ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ಬೆಳಗಿದ ಕನ್ನಡದ ದೀಪ!

By * ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ
|
Google Oneindia Kannada News

Deepavali brightens California
ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ ಶುಭಗಳಿಗೆಯಲ್ಲಿ
ಬೆಳಗು ಬಾ ಓ ಗೆಳತಿ, ನಿನ್ನ ಒಲವಿನ ಪ್ರಣತಿ
ಶತಮಾನಗಳ ತಿಮಿರ ಮುಸುಕಿದೀ ಮಂದಿರದ ಎದೆಯಾಳದಲ್ಲಿ.

ಎಂದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ಹೇಳಿದಂತೆ ಎದೆಯಾಳದ ಮುಸುಕನ್ನು ತೆಗೆದು, ಒಲವಿನ ಪ್ರಜ್ವಲತೆಯ ಬೆಳಕನ್ನು ಹರಿಸುವ ಹಣತೆಯನ್ನು ಬೆಳಗಿಸಿ, ಹಣತೆಯ ಘನತೆಯನ್ನು ಘೋಷಿಸಿದೆವು ಉತ್ತರ ಕ್ಯಾಲಿಫೋರ್ನಿಯ ಕನ್ನಡಕೂಟದ ನವೆಂಬರ್-15-ಸಂಜೆ ಸನ್ನಿವೇಲ್ ಹಿಂದೂ ದೇವಾಲಯದ ಸಭಾಂಗಣದ ದೀಪೊತ್ಸವದಲ್ಲಿ. ಕಾರ್ಯಕ್ರಮದ ನಿರೂಪಣೆ ಹೊತ್ತ ಸರಸ್ವತಿ ವಟ್ಟಮ್ ಅವರು ತಮ್ಮ ಮಧುರ ಕಂಠದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಧ್ಯಾ ರವೀಂದ್ರನಾಥ್ ಅವರ ನೇತೃತ್ವದಲ್ಲಿ 'ಕನ್ನಡ ಕಲಿ' ಮಕ್ಕಳೆಲ್ಲಾ ತಮ್ಮ ಸಮೂಹಗಾನದಲ್ಲಿ ಹಾಡಿದ ಗೀತೆಗಳು -"ಸ್ವಾಮಿದೇವನೆ ಲೋಕಪಾಲನೆ" ಮತ್ತು "ಅಮ್ಮನ ನುಡಿ ಚೆಂದ ಅಣ್ಣನ ನಡೆ ಚೆಂದ" ಮುದ ನೀಡಿದವು. ನಂತರ, ರೀಮಾ ಕಶ್ಯಪ್ ಅವರ ನಿರ್ದೇಶನದಲ್ಲಿ 'ಭಾಗ್ಯದ ಲಕ್ಷ್ಮೀ ಬಾರಮ್ಮ' ಹಾಡಿಗೆ ಪುಟ್ಟ ಮಕ್ಕಳ ನೃತ್ಯ ಅಮೋಘವಾಗಿ ಮೂಡಿ ಬಂತು.

