ನಾಲ್ಕನೇ ವಸಂತ ಸಾಹಿತ್ಯೋತ್ಸವಕ್ಕೆ ರಂಗಸಿದ್ಧತೆ

H.Y. Rajgopal and Shiva Bhatಕನ್ನಡ ಸಾಹಿತ್ಯ ರಂಗ ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ಮೇ 2009ರಲ್ಲಿ ವಾಷಿಂಗ್‌ಟನ ಡಿ.ಸಿ. ಪ್ರದೇಶದಲ್ಲಿ ನಾಲ್ಕನೇ ವಸಂತ ಸಾಹಿತ್ಯೋತ್ಸವವನ್ನು ನಡೆಸುವ ಸಿದ್ಧತೆ ಕೈಗೊಂಡಿದೆ. ಅದರ ಅಂಗವಾಗಿ ಎರಡೂ ಸಂಸ್ಥೆಗಳ ಕಾರ್ಯಕರ್ತರು ಇದೇ ಕಳೆದ ಭಾನುವಾರ, ಅಕ್ಟೋಬರ್ 19, 2008ರಂದು ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷ ಡಾ|| ಮೈ.ಶ್ರೀ. ನಟರಾಜರ ಮನೆಯಲ್ಲಿ ಸಭೆ ಸೇರಿ ಈ ಸಹಯೋಗಕ್ಕೆ ನಾಂದಿ ಹಾಡಿದರು. ಈ ಸಭೆಯಲ್ಲಿ, ಸಾಹಿತ್ಯ ರಂಗದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಖಜಾಂಚಿ ಹಾಗೂ ಕಾವೇರಿಯ ಅಧ್ಯಕ್ಷರೇ ಮೊದಲುಗೊಂಡು ಬೋರ್ಡ್ ಆಫ್ ಟ್ರಸ್ಟೀಸ್ ಸದಸ್ಯರು ಮತ್ತು ಹಲವಾರು ಮಾಜೀ ಅಧ್ಯಕ್ಷರು ಮತ್ತು ಸಾಹಿತ್ಯಪ್ರಿಯರು ಭಾಗವಹಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಸಂಸ್ಥೆಗಳು ಪರಸ್ಪರ ಜವಾಬ್ದಾರಿಗಳಿಗೆ ಸಂಬಂಧಪಟ್ಟಂತೆ ತಯಾರುಮಾಡಿಕೊಂಡ ಔಪಚಾರಿಕ ಒಪ್ಪಂದವನ್ನು ("ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್"ಅನ್ನು) ಅಧ್ಯಕ್ಷರಿಬ್ಬರೂ ವಿನಿಮಯಮಾಡಿಕೊಂಡರು. ನಟರಾಜರು ಸ್ವಾಗತ ಬಯಸಿದರು, ಸಾಹಿತ್ಯರಂಗದ ಅಧ್ಯಕ್ಷರಾದ ರಾಜಗೋಪಾಲರು ಸಮ್ಮೇಳನದ ಉದ್ದೇಶಗಳನ್ನು ಕುರಿತು ಮಾತನಾಡಿದರು, ಮತ್ತು ಕಾವೇರಿಯ ಅಧ್ಯಕ್ಷರಾದ ಶಿವ ಭಟ್ ಅವರು ಸಹಯೋಗವನ್ನು ಕುರಿತು ವಿವರಣೆ ನೀಡಿದರು. ಪ್ರಶ್ನೋತ್ತರಗಳೊಂದಿಗೆ ಸಭೆ ಮುಕ್ತಾಯವಾಯಿತು.

ಕನ್ನಡ ಸಾಹಿತ್ಯ ರಂಗ ಅಮೆರಿಕೆಯಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೇ ಮೀಸಲಾದ ಏಕೈಕ ರಾಷ್ಟ್ರೀಯ ಸಂಸ್ಥೆ. 2004ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಈಗಾಗಲೇ ಹಲವಾರು ಗಮನಾರ್ಹವಾದ ಕಾರ್ಯಗಳನ್ನು ನಡೆಸಿದೆ. ಫಿಲಡೆಲ್ಫಿಯಾ (2004), ಲಾಸ್ ಏಂಜಲೀಸ್ (2005) ಮತ್ತು ಚಿಕಾಗೋ (2007) ನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಿದೆ. ಪ್ರತಿ ಸಮ್ಮೇಳನದ ಅಂಗವಾಗಿ ಬಹುಮಟ್ಟಿಗೆ ಅಮೆರಿಕದ ಕನ್ನಡಿಗರಿಂದಲೇ ಬರೆಯಲ್ಪಟ್ಟ, ಈ ಮುಂದೆ ಪಟ್ಟಿಮಾಡಿರುವ ಪುಸ್ತಕಗಳನ್ನು ಪ್ರಕಟಿಸಿದೆ : ಕುವೆಂಪು ಸಾಹಿತ್ಯ ಸಮೀಕ್ಷೆ (2004), ಆಚೀಚೆಯ ಕತೆಗಳು (2005) ಮತ್ತು ನಗೆಗನ್ನಡಂ ಗೆಲ್ಗೆ! (2007). 2006ರಲ್ಲಿ ದೇಶದಾದ್ಯಂತ 9 ನಗರಗಳಲ್ಲಿ ಶಿಲಾಶಾಸನಗಳಿಂದ ಹಿಡಿದು ಇಂದಿನವರೆಗಿನ ಕನ್ನಡ ಸಾಹಿತ್ಯಪರಂಪರೆಯನ್ನು ಸ್ಥೂಲವಾಗಿ ಪರಿಚಯಿಸುವ 2 ದಿನಗಳ ಕನ್ನಡ ಸಾಹಿತ್ಯ ಶಿಬಿರವನ್ನು ನಡೆಸಿತು. ಈವರೆಗೆ ರಂಗ ನಡೆಸಿರುವ ಕಾರ್ಯಕ್ರಮಗಳು ಇಲ್ಲಿನ ಕನ್ನಡಿಗರ ಸಾಹಿತ್ಯಕ ಆಶೋತ್ತರಗಳನ್ನು ಪೂರೈಸುವುದರಲ್ಲಿ ಯಶಸ್ವಿಯಾಗಿವೆ.

