ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲವು ವೈಶಿಷ್ಟ್ಯಗಳ ಕಾವೇರಿ ಗಣೇಶ

By Staff
|
Google Oneindia Kannada News

Kaveri (WDC) Ganesha Festival - 2008ಅಮೆರಿಕ ಸಂಯುಕ್ತ ಸಂಸ್ಥಾನದ ರಾಜಧಾನಿ ವಾಷಿಂಗ್ಟನ್ ಡಿ.ಸಿ ಮೇಟ್ರೋದಲ್ಲಿನ ಕಾವೇರಿ ಕನ್ನಡ ಸಂಘವು ನಡೆಸಿದ ಗಣೇಶ ಹಬ್ಬ 2008ರ ವರದಿ. ಭೈರಪ್ಪನವರೊಡನೆ ಸಂವಾದ, ಕಾಯ್ಕಿಣಿ ಮಾತು, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ.

ವರದಿ : ಹರಿದಾಸ್ ಟಿ. ಲಹರಿ

ಗಣೇಶ ಹಬ್ಬವು ಬಂತೆಂದರೆ ಬಹುತೇಕ ಹೊರನಾಡಿನ ಭಾರತೀಯರಿಗೆ ತಾಯ್ನಾಡಲ್ಲಿನ ಸಂಭ್ರಮದ ಗಣೇಶ ಹಬ್ಬದ ಆಚರಣೆಯ ಸವಿನೆನಪು ಮರುಕಳಿಸುವುದು ಸಹಜ. ಮನೆ ಮನೆಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಗಣೆಶ ವಿಗ್ರಹದ ದರ್ಶನ, ಗಣೇಶ ಹಬ್ಬದ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಮಂಜರಿ ಕಾರ್ಯಕ್ರಮಗಳ ಆರ್ಭಟಗಳು ಮತ್ತು ಗಣೇಶನ ವಿಸರ್ಜನೆಯ ಮೆರವಣಿಗೆಯನ್ನು ಮರೆಯುವುದು ಸಾಧ್ಯವೆ? ಇಂತಹ ಒಂದು ಹಬ್ಬದ ಸವಿನೆನಪನ್ನು ಸಾದೃಶ್ಯಗೊಳಿಸುವ ಪ್ರಯತ್ನ ವಾಶಿಂಗ್ಟನ್ ಡಿ.ಸಿ ಮೇಟ್ರೋದಲ್ಲಿ ಜರುಗಿತು. ಕಾವೇರಿ ಕನ್ನಡ ಸಂಘವು ಸೆಪ್ಟಂಬರ್ 13ರಂದು ನಡೆಸಿದ ಗಣೇಶ ಹಬ್ಬದ ಸಮಾರಂಭದ ಬಗ್ಗೆ ಹಲವು ವಿವರಗಳು ಇಲ್ಲಿವೆ.

ಗಣೇಶ ಹಬ್ಬದ ಸಮಾರಂಭವು ಪ್ರಾರಂಭವಾಗುವ ಮೊದಲು ಸಾಹಿತಿಗಳೊಡನೆ ಸಂವಾದ ಕಾರ್ಯಕ್ರಮವಿತ್ತು. ಕನ್ನಡದ ಪ್ರಸಿದ್ಧ ಸಾಹಿತಿಗಳಲ್ಲೊಬ್ಬರಾದ ಎಸ್.ಎಲ್. ಭೈರಪ್ಪ ನವರೊಂದಿಗೆ ಮಾತುಕತೆಯನ್ನು ಏರ್ಪಡಿಸಲಾಗಿತ್ತು. ಸುಮಾರು 70ಕ್ಕೂ ಅಧಿಕ ಕನ್ನಡಿಗರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಾಹಿತಿ ಜಯಂತ ಕಾಯ್ಕಿಣಿ ಮತ್ತು ಹಬ್ಬಕ್ಕಾಗಿ ಹಾಸ್ಯದ ಬಾಂಬನ್ನು ಸಿಡಿಸಲು ಬಂದ ಡಾ||ಪುತ್ತೂರಾಯರೂ ಈ ಸಂವಾದದಲ್ಲಿ ಕೇಳುಗರ ಜೊತೆಗಿದ್ದರು.