"ಯುವರಾಗ" ಸಂಗೀತಸುಧೆ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಬದರಿ ಪ್ರಸಾದ್ ಅವರು. ನಿಸಾರ್ ಅಹಮದ್ ಅವರ ಬಹಳ ಪ್ರಸಿದ್ಧ 'ಜೋಗದ ಸಿರಿ ಬೆಳಕಿನಿಂದ', 'ದೇವ ಬಂದಾ ನಮ್ಮ ಸ್ವಾಮಿ ಬಂದ', 'ತೆರೆದಿದೆ ಮನೆ ಓ ಬಾ ಅತಿಥಿ' ಮೊದಲಾದ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು ಯುವತಂಡದ ಹುಡುಗ-ಹುಡುಗಿಯರು. ಸೋಮಶೇಖರ್ ಮತ್ತು ಸುನೀಲ್ ಶಂಕರ್ ಅವರ ನಿರ್ದೇಶನದಲ್ಲಿ "ಯುವಲಹರಿ" ಕಾರ್ಯಕ್ರಮದಲ್ಲಿ ಮಕ್ಕಳು ಗೀತೆಗಳಿಗೆ ಅದ್ಭುತವಾಗಿ ನರ್ತಿಸಿದರು. 'ಒಂದೇ ಒಂದು ಸಾರಿ', 'ಉಲ್ಲಾಸದ ಹೂಮಳೆ', 'ಇಂದು ಬಾನಿಗೆಲ್ಲಾ ಹಬ್ಬ', 'ಗಿಲಿ ಗಿಲಿ ಗಿಲಕ್ಕು', 'ಕುಂತ್ರೇ ನಿಂತ್ರೇ' ಮತ್ತು 'ಕುಣಿದು ಕುಣಿದು ಬಾರೆ' ಹಾಡುಗಳನ್ನು ಸುಮಧುರ ಕಂಠದಿಂದ ಪಾಡಿದವರು ಸುಮುಖ್, ನವ್ಯ, ಅಪೂರ್ವ, ತಾರಿಣಿ ಮತ್ತು ಮೇಘನಾ ಭೀಮರಾವ್. ಈ ಗೀತೆಗಳಿಗೆ ಅದ್ಭುತವಾದ ನೃತ್ಯ ಪ್ರದರ್ಶನ ನೀಡಿದವರು ಸುಮಾರು 25ಕ್ಕೂ ಹೆಚ್ಚು ಮಕ್ಕಳು-ಅರ್ಚನಾ, ಜ್ಯೋತಿ ಸುನೀಲ್ ಮತ್ತು ಜ್ಯೋತಿ ಹೆಡೆಸೆ ಅವರ ನೃತ್ಯ ನಿರ್ದೇಶನದಲ್ಲಿ. ಹಾಡುಗಾರಿಕೆ ಜೊತೆಗೆ "ಇಂದು ಬಾನಿಗೆಲ್ಲಾ ಹಬ್ಬ" ಗೀತೆಗೆ ಯುವಪ್ರತಿಭೆ ಅಪೂರ್ವ ಗುರುರಾಜ್ ನೃತ್ಯ ಸಂಯೋಜನೆಯನ್ನೂ ಮಾಡಿದ್ದು ಪ್ರಶಂಸನೀಯವಾಗಿತ್ತು. "ಕುಂತ್ರೇ ನಿಂತ್ರೇ" ಹಾಡಿಗೆ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿ ನರ್ತಿಸಿದವರು ಮೇಘಾ ಜೋಶಿ ಮತ್ತು ಐಶ್ವರ್ಯ.

ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ವಿದ್ಯಾಲಯ-ಬರ್ಕ್ಲೀಯಲ್ಲಿ ವ್ಯಾಸಂಗ ಮಾಡಿ, ಉನ್ನತ ಸ್ಥಾನದಲ್ಲಿ ಉತ್ತೀರ್ಣಳಾಗಿ, ಪ್ರಶಸ್ತಿ ಪಡೆದ ಕುಮಾರಿ ಮೇಘನಾ ವಿಶ್ವನಾಥಳಿಗೆ ಕನ್ನಡಕೂಟದ ಅಧ್ಯಕ್ಷ ಭವಾನಿಕುಮಾರ್ ಅವರು ವೇದಿಕೆಯ ಮೇಲೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು. ಮತ್ತೊಬ್ಬ ಯುವ ಪ್ರತಿಭೆ, ಕುಮಾರ ಕೈಲಾಸ್ ಕಿರಿಯ ಓಟಗಾರನಾಗಿ 13.1 ಮೈಲಿಗಳನ್ನು ಅತ್ಯಂತ ಸ್ವಲ್ಪ ಸಮಯದಲ್ಲಿ ಓಡಿ (2 ಗಂಟೆ 49 ನಿಮಿಷ) ಏಕಲ್ ವಿದ್ಯಾಲಯಕ್ಕೆ ಸುಮಾರು 800 ಡಾಲರ್ಗಳಷ್ಟು ಧನ ಸಂಗ್ರಹಿಸಿದ್ದಕ್ಕಾಗಿ ಅವನಿಗೂ ಗೌರವ ಪತ್ರ ನೀಡಲಾಯಿತು.

