವೊಂದನ್ನು ಹೊರತರುತ್ತಿದೆ. ಈ ಸಂಪುಟಕ್ಕೆ ನಿಮ್ಮ ಲೇಖನ ವಿಮರ್ಶೆಗಳನ್ನು ಕಳಿಸಬಹುದಾಗಿದೆ. ಕನ್ನಡದ ಓದು ಮತ್ತು ಬರವಣಿಗೆಯಲ್ಲಿ ಆಸಕ್ತಿಯಿರುವ ಕನ್ನಡಸಾಹಿತ್ಯಾಭಿಮಾನಿಗಳು ಈ ಕೆಳಗೆ ನೀಡಿರುವ ವಿವರಗಳನ್ನು ಗಮನಿಸಬೇಕು ಮತ್ತು ಬುಕ್ ಮಾರ್ಕ್ ಮಾಡಿಟ್ಟುಕೊಳ್ಳಬೇಕು - ಸಂಪಾದಕ

ಭಾರತದಾಚೆ ನೆಲೆಸಿರುವ ಕನ್ನಡ ಸಾಹಿತ್ಯೋತ್ಸಾಹಿಗಳೇ ದಯವಿಟ್ಟು ಗಮನಿಸಿ. ನಿಮ್ಮ ಪ್ರತಿಭಾಪ್ರದರ್ಶನಕ್ಕೆ ಇದೋ ಮತ್ತೊಂದು ಸುವರ್ಣಾವಕಾಶ! ಈಗಾಗಲೇ ನಾವು ಪ್ರಕಟಿಸಿರುವಂತೆ, ಕನ್ನಡ ಸಾಹಿತ್ಯ ರಂಗದ ಮುಂದಿನ ಅಧಿವೇಶನ 2009ರ ಮೇ ತಿಂಗಳಲ್ಲಿ ಅಮೇರಿಕದ ರಾಜಧಾನಿ ಪ್ರದೇಶದಲ್ಲಿ ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆಯಲಿದೆ. ಹಿಂದಿನ ಅಧಿವೇಶನಗಳಲ್ಲಿ ಮಾಡಿದಂತೆ, ಈ ಬಾರಿಯೂ ಬಹುಮಟ್ಟಿಗೆ ಅಮೇರಿಕದ ಕನ್ನಡಿಗರೇ ಬರೆದ ಲೇಖನಗಳನ್ನೊಳಗೊಂಡ ಕನ್ನಡ ಪುಸ್ತಕವೊಂದನ್ನು ಹೊರತರುವ ಯೋಜನೆ ಹಾಕಿಕೊಂಡಿದ್ದೇವೆ.

ಈ ಬಾರಿ ನಾವು ಈಚಿನ ಕನ್ನಡ ಕಾದಂಬರಿಗಳನ್ನು ಕುರಿತ ಒಂದು ಲೇಖನ ಸಂಕಲನವನ್ನು ಹೊರತರುತ್ತಿದ್ದೇವೆ. ಅಂತೆಯೇ ಈ ಬಾರಿಯ ಪ್ರಕಟನೆಯ ಸಂಪಾದಕತ್ವವನ್ನು ಮೈ ಶ್ರೀ ನಟರಾಜ ಮತ್ತು ಗುರುಪ್ರಸಾದ್ ಕಾಗಿನೆಲೆ ಅವರು ವಹಿಸಿಕೊಂಡಿದ್ದಾರೆ. ಇವರಿಬ್ಬರ ಸಹಾಯಕ್ಕೆ ಕನ್ನಡ ಸಾಹಿತ್ಯರಂಗದ ಸಂಪಾದಕ ಮಂಡಲಿಯ ಮಾನ್ಯ ಸದಸ್ಯರು -ನಾಗ ಐತಾಳ, ಎಚ್ ವೈ ರಾಜಗೋಪಾಲ್, ನಳಿನಿಮೈಯ ಮತ್ತು ಶಶಿಕಲಾ ಚಂದ್ರಶೇಖರ್ ಅವರುಗಳು ಟೊಂಕಕಟ್ಟಿ ನಿಂತಿದ್ದಾರೆ.