ಸಮಾರಂಭದ ಮೊದಲಿಗೆ ಕಾವೇರಿಯ ಸದಸ್ಯರೊಬ್ಬರು ಆವೆ ಮಣ್ಣಿನಲ್ಲಿ ತಯಾರಿಸಿದ 1.5ಅಡಿ ಎತ್ತರದ ಗಣೇಶನ ವಿಗ್ರಹವನ್ನು ಸಭಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಸ್ವಾರಸ್ಯದ ವಿಷಯವೆಂದರೆ ಆವೆ ಮಣ್ಣನ್ನು ಆನ್ ಲೈನ್ ಮುಖಾಂತರ ಖರೀದಿಸಿ ಫೆಡೆಕ್ಸ್ ಮೂಲಕ ತರಿಸಲಾಗಿತ್ತು! ಸುಷ್ಮ ಮತ್ತು ಸಂಗಡಿಗರು ಸಿಂಗರಿಸಿದ ಪೀಠದಲ್ಲಿ ಕಾವೇರಿಯ ಅಧ್ಯಕ್ಷರಾದ ಶಿವ್ ಭಟ್ ಅವರಿಂದ ವಿಗ್ರಹದ ಪ್ರತಿಷ್ಠಾಪನೆಯ ನಂತರ ಪುರೋಹಿತರಾದ ಹರೀಶ್ ಬೈಪಡಿತ್ತಾಯ ಅವರಿಂದ ಗಣೇಶ ಪೂಜೆಯು ನಡೆಯಿತು.

ಆ ದಿನದ ಸಂಜೆ ನಡೆದ ಇತರ ಕಾರ್ಯಕ್ರಮಗಳ ವಿವರಗಳು ಈ ರೀತಿ ಇವೆ: ಪುಟಾಣಿ ಸನಿಕಾ ಮಹಾಶೆಟ್ಟಿಯ ಸುಶ್ರಾವ್ಯ ಪ್ರಾರ್ಥನೆಯಿಂದ ಕಾರ್ಯಕ್ರಮದ ಶುಭಾರಂಭ. ನಂತರ 40ಕ್ಕಿಂತಲೂ ಅಧಿಕ ಮಕ್ಕಳು "ಗೋಕರ್ಣ ಮಹಾತ್ಮೆ" ಎಂಬ ನೃತ್ಯ ನಾಟಕ ಪ್ರದರ್ಶಿಸಿದರು. ಪ್ರೇಕ್ಷಕರ ಮನಸೂರೆಗೊಂಡ ಈ ನೃತ್ಯ ನಾಟಕವನ್ನು ನಿರ್ದೇಶಿಸಿದವರು ಶಾಂತಿ ತಂತ್ರಿ. ಆನಂತರ ಕಾವೇರಿ ಮಕ್ಕಳಿಂದ ಸುಮಧುರ ಹಾಡಿಗೆ ಲವಲಿಕೆಯ ಸಾಮೂಹಿಕ ನೃತ್ಯ ಶೀಲಾ ಕುಮಾರ್ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲ್ಪಟ್ಟಿತು. ನಂತರ ಕನ್ನಡದ ಹೆಸರಾಂತ ನಿರ್ದೇಶಕರಾದ ನಾಗಾಭರಣ ಅವರ ಏಕಪಾತ್ರಾಭಿನಯ "ಆಹತ" ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿತು.