Chaitra with mother Meena Subbarao
ಹಾಸ್ಯದ ಹೊನಲನ್ನು ಹರಿಸಿ, ಪ್ರೇಕ್ಷಕರನ್ನು ನಗಿಸಿದ ಶ್ರೇಯಸ್ಸು ಚಾತಿ ಶೀಲಾ ಶಂಕರ್ ಅವರಿಗೆ ಸೇರಿತು. ಸುಮಾರು 20ಕ್ಕೂ ಹೆಚ್ಚು ಲಾವಣ್ಯವತಿಯರು ಬಣ್ಣ ಬಣ್ಣದ ಸೀರೆಗಳಿಂದ ಅಲಂಕೃತವಾಗಿ, ಕೈಯಲ್ಲಿ ದೀಪ ಹಿಡಿದು ಹಾಡಿದ ಹಾಡು, ಡಿ.ಎಸ್. ಕರ್ಕಿಯವರ ಅಮರವಾದ ಗೀತೆ "ಹಚ್ಚೇವು ಕನ್ನಡದ ದೀಪ", ಸಂಧ್ಯಾ ಗಾಯತ್ರಿ ಅವರ ನಿರ್ದೇಶನದಲ್ಲಿ. ಇದಕ್ಕೂ ಮೊದಲು ದೀಪ ಹಚ್ಚಿ ನೃತ್ಯ ಮಾಡಿದವರು ಮೇಘಾ ಜೋಶಿ, ಅಪೂರ್ವ ಗುರುರಾಜ್ ಮತ್ತು ಐಶ್ವರ್ಯ. ದೀಪದಿಂದ ದೀಪ ಹಚ್ಚೇ ದೀಪಾವಳಿ ಈ ಗೀತೆಗೆ ಶೋಭಲತಾ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ಲಲನಾಮಣಿಯರು ಹೆಜ್ಜೆಹಾಕಿದರು. ಅಷ್ಟರಲ್ಲಿ, ಹೊಟ್ಟೆಯ ನಗಾರಿ ಶುರುವಾಗಿದ್ದರಿಂದ ರಸಿಕರು ಭೋಜನಶಾಲೆಗೆ ಹಬ್ಬದೂಟ ಸವಿಯಲು ಮುಂದಾದರು. ಬಿಸಿಬೇಳೇಬಾತ್, ಜಾಮೂನ್, ಚಪಾತಿ, ಮೊಸರನ್ನ, ಬಾಳಕ ಮತ್ತು ಉಪ್ಪಿನಕಾಯಿ ಮಯೂರಿ ಮತ್ತು ಕುಪರ್ಟೀನೋ ಬೇಕರಿಯಿಂದ ಬಂದಿದ್ದವು.

ಕೂಟದ ಅಧ್ಯಕ್ಷ ಭವಾನಿ ಕುಮಾರ್ ಅವರು ವೇದಿಕೆಗೆ ಎಲ್ಲಾ ಸಮಿತಿಯ ಸದಸ್ಯರನ್ನೂ ಕರೆದು, ತಮ್ಮ ಈ ವರ್ಷದ ಚಟುವಟಿಕೆಗಳಿಗೆಲ್ಲ ಕಾರಣರಾದ ಕಾರ್ಯಕರ್ತರನ್ನು ಅಭಿನಂದಿಸಿದರು. ಮುಂದಿನ ಅಧ್ಯಕ್ಷೆಯಾದ ಆಯ್ಕೆಯಾಗಿರುವ ಪುಷ್ಪಾ ಸುಬ್ಬರಾವ್ ಅವರಿಗೆ ಹೆಚ್ಚಿನ ಸಹಾಯ, ಸಹಕಾರ ನೀಡುವಂತೆ ಕೂಟದ ಸದಸ್ಯರಲ್ಲಿ ಕೋರಿದರು. ಹೊಸದಾಗಿ ಆಯ್ಕೆಮಾಡಿದ ಬೋರ್ಡ್ ಆಫ್ ಟ್ರಸ್ಟೀ ಸದಸ್ಯರನ್ನು ಮತ್ತು ಕೂಟದ ಈ ವರ್ಷದ ಅಧ್ಯಕ್ಷೆಯನ್ನು ದೇವ್ ಕುರ್ಬೂರ್ ಅವರು ಸಭೆಗೆ ಪರಿಚಯಿಸಿದರು.