ಈ ಕಳೆದ ಸುಮಾರು ಕಾಲು ಶತಮಾನದಲ್ಲಿ ಕನ್ನಡ ಕಾದಂಬರಿ ಲೋಕ ಬಹಳ ಮಟ್ಟಿಗೆ ಬೆಳೆದಿದೆ. ಹೊಸ ರೀತಿಯ ಕಾದಂಬರಿಗಳು ಹೊರಬಂದಿವೆ. ಇವನ್ನು ಕುರಿತು ಇಲ್ಲಿ ನೆಲೆಸಿರುವ ಕನ್ನಡಿಗರಿಗೆ ಏನೆನ್ನಿಸುತ್ತದೆ? ಅವುಗಳ ಬಗ್ಗೆ ನಮ್ಮ ಅನಿಸಿಕೆ ಆಲೋಚನೆಗಳನ್ನು ಗುರುತಿಸುವುದೇ ಈ ನಮ್ಮ ಪ್ರಯತ್ನದ ಮುಖ್ಯ ಉದ್ದೇಶ. ಈ 'ಅನಿಸಿಕೆ'ಗಳನ್ನು ನೀವು ಹಲವು ರೀತಿಯಲ್ಲಿ ತೋರ್ಪಡಿಸಬಹುದು. ಕಾದಂಬರಿಗಳನ್ನು ಕುರಿತು ಆಳವಾಗಿ ಚಿಂತಿಸಿ, ವಿಶ್ಲೇಷಣೆ ಮಾಡಿ ಒಂದು ವಿಮರ್ಶೆ ಬರೆಯಬಹುದು. ಎಷ್ಟೇ ಆದರೂ, ಭಾರತದ ಹೊರಗೆ ನೆಲೆಸಿರುವ ಕನ್ನಡ ಬರಹಗಾರರರಿಗೆ ತಾವು ಬಿಟ್ಟ ತವರಿನ ಜೀವನಕ್ರಮದ ಜೊತೆಗೆ ತಾವು ಸೇರಿದ ದೇಶದ ಜೀವನಕ್ರಮದ ಪರಿಚಯವೂ ಇರುವುದರಿಂದ, ಹಿಂದೆಂದೋ ಓದಿದ ಕಾದಂಬರಿಯೊಂದನ್ನು ಮತ್ತೆ ಓದಿದಾಗ ಅಥವಾ ಮೊದಲಬಾರಿಗೆ ಓದಿದಾಗಲೂ ಆಗುವ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ.

ಈ ರೀತಿ, ಎರಡು ವಿಭಿನ್ನ ಸಂಸ್ಕೃತಿಗಳ ನಿಕಟ ಪರಿಚಯದ ಅನುಕೂಲವನ್ನು ಉಪಯೋಗಿಸಿಕೊಂಡರೆ ಉತ್ತಮವಾದ ವಿಮರ್ಶೆ ಬರೆಯುವುದು ಸಾಧ್ಯವಾಗಬಹುದು. ಇಲ್ಲವೆ, ನೀವು ಓದಿದ ಕಾದಂಬರಿಗಳನ್ನು ಸೃಜನಾತ್ಮಕವಾಗಿ ಬೇರೆ ಬೇರೆ ರೀತಿಯಲ್ಲಿ ನೋಡಬಹುದು. ಉದಾಹರಣೆಗೆ, ಈ ಕಾದಂಬರಿಗಳಲ್ಲಿನ ಪಾತ್ರಗಳು ನಿಮ್ಮನ್ನು ಕಾಡಿವೆಯೇ? ಯಾವುದೋ ಕಾದಂಬರಿಯಲ್ಲಿನ ಪಾತ್ರಗಳ ಜೊತೆಗೆ ಮುಖಾಮುಖಿಯಾಗಲು ನೀವು