ಭೈರಪ್ಪನವರು ತಮ್ಮ ಅತಿಥಿಗಳ ಭಾಷಣದಲ್ಲಿ ಕನ್ನಡಿಗರು ಇಂದಿಗೂ ದಾಸ್ಯದಲ್ಲಿ ಬದುಕುತ್ತಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದರು. ಕನ್ನಡಿಗರು ಯಾವ ರೀತಿ ಕನ್ನಡನಾಡಿನಲ್ಲಿ ಅನ್ಯರಾಗುತ್ತಿದ್ದಾರೆ, ಕನ್ನಡಿಗರು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮುಂದೆ ಬರಬೇಕಾದ ಅವಶ್ಯಕತೆಗಳ ಬಗ್ಗೆ ಹೇಳಿದರು. ಅಮೇರಿಕನ್ ಕನ್ನಡಿಗರು ತಮ್ಮ ಸ್ವಂತ ಕಾಲಲ್ಲಿ ನಿಂತು ತಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸುವ ಬಗ್ಗೆ ಚಿಂತಿಸಲು ಮನವಿ ಮಾಡಿದರು. ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿ, ಇತರರು ನಮ್ಮ ಮಾತು, ಅಭಿಪ್ರಾಯಗಳನ್ನು ಕೇಳುವಂತೆ ಮಾಡಬೇಕು ಎಂದು ನುಡಿದರು. ಅದಕ್ಕಾಗಿ ಈಗಲೇ ಅಮೇರಿಕನ್ ಕನ್ನಡಿಗರ ಮಕ್ಕಳು ಭವಿಷ್ಯದಲ್ಲಿ ಸ್ವಂತ ಉದ್ಯಮದಲ್ಲಿ ತೊಡಗುವ ಚಿಂತನೆಯು ಬರುವಂತೆ ಪಾಲಕರು ತಮ್ಮ ಮಕ್ಕಳನ್ನು ತರಬೇತುಗೊಳಿಸಬೇಕು ಎಂದು ಸಲಹೆ ನೀಡಿದರು.

ಕನ್ನಡಿಗರು ಹೇಗೆ ಭರತನಾಟ್ಯವನ್ನು ಕಲಿತು, ತಮಿಳ್ ಹಾಡಿಗೆ ಕುಣಿದು ತಮಿಳ್ "ಅರಂಗೇಟ್ರಮ್" ಅನ್ನು ಯಾವ ರೀತಿ ನಡೆಸುತ್ತಿದ್ದಾರೆ ಎಂದು ನೊಂದು ನುಡಿದರು. ಕನ್ನಡಿಗರು ಭರತನಾಟ್ಯವನ್ನು ಕಲಿತು ದಾಸರ ಹಾಡುಗಳಿಗೆ ನೃತ್ಯಗಳನ್ನು ಸಂಯೋಜಿಸಲು ಕರೆನೀಡಿದರು. "ಅರಂಗೇಟ್ರಮ್" ಎಂಬ ಶಬ್ದದ ಬದಲು, ಶುದ್ಧ ಕನ್ನಡದ 'ರಂಗಪ್ರವೇಶ' ಎಂಬ ಪದದ ಬಳಕೆಯನ್ನು ಮಾಡಬೇಕೆಂದು ಕರೆ ನೀಡಿದರು.

ಮನುಷ್ಯನಲ್ಲಿ ಮಾಯವಾಗುತ್ತಿರುವ ಮುಗ್ಧತೆ ಮತ್ತು ಇಂದು ನಾವು ಆತ್ಮಸಾಕ್ಷಿಗೆ ವಿರುದ್ಧ ನಡೆಸುತ್ತಿರುವ ಕೆಲಸಗಳ ಬಗ್ಗೆ ಜಯಂತ್ ಕಾಯ್ಕಿಣಿಯವರು ಮಾತನಾಡಿದರು. ವಾಷಿಂಗ್ಟನ್ ಡಿ.ಸಿ ಮೆಟ್ರೋದಲ್ಲಿ ಅತಿ ಶ್ರದ್ಧೆಯಿಂದ 'ಕನ್ನಡ ಕಲಿಯೋಣ' ಎಂಬ ಯೋಜನೆಯಲ್ಲಿ ಕನ್ನಡ ಮಕ್ಕಳಿಗೆ ಕನ್ನಡದ ಪಾಠಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ಅಧ್ಯಾಪಕರುಗಳ ಸನ್ಮಾನ ಎಸ್. ಎಲ್.ಭೈರಪ್ಪ ಅವರಿಂದ ಶಾಂತಿ ತಂತ್ರಿ ಮತ್ತು ಶೈಲನ್ ಮಂಡ್ಯನ್ ಅವರು ನೆರವೇರಿಸಿದರು.