ಭರತನಾಟ್ಯಮ್ ಫ್ಯೂಶನ್ ನೃತ್ಯವು ಕೂಚುಪುಡಿ ನೃತ್ಯಗಾತಿ ಸಮಿಧಾ ಸತ್ಯಮ್ ಅವರ ನಿರ್ದೇಶನದಲ್ಲಿ ರಾಗ, ತಾಳ, ಲಯಬದ್ಧವಾಗಿ ತೆರೆಯ ಮೇಲೆ ಮೂಡಿ ಮನ ಸೆಳೆಯಿತು. ರಘು ಹಾಲೂರ್ ಅವರು ನಡೆಸಿಕೊಟ್ಟ ಹಾಸ್ಯ ಕಿರುನಾಟಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಮಿಸ್ಟರ್ ಮತ್ತು ಮಿಸ್ ಕೆ.ಕೆ.ಎನ್.ಸಿ. ಹಾಗೂ ರೈಸಿಂಗ್ ಸ್ಟಾರ್ ಕಾರ್ಯಕ್ರಮ ನಿರ್ದೇಶಿಸಿದವರು ದೇವ್ ಕುರ್ಬೂರ್. ಕಾರ್ಯಕ್ರಮ ನಿರೂಪಿಸಿದವರು ಶೇ 90ರಷ್ಟು ಇಂಗ್ಲೀಷ್ನಲ್ಲಿ ಮಾತಾಡಿದ್ದು ಒಂಥರಾ ತಮಾಷೆಯಾಗಿದ್ದಲ್ಲದೇ ಸಂದರ್ಭಕ್ಕೆ ಸರಿಯೆನಿಸಲಿಲ್ಲ. ಕಾರ್ಯಕ್ರಮದ ಮಧ್ಯದಲ್ಲಿ ಬಂದ ಪುಟಾಣಿಗಳ ಫ್ಯಾಶನ್ ಶೋ ಖುಷಿ ಕೊಟ್ಟಿತು. ಕಾರ್ಯಕ್ರಮದ ಪ್ರಾಯೋಜಕರುಗಳಾದ, ಕದಮ್ ಮತ್ತು ಕದಮ್ ಜೂಯಲ್ಲರ್ಸ್, ಗಗನ್ ಕೋಯಿಲ್, ಕಡೆಯದಾಗಿ ಶ್ರೀರಂಗ ಆಟೋ ವರ್ಕ್ಸ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ಭಾರತ ಮತ್ತು ಅಮೇರಿಕ ರಾಷ್ಟ್ರಗೀತೆಗಳಿಂದ ಮುಕ್ತಾಯವಾದ ದೀಪೋತ್ಸವ ಸಮಾರಂಭವು ಮುಗಿದಾಗ, ಸಂಜೆಕೆಂಪು ಮೂಡಿತ್ತು, ಇರುಳು ಸೆರಗು ಹಾಸಿತ್ತು, ಇಂದು ನಾಳೆಯ ಸೇರಿಸಿತ್ತು, ಮಲಗೋ ವೇಳೆಯಾಗಿತ್ತು. ದೀಪೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ತಮ್ಮ ಕನ್ನಡ ವಾಗ್ಝರಿಯಿಂದ ನಿರೂಪಿಸಿದವರು ಸರಸ್ವತಿ ವಟ್ಟಮ್ ಅವರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X