ಅಮೆರಿಕದ ಪೂರ್ವತೀರದ ಮೇರಿಲ್ಯಾಂಡ್, ವಾಷಿಂಗ್‌ಟನ್ ಡಿ.ಸಿ. ಮತ್ತು ವರ್ಜೀನಿಯಾ ರಾಜ್ಯಗಳ ಪ್ರಮುಖ ಕನ್ನಡ ಸಂಸ್ಥೆ ಕಾವೇರಿ ಕನ್ನಡ ಸಂಘ ಕಳೆದ 35 ವರ್ಷಗಳಿಂದಲೂ ಆ ಪ್ರದೇಶದ ಕನ್ನಡಿಗರ ಸಲುವಾಗಿ ಅವಿರತವಾಗಿ ಶ್ರಮವಹಿಸಿ ದುಡಿಯುತ್ತಿರುವ ಸಂಸ್ಥೆ. ಈ ಪ್ರದೇಶದ ನೂರಾರು ಕನ್ನಡ ಕುಟುಂಬಗಳಿಗೆ ಕಾವೇರಿ ಎರಡನೆಯ ತವರುಮನೆ. 2006ರಲ್ಲಿ ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಕೀರ್ತಿ ಈ ಸಂಘಕ್ಕೆ ಸೇರುತ್ತದೆ.

ಕನ್ನಡ ಸಾಹಿತ್ಯ ರಂಗ ನಡೆಸುವ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳನ್ನೂ ಸಾಹಿತ್ಯದ ದೃಷ್ಟಿಯಿಂದ ನಿಯೋಜಿಸಲಾಗುತ್ತದೆ. ಅಲ್ಲದೆ ಬಹುಮಟ್ಟಿಗೆ ಸ್ಥಳೀಯ ಕನ್ನಡಿಗರೇ ಸಕ್ರಿಯವಾಗಿ ಭಾಗವಹಿಸುತ್ತಾರೆ. ಸಮ್ಮೇಳನದ ಕಾರ್ಯಕ್ರಮಗಳಲ್ಲಿ ಸಾಕಷ್ಟು ವೈವಿಧ್ಯತೆ ಇರುತ್ತದೆ: ಕರ್ನಾಟಕದಿಂದ ಆಹ್ವಾನಿತರಾಗಿ ಬಂದ ಮುಖ್ಯ ಅತಿಥಿಗಳ ಭಾಷಣ ಮತ್ತು ಅವರೊಡನೆ ಸಂವಾದ; ನಮ್ಮ ಬರಹಗಾರರ ಇತ್ತೀಚಿನ ಕೃತಿಗಳ ಪರಿಚಯ ಮತ್ತು ವಿಮರ್ಶೆ; ಕವಿಗೋಷ್ಠಿ; ಅಮೆರಿಕದಲ್ಲಿ ಕನ್ನಡ ಕಲಿಕೆಗೆ ಇರುವ ಅವಕಾಶಗಳು-ಅಡೆತಡೆಗಳು; ಇತ್ಯಾದಿ.

ಸಮ್ಮೇಳನದ ಮುಖ್ಯ ವಿವರಗಳು, ಕಾರ್ಯಕ್ರಮಗಳು ಖಚಿತವಾದಂತೆಲ್ಲ ಅವನ್ನು ಈ ಅಂತರ್ಜಾಲ ತಾಣದಲ್ಲೂ ಮತ್ತು ಇತರ ಮಾಧ್ಯಮಗಳ ಮೂಲಕವೂ ಪ್ರಕಟಿಸುತ್ತೇವೆ. ದಯವಿಟ್ಟು ಓದುಗರು ಅವನ್ನು ಗಮನಿಸಬೇಕೆಂದು ಕೋರುತ್ತೇವೆ. ಕನ್ನಡ ಸಾಹಿತ್ಯದಲ್ಲಿ ಒಲವು ಇರುವವರೆಲ್ಲರಿಗೂ ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲು ಇದೊಂದು ಸದವಕಾಶ. ದಯವಿಟ್ಟು ತಪ್ಪಿಸಿಕೊಳ್ಳಬೇಡಿ. ಸಹೃದಯ ಕನ್ನಡಿಗರೆಲ್ಲರಿಗೂ ಸ್ವಾಗತ ಬಯಸುತ್ತೇವೆ. ಹೆಚ್ಚಿನ ವಿವರಗಳಿಗೆ ಈ ಕೆಳಕಂಡವರನ್ನು ವಿ-ಅಂಚೆಯಮೂಲಕ ಸಂಪರ್ಕಿಸಿ.

ಮೈ.ಶ್ರೀ. ನಟರಾಜ, ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರು [email protected]
ಎಚ್.ವೈ. ರಾಜಗೋಪಾಲ್, ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರು [email protected]
ಶಿವ ಭಟ್, ಕಾವೇರಿ ಕನ್ನಡ ಸಂಘದ ಅಧ್ಯಕ್ಷರು [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+