ಕಾವೇರಿ ಕನ್ನಡ ಸಂಘದ ಮಾಜಿ ಅಧ್ಯಕ್ಷರಲ್ಲೊಬ್ಬರಾದ ಪ್ರೊ| 'ಕಂಠಿ' ಶ್ರೀಕಂಠಯ್ಯನವರಿಗೆ 06-07ರ ಸುವರ್ಣ ಕರ್ನಾಟಕ ಆಚರಣೆಯ ಸಂದರ್ಭಲ್ಲಿ ರಂಗಭೂಮಿಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕರ್ನಾಟಕ ನಾಟಕ ಅಕಾಡಮಿಯು ಪ್ರಶಸ್ತಿಯನ್ನು ನೀಡಿತ್ತು. ಮೂಡಬಿದಿರೆಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭಕ್ಕೆ ಕಾರಣಾಂತರಗಳಿಂದ 'ಕಂಠಿ' ಅವರಿಗೆ ಹೋಗಲಾಗಲಿಲ್ಲ. ಕರ್ನಾಟಕ ಸರಕಾರದ ಪರವಾಗಿ ನಾಟಕ ಅಕಾಡಮಿಯ ಪ್ರಶಸ್ತಿಯನ್ನು, ನಾಟಕ ಅಕಾಡಮಿ ಅಧ್ಯಕ್ಷ ಕಪ್ಪಣ್ಣ ಅವರ ನೇತೃತ್ವದಲ್ಲಿ, ಟಿ. ಏಸ್. ನಾಗಾಭರಣ ಅವರಿಂದ 'ಕಂಠಿ' ಅವರು ಸ್ವೀಕರಿಸಿದರು.

'ಕಾವೇರಿ ಬೆಳವಣಿಗೆಗಳು' ಮತ್ತು ಕಾವೇರಿಯ ಮುಂದಿನ ಯೋಜನೆಗಳ ಬಗ್ಗೆ ಕಾವೇರಿ ಅಧ್ಯಕ್ಷರಿಂದ ವರದಿ ಸಲ್ಲಿಸಲಾಯಿತು.ಕಾವೇರಿಯ ಕ್ರಿಕೆಟ್ ಮತ್ತು ಶಟಲ್ ಬಾಡ್ಮಿಂಟನ್ ಪಂದ್ಯಾಟಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ಕಾರ್ಯವನ್ನು ರಾಮ ಮೂರ್ತಿಯವರು ನಿರ್ವಹಿಸಿದರು. ನಂತರ ಹಾಸ್ಯ ರ೦ಜಿನಿ ಎಂಬ ಹಾಸ್ಯ ರಸದ ಔತಣವನ್ನು ಡಾ|ಪುತ್ತುರಾಯರು ಸಭಿಕರಿಗೆ ಉಣ ಬಡಿಸಿದರು.

ಕೊನೆಗೆ 'ಹೆಲ್ಲೊ' ಎಂಬ ಹಾಸ್ಯ ನಾಟಕ, ಬೆನಕ ನಾಟಕ ತಂಡದವರಿಂದ ಪ್ರದರ್ಶಿಸಲ್ಪಟ್ಟಿತು. ಸಭಿಕರೆಲ್ಲರೂ ಈ ಉತ್ತಮ ಹಾಸ್ಯ ನಾಟಕವನ್ನು ಹಾಗೂ ಕಲಾವಿದರ ಸಮಯೋಚಿತ ಅಭಿನಯದ ಸವಿಯನ್ನು ಸವಿದರು. ಗಣೇಶ ಹಬ್ಬದ ಅಂತಿಮ ಕಾರ್ಯಕ್ರಮ ವಿಗ್ರಹದ ವಿಸರ್ಜನೆ. ಊಟವು ನಡೆಯಿತ್ತಿರುವಾಗ ಗಣೇಶ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದು ಊಟದ ಮನೆಯಲ್ಲಿಯೇ ಸಿದ್ಧ ಪಡಿಸಲಾದ ದೊಡ್ಡ ಪ್ಲಾಸ್ಟಿಕ್ ತೊಟ್ಟಿಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಮುಳುಗಿಸಿ ಗಣೇಶನಿಗೆ ವಿದಾಯ ಹೇಳಲಾಯಿತು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ವಿನಾಯಕ ಪ್ಲಾಸ್ಟಿಕ್ ತೊಟ್ಟಿಯನ್ನೇ ಪೊಟೋಮಿಕ್ ನದಿಯೆಂದು ಭಾವಿಸಿ ಸುಪ್ರಸನ್ನನಾದ!