ಹಾತೊರೆಯುತ್ತಿರುವಿರಾ? ಕತೆಯಲ್ಲಿದ್ದಾತ/ಆಕೆ ಹೊರಬಂದು ನಿಮ್ಮೊಡನೆ ಸಂವಾದಿಸಿದರೆ ನಿಮಗೆ ಹೇಗನ್ನಿಸಬಹುದು? ಕಾದಂಬರಿಯ ಲೇಖಕ/ಲೇಖಕಿಗೆ ಒಂದು ಊಹಾಪತ್ರ ಬರೆಯಲು ನಿಮಗೆ ಮನಸ್ಸಾಗುತ್ತಿದೆಯೇ? ಅಥವಾ ಕಾದಂಬರಿಯ ಬಗ್ಗೆ ನಿಮ್ಮ ಗೆಳೆಯ/ಗೆಳತಿಯೊಂದಿಗೆ ಪಟ್ಟಾಂಗ ಹೊಡೆಯಬೇಕೆನ್ನಿಸುತ್ತಿದೆಯೇ? ಯಾವುದಾದರೂ ಕಾದಂಬರಿ ಚಲನಚಿತ್ರವಾಗಬಲ್ಲದೇ? ಹಾಗಿದ್ದಲ್ಲಿ, ಚಿತ್ರಕತೆಯಲ್ಲಿ ಏನೇನು ಮಾರ್ಪಾಟು ಮಾಡಿಕೊಳ್ಳಬಹುದು? ನಿಮಗೆ ಕಾದಂಬರಿಯ ಕಥನಕ್ರಮ, ವಿನ್ಯಾಸ, ಭಾಷೆ ಇಷ್ಟವಾಯಿತೇ, ಆಗಲಿಲ್ಲವೇ? ಈ ಮೊದಲಾದ ವಿಷಯಗಳನ್ನು ನಿಮ್ಮದೇ ಆದ ಶೈಲಿಯಲ್ಲಿ ವ್ಯಕ್ತಪಡಿಸಲು ಅವಕಾಶವಿದೆ.

ಕನ್ನಡ ಕಾದಂಬರೀ ಪ್ರಪಂಚ ಗಾತ್ರದಲ್ಲಿ ಗಮನಾರ್ಹವಾದದ್ದು. ಕಳೆದ ಇಪ್ಪತ್ತು ಮುವ್ವತ್ತು ವರ್ಷಗಳಲ್ಲಿ ಪ್ರಕಟವಾದ ಎಲ್ಲಾ ಕಾದಂಬರಿಗಳನ್ನೂ ಗಮನಿಸುವುದು ಕಷ್ಟದ ಕೆಲಸ ಎಂಬುದನ್ನು ಮನಗಂಡು, ಕೆಲವು ಕಾದಂಬರಿಗಳನ್ನು ಮಾತ್ರ ನಮ್ಮೀ ಪ್ರಯೋಗಕ್ಕೆ ಒಳಪಡಿಸಬಹುದು ಎಂಬುದನ್ನು ಒಪ್ಪಿಕೊಂಡೇ ನಮ್ಮ ಯೋಜನೆಯನ್ನು ತಯಾರಿಸಿದ್ದೇವೆ. ಇತ್ತೀಚಿನ ಕಾದಂಬರಿಗಳ ಆಳವಾದ ಪರಿಚಯವುಳ್ಳ ಸಲಹೆಗಾರ ಸಹಾಯ ಪಡೆದು ಸಂಪಾದಕ ಸಮಿತಿ ಒಂದು ಪಟ್ಟಿಯನ್ನು ತಯಾರುಮಾಡಿದೆ. ಆದರೆ ಈ ಪಟ್ಟಿ ಬರಹಗಾರರು ತಮ್ಮ ಲೇಖನದ ವಸ್ತುವನ್ನು ಆಯ್ದುಕೊಳ್ಳುವುದಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಮಾಡಿದ್ದಷ್ಟೆ.

