ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜೆರ್ಸಿಯಲ್ಲಿ ಮೋಡಿ ಮಾಡಿದ ಕನ್ನಡವೇ ಸತ್ಯ

By Staff
|
Google Oneindia Kannada News

Vasantha Shashi's sugama sangeetha CD releaseವೇವ್‌ಜ್ ಮ್ಯೂಸಿಕ್, ರೋಟರಿ ಕ್ಲಬ್ ಹಾಗು ಕನ್ನಡ ಕಸ್ತೂರಿ ಆಶ್ರಯದಲ್ಲಿ ಸೆಪ್ಟೆಂಬರ್ 20ರಂದು ಪ್ರಸ್ತುತಗೊಂಡ ಸಿ. ಅಶ್ವತ್ಥ್ ಅವರ "ಕನ್ನಡವೇ ಸತ್ಯ" ಸುಮಧುರ ಸಂಗೀತ ನ್ಯೂಜೆರ್ಸಿ ಮತ್ತು ಸುತ್ತಲಿನ ಕನ್ನಡಿಗರಿಗೆ ರಸದೌತಣ ಬಡಿಸಿತು.

ಅಶ್ವಥ್ ಹಾಗು ಅಂದಿನ ಕಾರ್ಯಕ್ರಮದ ಸಾರಥಿಗಳಾಗಿದ್ದ ರಾಜ್ ಶಶಿ, ಆಂಡಿ ಅಯ್ಯಂಗಾರ್ ಹಾಗು ಪ್ರಶಾಂತ್ ಮೈಸೂರು ಅವರು ಕನ್ನಡದ ಜ್ಯೋತಿ ಬೆಳಗಿಸಿ ಕನ್ನಡವೇ ಸತ್ಯ ಕಾರ್ಯಕ್ರಮಕ್ಕೆ ಸಂಚಾಲನೆ ನೀಡಿದರು. ಕಾರ್ಯಕ್ರಮದ ಮೊದಲಿಗೆ ವೇವ್‌ಜ್ ಮ್ಯೂಸಿಕ್ ವಸಂತಾ ಶಶಿಯವರು ಹಚ್ಚೇವು ಕನ್ನಡದ ದೀಪ ಹಾಡನ್ನ ಇಂಪಾಗಿ ಹಾಡಿದರು. ಅಂದು ವಸಂತಾ ಶಶಿ ಅವರ ಭಾವ ವಸಂತ ಸುಮಧುರ ಭಾವಗೀತೆಗಳ ಧ್ವನಿಸುರಳಿಯನ್ನು ಅಶ್ವಥ್, ಮಾಂಡೋಲಿನ್ ಪ್ರಸಾದ್ (ಈ ದ್ವನಿ ಮುದ್ರಿಕೆಯ ಕೆಲವು ಗೀತಗಳ ಸಂಗೀತ ನಿರ್ದೇಶಕರು) ಲೋಕಾರ್ಪಣೆಗೊಳಿಸಿದರು.

ಅಂದಿನ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ವೇವ್‌ಜ್ ಮ್ಯೂಸಿಕ್ ಈ ಕಾರ್ಯಕ್ರಮದಿಂದ ಬಂದ ಲಾಭದ ಹಣವನ್ನೂ ಕರ್ನಾಟಕದ ಕೊಡಗು ಅಪಾರ್ಚುನಿಟಿ ಶಾಲೆಯ ನತದೃಷ್ಟ ಮಕ್ಕಳ ಏಳಿಗೆಗಾಗಿ ದಾನವಾಗಿ ನೀಡುತ್ತಿದೆ. ಈ ಉನ್ನತ ಕಾರ್ಯಕ್ಕೆ ರೋಟರಿ ಕ್ಲಬ್ ಹಾಗು ಕನ್ನಡ ಕಸ್ತೂರಿ ಕೂಡ ಹೆಗಲಿಗೆ ಹೆಗಲು ಸೇರಿಸಿವೆ. ಅಂದು ಸುಮಾರು 250ಕ್ಕೂ ಹೆಚ್ಚು ನ್ಯೂಜೆರ್ಸಿ ಹಾಗು ಸುತ್ತಮುತ್ತಲಿನ (NY, CT, PA) ನಗರಗಳಿಂದಲೂ ಬಂದು ನೆರೆದಿದ್ದ ಎಲ್ಲಾ ಕನ್ನಡಿಗರು ಸಹ ಕೈಜೋಡಿಸಿದ್ದಾರೆ.