ಗಣೇಶ ಹಬ್ಬಕ್ಕೆ ಕಾವೇರಿಯ ಕಾರ್ಯಕಾರಿ ಸಮಿತಿ ಸದಸ್ಯರ ಶ್ರಮ ಕಾಣಿಕೆಗಳು ಈ ರೀತಿ ಇವೆ:

ಸ್ವಾಗತ ಮತ್ತು ಹಬ್ಬದ ಎಲ್ಲ ಕಾರ್ಯಕ್ರಮಗಳ ನಿರ್ವಹಣೆಯನ್ನು ಮಾಡಿದವರು ಮೀನಾ ರಾವ್ ಮತ್ತು ಪ್ರದೀಪ್ ರಾಮಕೃಷ್ಣಯ್ಯ. ಕಾವೇರಿ ಉಪಾಧ್ಯಕ್ಷರಾದ ಮೃತ್ಯುಂಜಯ ಮಹಾಶೆಟ್ಟಿ ಅವರು ಸಭಾಭವನದ ಉಸ್ತುವಾರಿ ನೋಡಿಕೊಂಡಿದ್ದರು. ಹರ್ಷ ಗೋಪಾಲ್ ಅವರು ಮಕ್ಕಳಿಗಾಗಿ ಬಾಲ ಗೋಕುಲ ಕಾರ್ಯಕ್ರಮ ಹಾಗೂ 'ನಾನು ಗಾಂಧಿ' ನಂಜುಡೇಗೌಡರ ಕನ್ನಡ ಚಲನಚಿತ್ರ ಪ್ರದರ್ಶನದ ನೇತೃತ್ವ ವಹಿಸಿದ್ದರು. ಊಟದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದವರು ಜಯಶ್ರೀ ಜಗದೀಶ್. ಮಾಯ ಹರಪನಹಳ್ಳಿ, ಪ್ರಕಾಶ್ ಭಟ್, ವಿನುತ ಶಿವ್, ಸುಜಾತ ಅವರುಗಳು ಎಲ್ಲ ಸಭಿಕರ ನೋಂದಣಿಯನ್ನು ಮಾಡಿದರು. ಬಸವರಾಜು ಧ್ವನಿವರ್ಧಕಗಳ ಮೇಲ್ವಿಚಾರಣೆಯನ್ನು ವಹಿಸಿದ್ದರು. ಎಲ್ಲಾ ಸಭಿಕರ ಪ್ರವೇಶದ ನಿರ್ವಹಣೆಗೆ ಸಹಕರಿಸಿದವರು ಶ್ರೀನಿವಾಸ್ ಗೌಡ ಹಾಗೂ ಗುರು ಪ್ರಸಾದ್.

ಸಭಿಕರೆಲ್ಲರೂ ಕಾವೇರಿ ಸಂಘವು ನವಂಬರ್ ಒಂದರಂದು ನಡೆಸಿಕೊಡಲಿರುವ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬಕ್ಕೆ ಮತ್ತೊಮ್ಮೆ ಭೇಟಿಯಾಗುವ ಹುಮ್ಮಸ್ಸಿನಲ್ಲಿ ಪರಸ್ಪರರನ್ನು ಬೀಳ್ಕೊಟ್ಟರು. ಸಮಾರಂಭದಲ್ಲಿ ಸೆರೆ ಹಿಡಿಯಲಾದ ಛಾಯಾ ಚಿತ್ರಗಳನ್ನು ಒಮ್ಮೆ ನೋಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X