ಮೇ 2009 ರ ಸಾಹಿತ್ಯೋತ್ಸವದಲ್ಲಿ ಲೋಕಾರ್ಪಣೆಗೊಳ್ಳುವ ಕನ್ನಡ ಸಾಹಿತ್ಯ ರಂಗದ ಈ ಪ್ರಕಟಣೆಯಲ್ಲಿ ಈ ಲೇಖನದ ಕೆಳಗೆ ಪಟ್ಟಿಮಾಡಿರುವ ಕಾದಂಬರಿಗಳ ಬಗ್ಗೆ (ಅಥವಾ, ಸಂಪಾದಕರ ಒಪ್ಪಿಗೆ ಪಡೆದು ಮತ್ಯಾವುದಾದರೂ ಇತ್ತೀಚಿನ ಕನ್ನಡದ ಗಮನಾರ್ಹ ಕಾದಂಬರಿಯ ಬಗ್ಗೆ) ಸೃಜನಾತ್ಮಕವಾಗಿ ಏನನ್ನಾದರೂ ಬರೆಯಬಹುದು. ಸುಮಾರು ಹದಿನೈದು-ಇಪ್ಪತ್ತು ಉತ್ತಮ ಬರಹಗಳನ್ನು ಸಂಪಾದಕ ಮಂಡಲಿ ಆಯ್ದುಕೊಳ್ಳುತ್ತದೆ. ಒಬ್ಬ ಲೇಖಕ/ಲೇಖಕಿಯಿಂದ ಒಂದು, ಹೆಚ್ಚೆಂದರೆ ಎರಡು ಲೇಖನಗಳನ್ನು ಸ್ವೀಕರಿಸಲು ಅವಕಾಶವಿದೆ. ಲೇಖನದ ಉದ್ದ ಹತ್ತರಿಂದ ಹದಿನೈದು ಪುಟಗಳ ಮಿತಿಯಲ್ಲಿರಲಿ (ಸಾಲುಗಳ ನಡುವೆ ಒಂದು ಅಂತರ ಮಾತ್ರ -'ಸಿಂಗಲ್ ಸ್ಪೇಸಿಂಗ್" ಮತ್ತು ಫಾಂಟ್ ಸೈಜ್ 14). ಒಂದೇ ಕಾದಂಬರಿಯ ಬಗ್ಗೆ ಬರೆಯಬೇಕೆಂದಿಲ್ಲ, ಎರಡು ಕಾದಂಬರಿಗಳ ತುಲನಾತ್ಮಕ ಬರಹವೂ ಆಗಬಹುದು. ಒಂದು ಮುಖ್ಯ ಸೂಚನೆಯನ್ನು ದಯವಿಟ್ಟು ಗಮನಿಸಿ: ನಿಮ್ಮ ಆಯ್ಕೆ ಯಾವುದು, ನಿಮ್ಮ ಲೇಖನ ಯಾವ ರೀತಿಯದು ಮುಂತಾದ ವಿವರಗಳನ್ನು ಬರವಣಿಗೆಗೆ ಕೈಹಚ್ಚುವ ಮುನ್ನ ಸಂಪಾದಕರೊಂದಿಗೆ ಚರ್ಚಿಸಿ. ಹೆಚ್ಚಿನ ವಿವರಗಳಿಗೆ ಕೆಳಕಂಡವರಲ್ಲಿ ಯಾರನ್ನಾದರೂ ಸಂಪರ್ಕಿಸಬಹುದು.