ಹದಿಮೂರು ವರ್ಷಗಳ ನಂತರ ನ್ಯೂಜೆರ್ಸಿಗೆ ಆಗಮಿಸಿದ ಸಿ. ಅಶ್ವಥ್ ಹಾಗು ಅವರ ತಂಡದವರು ಸುಮಧುರ ಗಾಯನದಿಂದ ಸಭಿಕರನ್ನೆಲ್ಲಾ ಭಾವ ಸಾಗರದಲ್ಲಿ ಮುಳುಗಿಸಿದರು. 'ಕೋಡಗನ ಕೋಳಿ ನುಂಗಿತ್ತಾ', 'ತಪ್ಪು ಮಾಡದವ್ರು ಯಾರ್ ಅವ್ರೆ' ಚಿತ್ರಗೀತೆಯನ್ನು ಕುಣಿಯುತ್ತಾ ಹಾಡಿ ಸಭಿಕರನ್ನೆಲ್ಲಾ ಕುಣಿಸಿ ನಲಿಸಿದರು. ಅವರೊಂದಿಗೆ ದನಿ ಗೂಡಿಸಿದ ಕಿಕ್ಕೇರಿ ಕ್ರಿಷ್ಣಮೂರ್ತಿಯವರ ಜನಪದ ಗೀತೆ ಬಹಳ ಚೆನ್ನಾಗಿ ಮೂಡಿಬಂತು. ಸುಪ್ರಿಯ ಆಚಾರ್ಯ ಅವರ 'ದೀಪವು ನಿನ್ನದೆ' ಹಾಡು ಸಭಿಕರನ್ನು ಆಧ್ಯಾತ್ಮಿಕ ಲೋಕಕ್ಕೆ ಕೊಂಡೊಯ್ದರೆ, ಜೋಗಿ ಖ್ಯಾತಿಯ ಸುನಿತಾ ಅವರ 'ಎಲ್ಲೋ ಜೋಗಪ್ಪ' ಹಾಡಂತು ಸಭಿಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಸಿ. ಅಶ್ವಥ್ ಅವರಿಗೆ 'ಸುಗಮ ಸಂಗೀತ ಸರದಾರ' ಬಿರುದಿನೊಂದಿಗೆ ನೆನಪಿನ ಫಲಕವನ್ನ ನೀಡಿ ಗೌರವಿಸಲಾಯಿತು. ತಬಲಾನಲ್ಲಿ ಜಗದೀಶ್, ರಿದಂ ಪಾಡ್ ನಲ್ಲಿ ಗೋಪಿ, ಗಿಟಾರ್ ನ್‌ಲ್ಲಿ ಸುದರ್ಶನ್, ಕೀ ಬೋರ್ಡ್ನಲ್ಲಿ ನಾಗಭೂಶಣ್ ಉಡುಪ ಹಾಗು ಮಾಂಡೋಲಿನ್ ಪ್ರಾಸಾದ್ ಅವರ ಎರಡು ಕೈಗಳೂ ಊನವಾಗಿದ್ದರೂ ಕೂಡ ಅವರ ಮಾಂಡೋಲಿನ್ ಕೈಚಳಕ ಸಭಿಕರ ಚಪ್ಪಾಳೆ ಗಿಟ್ಟಿಸಿದವು.

ಸಂಗೀತ ಅಕಾಡೆಮಿ : ವೇವ್‌ಜ್ ಮ್ಯೂಸಿಕ್ ಅಮೇರಿಕೆಯಲ್ಲಿ ಕನ್ನಡ ಸಂಸ್ಕೃತಿ, ಸಂಗೀತ, ನೃತ್ಯ ನಾಟಕ ಕಲೆಗಳಿಗೆ ಪ್ರಾಮುಖ್ಯತೆ ಕೊಟ್ಟು ಉಳಿಸಿ ಬೆಳೆಸುವ ಉದ್ದೇಶದಿಂದ ಒಂದು ಅತ್ಯುತ್ತಮವಾದ ವೇದಿಕೆಯನ್ನ ರೂಪಿಸಿ ಕರ್ನಾಟಕದಿಂದ ಆಗಮಿಸುವ ಕಲಾವಿದರುಗಳಿಗೆ ಮತ್ತು ಅಮೇರಿಕೆಯಲ್ಲಿ ನೆಲೆಸಿರುವ ಉತ್ತಮ ಕಲಾವಿದರಿಗೆ ಸತತವಾಗಿ ಹತ್ತು ವರ್ಷಗಳಿಂದ ಪ್ರೋತ್ಸಾಹ ನೀಡುತ್ತಲಿದೆ. ಈ ನಿಟ್ಟಿನಲ್ಲಿ ಅಂದು ವೇವ್‌ಜ್ ಅಕಾಡೆಮಿಯನ್ನೂ ಕೂಡ ಪ್ರಾರಂಭಿಸುತ್ತಿದೆ ಎಂದು ಪ್ರಕಟಿಸಲಾಯಿತು. ಅಮೇರಿಕೆಯಲ್ಲಿ ಭಾವಗೀತೆ ಅಥವಾ ಕನ್ನಡ ಕಾವ್ಯ ಸಂಗೀತ, ಜನಪದ ಹಾಗು ಇತರ ಸುಗಮ ಸಂಗೀತ ಶಿಕ್ಷಣದ ಅಭಾವವಿರುವುದರಿಂದ, ಆಸಕ್ತಿಯುಳ್ಳ ಕಿರಿಯ ಹಾಗು ಹಿರಿಯ ಕನ್ನಡಿಗರಿಗೆ ವೇವ್‌ಜ್ ಅಕಾಡೆಮಿಯಲ್ಲಿ ವರ್ಕ್ ಶಾಪ್ ತರಹದ ಶಿಕ್ಷಣ ನೀಡಿ ಈ ಕಲೆಯನ್ನ ಮತ್ತಷ್ಟು ಉಳಿಸಿ ಬೆಳೆಸುವುದು ಇದರ ಮುಖ್ಯ ಉದ್ದೇಶ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X