ಲೇಖನಗಳ ಆಯ್ಕೆಯಲ್ಲಿ ಅಮೇರಿಕದ ಬರಹಗಾರ/ಗಾರ್ತಿಯರಿಗೆ ಮೊದಲ ಅವಕಾಶ, ಭಾರತದ ಹೊರಗಿನ ಇತರ ದೇಶಗಳ ಕನ್ನಡಿಗರಿಗೆ ಎರಡನೆಯ ಅವಕಾಶ. ಭಾರತದಿಂದ ಆಹ್ವಾನಿತ ಬರಹಗಳಿಗೆ ಮಾತ್ರ ಅವಕಾಶ. ನಿಮ್ಮ ಬಳಿ ಪುಸ್ತಕ ಇಲ್ಲದಿದ್ದಲ್ಲಿ ಕೂಡಲೆ ನಮ್ಮನ್ನು ಸಂಪರ್ಕಿಸಿ. ಅದನ್ನು ನಿಮಗೆ ತಲುಪಿಸಲು ಯತ್ನಿಸುತ್ತೇವೆ. ಲೇಖನದ ಮೊದಲ ಕರಡು ಪ್ರತಿ 2009ರ ಜನವರಿಯ ಕೊನೆಯಲ್ಲಿ ನಮ್ಮ ಕೈಸೇರಬೇಕು. ಸಂಪಾದಕ ಮಂಡಲಿಯ ಸಲಹೆಗಳನ್ನು ಗಮನಿಸಿ ತಿದ್ದಿದ ಕರಡು ಫೆಬ್ರುವರಿಯ ಕೊನೆಯಲ್ಲಿ ನಮ್ಮ ಕೈಸೇರಲೇ ಬೇಕು. ಲೇಖನಗಳನ್ನು ಬರೆಯಲು 'ಬರಹ' ಉಪಯೋಗಿಸಿ, ವಿ-ಅಂಚೆಯ ಮೂಲಕ ರವಾನಿಸಿ ಎಂದು ಬೇರೆ ಹೇಳಬೇಕಿಲ್ಲವಷ್ಟೆ?

ಲೇಖನದ ಹಕ್ಕು ನಿಮ್ಮದೇ ಆಗಿರುತ್ತದೆ. ಆದರೆ ನಿಮ್ಮ ಲೇಖನವನ್ನು ಬೇರೆಲ್ಲಿಯಾದರೂ ಪ್ರಕಟಿಸುವ ಇಚ್ಛೆಯಿದ್ದಲ್ಲಿ ಪ್ರಕಟಣೆಗೆ ಮುನ್ನ ಸಂಪಾದಕರೊಂದಿಗೆ ವಿಚಾರವಿನಿಮಯ ಮಾಡಿಕೊಳ್ಳಬೇಕಾಗಿ ವಿನಂತಿ. ಬೇರೆಲ್ಲಾದರೂ ಹಿಂದೆ ಪ್ರಕಟವಾದ ಲೇಖನವಾದರೆ, ಅದರಬಗ್ಗೆ ಪೂರ್ವಭಾವಿಯಾಗಿ ತಿಳಿಸಿ. ಲೇಖನಗಳನ್ನು ಆಯ್ದುಕೊಳ್ಳುವುದರಲ್ಲಿ ಸಂಪಾದಕ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ. ತಮ್ಮ ಸಹಕಾರವಿಲ್ಲದೇ ಇಂಥಾ ಕಷ್ಟದ ಕೆಲಸವನ್ನು ನಾವು ಮಾಡುವುದು ಸಾಧ್ಯವಿಲ್ಲ. ಧನ್ಯವಾದಗಳು.

ಮೊದಲೇ ಹೇಳಿದಂತೆ, ಕೆಳಗೆ ಕೊಟ್ಟಿರುವ ಪಟ್ಟಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉತ್ಕೃಷ್ಟ ವಿಮರ್ಶಕರೆಂದು ಹೆಸರು ಗಳಿಸಿರುವ ನಮ್ಮ ಸಲಹೆಗಾರರ ಸಹಾಯದಿಂದ ಸಂಪಾದಕ ಸಮಿತಿ ತಯಾರುಮಾಡಿಕೊಂಡದ್ದು. ಸಾಧ್ಯವಾದಮಟ್ಟಿಗೂ ಇದನ್ನು ಮಾರ್ಗದರ್ಶನಕ್ಕೆ ಉಪಯೋಗಿಸಿ. ಮತ್ತಾವುದೋ ಮಹತ್ವದ ಕಾದಂಬರಿ ಇದ್ದರೆ ಅದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಲೇಖಕ/ಕಿಯರಿಗೆ ಇದ್ದೇ ಇದೆ. ಆದರೆ ಆ ಬಗ್ಗೆ ಸಂಪಾದಕರಿಗೆ ಪೂರ್ವ ಸೂಚನೆ ಅಗತ್ಯ.

ಸಂಪಾದಕ ಮಂಡಲಿಯ ಪರವಾಗಿ: ಮೈ.ಶ್ರೀ. ನಟರಾಜ [ [email protected]]; ಗುರುಪ್ರಸಾದ್ ಕಾಗಿನೆಲೆ [ [email protected]]; ಶಶಿಕಲಾ ಚಂದ್ರಶೇಖರ್ [ [email protected] ]; ಎಚ್. ವೈ. ರಾಜಗೋಪಾಲ್ [ [email protected]]

ನಮ್ಮ ಪಟ್ಟಿಯಲ್ಲಿನ ಕಾದಂಬರಿ ಗುಚ್ಛ:
(1) ದಿವ್ಯ:ಅನಂತ ಮೂರ್ತಿ ಯು ಅರ್, ಪ್ರಥಮ ಮುದ್ರಣ, ಅಕ್ಷರ ಪ್ರಕಾಶನ, ಸಾಗರ, 2001.
(2) ತೇರು:ರಾಘವೇಂದ್ರ ಪಾಟೀಲ,ಆನಂದಕಂದ ಪ್ರಕಾಶನ,ಮಲ್ಲಾಡಿಹಳ್ಳಿ, ಪ್ರ.ಮು. 2003,ಲಭ್ಯ ಮುದ್ರಣ 2005.
(3) ಅರಮನೆ : ಕುಂ ವೀರಭದ್ರಪ್ಪ, ಸಪ್ನ ಬುಕ್ ಹೌಸ್, ಪ್ರಥಮ ಮುದ್ರಣ 2005.
(4) ಶಿಖರ ಸೂರ್ಯ: ಚಂದ್ರಶೇಖರ ಕಂಬಾರ, ಅಕ್ಷರ ಪ್ರಕಾಶನ, ಸಾಗರ, ಪ್ರಥಮ ಮುದ್ರಣ 2007, ಲಭ್ಯ ಪ್ರತಿ, ಅಂಕಿತ ಬುಕ್ ಹೌಸ್ 2007.
(5) ಬದುಕು:ಗೀತಾ ನಾಗಭೂಷಣ,ಲೋಹಿಯಾ ಪ್ರಕಾಶನ,ಬಳ್ಳಾರಿ, ಪ್ರಥಮ ಮುದ್ರಣ 2001,2ನೆ ಮುದ್ರಣ 2005.
(6) ಗಾಂಧಿ ಬಂದ:ಎಚ್ ನಾಗವೇಣಿ, ಲೋಹಿಯಾ ಪ್ರಕಾಶನ, ಬಳ್ಳಾರಿ, ಪ್ರಥಮ ಮುದ್ರಣ 1999.
(7) ಹೆಜ್ಜೆ:ವ್ಯಾಸರಾಯ ಬಲ್ಲಾಳ, ಗೀತಾ ಬುಕ್ ಹೌಸ್, ಮೈಸೂರು, 2000.
(8) ಗುರುತು:ವ್ಯಾಸರಾಯ ಬಲ್ಲಾಳ, (ಪ್ರಕಾಶನ??), 2007.
(9) ಪುರುಷೋತ್ತಮ:ಚಿತ್ತಾಲ, ಗೀತಾ ಬುಕ್ ಹೌಸ್, ಮೈಸೂರು, ಪ್ರಥಮ ಮುದ್ರಣ 1991.
(10)ಓಂ ಣಮೋ:ಶಾಂತಿನಾಥ ದೇಸಾಯಿ, ಸಪ್ನ ಬುಕ್ ಹೌಸ್, ಪ್ರಥಮ ಮುದ್ರಣ 1998, ಇತ್ತೀಚಿನ ಮುದ್ರಣ 2002.
(11) ಕುಸುಮ ಬಾಲೆ:ದೇವನೂರು ಮಹಾದೇವ, (ಪ್ರಕಾಶನ? ವರ್ಷ?).
(12) ಎನ್ನ ಭವದ ಕೇಡು:ಸುರೇಂದ್ರನಾಥ, ಛಂದ ಪುಸ್ತಕ ಬೆಂಗಳೂರು, ಪ್ರಥಮ ಮುದ್ರಣ 2007.
(13) ತೊಟ್ಟಿಲು:ಮೊಗಳ್ಳಿ ಗಣೇಶ, ಅಂಕಿತ ಬುಕ್ ಹೌಸ್, ಬೆಂಗಳೂರು, ಪ್ರಥಮ ಮುದ್ರಣ 2007.
(14) ಮಂದ್ರ:ಭೈರಪ್ಪ ಎಸ್ ಎಲ್, ಸಾಹಿತ್ಯ ಭಂಡಾರ, ಬೆಂಗಳೂರು, ಪ್ರಥಮ ಮುದ್ರಣ 2000.
(15) ಹಳ್ಳ ಬಂತು ಹಳ್ಳ: ಶ್ರಿನಿವಾಸ ವೈದ್ಯ, ಮನೋಹರ ಗ್ರಂಥಮಾಲೆ, ಧಾರವಾಡ, 2004.
(16) ಮಾಯಾ ಲೋಕ:ಪೂರ್ಣಚಂದ್ರ ತೇಜಸ್ವಿ, ಪುಸ್ತಕ ಪ್ರಕಾಶನ, ಪ್ರಥಮ ಮುದ್ರಣ, 2006.
(17) ಅಕ್ಕ:ಲಂಕೇಶ್, ಲಂಕೇಶ್ ಪ್ರಕಾಶನ, ಪ್ರಥಮ ಮುದ್ರಣ 1991, ಲಭ್ಯ ಪ್ರತಿ 2007.
(18) ಹೆಜ್ಜಾಲ: ಮಹಮದ್ ಕಟ್ಪಾಡಿ, (ಪ್ರಕಾಶನ? ವರ್ಷ?).
(19) ಕೇಂದ್ರ ವೃತ್ತಾಂತ: ಚಿತ್ತಾಲ, (ಪ್ರಕಾಶನ? ವರ್ಷ?).
(20) ಒಂದು ಬದಿ ಕಡಲು:ವಿವೇಕ ಶಾನಭಾಗ, ಅಕ್ಷರ ಪ್ರಕಾಶನ, ಸಾಗರ, ಪ್ರಥಮ ಮುದ್ರಣ, 2007.
(21) ಅಶ್ವಮೇಧ:ಅಶೋಕ ಹೆಗಡೆ, ಅಕ್ಷರ ಪ್ರಕಾಶನ, ಸಾಗರ, ಪ್ರಥಮ ಮುದ್ರಣ, 2006.
(22) ತಾಯಿ ಸಾಹೇಬ:ಬಾಳ ಸಾಹೇಬ ಲೋಕಾಪುರ, (ಪ್ರಕಾಶನ? ವರ್ಷ?).
(23) ಬಾಲ ಗೋಪಾಲ:ಎ ಎನ್ ಪ್ರಸನ್ನ, ದೇಸಿ ಪ್ರಕಾಶನ, ಹೆಗ್ಗೋಡು, ಪ್ರಥಮ ಮುದ್ರಣ, 2008.
(24) ಬಯಲು-ಬಸಿರು:ಕುಸುಮಾಕರ ದೇವರಗೆಣ್ಣೂರು, ಸಾಹಿತ್ಯ ಭಂಡಾರ, ಬೆಂಗಳೂರು, ಪ್ರಥಮ ಮುದ್ರಣ 2005.
(25) ಯಾದ್ ವಶೇಮ್:ನೇಮಿಚಂದ್ರ, ನವಕರ್ನಾಟಕ ಪ್ರಕಾಶನ, 2007.
(26) ಸನ್ನಿಧಾನ:ಸತ್ಯನಾರಾಯಣ, ಎಮ್ ಜಿ ಎಮ್ ಪ್ರಕಾಶನ,(ವರ್ಷ??).

(27) ಯಾಮಿನಿ:ಜೋಗಿ, ಅಂಕಿತ ಪ್ರಕಾಶನ, 2008.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X